ದೆಹಲಿ ವಿಧಾಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಯಾಗಿದೆ. ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಾವು ಸಲ್ಲಿಸಿರುವ ನಾಮಪತ್ರಗಳಲ್ಲಿ ತಮ್ಮ ಮೇಲಿರುವ ಅಪರಾಧ ಪ್ರಕರಣಗಳನ್ನು ಕೂಡಾ ಘೋಷಿಸಿಕೊಂಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಈ ಕುರಿತಾಗಿ ವರದಿಯನ್ನು ಬಿಡುಗಡೆ ಮಾಡಿದ್ದು, ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಎಷ್ಟು ಜನ ಅಪರಾಧಿ ಹಿನ್ನೆಲೆ ಉಳ್ಳವರೆಂದು ಬಹರಂಗ ಪಡಿಸಿದೆ.
ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, 70 ಕ್ಷೇತ್ರಗಳಲ್ಲಿ 672 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 672 ರಲ್ಲಿ210 ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, 90 ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು, 224 ಪಕ್ಷಗಳ ಅಭ್ಯರ್ಥಿಗಳು, ಮತ್ತು 148 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಲ್ಲಿ ಶೇ.51 ರಷ್ಟು (36) ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, ಹದಿನೇಳು ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ. ಒಟ್ಟು 67 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದು, ಉಳಿದ ಸೀಟುಗಳನ್ನು ಮಿತ್ರಪಕ್ಷಗಳಾದ ಜೆಡಿಯು ಹಾಗೂ ಲೋಕ ಜನಶಕ್ತಿ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಡಿಮೆ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, ಹತ್ತು ಮಂದಿ ಕೇಸುಗಳನ್ನು ಎದುರಿಸುತ್ತಿದ್ದಾರೆ. 66 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ.
ಒಟ್ಟು 672 ಅಭ್ಯರ್ಥಿಗಳಲ್ಲಿ, ಶೇ.20 (133 ಅಭ್ಯರ್ಥಿಗಳು) ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿರುವುದಾಗಿ ತಮ್ಮ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ. 2015 ರಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ 673 ಅಭ್ಯರ್ಥಿಗಳಲ್ಲಿ 114 (17%) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದರು.
ಪ್ರಮುಖ ಪಕ್ಷಗಳಲ್ಲಿ, ಎಎಪಿಯ 70 ಅಭ್ಯರ್ಥಿಗಳಲ್ಲಿ 42 ಮಂದಿ (60%), ಬಿಜೆಪಿಯ 67 ಅಭ್ಯರ್ಥಿಗಳಲ್ಲಿ 26 ಮಂದಿ (39%), ಕಾಂಗ್ರೆಸ್‍ನ 66 ಅಭ್ಯರ್ಥಿಗಳಲ್ಲಿ 18 ಮಂದಿ (27%), ಬಿಎಸ್‌ಪಿಯ 66 ಅಭ್ಯರ್ಥಿಗಳಲ್ಲಿ 12 ಮಂದಿ (18%), ಎನ್‌ಸಿಪಿ ಯ 5 ಅಭ್ಯರ್ಥಿಗಳಲ್ಲಿ 3 ಮಂದಿ (60%) ತಮ್ಮ ಅಫಿಡವಿಟ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.
32 ಅಭ್ಯರ್ಥಿಗಳು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಓರ್ವ ಅಭ್ಯರ್ಥಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಬಿಜೆಪಿಯ ಅತಿ ಹೆಚ್ಚಿನ 21 ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ನ 16 ಹಾಗೂ ವೈಎಸ್ ಆರ್ ಕಾಂಗ್ರೆಸ್ ಪಕ್ಷದ 7 ಶಾಸಕರು ಕೂಡಾ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಭಾಗಿದಾರರಾಗಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡದಿದ್ದಲ್ಲಿ ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುವವರು ಭಾರೀ ದಂಡ ನೀಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ರಾಜಕೀಯ ಪಕ್ಷಗಳೂ ಕೂಡಾ ತಮ್ಮ ಅಭ್ಯರ್ಥಿಗಳ ಅಪರಾಧ ದಾಖಲೆಯನ್ನು ಪ್ರಕಟಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.