ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ನಡೆಸಿದ ದಾಳಿ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ. ಈ ಪ್ರಕರಣ ಜೈಲಿನ ಭದ್ರತಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ.

ದಾಳಿ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್, ಪೆನ್‌ಡ್ರೈವ್ ಹಾಗೂ ಡೈರಿ/ನೋಟ್‌ಬುಕ್ ಪತ್ತೆಯಾಗಿದ್ದು, ಪ್ರಜ್ವಲ್ ತಂದೆ, ತಾಯಿ, ಗೆಳತಿ ಸೇರಿದಂತೆ ನೋಟ್‌ಬುಕ್‌ನಲ್ಲಿ 30ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇನ್ನು ಮೊಬೈಲ್‌ಗೆ ಸಂಬಂಧಿಸಿದ ಪಾಸ್‌ವರ್ಡ್ ನೀಡಲು ಪ್ರಜ್ವಲ್ ನಿರಾಕರಿಸಿದ್ದು, ಮೊಬೈಲ್ ತನ್ನದಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ಮೊಬೈಲ್ ಪತ್ತೆ ಹಾಗೂ ಮೊಬೈಲ್‌ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಇನ್ನು ಮುಂದೆ ಪ್ರಜ್ವಲ್ ಇತರ ಕೈದಿಗಳೊಂದಿಗೆ ಸಾಮಾನ್ಯ ಸೌಲಭ್ಯಗಳನ್ನು ಬಳಸಬೇಕಿದ್ದು, ಜೈಲಿನ ಸಮವಸ್ತ್ರ ಧರಿಸಿ ಗ್ರಂಥಾಲಯದ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದ ಬಳಿಕ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದ್ದು, ಈರಣ್ಣ , ಜೈಲಿನಲ್ಲಿ ರೇಡ್ ನಡೆದಾಗಲೆಲ್ಲಾ ಏನು ಸಿಗದಂತೆ ನೋಡಿಕೊಳ್ಳುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಹಿಂದಿನ ಬಾರಿಯ ದಾಳಿಯಲ್ಲಿ ವಶಪಡಿಸಿಕೊಂಡಿರುವ ಮೊಬೈಲ್ ಹಾಗೂ ಇತರೆ ವಸ್ತುಗಳ ಕುರಿತು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







