ಭಾರತ ಇಂದು ಸಂಪೂರ್ಣವಾಗಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ, ಪ್ರಸ್ತುತ ದಿನಗಳಲ್ಲಿ “ಭಾರತ ವಿಶ್ವಗುರು” ಎಂದು ಹೇಳಲಾಗುತ್ತದೆ. ನಿಜಕ್ಕೂ ಭಾರತ ವಿಶ್ವಕ್ಕೆ ಅಂತಹ ಮಹತ್ವದ ಕೊಡುಗೆಯಾಗಿ ಏನು ನೀಡಿದೆ? ಎಂಬುದಕ್ಕೆ ಸಿಗುವ ಏಕೈಕ ಮತ್ತು ಸ್ಪಷ್ಟ ಉತ್ತರ ಅಂಬೇಡ್ಕರ್ ಮತ್ತು ಗಾಂಧಿ.
ಶ್ರೀಮಂತ ಮತ್ತು ಮೇಲ್ಜಾತಿಯ ಮನೆತನದಲ್ಲಿ ಜನಿಸಿ ಅಂತ್ಯ ಕಾಲದಲ್ಲಿ ಬಟ್ಟೆಯನ್ನೇ ತ್ಯಜಿಸಿ ವಿರಾಗಿಯಾದ ಗಾಂಧಿ ಮತ್ತು ತೀರಾ ಬಡ ಹಾಗೂ ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿ ಅಂತ್ಯ ಕಾಲದಲ್ಲಿ ಕೋಟ್ ಹಾಕದೆ ಮನೆಯಿಂದ ಹೊರಬಾರದ ಅಂಬೇಡ್ಕರ್ ಇಬ್ಬರೂ ಆಧುನಿಕ ಭಾರತದ ಎರಡು ಸ್ತಂಭಗಳೆಂದರೆ ಅತಿಶಯೋಕ್ತಿಯಲ್ಲ.
ಮಹಾತ್ಮ ಗಾಂಧಿ ಮತ್ತು ಡಾ|ಬಿ.ಆರ್. ಅಂಬೇಡ್ಕರ್ ವಿಚಾರಗಳು ಹಾಗೂ ಇವರ ದೃಷ್ಟೀಕೋನದ ಅಭಿವೃದ್ಧಿ ಮಾಡೆಲ್‌ಗಳು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ. ಅದರಲ್ಲೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಾವು ಏಕೆ ಅರ್ಥ ಮಾಡಿಕೊಳ್ಳಬೇಕು? ಅವರ ವಿಚಾರಧಾರೆಗಳನ್ನು ಏಕೆ ಓದಬೇಕು? ಅದರಲ್ಲೂ ಪ್ರಮುಖವಾಗಿ ಭಾರತದ ಮಟ್ಟಿಗೆ ಅಂಬೇಡ್ಕರ್ ಯಾರು? ಎಂಬುದನ್ನು ಇಂದಿನ ಯುವ ಜನತೆ ತಿಳಿದುಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ.
ಅಸಲಿಗೆ ಶಾಲಾ ದಿನಗಳಿಂದಲೂ ಅಸ್ಪೃಶ್ಯತೆಯಿಂದ ಬಳಲಿದ್ದ ಅಂಬೇಡ್ಕರ್ ಅವರಿಗೆ ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಒಂದು ಮಿತಿ ಎಂಬುದು ಸ್ಪಷ್ಟವಾಗಿ ಅರಿವಾಗಿತ್ತು. ಇದೇ ಕಾರಣಕ್ಕೆ ಅವರು ʼಮಹಾಡ್ ಕೆರೆʼ ಚಲೋ ಹೋರಾಟಕ್ಕೆ ಕರೆ ನೀಡುವ ಮೂಲಕ ಸಾವಿರಾರು ಅಸ್ಪೃಶ್ಯರು ಕೆರೆಯ ನೀರನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಕುಡಿಯುವಂತೆ ಮಾಡಿದ್ದರು.
ಹಿಂದೂ ಆಗಿ ಹುಟ್ಟಿದ್ದೇನೆ,ಆದರೆ ಹಿಂದೂ ಆಗಿ ಸಾಯಲಾರೆ ಎಂಬ ಘೋಷದೊಂದಿಗೆ ಅವರು ಬೌದ್ಧ ಮತಕ್ಕೆ ಮತಾಂತರವಾದದ್ದನ್ನು ಭಾರತದ ಇತಿಹಾಸದ ಪ್ರಮುಖ ಕಾಲಘಟ್ಟ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇತಿಹಾಸಕಾರರೂ ಸಹ ಅಂಬೇಡ್ಕರ್ ಅವರನ್ನು ಬೌದ್ಧ ಮತಾಂತರಕ್ಕೂ ಮೊದಲು-ನಂತರ ಎಂದು ಅಧ್ಯಯನ ಮಾಡಲು ಆರಂಭಿಸಿದ್ದಾರೆ. ಅಂಬೇಡ್ಕರ್ ಸಂವಿಧಾನ ರಚಿಸಿದ್ದು ಹೇಗೆ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆಯೋ? ಮತಾಂತರವೂ ಸಹ ಭಾರತ ಇತಿಹಾಸದ ಪ್ರಮುಖ ಮೈಲುಗಲ್ಲು.
ಪ್ರಸ್ತುತ ಭಾರತ ಬಹುಸಂಖ್ಯಾತರೆಡೆಗೆ ವಾಲುತ್ತಿರುವ, ಎಲ್ಲೆಡೆ ಕೋಮು ಗಲಭೆಗಳು ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ, ಭಾರತದ ಇಂದಿನ ಯುವ ಪೀಳಿಗೆ ಏನನ್ನು ಓದದಿದ್ದರೂ ಸಹ ಅಂಬೇಡ್ಕರ್ ಕನಸಿನ ಭಾರತ, ಅಂಬೇಡ್ಕರ್ ದೃಷ್ಟಿಕೋನದ ಧರ್ಮ ಹಾಗೂ ಬೌದ್ಧ ಮತಾಂತರದ ಕುರಿತು ಓದಲೇಬೇಕಿದೆ.
ಅಂಬೇಡ್ಕರ್ ಧರ್ಮ ಮತ್ತು ಬೌದ್ಧ ಮತಾಂತರ:
1956-ಅಕ್ಟೋಬರ್ 14, ಡಾ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ದಿನ. ಹಿಂದೂ ಧರ್ಮದೊಳಗಿನ ಸಾಮಾಜಿಕ ಅಸಮಾನತೆಯ ಅವಮಾನದಿಂದ ಹೊರಬರಲು ಅಂಬೇಡ್ಕರ್ ಕೈಗೊಂಡ ದಿಟ್ಟ ಕ್ರಮಗಳಲ್ಲಿ ‘ಬುದ್ಧ ದಮ್ಮ ಸ್ವೀಕಾರʼವೂ ಒಂದು. ಅವರ ನೋವು ಎಷ್ಟು ಅಗಾಧವಾದುದು ಎಂಬುದಕ್ಕೆ 1931ರ ಆಗಸ್ಟ್ 14 ರಂದು ಅವರೇ ಗಾಂಧೀಜಿಯವರಿಗೆ ಹೇಳಿದ ಮುಂದಿನ ಮಾತುಗಳೇ ಸಾಕ್ಷಿಯಾಗಿವೆ: ‘‘ನನಗೊಂದು ತಾಯಿನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು ಅತ್ಯಂತ ಕೀಳಾಗಿ ಕಾಣುವ ಈ ನಾಡನ್ನು, ಈ ಧರ್ಮವನ್ನು ನನ್ನ ನಾಡೆಂದು, ನನ್ನ ಧರ್ಮವೆಂದು ಹೇಗೆ ಕರೆಯಲಿ? ಹೇಗೆ ಭಾವಿಸಲಿ? ಈ ವಿಷಯದಲ್ಲಿ ನನ್ನನ್ನು ದೇಶದ್ರೋಹಿಯೆಂದು ಕರೆಯುವುದಾದರೆ ಅದಕ್ಕೆ ನನ್ನ ವಿಷಾದವಿಲ್ಲ. ನಾನು ದೇಶದ್ರೋಹಿ ಎನ್ನುವುದಾದರೆ ಅದಕ್ಕೆ ಕಾರಣ ಈ ನಾಡು. ತುಳಿತಕ್ಕೊಳಗಾದ ನನ್ನ ಜನಕ್ಕೆ ಮಾನವೀಯ ಹಕ್ಕುಗಳನ್ನು ದೊರಕಿಸುವ ಹೋರಾಟದಲ್ಲಿ ದೇಶಹಿತಕ್ಕೆ ತೊಂದರೆ ಎನ್ನುವುದಾದರೆ ಅದನ್ನು ದ್ರೋಹವೆಂದು ನಾನು ಪರಿಗಣಿಸುವುದೇ ಇಲ್ಲ.’’
ಅಂಬೇಡ್ಕರ್ ಅವರ ಈ ಮಾತುಗಳು ಧರ್ಮ ಮತ್ತು ದೇಶ ಪ್ರೇಮಕ್ಕೆ ಹೊಸ ವ್ಯಾಖ್ಯಾನವನ್ನು ಒದಗಿಸುತ್ತವೆ. ದೇಶಪ್ರೇಮವೆನ್ನುವುದು ಜನರ ಒಳಗಿನಿಂದ ಹುಟ್ಟಿ ಬೆಳೆಯುವ ಭಾವರೂಪಕವಾಗಬೇಕು. ಶ್ರೇಷ್ಠ-ಕನಿಷ್ಠಗಳ ನೆಲೆಯಲ್ಲಿ ಜನರನ್ನು ಜಾತಿ- ಧರ್ಮಗಳಾಗಿ ಒಡೆದು ಆಳುವ ದೇಶದಲ್ಲಿ ನೈಜ ದೇಶ ಪ್ರೇಮಕ್ಕೆ ಅವಕಾಶ ಕಡಿಮೆ. ನೈಜ ದೇಶ ಪ್ರೇಮ ಮತ್ತು ಧರ್ಮ ಪ್ರೇಮ ಬೆಳೆಯಬೇಕಾದರೆ ಎಲ್ಲರನ್ನೂ ಒಳಗೊಂಡ ಸಮಾನ ನೆಲೆಯಲ್ಲಿ ಮೊದಲು ಸಾಮಾಜಿಕ ಪ್ರೇಮವನ್ನು ಬಿತ್ತಿ ಬೆಳೆಯಬೇಕು.
ಆಗ ದೇಶ ಮತ್ತು ಧರ್ಮ ಪ್ರೇಮ ನೈಸರ್ಗಿಕ ಒರತೆಯಾಗಿ ಉಕ್ಕಿ ಹರಿಯುತ್ತದೆ. ಕರುಳು ಕುಕ್ಕುವ ಹುಸಿ ಶ್ರೇಷ್ಠತೆಯ ಅಹಮ್ಮು ಆವರಿಸಿದ ಸಮಾಜದಲ್ಲಿ ನೈಜ ದೇಶಪ್ರೇಮ ಉಕ್ಕುವುದಿಲ್ಲ. ಅದೊಂದು ಆಜ್ಞಾಪಾಲಕ ಕವಾಯಿತು ಆಗುತ್ತದೆ. ಅಂಬೇಡ್ಕರ್ ಅವರು ಗಾಂಧೀಜಿಯವರಿಗೆ ಹೇಳಿದ ಸಂಕಟ ಮೂಲ ಸ್ಫೋಟ ನುಡಿಗಳಿಂದ ಇಷ್ಟೆಲ್ಲ ವ್ಯಾಖ್ಯಾನಿಸಬಹುದಾಗಿದೆ.
ವಿಶೇಷವೆಂದರೆ, ಮೊದಲು ಜಾತಿ ಪದ್ಧತಿಯು ಹಿಂದೂ ಧರ್ಮದ ಸ್ಥಿರತೆಗೆ ಕಾರಣವಾಗಿದೆಯೆಂದು ಹೇಳುತ್ತಿದ್ದ ಗಾಂಧೀಜಿ, ಅಂಬೇಡ್ಕರ್ ಅವರ ಭೇಟಿಯಾದ 1931ರಲ್ಲೇ ‘‘ಜಾತಿಯು ಅಂತಸ್ತಿನ ಭೇದವನ್ನು ಕಲ್ಪಿಸುವುದಾದರೆ ಅದು ಪಾಪ ವ್ಯವಸ್ಥೆ,’’-ಎಂದು ಟೀಕಿಸಿದರು. ಮುಂದುವರೆದು 1936ರಲ್ಲಿ ಹೀಗೆ ಹೇಳಿದರು: ‘‘ತನ್ನ ಎಲ್ಲ ಭಯಾನಕತೆಯಿಂದ ಇಂದು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ ನಾನು ನನ್ನನ್ನು ಹಿಂದೂ ಎಂದು ಕರೆದುಕೊಂಡು ಅದರಲ್ಲಿ ಉಳಿಯಲಾರೆ ಎಂದು ಹೇಳಿದರು.
ಆದರೆ, ಹಿಂದೂ ಧರ್ಮದೊಳಗಿನ ವಿಷಮತೆಯ ಬಗ್ಗೆ ಗಾಂಧೀಜಿಯವರಿಗೆ ಬೇಸರವಿದ್ದರೂ ಅವರು ಹಿಂದೂವಾಗಿಯೇ ಉಳಿದರು. ಅಸ್ಪೃಶ್ಯತೆಯ ಅಮಾನವೀಯತೆಯನ್ನು ಅನುಭವಿಸಿದ್ದ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದರು. ಗಾಂಧೀಜಿಯವರಿಗೆ ಇದ್ದದ್ದು ಅಸ್ಪೃಶ್ಯತೆಯ ಅರಿವು. ಅಂಬೇಡ್ಕರ್ ಅವರಿಗೆ ಇದ್ದದ್ದು ಅಸ್ಪೃಶ್ಯತೆಯ ಅನುಭವ. ಅರಿವು ಮತ್ತು ಅನುಭವಗಳ ಅಂತರವೇ ಇಬ್ಬರ ಕ್ರಿಯೆಗಳ ಅಂತರವೂ ಆಗಿತ್ತು.
ಇದು ಅಪ್ರಾಮಾಣಿಕ ಅಂತರವಲ್ಲ. ಆದ್ದರಿಂದ ಅಸ್ಪೃಶ್ಯತೆಯ ಅರಿವಿನ ಜನ ಮತ್ತು ಅಸ್ಪೃಶ್ಯತೆಯ ಅನುಭವದ ಜನರ ಅಂತರ ಅಳಿಸಿಹೋದ ಒಗ್ಗಟ್ಟಿನ ಅಸ್ಪೃಶ್ಯತಾ ವಿರೋಧಿ ಹೋರಾಟವು ನಮ್ಮ ದೇಶದಲ್ಲಿ ಮುಖ್ಯ. ಸಖ್ಯವಿಲ್ಲದ ಸಿದ್ಧಾಂತಿಗಳ ಸಂಕುಚಿತ ನಡವಳಿಕೆಯಿಂದ ಇಂಥ ಹೋರಾಟದ ಸಾಧ್ಯತೆಗಳು ಕ್ಷೀಣಿಸುತ್ತಿರುವುದು ಇಂದಿನ ಒಂದು ವಿಷಾದಕರ ವಾಸ್ತವ.
ಹಾಗೆ ನೋಡಿದರೆ, ಅಂಬೇಡ್ಕರ್ ಅವರು ಬುದ್ಧದಮ್ಮವನ್ನು ಸ್ವೀಕರಿಸುವುದಕ್ಕೆ ಪ್ರೇರಣೆಯಾದದ್ದು ಹಿಂದೂ ಧರ್ಮದ ಬಗೆಗಿನ ಸಿಟ್ಟಲ್ಲ; ಸಂಕಟ ಮೂಲ ವಿಷಾದ. ನಮ್ಮ ಸಾಮಾಜಿಕ ಅಸಮಾನತೆಯನ್ನು ತೊಡೆಯಲು ಎಷ್ಟೇ ಪ್ರಯತ್ನಿಸಿದರೂ ಅದನ್ನೇ ಒಡಲುರಿಯಾಗಿ ಬೆಳೆಸಿಕೊಂಡು ಹಿಂದೂ ಪದ್ಧತಿಯ ಪ್ರಣಾಳಿಕೆ ಮಾಡಿಕೊಂಡವರನ್ನು ಕುರಿತ ಸಿಟ್ಟು ಆ ನಂತರ ಸಂಕಟವಾಗಿ, ವಿಷಾದವಾಗಿ ರೂಪಾಂತರಗೊಂಡು ಅಂಬೇಡ್ಕರ್ ಮತಾಂತರಕ್ಕೆ ಮುಂದಾದರು.
ಇಷ್ಟಕ್ಕೂ ಅವರು ಹಿಂದೂ ಧಾರ್ಮಿಕತೆಯಲ್ಲಿ ನಂಬಿಕೆಯನ್ನೇ ಇಟ್ಟುಕೊಂಡಿರಲಿಲ್ಲವಾದ್ದರಿಂದ ಮತಾಂತರ ಎನ್ನುವ ಬದಲು ‘ಸ್ವೀಕಾರ’ ಎನ್ನುವುದೇ ಸರಿಯಾದೀತು. ಆದರೆ ತಾಂತ್ರಿಕ ಪರಿಭಾಷೆಯಲ್ಲಿ ತಮ್ಮದು ಮತಾಂತರವೆಂದೇ ಅಂಬೇಡ್ಕರ್ ಭಾವಿಸುತ್ತಾರೆ ಮತ್ತು ಜನರಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಕರೆಕೊಡುತ್ತಾರೆ.
ʼಕುಡಿಯಲು ನೀರು ಕೊಡದ, ಕೊನೇ ಪಕ್ಷ ದೇವರನ್ನೂ ನೋಡಲು ಬಿಡದ, ಧರ್ಮ ಧರ್ಮವೇ ಅಲ್ಲ, ಅದು ಪಾಪದ, ಕೊಚ್ಚೆಯರಾಶಿ. ಅಂತಹುದನ್ನು ಧರ್ಮ ಎಂದು ಕರೆಯಬಾರದು. ನೀವು ವಿದ್ಯಾವಂತರಾಗುವುದನ್ನು ನಿಷೇಧಿಸಿದ, ನಿಮ್ಮ ಭೌತಿಕ ಸುಖಗಳನ್ನೆಲ್ಲ ಸರ್ವನಾಶ ಮಾಡಿದ ಧರ್ಮದಲ್ಲಿ ನೀವು ಒಂದು ಕ್ಷಣ ಕೂಡ ಇರಬಾರದು… ಧರ್ಮ ಇರುವುದು ಮನುಷ್ಯರಿಗಾಗಿ; ಮನುಷ್ಯರಿರುವುದು ಧರ್ಮಕ್ಕಾಗಿ ಅಲ್ಲ. ಸಮಾನತೆ, ಪ್ರೀತಿ ಮತ್ತು ಕರುಣೆಗಳು ಧರ್ಮದ ಆಧಾರ ಸ್ತಂಭಗಳಾಗಿರಬೇಕು.
ಇವುಗಳಾವುವೂ ಹಿಂದೂ ಧರ್ಮದಲ್ಲಿ ಕಾಣುತ್ತಿಲ್ಲ. ಇವುಗಳನ್ನು ಯಾವ ಧರ್ಮದಲ್ಲಿ ಕಾಣಿವಿರೊ ಆ ಧರ್ಮಕ್ಕೆ ಮತಾಂತರಗೊಳ್ಳಿ. ನನ್ನ ಸಂಶೋಧನೆಯ ಪ್ರಕಾರ ಈ ಎಲ್ಲ ಗುಣಗಳೂ ಬೌದ್ಧ ಧರ್ಮದಲ್ಲಿವೆ. ಸ್ವಾತಂತ್ರ್ಯಕ್ಕಾಗಿ ಮತಾಂತರಗೊಳ್ಳಿ; ಸಮಾನತೆಗಾಗಿ ಮತಾಂತರಗೊಳ್ಳಿ; ಆತ್ಮಗೌರವಕ್ಕಾಗಿ ಮತಾಂತರಗೊಳ್ಳಿ.’’ (ಉಲ್ಲೇಖ: ಎನ್.ಆರ್. ಶಿವರಾಂ ಅವರ ‘ಅಂಬೇಡ್ಕರ್ ಥಾಟ್ಸ್ʼ)
ಹೀಗೆ ಮತಾಂತರಗೊಳ್ಳುವುದಕ್ಕೆ ಮುಂಚೆ ಅಂಬೇಡ್ಕರ್ ಅವರು ಧರ್ಮ ಮೀಮಾಂಸೆ ಕುರಿತು ಸಾಕಷ್ಟು ಅಧ್ಯಯನವನ್ನು ನಡೆಸಿದ್ದರು. ‘ಹಿಂದೂ ಸಮಾಜʼವೆನ್ನುವುದು ಮಹಮದೀಯರ ದಾಳಿಗೆ ಮುಂಚೆ ಇರಲೇ ಇಲ್ಲವೆಂಬುದು ಅವರ ಕಾಣ್ಕೆಯಾಗಿತ್ತು. ಮಹಮದೀಯರಿಗಿಂತ ಭಿನ್ನವಾದ ‘ಜಾತಿಸಮೂಹ’ವನ್ನು ಹಿಂದೂ ಎಂದು ಗುರುತಿಸಲಾಯಿತೆಂಬುದು ಅವರ ಪ್ರತಿಪಾದನೆ. ಜಾತಿವ್ಯವಸ್ಥೆಯು ನಮ್ಮ ದೇಶದ ಒಂದು ದೊಡ್ಡರೋಗವಾಗಿದ್ದು ಇದು ಹಿಂದೂಗಳನ್ನು ನಾಶದತ್ತ ಕೊಂಡೊಯ್ಯುತ್ತಿದೆಯೆಂದೂ ಜಾತಿಪದ್ಧತಿಯು ಹಿಂದೂಗಳ ಸಾಮರಸ್ಯಕ್ಕೆ ಮಾರಕವಾಗಿದೆಯೆಂದೂ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು. ಜಾತಿ ಪದ್ಧತಿ ಅಳಿಯದೆ ದೇಶದ ಉದ್ಧಾರವಿಲ್ಲವೆಂಬುದು ಅವರ ಖಚಿತ ನಿಲುವಾಗಿತ್ತು. ಹಿಂದೂ ಧರ್ಮದ ಮುಂಚೂಣಿ ನೇತಾರರು ಜಾತಿಪದ್ಧತಿಯ ನಾಶಕ್ಕೆ ಆದ್ಯತೆ ಕೊಡದೆ ಇದ್ದದ್ದು ಅವರ ಪ್ರತಿರೋಧಕ್ಕೆ ಒಂದು ಪ್ರಮುಖ ಕಾರಣವಾಗಿತ್ತು. ತಮ್ಮ ಪ್ರತಿರೋಧದ ಫಲಿತಾಂಶವೆಂಬಂತೆ ಅವರು ಹಿಂದೂ ಧರ್ಮದ ಹುಳುಕುಗಳನ್ನು ಅಧ್ಯಯನ ಮೂಲದಿಂದ ಅನಾವರಣಗೊಳಿಸಿದರು.
ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಟ ಕಟ್ಟಿದರು. ಈ ಹೋರಾಟದಲ್ಲಿ ಅವರು ಮಹಿಳೆಯರನ್ನು ಮರೆಯದೆ ಲಿಂಗತಾರತಮ್ಯ ನೀತಿಯನ್ನು ವಿರೋಧಿಸಿದರು. ತಮ್ಮ ಆರ್ಥಿಕ ಚಿಂತನೆಗಳ ಮೂಲಕ ಕಾರ್ಮಿಕರ ಒಳಿತನ್ನೂ ಬಯಸಿದರು. ಇಂತಹ ಸಮತಾ ಸಂವೇದನೆಗೆ ಹಿಂದೂ ಸಮಾಜವು ಸ್ಪಂದಿಸುತ್ತಿಲ್ಲವೆಂಬುದು ಅವರ ಆಕ್ರೋಶದ ಮೂಲ ಆಕರವಾಗಿತ್ತು. ಹಾಗೆಂದು ಅವರು ಇಡೀ ಹಿಂದೂಗಳನ್ನು ದ್ವೇಷಿಸಲಿಲ್ಲ. ಬ್ರಾಹಣರ ಬಗ್ಗೆ ಬಿರುನುಡಿಯಾಡಿದರೂ ಇಡೀ ಬ್ರಾಹ್ಮಣ ಕುಲಕ್ಕೆ ಕೆಟ್ಟಪಟ್ಟ ಕಟ್ಟಲಿಲ್ಲ.
ಹಿಂದೂಗಳು ಮತ್ತು ವಿಶೇಷವಾಗಿ ಬ್ರಾಹ್ಮಣರನ್ನು ಅವರು ಟೀಕಿಸುವಾಗ ಜಾತಿ ಮತ್ತು ವರ್ಣ ವ್ಯವಸ್ಥೆಯ ವಿಷಬೀಜಬಿತ್ತನೆ ಮಾಡಿದವರು ಕಣ್ಣೆದುರಿಗಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಎನ್ನುವ ಪದ್ಧತಿಯಲ್ಲಿದ್ದ ಸಾಮಾಜಿಕ ಅಸಮಾನತೆಯ ತತ್ವಕ್ಕೆ ಅವರು ಎದಿರೇಟು ನೀಡಿದರು.
ಹಾಗೆಂದು ಅಂಬೇಡ್ಕರ್ ಅವರ ವಿವೇಕ ಕೈಕೊಡಲಿಲ್ಲ. ಹಾಗಾಗಿ ಹಿಂದೂಗಳು ತನ್ನನ್ನು ವೈರಿಯಂತೆ ಕಾಣುವುದು ಅವಿವೇಕ ಎಂದರು. ತಾವು ಹಿಂದೂಗಳನ್ನು ಪ್ರೀತಿಸುತ್ತಲೇ ಅವರಲ್ಲಿರುವ ಕೊಳಕನ್ನು ನಿವಾರಿಸಲು ಹೋರಾಡುತ್ತಿರುವುದಾಗಿ ಹೇಳಿದರು. ಅಲ್ಲದೆ ಕ್ರಮೇಣ ಹಿಂದೂಗಳಲ್ಲಾಗುತ್ತಿರುವ ಬದಲಾವಣೆಯನ್ನೂ ಗಮನಿಸಿದರು.
ಹಳೆಯ ಸಂಪ್ರದಾಯಕ್ಕೆ ಬದ್ಧರಾದ ಬ್ರಾಹ್ಮಣರಿಗೆ ಅಸ್ಪೃಶ್ಯತೆಯ ಆಚರಣೆಯಲ್ಲಿ ತಪ್ಪು ಕಾಣಿಸುವುದಿಲ್ಲವಾದರೂ ಆಧುನಿಕ ಹಿಂದೂಗಳಿಗೆ ಅಸ್ಪೃಶ್ಯತೆಯ ತಪ್ಪು ಅರಿವಾಗುತ್ತಿದೆ ಎಂದು ಗುರುತಿಸಿದರು. ಬ್ರಾಹ್ಮಣರ ಬದಲು ಬ್ರಾಹ್ಮಣತ್ವವನ್ನು ವಿರೋಧಿಸುವ ತತ್ವಕ್ಕನುಗುಣವಾಗಿ ‘ಈ ಬ್ರಾಹ್ಮಣತ್ವವು ಬ್ರಾಹ್ಮಣರಲ್ಲಿ ಮಾತ್ರವಲ್ಲದೆ ಎಲ್ಲ ಜನವರ್ಗಗಳಲ್ಲೂ ಇರಬಹುದುʼಎಂದು ಸ್ಪಷ್ಟಪಡಿಸಿದರು. ಅಂಬೇಡ್ಕರ್ ಅವರ ಈ ಮಾತು ಇಂದು ಇನ್ನಷ್ಟು ನಿಜವಾಗುತ್ತಿದೆ. ಆದ್ದರಿಂದ ಇಂದಿಗಿಂತ ಅಂದು ಹೆಚ್ಚು ಜಡವಾಗಿದ್ದ ಸಂಪ್ರದಾಯಸ್ಥ ಸಾಮಾಜಿಕ ಚರಿತ್ರೆಯ ಹಿನ್ನೆಲೆಯಲ್ಲಿ ಮತ್ತು ಸ್ಥಿತ್ಯಂತರದ ಚಲನೆಯಲ್ಲಿ ನಾವು ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಡಾ. ಅಂಬೇಡ್ಕರ್ ಧರ್ಮ ವಿರೋಧಿಯಲ್ಲ. ಹಿಂದೂ ಧರ್ಮದ ಭಾಗವಾಗಿದ್ದ ಜಾತಿ ಮತ್ತು ವರ್ಣವ್ಯವಸ್ಥೆಯ ವಿರೋಧಿ. ಧರ್ಮವು ಸಮಾಜಕ್ಕೆ ಅಗತ್ಯ ಎಂದೇ ಪ್ರತಿಪಾದಿಸಿದ್ದ ಅವರು ತಮ್ಮ ಆದರ್ಶದ ಧರ್ಮವನ್ನು ಬುದ್ಧತತ್ವ ಹಾಗೂ ಬುದ್ಧ ದಮ್ಮದಲ್ಲಿ ಕಂಡುಕೊಂಡರು. ನಿರ್ದಿಷ್ಟ ಸಮುದಾಯಗಳನ್ನು ಹೊರಗಿಟ್ಟು ಹಿಂದೂ ಧರ್ಮಕ್ಕೆ ವಿಷಾದ ಪೂರ್ವಕ ಪ್ರತಿರೋಧವಾಗಿ ಬುದ್ಧ ದಮ್ಮವನ್ನು ಸ್ವೀಕರಿಸಿದರು.
ಬುದ್ಧ ಗುರು ಬದುಕಿದ ಪ್ರಜಾಸತ್ತಾತ್ಮಕ, ಸಮಾನತೆ ಮತ್ತು ಸಹೋದರತೆಗಳೇ ನಿಜವಾದ ಧರ್ಮ ಎಂದು ನಂಬಿ ನಡೆದರು. ದೇವರ ಬಗ್ಗೆ ಮೌನ ತಾಳಿದ, ವೇದ ಪ್ರಾಮಾಣ್ಯ ಮತ್ತು ಚಾತುವರ್ಣ್ಯವನ್ನು ವಿರೋಧಿಸಿದ ಬುದ್ಧ ಒಬ್ಬ ‘ವಿಚಾರವಾದಿʼ ಎಂದು ಕರೆದರು. ಇದು ನಮ್ಮ ಕೆಲವು ವಿಚಾರವಾದಿಗಳಿಗೆ ಅರ್ಥವಾಗಬೇಕು; ಬುದ್ಧಭಕ್ತರು ಬುದ್ಧನಿಗೂ ಸಂಪ್ರದಾಯದ ಸಂಕೋಲೆ ತೊಡಿಸದಿದ್ದರೆ ಸಾಕು.