ಬೆಂಗಳೂರು: ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ತಮ್ಮ ವಿರುದ್ಧ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ನೀಡಿರುವ ದೂರಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ದ್ವೇಷ ಭಾಷಣದ ಪಿತಾಮಹರು ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಅವರನ್ನು ನಾನು ಬುದ್ಧಿವಂತರು ಮತ್ತು ಪ್ರಜ್ಞಾವಂತರು, ಸ್ವಲ್ಪ ಬುದ್ದಿ ಇರುವವರು ಎಂದು ಭಾವಿಸಿದ್ದೆ. ಆದರೆ ಅವರು ನೀಡಿರುವ ದೂರನ್ನು ನೋಡಿದ ಬಳಿಕ ಅವರಿಗೆ ಬುದ್ಧಿ, ಜ್ಞಾನ ಯಾವುದೂ ಇಲ್ಲ ಅಂತಾ ಅಂದುಕೊಂಡಿದ್ದೇನೆ.

ಅವರು ದೂರು ನೀಡುವ ಮುನ್ನ ವಿಡಿಯೋ ನೋಡಬೇಕಲ್ವಾ..? ನಾನು ವಿಡಿಯೋದಲ್ಲಿ ಹಾಗೆ ಹೇಳಿದ್ದೇನಾ..? ನನ್ನ ಭಾಷಣದ ಸಂಪೂರ್ಣ ವಿಡಿಯೋವನ್ನು ನೋಡದೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುವುದು ಸರಿಯಲ್ಲ ಎಂದು ಹೇಳಿದರು.

ನಾನು ಅಂಧಭಕ್ತರು ಮತ್ತು ದೇಶದ್ರೋಹಿಗಳು ಈ ದೇಶಕ್ಕೆ ಮಾರಕ ಎಂದು ಹೇಳಿದ್ದೇನೆಯೇ ಹೊರತು, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಮನಸ್ಸಿನಲ್ಲಿರುವುದನ್ನೇ ಹೊರಹಾಕುತ್ತಿದ್ದಾರೆ.

ತಮ್ಮ ಭಾಷಣದಲ್ಲಿ ಯಾವುದೇ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕರೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ದ್ವೇಷ ಭಾಷಣದ ಮೊದಲ ಪಿತಾಮಹ ಛಲವಾದಿ ನಾರಾಯಣಸ್ವಾಮಿ, ಎರಡನೇ ಪಿತಾಮಹ ಬಸನಗೌಡ ಪಾಟೀಲ್ ಯತ್ನಾಳ್. ನೀವೇ ಈಗಾಗಲೇ ಹೇಳೋದೆಲ್ಲಾ ಹೇಳಿದ್ದೀರಿ. ನೀವು ನನ್ನ ದ್ವೇಷ ಭಾಷಣದ ಬಗ್ಗೆ ಮಾತನಾಡುತ್ತೀರಿ ಎಂದು ಟೀಕಿಸಿದರು.

ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಆ ಯತ್ನಾಳ್ ನೋಡಿದರೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಯಾವುದೋ ಒಂದು ಕೋತಿಯ ಬ್ರೀಡ್ ಅದು ಎಂದು ಮನಬಂದಂತೆ ಮಾತನಾಡಿದ್ದಾರೆ.






