ನವದೆಹಲಿ : ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಇಂಡಿಯಾ’ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಆಪ್ತರನ್ನು ಕೂರಿಸಿ ಜನರ ಮತಗಳನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಪಾತಾಳದಲ್ಲಿದ್ದರೂ ಎಳೆದು ತರುವ ಶಕ್ತಿ ಜನರಿಗಿದೆ
ಪ್ರಧಾನಿ ಮೋದಿ ಎಷ್ಟೇ ರಕ್ಷಣೆ ನೀಡಲು ಯತ್ನಿಸಿದರೂ ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ಕಿತ್ತೊಗೆಯುವುದು ಶತಃಸಿದ್ಧ ಎಂದು ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಜ್ಞಾನೇಶ್ ಕುಮಾರ್ ಭೂಮಿಯ ಒಳಗೆ ಅಡಗಿಕೊಂಡಿದ್ದರೂ ಅಲ್ಲಿಂದ ಎಳೆದು ತರುವ ಶಕ್ತಿ ಈ ದೇಶದ ಯುವಕರು ಹಾಗೂ ಮಹಿಳೆಯರಲ್ಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ದೇಶದ ಜನತೆ ಒಗ್ಗಟ್ಟಿನಿಂದ ಮತ್ತು ಗಟ್ಟಿಯಾಗಿ ಹೋರಾಡಿದರೆ ಮೋದಿ ಖಂಡಿತ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ, ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಒಂದಾಗಬೇಕೆಂದು ಅವರು ಕರೆ ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯಗಳದ್ದು ಕಳ್ಳರ ಸರ್ಕಾರ
ಪ್ರಸ್ತುತ ದೇಶದ ಆಡಳಿತ ವ್ಯವಸ್ಥೆಯ ಮೇಲೆ ಕಟು ಪ್ರಹಾರ ನಡೆಸಿದ ಎಐಸಿಸಿ ಅಧ್ಯಕ್ಷರು, ಸದ್ಯದ ಕೇಂದ್ರ ಸರ್ಕಾರ ಮಾತ್ರವಲ್ಲದೆ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ಸರ್ಕಾರಗಳೂ ‘ಕಳ್ಳತನದ ಸರ್ಕಾರಗಳು’ ಎಂದು ಜರೆದಿದ್ದಾರೆ. ಜನಾದೇಶವನ್ನು ಕಸಿದುಕೊಂಡು, ಅನ್ಯಮಾರ್ಗಗಳ ಮೂಲಕ ಈ ಸರ್ಕಾರಗಳು ಅಧಿಕಾರದಲ್ಲಿ ಮುಂದುವರಿಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಇಡಿ, ಕೇಂದ್ರೀಯ ತನಿಖಾ ಸಂಸ್ಥೆಗಳ ಬೆದರಿಕೆಗೆ ಮಣಿಯುವುದಿಲ್ಲ
ವಿರೋಧ ಪಕ್ಷಗಳನ್ನು ಬೆದರಿಸಲು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಕಿಡಿಕಾರಿದ್ದಾರೆ. ತನಿಖಾ ಸಂಸ್ಥೆಗಳ ಮೂಲಕ ಭಯದ ವಾತಾವರಣ ಸೃಷ್ಟಿಸಿ ಜನರ ಮತದಾನದ ಹಕ್ಕನ್ನು ಕಸಿಯಲು ಮೋದಿ ಯತ್ನಿಸುತ್ತಿದ್ದಾರೆ. ಆದರೆ ಇಂತಹ ಬೆದರಿಕೆಗಳಿಗೆ ‘ಇಂಡಿಯಾ’ ಒಕ್ಕೂಟದ ನಾಯಕರು ಹೆದರುವುದಿಲ್ಲ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ಮುಂದುವರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮಲೀಲಾ ಮೈದಾನಕ್ಕೆ ಪ್ರತಿಪಕ್ಷ ನಾಯಕರ ಬೃಹತ್ ಮೆರವಣಿಗೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಎಸ್ಐಆರ್ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಈ ಐತಿಹಾಸಿಕ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಭಾಗವಹಿಸಿದ್ದರು. ರ್ಯಾಲಿಯ ಆರಂಭಕ್ಕೂ ಮುನ್ನ ಮಿಂಟೋ ಬ್ರಿಡ್ಜ್‌ನಿಂದ ರಾಮಲೀಲಾ ಮೈದಾನದವರೆಗೆ ತೆರೆದ ಬಸ್‌ನಲ್ಲಿ ನಾಯಕರು ಬೃಹತ್ ಮೆರವಣಿಗೆ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ರಾಜ್ಯೋತ್ಸವ ಒಂದು ದಿನದ ಸಂಭ್ರಮವಲ್ಲ, ತಿಂಗಳ ಪೂರ್ತಿ ಹಬ್ಬ: ಸಚಿವ ಜಮೀರ್ ಅಹ್ಮದ್ ಖಾನ್






