ಮಂಡ್ಯ : ದೇಶಾದ್ಯಂತ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ಕಂಗಾಲಾಗಿದ್ದಾರೆ. ಖುದ್ದು ಎನ್‌ಟಿಎ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ನೀಡಿ, ಶೀಘ್ರದಲ್ಲೇ ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.

ಆದರೆ ಇದೇ ವಿಚಾರಕ್ಕೆ ವಿಪಕ್ಷಗಳು ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಮೋದಿ ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸುತ್ತಿವೆ. ಈ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಭದ್ರತೆಯಿಂದ ನೀಟ್ (NEET) ಪರಿಕ್ಷೆ ನಡೆದರು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ಈ ಪರೀಕ್ಷೆ ನಡೆದಿದೆ. ಸಹಜವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಹಗುರವಾದ ಉತ್ತರ ನೀಡುವ ಮೂಲಕ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ..!
ಅವರಿವರನ್ನು ಟೀಕೆ ಮಾಡೋಕೆ ಹೋಗುವುದಿಲ್ಲ. ಬದಲಿಗೆ ಮೊದಲೇ ನಿಯಂತ್ರಣ ಮಾಡಬೇಕಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಸಮಗ್ರ ತನಿಖೆಯಾಗಬೇಕು. ಎಲ್ಲಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ? ಎಂಬ ಎಲ್ಲ ಮಾಹಿತಿ ಕಲೆ ಹಾಕಿ, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಈ ರೀತಿ ಆಗಬಾರದಿತ್ತು. ಅವರ ಆತ್ಮಸ್ಥೈರ್ಯ ಕಳೆದುಹೊಗುತ್ತದೆ. ಈ ವೈಫಲ್ಯದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಆಗಬಾರದಿತ್ತು ಆಗಿದೆ. ಇಷ್ಟು ಭದ್ರತೆಯಿಂದ ಪರಿಕ್ಷೆ ನಡೆದರು ಈ ರೀತಿ ಆಗಿದೆ ಅಂದರೆ ಎಷ್ಟು ಬುದ್ದಿವಂತರು ಎನ್ನುವುದು ಅರ್ಥವಾಗುತ್ತದೆ ಎಂದು ಚಲುವರಾಯಸ್ವಾಮಿ ಕೇಂದ್ರದ ಮೇಲೆ ಮೃದು ಧೋರಣೆ ತೋರಿದ್ದಾರೆ.






