ಕೊಡವರ ಮೂರು ಪ್ರಮುಖ ಹಬ್ಬಗಳಾದ ಕೈಲ್ ಮುಹೂರ್ತ, ತುಲಾ ಸಂಕ್ರಮಣ ಮತ್ತು ಹುತ್ತರಿ ಹಬ್ಭಗಳ ಸಂದರ್ಭದಲ್ಲಿ ಮನೆ ಮೆನೆಗಳಲ್ಲಿ ಸಂತಸ ಸಂಭ್ರಮ ಮನೆ ಮಾಡಿರುತ್ತದೆ. ಅದರಲ್ಲೂ ತುಲಾ ಸಂಕ್ರಮಣ ದಿನದಂದು ಕೊಡವರು ಕಾವೇರಿ ಮಾತೆಗೆ ಬಹಳ ಭಯ ಭಕ್ತಿಯಿಂದ ನೆಡೆದುಕೊಳ್ಳುತ್ತಾರೆ. ವರ್ಷವಿಡೀ ಮಾಂಸಾಹಾರ ಸೇವಿಸುವ ಕೊಡಗಿನಲ್ಲಿ ಅಂದು ಮಾತ್ರ ಮಾಂಸಾಹಾರ ವರ್ಜ್ಯ. ತುಲಾ ಸಂಕ್ರಮಣ ದಿನದಂದು 50 ಸಾವಿರಕ್ಕೂ ಅಧಿಕ ಭಕ್ತರು ತಲಕಾವೇರಿಗೆ ಬೇಟಿ ನೀಡುತ್ತಾರೆ. ಕೆಲವೊಮ್ಮೆ ಭಕ್ತರ ಸಂಖ್ಯೆ ಇನ್ನೂ ಅಧಿಕಗೊಂಡು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಅಗುವ ಸಂದರ್ಭವೂ ಇದೆ.
ತುಲಾ ಸಂಕ್ರಮಣ ದಿನದಂದು ತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಲು ಬರೀ ಕೊಡಗಿನಿಂದಷ್ಟೇ ಅಲ್ಲದೆ ದೂರದ ಮಂಗಳೂರು, ಬೆಂಗಳೂರು, ಚೆನ್ನೈ, ಕೇರಳ, ತಮಿಳುನಾಡಿನಿಂದಲೂ ಭಕ್ತರು ಆಗಮಿಸುತ್ತಾರೆ. ಬರೇ ತೀರ್ಥೋದ್ಭವದಂದೇ ಅಲ್ಲದೆ ನಿತ್ಯವೂ ನೂರಾರು ಭಕ್ತಾದಿಗಳು ತಲಕಾವೇರಿಗೆ ಬೇಟಿ ನೀಡುತ್ತಾರೆ. ಭಕ್ತರ ಸಂಖ್ಯೆ ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮಾತ್ರ ಅಧಿಕವಾಗಿರುತ್ತದೆ.
ಆದರೆ ಮಡಿಕೇರಿಯಿಂದ 45 ಕಿಲೊಮೀಟರ್ ದೂರ ಇರುವ ಈ ಪುಣ್ಯ ಕ್ಷೇತ್ರಕ್ಕೆ ತೆರಳಲು ರಸ್ತೆ ಮಾತ್ರ ಸಂಪೂರ್ಣ ಗುಂಡಿಗಳಿಂದಲೇ ತುಂಬಿಕೊಂಡಿದೆ. ಪ್ರತೀ ವರ್ಷವೂ ಮಳೆ ಹೆಚ್ಚಾಗಿರುವುದರಿಂದ ಈ ರಸ್ತೆಗಳನ್ನು ನಿಗದಿತ ಗುಣಮಟ್ಟದ ಟಾರು ಹಾಗೂ ಕಲ್ಲನ್ನು ಬಳಸಿ ನಿರ್ಮಿಸಬೇಕು. ಆದರೆ ಕಳಪೆ ಕಾಮಗಾರಿಯಿಂದಾಗಿಯೇ ವರ್ಷವೂ ರಸ್ತೆ ಬಾಳಿಕೆ ಬರುತ್ತಿಲ್ಲ ಎಂದು ಚೇರಂಬಾಣೆಯ ನಿವಾಸಿ ಪುನೀತ್ ಬೋಪಯ್ಯ ಅರೋಪಿಸಿದರು.
ಭಾಗಮಂಡಲ, ಅಪ್ಪಂಗಾಲ, ಉಡೋತ್ ಮೊಟ್ಟೆ, ಹಾಗೂ ಚೇರಂಬಾಣೆಯಲ್ಲಿ ವರ್ಷಕ್ಕೆ ಮೂರು ಬಾರಿಯಾದರೂ ರಸ್ತೆ ಗುಂಡಿ ಬೀಳುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತ್ತಾರೆ. ರಸ್ತೆಯ ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆ ಬರೀ ಎಂ ಸ್ಯಾಂಡ್ ಮತ್ತು ಜಲ್ಲಿಗಳನ್ನು ಹಾಕಿ ಹಾಗೇ ಬಿಡುತ್ತಿದೆ. ಇದು ವಾಹನಗಳ ಓಡಾದಿಂದಾಗಿ ಜಲಲಿ ಕಲ್ಲುಗಳು ರಸ್ತೆಯ ಸುತ್ತಲೂ ಹರಡಿಕೊಂಡು ಮತ್ತಷ್ಟು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಅಪ್ಪಂಗಾಲದ ಮಹೇಶ ಹೇಳಿದರು. ಈ ಬಾರಿ ಅಕ್ಟೋಬರ್ 18 ರಂದು ರಾತ್ರಿ 12.59 ಘಂಟೆಗೆ ತೀರ್ಥೋದ್ಭವ ಆಗಲಿದ್ದು ರಾತ್ರಿಯಿಡೀ ವಾಹನಗಳ ಓಡಾಟ ಇರುತ್ತದೆ. ಹೀಗಿರುವಾಗ ರಸ್ತೆಗಳ ದುರವಸ್ಥೆಯಿಂದ ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗುವ ಸಾಧ್ಯತೆಗಳೂ ಹೆಚ್ಚಿವೆ. ಆದರೆ ಲೋಕೋಪಯೋಗಿ ಇಲಾಖೆಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.
ತಲಕಾವೇರಿ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರನ್ನು ಮಾತಾಡಿಸಿದಾಗ ದೇವಾಲಯ ಸನ್ನಿಧಿಯಲ್ಲಿ ಈಗಾಗಲೇ ಭಕ್ತರು ಒಳನುಗ್ಗದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು ಮುಖ್ಯ ದ್ವಾರದಿಂದ ಕುಂಡಿಕೆವರೆಗೂ ಸಾವಿರಕ್ಕೂ ಅಧಿಕ ಟ್ಯೂಬ್ ಲೈಟ್ ಗಳನ್ನು ಅಳವಡಿಸಲಾಗಿದೆ. ಒಂದು ತಿಂಗಳ ಕಾಲ ಕೊಡಗು ಏಕೀಕರಣ ರಂಗ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಿಕೊಂಡಿದೆ ಎಂದರು. ಈಗ ಭಾಗಮಂಡಲದ ಭಗಂಡೇಶ್ವರ ದೇವಾಲಯದ ತಾಮ್ರದ ಮೇಲ್ಚಾವಣಿಯನ್ನು 48 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ತ್ರಿವೇಣಿ ಸಂಗಮ ದಲ್ಲಿ ಪಿಂಡ ಪ್ರಧಾನ ಶ್ರಾದ್ಧ ವಿಧಿಗಳಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು 28.85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಟ್ಟೆಗಳನ್ನು ನಿರ್ಮಿಸಲಾಗುವುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ಹೇಳಿದರು. ಭಾಗಮಂಡಲದಲ್ಲಿ ಎರಡನೇ ಹಂತದ ಯಾತ್ರಿ ನಿವಾಸ ನಿರ್ಮಿಸಲು 80 ಲಕ್ಷ ರೂಪಾಯಿಗಳ ವೆಚ್ಚಕ್ಕೆ ಅನುಮೋದನೆ ದೊರೆತಿದೆ ಎಂದೂ ಅವರು ತಿಳಿಸಿದರು.
ಈ ಬಾರಿ ತೀರ್ಥೋದ್ಭವಕ್ಕೆ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು ಭಕ್ತರು ತೀರ್ಥೋದ್ಭವದಲ್ಲಿ ತೀರ್ಥ ತುಂಬಿಕೊಳ್ಳಲು ಪ್ಲಾಸ್ಟಿಕ್ ಬಾಟಲಿ ಬಳಸುವಂತಿಲ್ಲ ಎಂದು ದೇವಾಲಯ ಸಮಿತಿ ತಿಳಿಸಿದೆ. ಸಹಸ್ರಗಟ್ಟಲೆ ಜನರು ಆಗಮಿಸುವ ಈ ಪುಣ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯವಾಗಿರುವ ರಸ್ತೆಯೇ ಗುಂಡಿ ಬಿದ್ದಿರುವುದು ಭಕ್ತರ ಕಷ್ಟ ಹೆಚ್ಚಿಸಲಿದೆ. ಬರೀ ಭಕ್ತರೇ ಅಲ್ಲದೆ ಇಲ್ಲಿನ ಗ್ರಾಮಸ್ಥರಿಗೂ ಉತ್ತಮ ರಸ್ತೆ ಅತ್ಯವಶ್ಯಕವಾಗಿದ್ದು ಪ್ರತಿಯೊಂದಕ್ಕೂ ಇವರು ಮಡಿಕೇರಿಗೆ ಬರಲೇಬೇಕಿದೆ. ಮಳೆಗಾಲದಲ್ಲಂತೂ ಗ್ರಾಮಸ್ಥರ ಅವಸ್ಥೆ ಹೇಳುವುದೇ ಬೇಡ. ಈ ಪ್ರದೇಶದಲ್ಲಿ ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಮಳೆಯಾಗುತ್ತಿದ್ದು ಪ್ರತೀ ಮಳೆಗಾಲದಲ್ಲೂ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ , ಅಷ್ಟೇ ಅಲ್ಲ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ರಸ್ತೆಯಲಿ ನೆಲದಿಂದ 4-5 ಅಡಿ ಎತ್ತರದಲ್ಲಿ ನೀರು ಹರಿಯುವುದರಿಂದ ಭಾಗಮಂಡಲ ದ್ವೀಪದಂತೆ ಅಗುತ್ತದೆ.
ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು 2015 ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ ಜೆ ಜಾರ್ಜ್ ಅವರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ನೀಲ ನಕಾಶೆ ತಯಾರಿಸಿ ರಾಜ್ಯ ಸರ್ಕಾರದ ಅನುಮೋದನೆಗೂ ಕಳಿಸಿಕೊಟ್ಟಿದ್ದರು. ಅವರು ಅಧಿಕಾರದಿಂದ ಇಳಿದ ನಂತರ ಯಾರೂ ಈ ಕುರಿತು ಆಸಕ್ತಿ ತೋರಿಲ್ಲ. ಈ ತನಕ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ. ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಮೊದಲು ಮೂಲಸೌಕರ್ಯ ಕಲ್ಪಿಸಿ ಕೊಡಲಿ ಎಂಬುದೇ ಎಲ್ಲರ ಆಶಯ.