ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಜ್ವರ ಹಾಗೂ ಸಾಂಕ್ರಾಮಿಕ ರೋಗಗಳ ಆತಂಕದ ನಡುವೆಯೇ ಶಾಲಾ ಮಕ್ಕಳಲ್ಲಿ H1N1 ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಪಾಟರಿ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 21ಕ್ಕೂ ಅಧಿಕ ಸಿಬ್ಬಂದಿಯಲ್ಲಿ ಜ್ವರ, ಶೀತ ಮತ್ತು ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.
ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಯ ಕೆಲವು ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೋಂಕು ಹರಡುವುದನ್ನು ತಡೆಯಲು ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ.

ಶಾಲೆಯಲ್ಲಿ ಸುಮಾರು 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರ ಪೈಕಿ 500ಕ್ಕೂ ಹೆಚ್ಚು ಮಕ್ಕಳಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಿವೆ ಎನ್ನಲಾಗಿದೆ. 137 ಮಕ್ಕಳಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.ಇದೇ ವೇಳೆ ಶಾಲೆಯ 21 ಸಿಬ್ಬಂದಿಯಲ್ಲೂ ಜ್ವರ, ಶೀತ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬಂದಿವೆ. ಅನಾರೋಗ್ಯಕ್ಕೀಡಾದವರ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ H1N1 ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಆಗಸ್ಟ್ 18ರವರೆಗೆ ಮಾಂಟೆಸ್ಸರಿ ಹಾಗೂ ಪ್ರಾಥಮಿಕ ಶಾಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್ಲೈನ್ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.ಜ್ವರ, ಶೀತ ಅಥವಾ ಕೆಮ್ಮಿನಂತಹ ಲಕ್ಷಣಗಳು ಕಂಡುಬರುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಂತೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲು ಶಾಲೆಯ ಸುತ್ತಮುತ್ತಲಿನ ಬೀದಿಬದಿ ಆಹಾರ ಮಳಿಗೆಗಳ ಅಶುಚಿತ್ವವೂ ಕಾರಣವಾಗಿರಬಹುದು ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸಿದೆ.ಕಬಾಬ್, ಎಗ್ ರೈಸ್, ಫಾಸ್ಟ್ಫುಡ್ ಹಾಗೂ ತಂಪು ಪಾನೀಯ ಮಾರಾಟ ಮಾಡುವ ಅಂಗಡಿಗಳಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಶಾಲೆಯ ಗೋಡೆಗಳ ಪಕ್ಕದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪರಿಸರವೂ ಮಲಿನಗೊಂಡಿದೆ ಎಂದು ದೂರಲಾಗಿದೆ.

ಶಾಲಾ ಆವರಣದ ಸುತ್ತಮುತ್ತ ಅನಾರೋಗ್ಯಕರ ಆಹಾರ ಮಾರಾಟದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಆಡಳಿತ ಮಂಡಳಿ ಒತ್ತಾಯಿಸಿದೆ. ಶಾಲೆಗಳ ಸುತ್ತಮುತ್ತ ಜಂಕ್ಫುಡ್ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಬಿಎ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಸೋಂಕಿನ ಹಿನ್ನೆಲೆಯಲ್ಲಿ ಪೋಷಕರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಸೇರಿದಂತೆ ಯಾವುದೇ ಲಕ್ಷಣಗಳು ಕಂಡುಬಂದರೆ ಅವರನ್ನು ಶಾಲೆಗೆ ಕಳುಹಿಸದೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.






