ಐಪಿಎಲ್ ಟೂರ್ನಿಯ ನಡುವೆ ಇದೀಗ ಹೊಸ ವಿವಾದವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಆಟಗಾರರ ಸುರಕ್ಷತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಎಚ್ಚರಿಕೆ ನೀಡಿದ್ದು, “ಹನಿಟ್ರ್ಯಾಪ್” ಕುರಿತು ವಿಶೇಷ ಸಲಹಾ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, ಐಪಿಎಲ್ ತಂಡಗಳೊಂದಿಗೆ ಅನಧಿಕೃತ ವ್ಯಕ್ತಿಗಳು ಓಡಾಡುತ್ತಿರುವುದು ಹಾಗೂ ಆಟಗಾರರು ಮತ್ತು ಸಿಬ್ಬಂದಿಗಳ ಹೋಟೆಲ್ ಕೊಠಡಿಗಳಿಗೆ ಅಪರಿಚಿತರು ಪ್ರವೇಶಿಸುತ್ತಿರುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.ಬಿಸಿಸಿಐ ಬಿಡುಗಡೆ ಮಾಡಿರುವ ಸಲಹಾ ಪಟ್ಟಿಯಲ್ಲಿ “ಹನಿಟ್ರ್ಯಾಪ್” ಉಲ್ಲೇಖವಾಗಿರುವುದು ವಿಶೇಷ ಗಮನ ಸೆಳೆದಿದೆ. ಆಟಗಾರರು ಅಪರಿಚಿತರ ಸಂಪರ್ಕದ ವೇಳೆ ಎಚ್ಚರಿಕೆಯಿಂದ ಇರಬೇಕು.

ಯಾವುದೇ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿ ಅಥವಾ ತಂಡದ ಒಳಗಿನ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಜೊತೆಗೆ ಹೋಟೆಲ್ಗಳಿಗೆ ಯಾರು ಭೇಟಿ ನೀಡುತ್ತಾರೆ, ಯಾರು ಹೊರಹೋಗುತ್ತಾರೆ ಎಂಬುದರ ಸಂಪೂರ್ಣ ದಾಖಲಾತಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.ಕ್ರಿಕೆಟ್ ವಲಯದಲ್ಲಿ “ಹನಿಟ್ರ್ಯಾಪ್” ಎಂದರೆ ಕೇವಲ ವೈಯಕ್ತಿಕ ಅಥವಾ ಲೈಂಗಿಕ ಆಮಿಷಕ್ಕೆ ಸೀಮಿತವಲ್ಲ ಎನ್ನಲಾಗುತ್ತಿದೆ. ಕೆಲವರು ಆಟಗಾರರ ವಿಶ್ವಾಸ ಗಳಿಸಿ ತಂಡದ ತಂತ್ರಗಳು, ಪ್ಲೇಯಿಂಗ್ ಇಲೆವೆನ್, ಗಾಯದ ಮಾಹಿತಿ ಅಥವಾ ಪಂದ್ಯಕ್ಕೆ ಸಂಬಂಧಿಸಿದ ಒಳಮಾಹಿತಿಯನ್ನು ಕಲೆಹಾಕಲು ಯತ್ನಿಸುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕ (ಎಸಿಯು) ಕೂಡ ಹೆಚ್ಚುವರಿ ನಿಗಾ ವಹಿಸಿದೆ.

ಐಪಿಎಲ್ ಇತಿಹಾಸದಲ್ಲಿ ಈ ಹಿಂದೆ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇದೀಗ ಮತ್ತೆ ಬಿಸಿಸಿಐ “ಹನಿಟ್ರ್ಯಾಪ್” ಬಗ್ಗೆ ಎಚ್ಚರಿಕೆ ನೀಡಿರುವುದು ಅಭಿಮಾನಿಗಳಲ್ಲೂ ಪ್ರಶ್ನೆ ಹುಟ್ಟಿಸಿದೆ. ಕೆಲವು ವಿದೇಶಿ ಕ್ರಿಕೆಟ್ ಲೀಗ್ಗಳಲ್ಲಿ ಆಟಗಾರರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದ ಪ್ರಕರಣಗಳು ನಡೆದಿದ್ದವು ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ.ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಹಲವರು ವಿವಿಧ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೆಲವರು ಆಟಗಾರರ ವೈಯಕ್ತಿಕ ಸಂಬಂಧಗಳ ಬಗ್ಗೆ ಊಹಾಪೋಹ ಹಬ್ಬಿಸುತ್ತಿದ್ದರೆ, ಇನ್ನೂ ಕೆಲವರು ಐಪಿಎಲ್ನಲ್ಲಿ ಹಣ ಮತ್ತು ಗ್ಲಾಮರ್ ಹೆಚ್ಚಾದಂತೆ ಅಪಾಯಗಳೂ ಹೆಚ್ಚಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬಿಸಿಸಿಐ ಯಾವುದೇ ಆಟಗಾರರ ಹೆಸರನ್ನು ಬಹಿರಂಗಪಡಿಸಿಲ್ಲ.ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಇದೀಗ ಮೈದಾನದ ಆಟಕ್ಕಿಂತ ಹೊರಗಿನ ವಿವಾದಗಳಿಂದಲೂ ಸದ್ದು ಮಾಡುತ್ತಿದೆ. ಬಿಸಿಸಿಐ ನೀಡಿರುವ “ಹನಿಟ್ರ್ಯಾಪ್” ಎಚ್ಚರಿಕೆಯ ಹಿಂದೆ ನಿಜಕ್ಕೂ ಏನು ನಡೆದಿದೆ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.






