ಬೆಂಗಳೂರು : ತೀವ್ರ ವಿವಾದದ ನಡುವೆ ಬಿಡದಿ ಟೌನ್ ಶಿಪ್ ಯೋಜನೆಯ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಾಗಲೇ ಈ ಟೌನ್ಶಿಪ್ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಹೀಗಾಗಿ ಸರ್ಕಾರದ ಹಂತದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.

ಪ್ರಮುಖವಾಗಿ ಈ ಟೌನ್ ಶಿಪ್ ಯೋಜನೆಯ ಮೊದಲ ಹಂತದಲ್ಲೇ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೆಜ್ಜೆ ಇಟ್ಟಿದೆ. ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮೊದಲ ಹಂತದ ಭೂ ಸ್ವಾಧೀನ ನಡೆಯಲಿದೆ.
ಈ ಯೋಜನೆಯ ವ್ಯಾಪ್ತಿಗೆ ಒಳಪಡುವ 9 ಕಂದಾಯ ಗ್ರಾಮಗಳ ಪೈಕಿ ಆರಂಭದಲ್ಲಿ 3 ಗ್ರಾಮಗಳಿಗೆ ಅನ್ವಯಿಸುವಂತೆ 518 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಸ್ಥಳೀಯ ರೈತರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಇದನ್ನೂ ಓದಿ : ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚೆ: ಸಿಎಂ ಡಿ.ಕೆ. ಶಿವಕುಮಾರ್
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮದ ಸುಮಾರು 754 ರೈತರ ಜಮೀನುಗಳ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ. ಕಳೆದ ವರ್ಷ ಬಿಡದಿ ಹೋಬಳಿ ವ್ಯಾಪ್ತಿಯ ಬೈರಮಂಗಲ, ಬನ್ನಿಗಿರಿ, ಹೊಸೂರು, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಸುಸಂದ್ರ ಒಟ್ಟು 9 ಗ್ರಾಮಗಳ ಸುಮಾರು 7881 ಎಕರೆಗೆ ಸ್ವಾಧೀನಕ್ಕೆ ಪ್ರತ್ಯೇಕವಾಗಿ 9 ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು.
ಆದರೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲು ಮೇ 7ರಂದು ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಮುಖವಾಗಿ ಸರ್ಕಾರದ ಅಂತಿಮ ಅಧಿಸೂಚನೆಯಲ್ಲಿ ಆಕಾರ್ ಬಂದ್ ಮತ್ತು ಪಹಣಿಯಲ್ಲಿ ವ್ಯತ್ಯಾಸವಿದ್ದರೆ ಆಕಾರ್ ಬಂದ್ ವಿಸ್ತೀರ್ಣವೇ ಅಂತಿಮ ಎಂದು ಪರಿಗಣಿಸಸಲು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.






