ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿರುವ ಸಿಎಂ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ‘ಎದ್ದೇಳು ಕರ್ನಾಟಕ’ ಸಂಘಟನೆಯ ನಿಯೋಗದೊಂದಿಗೆ ಆಗಮಿಸಿದ್ದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಸಿಎಂ ಗಮನಕ್ಕೆ ಹಲವು ವಿಚಾರಗಳನ್ನು ತಂದಿದ್ದಾರೆ.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅಥೀಕ್ ಉಪಸ್ಥಿತರಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಅರ್ಹ ಮತದಾರರ ಹೆಸರುಗಳು ಕೈಬಿಡುವ ಸಾಧ್ಯತೆ ಇದೆ ಎಂಬ ಆತಂಕವನ್ನು ನಿಯೋಗ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಹಲವು ಲೋಪಗಳು ನಡೆಯುತ್ತಿವೆ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆ ಆರೋಪಿಸಿದೆ.
- ಅರ್ಹ ಮತದಾರರ ಹೆಸರು ಕೈಬಿಡುವ ಆತಂಕ: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪ.
- ಹೆಚ್ಚಿನ ಪ್ರಮಾಣದ ಡಿಲೀಷನ್: ಕೆಲವು ಬೂತ್‌ಗಳಲ್ಲಿ ಶೇ.60ಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಗಂಭೀರ ಆರೋಪ.
- ಬದುಕಿರುವವರನ್ನೇ ‘ಮೃತರು’ ಎಂದು ಗುರುತು: ಕೆಲ ಮತದಾರರನ್ನು ತಪ್ಪಾಗಿ ‘ಡೆಡ್’ ಎಂದು ದಾಖಲಿಸಲಾಗುತ್ತಿದೆ ಎಂದು ದೂರಲಾಗಿದೆ.
- ಸ್ಥಳಾಂತರಗೊಂಡವರ ಸಮಸ್ಯೆ: ಬಾಡಿಗೆ ಮನೆ ಬದಲಿಸಿದವರು ಅಥವಾ ಉದ್ಯೋಗದ ನಿಮಿತ್ತ ಬೇರೆಡೆ ತೆರಳಿದವರನ್ನು ‘ಗೈರುಹಾಜರು’ ಎಂದು ಗುರುತಿಸಲಾಗುತ್ತಿದೆ ಎಂಬ ಆರೋಪ.
- BLOಗಳ ತರಬೇತಿ ಕುರಿತು ಪ್ರಶ್ನೆ: ಮನೆಮನೆಗೆ ತೆರಳಿ ಪರಿಷ್ಕರಣೆ ನಡೆಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಲಾಗಿಲ್ಲ ಎಂದು ಸಂಘಟನೆ ದೂರಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸುವ ಬದಲು ಕನಿಷ್ಠ ಮೂರು ತಿಂಗಳು ವಿಸ್ತರಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.ಅಲ್ಲದೆ, ಸ್ಥಳಾಂತರಗೊಂಡ ಮತದಾರರಿಗೆ ಮತ್ತೆ ಅವಕಾಶ ಕಲ್ಪಿಸಲು ಫಾರ್ಮ್-6 ಮತ್ತು ಫಾರ್ಮ್-8 ವಿತರಣೆ ಮಾಡಬೇಕು. ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಲು ಸರ್ಕಾರದ ವತಿಯಿಂದ ವ್ಯಾಪಕ ಜಾಗೃತಿ ಅಭಿಯಾನ ನಡೆಸಬೇಕು ಎಂದು ಮನವಿ ಮಾಡಲಾಗಿದೆ.

ಅರ್ಹ ಮತದಾರರ ಹಕ್ಕು ಕಸಿದುಕೊಳ್ಳುವ ಯಾವುದೇ ಪ್ರಕ್ರಿಯೆಗೆ ಅವಕಾಶ ನೀಡಬಾರದು ಎಂದು ನಿಯೋಗ ಸಿಎಂಗೆ ಮನವಿ ಮಾಡಿದೆ. ಪ್ರಕಾಶ್ ರಾಜ್ ಅವರು SIR ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿರುವುದು ಇದೀಗ ರಾಜಕೀಯ ವಲಯದಲ್ಲೂ ಕುತೂಹಲ ಮೂಡಿಸಿದೆ.






