ಬೆಂಗಳೂರು ಹಾಗೂ ಕರಾವಳಿ ಭಾಗಗಳಲ್ಲಿ ಖೋಟಾ ನೋಟು ದಂಧೆ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ರಾಮನಗರದಲ್ಲೂ ನಕಲಿ ನೋಟು ತಯಾರಿಕೆ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಿರ್ಮಾಣ ಹಂತದ ಕಟ್ಟಡವೊಂದನ್ನೇ ಅಕ್ರಮ ದಂಧೆಯ ಅಡ್ಡೆಯನ್ನಾಗಿ ಮಾಡಿಕೊಂಡು ನಕಲಿ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಗ್ಯಾಂಗ್‌ವೊಂದನ್ನು ಐಜೂರು ಪೊಲೀಸರು ಬಯಲಿಗೆಳೆದಿದ್ದಾರೆ.ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಕಟ್ಟಡವನ್ನು ಬಳಸಿಕೊಂಡು ಗ್ಯಾಂಗ್ ನಕಲಿ ನೋಟುಗಳನ್ನು ಮುದ್ರಿಸುತ್ತಿತ್ತು.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಐಜೂರು ಪೊಲೀಸರು ಐವರನ್ನು ವಶಕ್ಕೆ ಪಡೆದು, ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಹೊರಗಿನಿಂದ ವಿಶೇಷ ಕಾಗದದ ಶೀಟ್‌ಗಳನ್ನು ತರಿಸಿ, ಅವುಗಳಿಗೆ ನಿರ್ದಿಷ್ಟ ರಾಸಾಯನಿಕ ಲೇಪನ ಮಾಡಿ ಅಸಲಿ ನೋಟುಗಳಂತೆ ಕಾಣುವಂತೆ ₹200 ಹಾಗೂ ₹500 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು ಎನ್ನಲಾಗಿದೆ.
ಮುದ್ರಣದ ಬಳಿಕ ಶೀಟ್‌ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್‌ಗಳಾಗಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಹಾಗೂ ಬೆರಳಚ್ಚು ತಜ್ಞರನ್ನೊಳಗೊಂಡ SOCO ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನೋಟು ಮುದ್ರಣಕ್ಕೆ ಬಳಸಿದ್ದ ಕಾಗದ, ರಾಸಾಯನಿಕ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲೂ ನಕಲಿ ನೋಟು ತಯಾರಿಕೆ ಜಾಲ ಪತ್ತೆಯಾಗಿತ್ತು. ಮಹಮ್ಮದ್ ಇದ್ರೀಸ್ ಎಂಬಾತನ ನಿರ್ಮಾಣ ಹಂತದ ಕಟ್ಟಡದಲ್ಲಿ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಉಪ್ಪಿನಂಗಡಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದರು.
ಈ ವೇಳೆ ಏಳು ಮಂದಿಯನ್ನು ಬಂಧಿಸಿ, ನಕಲಿ ನೋಟು ತಯಾರಿಕೆಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ರಾಮನಗರದಲ್ಲೂ ಇದೇ ರೀತಿಯ ಜಾಲ ಪತ್ತೆಯಾಗಿರುವುದು ಪೊಲೀಸರ ತನಿಖೆಗೆ ಮತ್ತಷ್ಟು ಮಹತ್ವ ನೀಡಿದೆ.






