ಉದ್ಯೋಗವಿಲ್ಲದ ಯುವಕರನ್ನು “ಜಿರಳೆಗಳು” ಮತ್ತು “ಪರಾವಲಂಬಿಗಳು” ಎಂದು ಉಲ್ಲೇಖಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅದೇ ಹೇಳಿಕೆ ಹೊಸ ರಾಜಕೀಯ ಚಳವಳಿಯೊಂದರ ಹುಟ್ಟಿಗೆ ಕಾರಣವಾಗಿದ್ದು, “ಕಾಕ್ರೋಚ್ ಜನತಾ ಪಕ್ಷ” (CJP) ಎಂಬ ಹೊಸ ಸಂಘಟನೆ ರಾಷ್ಟ್ರ ರಾಜಕೀಯದಲ್ಲಿ ಗಮನ ಸೆಳೆಯುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮತ್ತು ಪ್ರತಿಭಟನೆಯ ರೂಪದಲ್ಲಿ ಆರಂಭವಾದ ಈ ಚಳವಳಿ ಇದೀಗ ಸಂಘಟಿತ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಇದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಭಾರತಕ್ಕೆ ಆಗಮಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಯುವಕರ ಅಸಮಾಧಾನವನ್ನು ರಾಷ್ಟ್ರ ಮಟ್ಟಕ್ಕೆ ತಲುಪಿಸುವ ಪ್ರಯತ್ನ ಆರಂಭಿಸಿದ್ದಾರೆ.
ನೀಟ್, ಸಿಯುಇಟಿ, ಸಿಬಿಎಸ್ಇ ಸೇರಿದಂತೆ ಪ್ರಮುಖ ರಾಷ್ಟ್ರೀಯ ಪರೀಕ್ಷೆಗಳಲ್ಲಿ ನಡೆದಿರುವ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಿರುವ ಸಿಜೆಪಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದೆ.
ಸಿಜೆಪಿಯ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಅಧಿಕೃತ ಇನ್ಸ್ಟಾಗ್ರಾಂ ಖಾತೆ ಕೆಲವೇ ದಿನಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷಗಳ ಸಾಮಾಜಿಕ ಜಾಲತಾಣ ಪ್ರಭಾವಕ್ಕೆ ಸವಾಲು ಹಾಕುವ ಮಟ್ಟಿಗೆ ಸಿಜೆಪಿ ಬೆಳೆದಿದೆ ಎಂಬುದು ಗಮನಾರ್ಹ ಸಂಗತಿ.ಪಕ್ಷದ ವಕ್ತಾರರಾಗಿ ತನಿಖಾ ಪತ್ರಕರ್ತ ಸೌರವ್ ದಾಸ್, ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ವಿಜೇತ್ ದಹಿಯಾ ಮತ್ತು ಸಾರ್ವಜನಿಕ ನೀತಿ ತಜ್ಞ ಅಶುತೋಷ್ ರಂಕಾ ಅವರನ್ನು ಘೋಷಿಸಲಾಗಿದೆ. ಇವರು ಸಾಮಾಜಿಕ, ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದ ವಿಚಾರಗಳಲ್ಲಿ ಸಕ್ರಿಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳಾಗಿದ್ದಾರೆ.
ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್, ನಟ ಪ್ರಕಾಶ್ ರಾಜ್ ಹಾಗೂ ನಟ ಅತುಲ್ ಕುಲಕರ್ಣಿ ಸೇರಿದಂತೆ ಹಲವರು ಸಿಜೆಪಿಯ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇದರೊಂದಿಗೆ ಯುವಜನರ ಅಸಮಾಧಾನವು ರಾಜಕೀಯ ಚಳವಳಿಯಾಗಿ ರೂಪುಗೊಳ್ಳುತ್ತಿರುವ ಚಿತ್ರಣ ಗೋಚರಿಸುತ್ತಿದೆ.ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಅಮೆರಿಕದಲ್ಲಿ ನೆಲೆಸಿದ್ದು, ಈ ಹಿಂದೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಕೆಲಸ ಮಾಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಡಳಿತ ಮತ್ತು ಸಾರ್ವಜನಿಕ ನೀತಿಗಳ ಬಗ್ಗೆ ನಿರಂತರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಅವರು, ಯುವಕರ ಧ್ವನಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಚಳವಳಿಯನ್ನು ಆರಂಭಿಸಿರುವುದಾಗಿ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಯಿಂದ ಹುಟ್ಟಿದ “ಕಾಕ್ರೋಚ್ ಜನತಾ ಪಕ್ಷ” ಇದೀಗ ಯುವಕರ ಅಸಮಾಧಾನ, ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳು ಹಾಗೂ ಆಡಳಿತದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ರೂಪುಗೊಳ್ಳುತ್ತಿದೆ. ಈ ಚಳವಳಿ ಮುಂದಿನ ದಿನಗಳಲ್ಲಿ ಭಾರತೀಯ ರಾಜಕೀಯದಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ.






