ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ಜೊತೆಗೆ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ತುಮಕೂರಿನ ಸಾಧನಾ ಸಮಾವೇಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ನಾಯಕರು ದೆಹಲಿಗೆ ತೆರಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.

ಆದರೆ ಇದೀಗ ಅಧಿಕೃತವಾಗಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಾಂಗ್ರೆಸ್ ಪಕ್ಷದ ವರಿಷೃರನ್ನು ಭೇಟಿಯಾಗಲು ಮುಹೂರ್ತ ನಿಗದಿಯಾಗಿದೆ. ಹೀಗಾಗಿ ಇಂದು ಸಂಜೆ 7 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣದದಿಂದ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಪಕ್ಷದ ಇತರ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ಅಲ್ಲದೆ ಲೋಕಸಭೆಯ ವಿಪಕ್ಷ ನಾಯಕ ಹಾಗೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ : ‘ಸಿಜೆಪಿ’ ಪೇಜ್ ಹ್ಯಾಕ್? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು?
ಪ್ರಮುಖವಾಗಿ ಈಗಾಗಲೇ ದೆಹಲಿಗೆ ಬರುವಂತೆ ಸಿದ್ದರಾಮಯ್ಯಗೆ ಬುಲಾವ್ ಬಂದಿದ್ದು, ಹೀಗಾಗಿ ಮುಖ್ಯಮಂತ್ರಿಯವರ ದೆಹಲಿ ದಂಡಯಾತ್ರೆ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನೂ ನಾನು ದೆಹಲಿಗೆ ಹೋದಾಗ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುತ್ತೇನೆ ಎಂದು ಸಿದ್ದರಾಮಯ್ಯ ಶಾಸಕರಿಗೆ ಭರವಸೆ ನೀಡಿದ್ದಾರೆ.
ಹೀಗಾಗಿ 2023ರ ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಾಯಕತ್ವ ವಿಚಾರದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು, ಹೀಗಾಗಿ ಅದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ವೇದಿಕೆ ಸಿದ್ಧವಾದಂತೆ ಕಂಡುಬರುತ್ತಿದೆ.
ಇತ್ತ ಸಿದ್ದರಾಮಯ್ಯ ಭೇಟಿಯಿಂದ ನಮಗೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಶಾಸಕರ ಪಾಲಿಗೂ ಈ ಭೇಟಿಯು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ವಾಪಸ್ ಬರುವಾಗ ಸಿದ್ದರಾಮಯ್ಯ ಶಾಸಕರಿಗೆ ಹಾಗೂ ರಾಜ್ಯದ ಜನರಿಗೆ ಯಾವ ಸಂದೇಶ ಹೊತ್ತು ಬರಲಿದ್ದಾರೆ ಎಂಬುವುದು ಸದ್ಯದ ಕುತೂಹಲವಾಗಿದೆ.






