ವಿಶೇಷ ಲೇಖನ : ನಾ ದಿವಾಕರ ಹಿರಿಯ ಲೇಖಕರು..
ಪ್ರಜಾಪ್ರಭುತ್ವ ಎಂಬ ಆಡಳಿತ ವ್ಯವಸ್ಥೆಯ ಕಲ್ಪನೆಯನ್ನು ಎರಡು ನೆಲೆಗಳಲ್ಲಿ ನೋಡಬಹುದು. ಒಂದು ರಾಜಕೀಯ ಮತ್ತೊಂದು ಸಾಮಾಜಿಕ. ಭಾರತದ ಸಂದರ್ಭದಲ್ಲಿ ಇದನ್ನು ಸ್ಪಷ್ಟವಾಗಿ ನಿರ್ವಚಿಸಿ, ಪ್ರತಿಪಾದಿಸಿದ್ದವರು ಡಾ. ಬಿ.ಆರ್. ಅಂಬೇಡ್ಕರ್. ಅವರ ಈ ಉದಾತ್ತ ಚಿಂತನೆಯೇ ಭಾರತದ ಸಂವಿಧಾನವನ್ನು ಸಂವೇದನಾಶೀಲಗೊಳಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ರಾಜಕೀಯ ಪ್ರಜಾಪ್ರಭುತ್ವ ಚುನಾವಣೆ, ಜನಪ್ರಾತಿನಿಧ್ಯ, ಸಾಂಸ್ಥಿಕ ಸಂರಚನೆಗಳು ಮತ್ತು ಶಾಸನ ಸಭೆ ಇಲ್ಲಿಗೆ ಕೊನೆಯಾಗುತ್ತದೆ. ಆದರೆ ಸಾಮಾಜಿಕ ಪ್ರಜಾಪ್ರಭುತ್ವ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ಆಯಾಮಗಳನ್ನೂ ಆವರಿಸುತ್ತದೆ. ವ್ಯಕ್ತಿಗತ ಚಾರಿತ್ರ್ಯ ಮತ್ತು ವೈಯುಕ್ತಿಕ ಮನೋಭಾವ ಈ ಎರಡೂ ಲಕ್ಷಣಗಳು, ಇದೇ ಸಮಾಜದಿಂದ ರಾಜಕೀಯ ಪ್ರಜಾಪ್ರಭುತ್ವವನ್ನು ಪ್ರವೇಶಿಸುವ ಪ್ರತಿ ವ್ಯಕ್ತಿಗೂ ನಿರ್ಣಾಯಕ ಅಂಶಗಳಾಗುತ್ತವೆ (Decisive factors) .

ಪುನಃ ಅಂಬೇಡ್ಕರ್ ಅವರನ್ನೇ ಉಲ್ಲೇಖಿಸುವುದಾದರೆ, ಅವರು ಮತ್ತೆಮತ್ತೆ ಪ್ರತಿಪಾದಿಸುತ್ತಿದ್ದ ಸಾಂವಿಧಾನಿಕ ನೈತಿಕತೆ (Constitutional Morality) ಈ ವ್ಯಕ್ತಿಗತ ಹಂತದಲ್ಲಿ (Individual Level) ನಿರ್ಧಾರವಾಗುತ್ತದೆ. ಶಾಸನ ಸಭೆಗಳಿಗೆ ಸ್ಥಳಾವಕಾಶ ನೀಡುವ ಕಟ್ಟಡಗಳು ನಿರ್ಜೀವ ಸ್ಥಾವರಗಳು. ಇದರೊಳಗೆ ಜೀವಂತಿಕೆಯನ್ನು ಸೃಷ್ಟಿಸುವುದು ಜಂಗಮರೂಪಿ ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳು. ಈ ಸ್ಥಾವರಗಳನ್ನು ಪ್ರವೇಶಿಸುವ ಮುನ್ನ ಹೊಸ್ತಿಲಿಗೆ ಭಕ್ತಿಯಿಂದ ನಮಿಸುವ ಜನಪ್ರತಿನಿಧಿಗಳಿಗೆ ಆವರಣದೊಳಗೆ ಇರುವ ಸಜೀವ ಪ್ರಜಾತಂತ್ರದ ತೊಟ್ಟಿಲನ್ನು ತೂಗುವುದಷ್ಟೇ ಅಲ್ಲದೆ ಕಾಪಾಡುವ ಜವಾಬ್ದಾರಿಯೂ ಇರುತ್ತದೆ. ಈ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂದು ಗಮನಿಸುವುದು ಸಾರ್ವಭೌಮ ಜನತೆಯ ಕರ್ತವ್ಯ.
ಇಲ್ಲಿ ನಿರ್ಧರಿಸಲಾಗುವ ಕಾಯ್ದೆ, ಕಾನೂನು, ನಿಬಂಧನೆಗಳು ಹೊರ ಸಮಾಜದ ಸಾಮಾನ್ಯ ಜನತೆಯ ಬದುಕನ್ನು ದುರವಸ್ಥೆಗೆ ನೂಕುವಂತಾದರೆ, ಹೊಸ್ತಿಲಲ್ಲಿ ಸಲ್ಲಿಸುವ ನಮನ ಬೂಟಾಟಿಕೆಯಾಗುತ್ತದೆ (Hypocricy) . ಈ ಕಾನೂನು ರೂಪಿಸುವ (Law makers) ಚುನಾಯಿತ ಜನಪ್ರತಿನಿಧಿಗಳು ವೈಯುಕ್ತಿಕ ನೆಲೆಯಲ್ಲಿ ರೂಢಿಸಿಕೊಳ್ಳುವ ಸಂಯಮ, ಸಭ್ಯತೆ, ಸೌಜನ್ಯ, ಸಂವೇದನೆ ಮತ್ತು ಸೂಕ್ಷ್ಮತೆಗಳು ಆಳ್ವಿಕೆಯ ಪ್ರತಿಯೊಂದು ಪದರವನ್ನೂ ಪ್ರಭಾವಿಸುತ್ತವೆ. ವ್ಯಕ್ತಿಗತವಾಗಿ ಪ್ರಾಮಾಣಿಕತೆ, ನಿಸ್ವಾರ್ಥ ಗುಣ ಮತ್ತು ಸಮಷ್ಟಿ ಪ್ರಜ್ಞೆಯನ್ನು ರೂಢಿಸಿಕೊಂಡಾಗ ಮಾತ್ರ ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾತಾಂತ್ರಿಕ ಕರ್ತವ್ಯವನ್ನು ಮನಗಂಡು ಕಾರ್ಯನಿರ್ವಹಿಸಲು ಸಾಧ್ಯ. ಜನಪರ ಎನ್ನಲಾಗುವ ಸೋಗಿನ ಮುಖವಾಡಗಳಿಂದಾಚೆ ನೋಡಿದಾಗ, ಕಳೆದ ಮೂರು ದಶಕಗಳ ರಾಜಕಾರಣದಲ್ಲಿ ಇಂತಹ ವ್ಯಕ್ತಿಗಳನ್ನು ಬೆರಳೆಣಿಕೆಯಷ್ಟು ಮಾತ್ರ ಕಾಣಬಹುದು.

ಅಧಿಕಾರ-ದರ್ಪ ಮತ್ತು ಅಹಮಿಕೆ
ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರವಾದ ನಂತರ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಸಾರ್ವಜನಿಕ ಸಭೆಯೊಂದರಲ್ಲಿ ಕಚ್ಚಿದ ಸೇಬನ್ನು ಅಭಿಮಾನಗಳತ್ತ ಎಸೆದಿರುವುದು ಸಾಕಷ್ಟು ಚರ್ಚೆಗೊಳಗಾಗಿದೆ. ಇಲ್ಲಿ ಡಿಕೆಶಿ ಅವರನ್ನು ವೈಯುಕ್ತಿಕ ನೆಲೆಯಲ್ಲಿ ನೋಡುವುದರ ಬದಲು, ನಾವು ಬೆಳೆಸುತ್ತಿರುವ ಅಥವಾ ಸಮ್ಮತಿಸುತ್ತಿರುವ ಒಂದು ಸಮಾಜದ ಕಡೆ ನೋಡಿದರೆ, ಈ ಪ್ರಸಂಗದಲ್ಲಿ ಕಾಣಬಹುದಾದ ಅಧಿಕಾರ ದರ್ಪ, ಅಸಭ್ಯತೆ ಮತ್ತು ಸೌಜನ್ಯರಹಿತ ವರ್ತನೆ ಇವೆಲ್ಲವನ್ನೂ ಸಮಕಾಲೀನ ರಾಜಕಾರಣದ ಅಂಗಳದಲ್ಲೇ ಗುರುತಿಸಲು ಸಾಧ್ಯ. ಪಕ್ಷಾತೀತವಾಗಿ ನೋಡುವುದಾದರೂ, ಕಳೆದ ಮೂರು ದಶಕಗಳಲ್ಲಿ ಜನಪ್ರತಿನಿಧಿಗಳಲ್ಲಿ ಭಾಷಾ ಸೌಜನ್ಯ, ಸಂಯಮ, ಸಭ್ಯತೆ ಮತ್ತು ಸಾರ್ವಜನಿಕ ಶಿಸ್ತು ಹಂತಹಂತವಾಗಿ ಕುಸಿಯುತ್ತಿರುವುದನ್ನು ಗಮನಿಸಬಹುದು.
ಒಂದು ಸಮಾಜವನ್ನು ನಾಗರಿಕತೆಯ ಚೌಕಟ್ಟಿನಲ್ಲಿ (Civilisational Framework) ನೋಡುವಾಗ ʼ ನಾಗರಿಕತೆ ʼ ಎನ್ನುವ ಉದಾತ್ತ ಕಲ್ಪನೆಯನ್ನು ನಿರ್ವಚಿಸುವುದು ಹೇಗೆ ? ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ/ಸಮಾಜ ʼ ನಾಗರಿಕ ʼ (Civilised) ಎನಿಸಿಕೊಳ್ಳುವುದು ಕೇವಲ ಭೌತಿಕ ಅಭಿವೃದ್ಧಿ ಮತ್ತು ಬೆಳವಣಿಗೆಯಿಂದ ಮಾತ್ರ ಅಲ್ಲ. ವಿಶೇಷವಾಗಿ ಯಾವುದೇ ವ್ಯಕ್ತಿಯಲ್ಲಿ ನಾಗರಿಕತೆಯ ಲಕ್ಷಣಗಳನ್ನು (Civilised features) ಗುರುತಿಸಬೇಕಿರುವುದು, ಬಳಸಲಾಗುವ ಭಾಷೆಯಲ್ಲಿ. ನಾಲಗೆ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂಬ ಪಾರಂಪರಿಕ ಮಾತುಗಳನ್ನೇ ಅನ್ವಯಿಸಿದಾಗ, 21ನೆಯ ಶತಮಾನದಲ್ಲಿ ಭಾರತ ಒಂದು ನಾಗರಿಕತೆಯ ಲಕ್ಷಣ ಇರುವ ರಾಜಕೀಯ ವಲಯವನ್ನು ಕಾಪಾಡಿಕೊಂಡೇ ಇಲ್ಲ ಎನ್ನಬಹುದು.

ಏಕೆಂದರೆ ಚುನಾಯಿತ ಜನಪ್ರತಿನಿಧಿಗಳು ಬಳಸುವ ಮಾತುಗಳು ನಾಗರಿಕ ಜಗತ್ತು ತಲೆತಗ್ಗಿಸುವಂತೆ ಮಾಡುತ್ತವೆ. ಇಂತಹ ಉದಾಹರಣೆಗಳು ಸಾವಿರಗಟ್ಟಲೆ ಇವೆ. ಪ್ರಶ್ನೆ ಅದಲ್ಲ. ಈ ಅಸಭ್ಯತೆಯನ್ನು ಸಾರ್ವಜನಿಕವಾಗಿ ನಿರ್ಭಿಡೆಯಿಂದ ಪ್ರದರ್ಶಿಸುವ ಜನಪ್ರತಿನಿಧಿಗಳನ್ನು ನಮ್ಮ ಸಮಾಜ ಹೇಗೆ ಒಪ್ಪಿಕೊಂಡು, ಪೋಷಿಸಿಕೊಂಡು ಬರುತ್ತಿದೆ ? ಮಹಿಳೆಯನ್ನು ತುಚ್ಛವಾಗಿ ಕಾಣುವ, ಮಹಿಳಾ ಸಂಕುಲದ ಘನತೆಗೆ ಧಕ್ಕೆ ತರುವಂತಹ ಮಾತುಗಳು ಶಾಸನಸಭೆಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇಂತಹ ಅಸಭ್ಯ ಮಾತುಗಳನ್ನು ಕಡತಗಳಿಂದ ತೆಗೆದುಹಾಕುವುದರ ಮೂಲಕ ಸತ್ಯದ ಸಮಾಧಿ ಮಾಡಲಾಗುತ್ತದೆ. ಆದರೆ ಈ ಮಾತುಗಳ ಆಕರವಾದ, ವ್ಯಕ್ತಿಯ ಮನೋಭಾವ ಮತ್ತು ಸೌಜನ್ಯ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.
ರಾಜಕೀಯ ನಡೆ ನುಡಿ ಸಂಸ್ಕೃತಿ
ಹೀಗೆ ಹೇಳಿದ ಕೂಡಲೇ ಹೆಗಲು ಮುಟ್ಟಿನೋಡಿಕೊಳ್ಳುವ ಹಲವು ರಾಜಕಾರಣಿಗಳು ನಮ್ಮ ನಡುವೆಯೇ ಇದ್ದಾರೆ. ದಲಿತರನ್ನು, ಅಲ್ಪಸಂಖ್ಯಾತರನ್ನು, ಹೋರಾಟಗಾರರನ್ನು, ಚಳುವಳಿಗಾರರನ್ನು ಹೀನ ಪದಗಳಿಂದ ನಿಂದಿಸುವ ಚಾಳಿ ದೇಶದ ರಾಜಕೀಯ ವಾಕ್ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ನ್ಯಾಯಕ್ಕಾಗಿ ಹೋರಾಡುವ ನೊಂದ ಶೋಷಿತರನ್ನು ʼಪರೋಪಜೀವಿ ʼ (parasite) ಎಂದು ಬಣ್ಣಿಸುವ ಈ ವ್ಯವಸ್ಥೆಯಲ್ಲಿ ಭಾಷಾ ಸೌಜನ್ಯ-ಸಭ್ಯತೆಯನ್ನು ಅಪೇಕ್ಷಿಸುವುದಾದರೂ ಯಾರಿಂದ ? ದೇಶದ ಲಕ್ಷಾಂತರ ಅನ್ನದಾತರು ದೆಹಲಿಯ ಪಕ್ಕದಲ್ಲೇ ಒಂದು ವರ್ಷದ ಕಾಲ ಮುಷ್ಕರ ಹೂಡಿದಾಗ, ರಾಜಕೀಯ ಸಂಕಥನಗಳಲ್ಲಿ (Political Discourses) ಕೇಳಿಬಂದ ಮಾತುಗಳು ಯಾವ ಸಂಸ್ಕೃತಿಯನ್ನು, ಯಾವ ನಾಗರಿಕತೆಯನ್ನು ಬಿಂಬಿಸುತ್ತವೆ ?
2019-20ರಲ್ಲಿ ದೇಶದ ಅಲ್ಪಸಂಖ್ಯಾತರು ತಮ್ಮ ಪೌರತ್ವದ ಹಕ್ಕುಗಳಿಗಾಗಿ ಹೋರಾಡಿದಾಗ “ದೇಶ್ ಕಿ ಗದ್ದಾರೋಂಕೋ –ಗೋಲಿ ಮಾರೋ ಸಾಲೋಂಕೋ ” (ದೇಶ ದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ ) ಎಂಬ ಘೋಷಣೆ ರಾಜಧಾನಿಯಲ್ಲೇ ಪ್ರತಿಧ್ವನಿಸಿತ್ತು. ಈ ಧ್ವನಿಯ ಜನಕ ಇಂದು ಕೇಂದ್ರ ಸಚಿವರಾಗಿದ್ದಾರೆ. ನ್ಯಾಯಾಲಯವೂ ಇದು ಶಿಕ್ಷಾರ್ಹ ಅಪರಾಧ (Cognisable offence) ಅಲ್ಲ ಎಂದು ತೀರ್ಪು ನೀಡಿದೆ. ನ್ಯಾಯಾಂಗದ ದೃಷ್ಟಿಯನ್ನು ಗೌರವಿಸುತ್ತಲೇ, ಸಾಮಾನ್ಯ ವ್ಯಕ್ತಿಯಾಗಿ ನೋಡಿದಾಗ ಈ ಅಸಭ್ಯತೆ, ಅಧಿಕಾರ ದರ್ಪ, ಶಿಕ್ಷಾ ಭೀತಿ ಇಲ್ಲದ ದುರ್ವರ್ತನೆ ಮತ್ತು ಕನಿಷ್ಠ ಸೌಜನ್ಯವೂ ಇಲ್ಲದ ಮಾತುಗಳನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ?
ಡಿ.ಕೆ. ಶಿವಕುಮಾರ್ ಅಭಿಮಾನಿಗಳತ್ತ ಕಚ್ಚಿದ ಸೇಬು ಎಸೆದಿದ್ದು ಅಧಿಕಾರದ ಅಹಮಿಕೆಯ ಪರಾಕಾಷ್ಠೆ ಆದರೆ ಇದನ್ನು ಅಮಾನುಷ ಮಹಾಪರಾಧ ಎಂದು ಖಂಡಿಸುವ ಮನಸ್ಸುಗಳಿಗೆ, ಮೇಲಿನ ಪ್ರಸಂಗ ಏಕೆ ಸ್ವೀಕೃತವಾಗಿಬಿಡುತ್ತದೆ ? ಅಥವಾ ಮೌನ ಸಮ್ಮತಿಗೆ ಒಳಗಾಗುತ್ತದೆ. ರೈತ ಮುಷ್ಕರದ ಸಂದರ್ಭದಲ್ಲೇ ಲಖೀಂಪುರ ಖೇರಿಯಲ್ಲಿ ಕೇಂದ್ರ ಸಚಿವರೊಬ್ಬರ ಪುತ್ರ ಓಡಿಸುತ್ತಿದ್ದ ವಾಹನಕ್ಕೆ ಸಿಲುಕಿ ಎಂಟು ಮಂದಿ ಮೃತಪಟ್ಟರು. ಈ ಪ್ರಕರಣ ನ್ಯಾಯಾಲಯದಲ್ಲಿದೆ, ಆರೋಪಿ ಷರತ್ತುಬದ್ಧ ಜಾಮೀನು ಪಡೆದು ಮುಕ್ತವಾಗಿದ್ದಾನೆ. ತಮ್ಮ ಪುತ್ರ ವಾಹನದಲ್ಲಿ ಇರಲೇ ಇಲ್ಲ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡಿದ್ದೇ ಅಲ್ಲದೆ, ರೈತರು ಕಲ್ಲೆಸೆದಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ಅಡ್ಡಾದಿಟ್ಟಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂಬ ಸಮಜಾಯಿಷಿಯನ್ನೂ ನೀಡಿದ್ದರು.
ಈ ಪ್ರಕರಣದ ಸತ್ಯಾಸತ್ಯತೆಯನ್ನು ನ್ಯಾಯಾಂಗ ನಿರ್ಧರಿಸಲಿ. ಆದರೆ ಸಮಾಜದ ಸದಸ್ಯರಾಗಿ ನಾವು ಇದನ್ನು ಹೇಗೆ ನೋಡಬೇಕು ? ಕಣ್ಣೆದುರು ನಡೆಯುವ ದೌರ್ಜನ್ಯ, ದಬ್ಬಾಳಿಕೆ ಮತ್ತು ಹಿಂಸೆಯನ್ನು ವ್ಯಾಖ್ಯಾನಿಸಲು ನ್ಯಾಯಾಲಯಗಳ ತೀರ್ಪುಗಳಿಗೆ ಕಾಯಬೇಕಿಲ್ಲ ಅಲ್ಲವೇ ? ನಮ್ಮ ಸ್ವ-ಪ್ರಜ್ಞೆ ಜೀವಂತವಾಗಿದ್ದರೆ ಇಂತಹ ದೌರ್ಜನ್ಯಗಳನ್ನು ತಕ್ಷಣವೇ ಖಂಡಿಸಬೇಕಲ್ಲವೇ ? ದುರದೃಷ್ಟವಶಾತ್ ಕಳೆದ 15 ವರ್ಷಗಳಲ್ಲಿ ಭಾರತದ ಸುಶಿಕ್ಷಿತ-ಹಿತವಲಯ ವರ್ಗಗಳ (Educated Comfort Zone) ಈ ಸ್ವ-ಪ್ರಜ್ಞೆ ಅಧಿಕಾರ ರಾಜಕಾರಣದ ಪೀಠಗಳಲ್ಲಿ ಹುದುಗಿಹೋಗಿದೆ. ಈ ಕಣ್ಣುಗಳಿಗೆ ಸಿದ್ದಾಂತದ ಪೊರೆ ಆವರಿಸಿದೆ. ಹಾಗಾಗಿಯೇ ಈ ಎಂಟು ಸಾವುಗಳ ಹೊರತಾಗಿ, ರೈತ ಮುಷ್ಕರದಲ್ಲಿ ಹುತಾತ್ಮರಾದ 700ಕ್ಕೂ ಹೆಚ್ಚು ಅನ್ನದಾತರ ಪರವಾಗಿಯೂ ನಮ್ಮ ಸಮಾಜ ಕಂಬನಿ ಮಿಡಿಯಲಿಲ್ಲ.
ಉದಾತ್ತ ಗುಣಲಕ್ಷಣಗಳು ಎಲ್ಲಿವೆ ?
ಸೌಜನ್ಯ, ಸಹಾನುಭೂತಿ, ಸಂವೇದನೆ ಇವೆಲ್ಲವೂ ಕೇವಲ ವ್ಯಕ್ತಿಗತ ಗುಣಗಳಲ್ಲ. ಸಾಂಸ್ಥಿಕವಾಗಿಯೂ ಈ ಗುಣಗಳನ್ನು ರೂಢಿಸಿಕೊಂಡಾಗಲೇ ಪ್ರಜಾಪ್ರಭುತ್ವ ಊರ್ಜಿತವಾಗುತ್ತದೆ. 21ನೆ ಶತಮಾನದ ಭಾರತ ಈ ಗುಣಗಳನ್ನೂ ಕ್ರಮೇಣ ಕಳೆದುಕೊಳ್ಳುತ್ತಿದೆ. ವಿಧಾನಸೌಧ ಅಥವಾ ಸಂಸತ್ ಭವನಗಳು ನಿರ್ಜೀವ ಸ್ಥಾವರಗಳು , ಎದುರಿನಲ್ಲೇ ನಡೆಯುವ ದಬ್ಬಾಳಿಕೆ, ದೌರ್ಜನ್ಯಗಳು ಈ ಸ್ಥಾವರಗಳನ್ನು ಕದಲಿಸುವುದೂ ಇಲ್ಲ. ಆದರೆ ಈ ಸ್ಥಾವರಗಳ ಒಳಗೆ ಪ್ರಜಾಪ್ರಭುತ್ವ ಎಂಬ ಜೀವಂತ ವ್ಯವಸ್ಥೆ ಇದೆಯಲ್ಲವೇ ? ಇದನ್ನು ನಿರ್ವಹಿಸುವ ಅಥವಾ ಮುನ್ನಡೆಸುವ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರ ಇರುವುದಲ್ಲವೇ ? ಸೌಜನ್ಯ, ಸಭ್ಯತೆ ಇತ್ಯಾದಿಗಳನ್ನು ನಾವು ಈ ಜಂಗಮರೂಪದ ಘಟಕಗಳಲ್ಲಿ ಗುರುತಿಸಬೇಕಾಗುತ್ತದೆ. ಜಗತ್ತೇ ಕಾಣುವಂತಹ ದಬ್ಬಾಳಿಕೆ, ಹಿಂಸೆ, ದೌರ್ಜನ್ಯಗಳು ನಡೆದಾಗ ಈ ಜಂಗಮದ ಧ್ವನಿ ಮೌನವಾದರೆ ಅಲ್ಲಿ ಪ್ರಜಾಪ್ರಭುತ್ವ ಹೇಗೆ ಕಾಣಲು ಸಾಧ್ಯ ?
ಪ್ರಜಾಪ್ರಭುತ್ವದಲ್ಲಿ ಜನಪ್ರಾತಿನಿಧ್ಯವನ್ನು (Peopleʼs Representation) ಈ ಚೌಕಟ್ಟಿನಲ್ಲಿ ಪರಾಮರ್ಶಿಸಬೇಕಾಗುತ್ತದೆ. ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳ, ದೌರ್ಜನ್ಯಗಳ ವಿರುದ್ಧ ಸಂಸತ್ ಭವನದ ಎದುರಿನಲ್ಲೇ ಪ್ರತಿಭಟಿಸಿದಾಗ, ಅವರ ನೋವಿನ ದನಿಯನ್ನು ಆಲಿಸುವವರೇ ಇರಲಿಲ್ಲ. ಬದಲಾಗಿ ಪೊಲೀಸರ ಲಾಠಿಗಳು ಪ್ರತಿಕ್ರಿಯಿಸಿದವು. ಮಣಿಪುರದ ಬೆತ್ತಲೆ ಮೆರವಣಿಗೆ, ರೈತ ಮುಷ್ಕರದ ಸಾವುಗಳು, ಮಹಿಳಾ ಕುಸ್ತಿಪಟುಗಳ ಯಾತನೆ ಮತ್ತು ಇತ್ತೀಚಿನ NEET ಪರೀಕ್ಷಾ ಹಗರಣದಲ್ಲಿ ಸಂಭವಿಸಿದ ಸಾವುಗಳು, ಇವೆಲ್ಲವೂ ನಮ್ಮ ನಾಗರಿಕತೆಯ ಕಪ್ಪು ಚುಕ್ಕೆಗಳು. ದುರಂತ ಎಂದರೆ ಈ ಘಟನೆಗಳಿಗೆ ಮರುಗುವುದಿರಲಿ, ಪ್ರತಿಕ್ರಿಯಿಸಲೂ ಇಚ್ಛಿಸದ ಒಂದು ವ್ಯವಸ್ಥೆಯನ್ನು ಕಾಣುತ್ತಿದ್ದೇವೆ.

NEET ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೇನಾ ಹೆಲಿಕಾಪ್ಟರ್ ಮೂಲಕ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವುದು, ಪರೀಕ್ಷಾ ಕೇಂದ್ರಗಳ ಸುತ್ತ ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ವ್ಯಕ್ತಿಗಳನ್ನು ಪರೀಕ್ಷೆ ಮುಗಿಯುವವರೆಗೂ, ಮೊಬೈಲ್ ಅಂತರ್ಜಾಲ ಸಂಪರ್ಕವನ್ನೂ ನೀಡದೆ, ದಿಗ್ಬಂಧನದಲ್ಲಿರಿಸುವುದು ಏನನ್ನು ಸೂಚಿಸುತ್ತದೆ ? ನಮ್ಮ ಇಡೀ ಸಮಾಜವೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆಯೇ ? ಅಥವಾ ಭಾರತದ ಪ್ರಜಾಪ್ರಭುತ್ವ ಸಮಾಜದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆಯೇ ? ದೇಶದ ಕೋಟ್ಯಂತರ ಯುವಜನರು NEET ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದರೂ ಮೌನವಾಗಿರುವ ಆಡಳಿತ ವ್ಯವಸ್ಥೆಯನ್ನು ಹೇಗೆ ಬಣ್ಣಿಸುವುದು ?
ಉತ್ತರದಾಯಿತ್ವದ ಕನಸು ಕಾಣುತ್ತಾ,,,,
ಇಲ್ಲಿ ನಮಗೆ ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವದ ಪ್ರಶ್ನೆ ಎದುರಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಮಾನಿಗಳತ್ತ ಕಚ್ಚಿದ ಸೇಬು ಎಸೆದ ಪ್ರಕರಣದಲ್ಲಿ ಸಹ ಇದೇ ಪ್ರಶ್ನೆಯೇ ಕಾಡುತ್ತದೆ. ತಮಗೆ ಹಾಕಿದ ಗಜಗಾತ್ರದ ಹೂ ಹಾರಗಳನ್ನು ಅಭಿಮಾನಿಗಳತ್ತ ಎಸೆಯುವ ಸಿನಿಮಾ ನಟರ, ಸೆಲೆಬ್ರಿಟಿಗಳ ವರ್ತನೆಯನ್ನು ಈ ಘಟನೆಗೆ ಸಮೀಕರಿಸಿ ನೋಡಿದಾಗ, ಎರಡೂ ಕಡೆಗಳಲ್ಲಿ ನಮಗೆ ಕಾಣುವುದು ಅಧಿಕಾರ (ರಾಜಕೀಯ ಮತ್ತು ಸಾಂಸ್ಕೃತಿಕ) ದರ್ಪ ಮತ್ತು ಉತ್ತರದಾಯಿತ್ವದ ಕಲ್ಪನೆಯೇ ಇಲ್ಲದ ಊಳಿಗಮಾನ್ಯ ಧೋರಣೆ. “ ನಾವು ಯಾರಿಗೂ ಉತ್ತರಿಸಬೇಕಿಲ್ಲ ,,,,,” ಎಂಬ ಧೋರಣೆಯೇ ಅಧಿಕಾರದಲ್ಲಿರುವವರನ್ನು ಮೌನಿಯೂ ಆಗಿಸುತ್ತದೆ, ಧ್ಯಾನಿಯೂ ಆಗಿಸುತ್ತದೆ, ನಿರ್ದಯಿಯೂ ಆಗಿಸುತ್ತದೆ.
ಇಂದು ಭಾರತದ ಪ್ರಜಾಪ್ರಭುತ್ವವನ್ನು ಕಾಡುತ್ತಿರುವುದು ಈ ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ ಇಲ್ಲದ ಮನಸ್ಥಿತಿ. ಐವರು NEET ಆಭ್ಯರ್ಥಿಗಳ ಸಾವಿಗೆ ಕಾರಣವಾದ ಬ್ರಹ್ಮಾಂಡ ಹಗರಣಕ್ಕೆ ಕೇಂದ್ರ ಶಿಕ್ಷಣ ಸಚಿವರ ಪ್ರತಿಕ್ರಿಯೆ ತಕ್ಷಣವೇ ರಾಜೀನಾಮೆ ಆಗಬೇಕಿತ್ತು. ಆದರೆ ಇದು ಕ್ಷಮಾಯಾಚನೆಯಲ್ಲೇ ಮುಗಿದಿದೆ. ಕೋಟ್ಯಂತರ ಸಂಖ್ಯೆಯ ಯುವಜನರು ರಾಜೀನಾಮೆ ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರದ ಮೌನವೇ ಉತ್ತರವಾಗಿದೆ. ಭಾರತ ಹೀಗಿರಲಿಲ್ಲ ಎನ್ನುವ ಪರಿತಾಪ ಅಪ್ರಯೋಜಕ ಪ್ರಲಾಪವಷ್ಟೆ. ಏಕೆ ಹೀಗಾಗಿದೆ ಎಂಬ ಜಿಜ್ಞಾಸೆ ಸಮಾಜವನ್ನು ನಿದ್ರಾವಸ್ಥೆಯಿಂದ ಎಚ್ಚರಿಸುವ ಪ್ರಶ್ನೆಯಾಗುತ್ತದೆ. 1984ರ ಭೂಪಾಲ್‌ನಿಂದ ಇತ್ತೀಚಿನ NEET ವರೆಗೂ ಕಾಣಲಸಾಧ್ಯವಾದ ಒಂದು ಮೌಲ್ಯ ಎಂದರೆ ಅಧಿಕಾರ ರಾಜಕಾರಣದ ಉತ್ತರದಾಯಿತ್ವದ ಪ್ರಜ್ಞೆ.
ಇದು ಇಡೀ ಭಾರತೀಯ ಸಮಾಜವನ್ನು ಕಾಡುತ್ತಿರುವ ಬೇನೆ ಅಥವಾ ವ್ಯಾಧಿ. ಈ ರಾಜಕೀಯ ವ್ಯಾಧಿಗೆ (Political Malaise) ಚಿಕಿತ್ಸೆ ಇಲ್ಲವೇ ? ನಮ್ಮ ಸಂವಿಧಾನದಲ್ಲೇ ಚಿಕಿತ್ಸಕ ನಿಬಂಧನೆಗಳಿವೆ. ಇದನ್ನು ಪುನಃ ಹೆಕ್ಕಿ ತೆಗೆಯಬೇಕಿದೆ. ಜೂನ್ 1 ರಿಂದ ದೇಶದ ಕೋಟ್ಯಂತರ ಕಾರ್ಮಿಕರು ತಮ್ಮ ಶ್ರಮದ ಹಕ್ಕುಗಳನ್ನು (Labour Rights) ಕಳೆದುಕೊಂಡಿದ್ದಾರೆ. ಜುಲೈ 1 ರಿಂದ ಗ್ರಾಮೀಣ ಜನರು ಉದ್ಯೋಗದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. (ವಿಬಿ ಜಿ ರಾಮ್ ಜಿ ಕಾಯ್ದೆ ಅನುಷ್ಠಾನವಾಗುತ್ತದೆ). ಬಹುಶಃ ಈ ವರ್ಷಾಂತ್ಯಕ್ಕೆ ಕೋಟ್ಯಂತರ ಜನರು ಮತದಾನದ ಹಕ್ಕನ್ನೂ ಕಳೆದುಕೊಳ್ಳಬಹುದು (ಎಸ್‌ಐಆರ್ ಪರಿಣಾಮ)̤

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯೊಬ್ಬರು ಕಚ್ಚಿ ಎಸೆದ ಸೇಬು, ವ್ಯವಸ್ಥೆಯಲ್ಲಿ ಅಂತರ್‌ಪ್ರವಾಹವಾಗಿ (Under current) ಹರಿಯುತ್ತಿರುವ ಅಸಾಂವಿಧಾನಿಕ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಇದನ್ನು ಕೇವಲ ರಾಜಕೀಯ ಬೇನೆ ಎಂದು ಭಾವಿಸದೆ, ಸಾಮಾಜಿಕ ವ್ಯಾಧಿ (Social Malaise) ಎಂದು ಪರಿಗಣಿಸಿದಾಗ, ನಮ್ಮೊಳಗಿನ ಜಾಗೃತ ಮನಸ್ಸು ಮತ್ತಷ್ಟು ಚುರುಕಾಗಬಹುದು. ಪ್ರತಿಮೆಗಳ ಸಂಕೋಲೆಗಳಲ್ಲಿರುವ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಮೊದಲಾದ ದಾರ್ಶನಿಕರನ್ನು ವಿಮೋಚನೆಗೊಳಿಸಿ, ಅವರ ಪ್ರಜಾಸತ್ತಾತ್ಮಕ ಆಲೋಚನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದಾಗ, ಬಹುಶಃ ದಿಗಂತದಲ್ಲಿ ಚಿಕಿತ್ಸಕ ಬೆಳಕೊಂದು ಕಾಣಬಹುದು. ಆ ದಿಕ್ಕಿಗೆ ನಡೆಯೋಣವೇ ?
-೦-೦-೦-೦-೦-






