ಬೆಂಗಳೂರು: ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ಮತ್ತು ಡಾಬಾಗಳಲ್ಲಿ ನೈರ್ಮಲ್ಯದ ಕೊರತೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆಯ ಆಯುಕ್ತರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಅಥವಾ ಸಂಗ್ರಹಣೆ, ಕಳಪೆ ನೈರ್ಮಲ್ಯ, ಅಸುರಕ್ಷಿತ ನೀರಿನ ಬಳಕೆ ಸೇರಿದಂತೆ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಹೋಟೆಲ್, ರೆಸ್ಟೊರೆಂಟ್ ಸೇರಿದಂತೆ ಆಹಾರ ಉದ್ಯಮಗಳು ತಮ್ಮ ಪರವಾನಗಿಯನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಆವರಣದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ವ್ಯವಹಾರದ ಪ್ರಕ್ರಿಯೆ ಅಥವಾ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಿದರೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಆಹಾರ ತಯಾರಿಕಾ ಸ್ಥಳ ಸ್ವಚ್ಛ ಹಾಗೂ ಉತ್ತಮ ಗಾಳಿಯಾಡುವಂತಿರಬೇಕು. ಪಾತ್ರೆ, ಅಡುಗೆ ಉಪಕರಣ ಮತ್ತು ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯಲು ಪ್ರತ್ಯೇಕ ಸಿಂಕ್ ವ್ಯವಸ್ಥೆ ಇರಬೇಕು. ಸ್ವಚ್ಛತೆಗೆ ಸುರಕ್ಷಿತ ಹಾಗೂ ಬಿಸಿ ನೀರನ್ನು ಬಳಸಬೇಕು.
ಕಚ್ಚಾ ಆಹಾರ ಪದಾರ್ಥಗಳನ್ನು ವಿಶ್ವಾಸಾರ್ಹ ಮೂಲದಿಂದ ಖರೀದಿಸಿ, ಸೂಕ್ತ ತಾಪಮಾನದಲ್ಲಿ ಸ್ವಚ್ಛ ಸ್ಥಳದಲ್ಲಿ ಸಂಗ್ರಹಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಕೆಗೆ ಮುನ್ನ ಚೆನ್ನಾಗಿ ತೊಳೆಯಬೇಕು.

ಆಹಾರವನ್ನು ಸಮರ್ಪಕವಾಗಿ ಬೇಯಿಸಿ ತಯಾರಿಸಬೇಕು. ಸಸ್ಯಾಹಾರ ಮತ್ತು ಮಾಂಸಾಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಅಡುಗೆ ಎಣ್ಣೆಯ ಮರುಬಳಕೆಯನ್ನು ತಪ್ಪಿಸುವಂತೆ ಸೂಚಿಸಲಾಗಿದೆ.ತಣ್ಣನೆಯ ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್‌ನಲ್ಲಿ, ಫ್ರೋಜನ್ ಆಹಾರವನ್ನು -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಹಾಗೂ ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಇರಿಸಬೇಕು.ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಕ್ಕೆ ಪ್ರತ್ಯೇಕ ಕತ್ತರಿಸುವ ಮಣೆ, ಚಾಕು ಹಾಗೂ ಪಾತ್ರೆಗಳನ್ನು ಬಳಸಬೇಕು. ತಯಾರಿಸಿದ ಆಹಾರವನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.
ಆಹಾರ ತಯಾರಿಸುವ ಸಿಬ್ಬಂದಿ ಸ್ವಚ್ಛ ಸಮವಸ್ತ್ರ, ತಲೆಗವಸು, ಮಾಸ್ಕ್ ಹಾಗೂ ಏಪ್ರನ್ ಧರಿಸಬೇಕು. ಉಗುರುಗಳನ್ನು ಚಿಕ್ಕದಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸಿಬ್ಬಂದಿಯ ಆರೋಗ್ಯ ದಾಖಲೆಗಳನ್ನು ಪ್ರತಿವರ್ಷ ನವೀಕರಿಸಬೇಕು.ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಪ್ರತಿನಿತ್ಯ ಪರಿಶೀಲಿಸಲು ಮೇಲ್ವಿಚಾರಕರನ್ನು ನೇಮಿಸುವಂತೆ ಸೂಚಿಸಲಾಗಿದೆ.
ಅಡುಗೆ, ಪಾತ್ರೆ ತೊಳೆಯುವುದು ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಕುಡಿಯಲು ಯೋಗ್ಯವಾದ ಸುರಕ್ಷಿತ ನೀರನ್ನೇ ಬಳಸಬೇಕು. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ, ಅದರ ದಾಖಲೆಗಳನ್ನು ನಿರ್ವಹಿಸಬೇಕು.ಗ್ರಾಹಕರಿಗೆ ಉಚಿತ ಕುಡಿಯುವ ನೀರು ಒದಗಿಸಬೇಕು. ಬಿಸಿ ನೀರಿನ ವ್ಯವಸ್ಥೆ, ಕೈತೊಳೆಯಲು ನೀರು ಮತ್ತು ಸಾಬೂನು ಹಾಗೂ ಶೌಚಾಲಯದ ವ್ಯವಸ್ಥೆ ಇರಬೇಕು.

ಅಡುಗೆಮನೆ ಮತ್ತು ಆಹಾರ ದಾಸ್ತಾನು ಪ್ರದೇಶವನ್ನು ಸ್ವಚ್ಛವಾಗಿಡಬೇಕು. ನೊಣ, ಜಿರಳೆ, ಇಲಿ ಸೇರಿದಂತೆ ಕೀಟಗಳು ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿಯಮಿತ ಕೀಟ ನಿಯಂತ್ರಣ ಕಾರ್ಯಗಳ ದಾಖಲೆಗಳನ್ನು ನಿರ್ವಹಿಸಬೇಕು. ಹೋಟೆಲ್, ರೆಸ್ಟೊರೆಂಟ್ ಹಾಗೂ ಡಾಬಾಗಳ ಗೋಡೆ, ನೆಲ ಮತ್ತು ಚಾವಣಿಯನ್ನು ಸ್ವಚ್ಛವಾಗಿಡಬೇಕು. ಉದುರುವ ಬಣ್ಣ, ಬಿರುಕುಗಳು ಹಾಗೂ ನೇತಾಡುವ ವಿದ್ಯುತ್ ತಂತಿಗಳು ಇರದಂತೆ ನೋಡಿಕೊಳ್ಳಬೇಕು.ಧೂಳು ಹಾಗೂ ಕೀಟಗಳ ಪ್ರವೇಶ ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಪರದೆ ಅಳವಡಿಸಬೇಕು.

ಕಚ್ಚಾ ಮಾಂಸ, ಮೀನು, ಸಮುದ್ರ ಆಹಾರ ಹಾಗೂ ತರಕಾರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಆಹಾರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು.ಅವಧಿ ಮೀರಿದ ಆಹಾರ, ಹಾಳಾದ ಹಣ್ಣು–ತರಕಾರಿ ಹಾಗೂ ಶಿಲೀಂಧ್ರ ಕಾಣಿಸಿಕೊಂಡ ಆಹಾರವನ್ನು ತಕ್ಷಣ ವಿಲೇವಾರಿ ಮಾಡಬೇಕು. ಆಹಾರ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು.ಅನುಮತಿಯಿಲ್ಲದ ಕೃತಕ ಬಣ್ಣಗಳು ಅಥವಾ ಅಸುರಕ್ಷಿತ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.






