ಡ್ರೋನ್ ಪ್ರತಾಪ್‌ಗೆ ಹೈಕೋರ್ಟ್‌ನಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.ಡ್ರೋನ್ ಪ್ರತಾಪ್ ಅವರು ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟದ ಪ್ರಯೋಗ ನಡೆಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈ ವಿಡಿಯೋ ಆಧರಿಸಿ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದರು. ಬಳಿಕ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಡ್ರೋನ್ ಪ್ರತಾಪ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಎಫ್‌ಐಆರ್ ರದ್ದುಪಡಿಸಿದೆ. ಡ್ರೋನ್ ಪ್ರತಾಪ್ ಅವರು ದುರುದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂಬುದು ಸಾಬೀತಾಗಿಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
ಹೈಕೋರ್ಟ್ ಆದೇಶದ ಬಳಿಕ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಡ್ರೋನ್ ಪ್ರತಾಪ್, ತಮ್ಮ ವಿರುದ್ಧ ಹಲವು ಆರೋಪಗಳು ಮತ್ತು ಟೀಕೆಗಳು ಕೇಳಿಬಂದಿದ್ದವು. ಇದೀಗ ಪ್ರಕರಣದಿಂದ ಮುಕ್ತರಾಗಿರುವುದಕ್ಕೆ ಸಂತಸವಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?
ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ನಡೆಸಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿನಯ್ ಎಂಬಾತ ವಿಡಿಯೋ ಚಿತ್ರೀಕರಿಸಿದ್ದರೆ, ಪ್ರಜ್ವಲ್ ಎಂಬಾತ ಸೋಡಿಯಂ ಮೆಟಲ್ ಒದಗಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಪ್ರಕರಣದ ಬಳಿಕ ಪೊಲೀಸರು ಡ್ರೋನ್ ಪ್ರತಾಪ್ ಅವರ ಇಬ್ಬರು ಸ್ನೇಹಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಂತರ ಡ್ರೋನ್ ಪ್ರತಾಪ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದೀಗ ಹೈಕೋರ್ಟ್ ಎಫ್‌ಐಆರ್ ರದ್ದುಪಡಿಸಿರುವುದರಿಂದ ಪ್ರಕರಣದಲ್ಲಿ ಅವರಿಗೆ ಕಾನೂನುಬದ್ಧ ಪರಿಹಾರ ದೊರೆತಿದೆ.






