• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

ಪ್ರತಿಧ್ವನಿ by ಪ್ರತಿಧ್ವನಿ
April 30, 2026
in ಅಂಕಣ
0
ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ
Share on WhatsAppShare on FacebookShare on Telegram

ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂಪಟದಲ್ಲಿ ಕರ್ನಾಟಕವು ಸಾಮಾಜಿಕ ನ್ಯಾಯದ ಪ್ರಯೋಗಶಾಲೆ ಎಂದು ಗುರುತಿಸಲ್ಪಟ್ಟಿದೆ. ಸಹಸ್ರಾರು ವರ್ಷಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಮತ್ತು ಘನತೆಯನ್ನು ತಂದುಕೊಡುವಲ್ಲಿ ಈ ನೆಲದ ಚಳವಳಿಗಳು ಮತ್ತು ಸಾಂವಿಧಾನಿಕ ಆವಿಷ್ಕಾರಗಳು ಮಹತ್ವದ ಪಾತ್ರ ವಹಿಸಿವೆ. ಈ ಹೋರಾಟದ ಕೇಂದ್ರಬಿಂದುವಿನಲ್ಲಿ ಇರುವುದು ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಎಂಬ ಪರಿಕಲ್ಪನೆ. ಅಹಿಂದ ಎಂಬುದು ಕೇವಲ ಒಂದು ರಾಜಕೀಯ ಘೋಷಣೆಯಲ್ಲ; ಅದು ಶತಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯಗಳ ಏಕತೆಯ ಸಂಕೇತ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸುವ ಒಂದು ಸಮಾಜೋ-ರಾಜಕೀಯ ತಂತ್ರವಾಗಿದೆ.

ADVERTISEMENT

“ಅಹಿಂದ, ಎಲ್ಲಿಯವರೆಗೆ ತುಳಿತಕ್ಕೊಳಗಾದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಅಸ್ಪೃಶ್ಯರು ತಮ್ಮ ಮೂಲ ಒಂದೇ ಎಂಬುದನ್ನು ಅರಿತು ಒಂದಾಗುವುದಿಲ್ಲವೋ, ಅಲ್ಲಿಯವರೆಗೆ ಶೋಷಕ ಮಹಾಜನರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ. ದಲಿತರು ಕೈ ಮುಂದೆ ಮಾಡಿದಾಗ ಉಳಿದವರು ಅವರ ಕೈಹಿಡಿಯುವುದೊಂದೇ ವಿಮೋಚನೆಯ ಮಾರ್ಗವಾಗಿದೆ” ಎಂಬ ಉದಾತ್ತ ಆಶಯದ ಹಿನ್ನೆಲೆಯಲ್ಲಿ ಈ ಸಾಮಾಜಿಕ ನ್ಯಾಯದ ಹೋರಾಟವನ್ನು ನವೀಕರಿಸುವ ಅಗತ್ಯವಿದೆ.
ಕರ್ನಾಟಕದ ಹಿಂದುಳಿದ ವರ್ಗಗಳ ಚಳವಳಿಗೆ ಭದ್ರವಾದ ವೈಚಾರಿಕ ಅಡಿಪಾಯವನ್ನು ಹಾಕಿಕೊಟ್ಟಿದ್ದು 12ನೇ ಶತಮಾನದ ಬಸವಣ್ಣನವರ ನೇತೃತ್ವದ ಶರಣ ಚಳವಳಿ. ಬಸವಣ್ಣನವರ ಈ ಸಮಾನತೆಯ ಕನಸು ಆಧುನಿಕ ಕಾಲದ ಅಹಿಂದ ಚಳವಳಿಗೆ ಪ್ರೇರಣೆಯಾಗಿದೆ. ದಲಿತರು ಮತ್ತು ಹಿಂದುಳಿದವರು ಒಂದಾದಾಗ ಮಾತ್ರ ಶೋಷಕ ವ್ಯವಸ್ಥೆಯನ್ನು ಬದಲಿಸಲು ಸಾಧ್ಯ ಎಂಬ ಸತ್ಯವನ್ನು 12ನೇ ಶತಮಾನದಲ್ಲೇ ಪ್ರಾಯೋಗಿಕವಾಗಿ ತೋರಿಸಿಕೊಡಲಾಗಿತ್ತು.

ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸ್ ಅವರ ಭೂಮಿಯಿಂದ, ಸಾಮಾಜಿಕ ನ್ಯಾಯವನ್ನು ಕೇವಲ ಘೋಷಣೆಯಾಗಿ ಅಲ್ಲ, ಜೀವಂತ ರಾಜಕೀಯ ಚೈತನ್ಯವಾಗಿ ಒಪ್ಪಿಕೊಂಡ ನಾಡಿದು.
ಮೈಸೂರು ಸಂಸ್ಥಾನ ಮತ್ತು ಮಿಲ್ಲರ್ ಸಮಿತಿ: ಮೀಸಲಾತಿಯ ಸಾಂಸ್ಥಿಕ ಉಗಮ
ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಕ್ರಿಯೆಯು ಮೈಸೂರು ಸಂಸ್ಥಾನದಲ್ಲಿ 20ನೇ ಶತಮಾನದ ಆರಂಭದಲ್ಲೇ ಆರಂಭವಾಯಿತು. ಬ್ರಾಹ್ಮಣ ಸಮುದಾಯವು ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೊಂದಿದ್ದ ಏಕಸ್ವಾಮ್ಯವನ್ನು ಪ್ರಶ್ನಿಸಿ ನಾನ್-ಬ್ರಾಹ್ಮಣ (ಬ್ರಾಹ್ಮಣೇತರ) ಚಳವಳಿಯು ತೀವ್ರಗೊಂಡಿತು. ಈ ಚಳವಳಿಯ ನಾಯಕರಾಗಿದ್ದ ಪ್ರಜಾ ಮಿತ್ರ ಮಂಡಳಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮನವಿ ಸಲ್ಲಿಸಿ, ಹಿಂದುಳಿದ ವರ್ಗಗಳಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಒಡೆಯರ್ ಅವರು 1918ರಲ್ಲಿ ಸರ್ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿದರು. ಮಿಲ್ಲರ್ ಸಮಿತಿಯು ಸರ್ಕಾರಿ ಸೇವೆಗಳಲ್ಲಿ ವಿವಿಧ ಜಾತಿಗಳ ಪ್ರಾತಿನಿಧ್ಯದ ಅಂಕಿ-ಅಂಶಗಳನ್ನು ಕಲೆಹಾಕಿದಾಗ, ಒಟ್ಟು ಜನಸಂಖ್ಯೆಯ ಅಲ್ಪಭಾಗವಿದ್ದ ಬ್ರಾಹ್ಮಣರು ಶೇ. 90ಕ್ಕೂ ಹೆಚ್ಚು ಹುದ್ದೆಗಳನ್ನು ಹೊಂದಿದ್ದು ಕಂಡುಬಂತು.

ಮಿಲ್ಲರ್ ಸಮಿತಿಯ ಶಿಫಾರಸುಗಳು ಮತ್ತು ಅದರ ಪ್ರಭಾವ
ಮಿಲ್ಲರ್ ಸಮಿತಿಯು 1919ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು ಮತ್ತು 1921ರಲ್ಲಿ ಸರ್ಕಾರವು ಇದನ್ನು ಜಾರಿಗೆ ತಂದಿತು.ಪ್ರಾತಿನಿಧ್ಯದ ಗುರಿಗಾಗಿ ಮುಂದಿನ ಏಳು ವರ್ಷಗಳಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳ ಪಾಲನ್ನು ಶೇ. 50ಕ್ಕೆ ಏರಿಸಬೇಕು. ಶಿಕ್ಷಣ ಸೌಲಭ್ಯಕ್ಕಾಗಿ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ರಿಯಾಯಿತಿಗಳನ್ನು ನೀಡಬೇಕು. ವಯೋಮಿತಿ ಸಡಿಲಿಕೆಯಾಗಿ ಸರ್ಕಾರಿ ಸೇವೆಗೆ ಸೇರಲು ಇರಬೇಕಾದ ವಯೋಮಿತಿಯನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಸಬೇಕು.

ಈ ಆದೇಶವು ಮೈಸೂರು ಸಂಸ್ಥಾನದಲ್ಲಿ ದೊಡ್ಡ ಆಡಳಿತಾತ್ಮಕ ಬದಲಾವಣೆಗೆ ಕಾರಣವಾಯಿತು. ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರು “ಮೆರಿಟ್” ಅಥವಾ ಅರ್ಹತೆಯ ಆಧಾರದ ಮೇಲೆ ಮಾತ್ರ ನೇಮಕಾತಿ ನಡೆಯಬೇಕು ಎಂದು ವಾದಿಸಿ ರಾಜೀನಾಮೆ ನೀಡಿದರು. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಮೀಸಲಾತಿಯನ್ನು ಬೆಂಬಲಿಸಿದರು ಮತ್ತು ಎಂ. ಕಾಂತರಾಜ್ ಅರಸು ಅವರನ್ನು ಮೊದಲ ಬ್ರಾಹ್ಮಣೇತರ ದಿವಾನರನ್ನಾಗಿ ನೇಮಿಸಿದರು. ಮಿಲ್ಲರ್ ಸಮಿತಿಯ ವರದಿಯು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ, ಅದು ದಮನಿತ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿತು. ಇದು ಹಳ್ಳಿಗಳ ಮಟ್ಟದಲ್ಲಿ ಜನರನ್ನು ಸಂಘಟಿಸಲು ಮತ್ತು ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟಗಳನ್ನು ರಚಿಸಲು ನಾಂದಿ ಹಾಡಿತು.
ಭಾರತದ ಸಂವಿಧಾನ ಮತ್ತು ಹಿಂದುಳಿದ ವರ್ಗಗಳ ರಕ್ಷಣೆ
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಹಿಂದುಳಿದ ವರ್ಗಗಳ ರಕ್ಷಣೆಯನ್ನು ಸಂವಿಧಾನದ ಭಾಗವನ್ನಾಗಿ ಮಾಡಲಾಯಿತು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ತತ್ವವನ್ನು ಕೇವಲ ಔಪಚಾರಿಕವಾಗಿ ಇರಿಸದೆ, ಅದನ್ನು ವಾಸ್ತವಗೊಳಿಸಲು , 15(4) ಈ ವಿಧಿಯು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (SEBC) ಅಥವಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯವು ವಿಶೇಷ ನಿಬಂಧನೆಗಳನ್ನು ಮಾಡಲು ಅವಕಾಶ ನೀಡುತ್ತದೆ. 16(4) ಈ ವಿಧಿಯು ರಾಜ್ಯದ ಅಡಿಯಲ್ಲಿನ ಸೇವೆಗಳಲ್ಲಿ ಯಾವುದೇ ಹಿಂದುಳಿದ ವರ್ಗದ ಜನರಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲ ಎಂದು ರಾಜ್ಯವು ಭಾವಿಸಿದರೆ, ಅಂತಹ ವರ್ಗಗಳಿಗೆ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ ನೀಡಲು ಈ ವಿಧಿಯು ಅನುಮತಿ ನೀಡುತ್ತದೆ. 46 ಈ ವಿಧಿಯು ರಾಜ್ಯವು ಜನರ ದುರ್ಬಲ ವರ್ಗಗಳ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಕಾಳಜಿಯೊಂದಿಗೆ ಉತ್ತೇಜಿಸಬೇಕು ಮತ್ತು ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸಬೇಕು. 340 ಈ ವಿಧಿಯು ಹಿಂದುಳಿದ ವರ್ಗಗಳ ಪರಿಸ್ಥಿತಿಯನ್ನು ತನಿಖೆ ಮಾಡಲು ಮತ್ತು ಅವರ ಅಭಿವೃದ್ಧಿಗೆ ಶಿಫಾರಸು ಮಾಡಲು ರಾಷ್ಟ್ರಪತಿಯವರು ಆಯೋಗವನ್ನು ನೇಮಿಸಲು ಈ ವಿಧಿಯು ಅವಕಾಶ ನೀಡುತ್ತದೆ.ಈ ಸಾಂವಿಧಾನಿಕ ಆಶಯಗಳು ಕೇವಲ ದಯೆಯಲ್ಲ, ಅವು ತುಳಿತಕ್ಕೊಳಗಾದವರ ಹಕ್ಕುಗಳಾಗಿವೆ. ಸಂವಿಧಾನವು ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದರೂ, ಅಸಮಾನತೆಯನ್ನು ಹೋಗಲಾಡಿಸಲು “ರಕ್ಷಣಾತ್ಮಕ ತಾರತಮ್ಯ” ಅಗತ್ಯ ಎಂದು ನಂಬುತ್ತದೆ.

ದೇವರಾಜ ಅರಸು ಕಾಲ ಮೌನ ಕ್ರಾಂತಿ
ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಡಿ. ದೇವರಾಜ ಅರಸು ಅವರ ಕಾಲವನ್ನು ಹಿಂದುಳಿದ ವರ್ಗಗಳ ಸುವರ್ಣಯುಗ ಎಂದು ಕರೆಯಬಹುದು. 1970ರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಅರಸು ಅವರು ರಾಜ್ಯದ ಅಧಿಕಾರ ಕೇಂದ್ರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಗೊಳಿಸಿ, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಕೈಗೆ ನೀಡಲು ಪ್ರಯತ್ನಿಸಿದರು.
ಅರಸು ಅವರು ಕೈಗೊಂಡ ಅತ್ಯಂತ ಪ್ರಮುಖ ಕ್ರಮವೆಂದರೆ ‘ಉಳುವವನೇ ಭೂಮಿಯ ಒಡೆಯ’ ಎಂಬ ಘೋಷಣೆಯೊಂದಿಗೆ ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆ. ಇದು ಕೇವಲ ಆರ್ಥಿಕ ಸುಧಾರಣೆಯಲ್ಲ, ಹಳ್ಳಿಗಳಲ್ಲಿ ಮೇಲ್ಜಾತಿಗಳ ಅಡಿಯಾಳುಗಳಾಗಿದ್ದ ದಲಿತರು ಮತ್ತು ಹಿಂದುಳಿದವರಿಗೆ ಆತ್ಮಗೌರವವನ್ನು ನೀಡಿದ ಸಾಮಾಜಿಕ ಬದಲಾವಣೆಯಾಗಿತ್ತು.

ಎಲ್.ಜಿ. ಹಾವನೂರು ಆಯೋಗ (1972-1975)
ಅರಸು ಅವರು 1972ರಲ್ಲಿ ಎಲ್.ಜಿ. ಹಾವನೂರು ಅವರ ನೇತೃತ್ವದಲ್ಲಿ ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು. ಹಾವನೂರು ಅವರು ಮೂರು ವರ್ಷಗಳ ಕಾಲ ವ್ಯಾಪಕ ಸಂಶೋಧನೆ ನಡೆಸಿ 1975ರಲ್ಲಿ ವರದಿಯನ್ನು ಸಲ್ಲಿಸಿದರು. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ವೈಜ್ಞಾನಿಕವಾದ ಹಿಂದುಳಿದ ವರ್ಗಗಳ ವರದಿ ಎಂದು ಕರೆಯಲ್ಪಟ್ಟಿದೆ.

ಹಾವನೂರು ಅವರು ಹಿಂದುಳಿದ ವರ್ಗಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಮೀಸಲಾತಿಯನ್ನು ಹಂಚಿಕೆ ಮಾಡಿದರು. ಈ ವರದಿಯು ಮೀಸಲಾತಿಯ ಮಿತಿಯನ್ನು ಶೇ. 50ರೊಳಗೆ ಇರಿಸಲು ಪ್ರಯತ್ನಿಸಿತು, ಹಾವನೂರು ವರದಿಯು ಮೀಸಲಾತಿಗೆ “ಜಾತಿ” ಎಂಬುದು ಕೇವಲ ಒಂದು ಸೂಚಕವಲ್ಲ, ಅದು ಸಾಮಾಜಿಕ ಸ್ಥಿತಿಗತಿಯ ಅಳತೆಗೋಲು ಎಂಬುದನ್ನು ಸಾಬೀತುಪಡಿಸಿತು.

ಸಿದ್ದರಾಮಯ್ಯ ಮತ್ತು ಅಹಿಂದ ಪುನಶ್ಚೇತನ
‘ಅಹಿಂದ’ ಎಂಬ ಪದವು ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಎಂಬ ಪದಗಳ ಮೊದಲ ಅಕ್ಷರಗಳ ಸಂಕಲನವಾಗಿದೆ. ದೇವರಾಜ ಅರಸು ಅವರು ಈ ಸಮುದಾಯಗಳ ಒಕ್ಕೂಟವನ್ನು ರಚಿಸುವಲ್ಲಿ ಯಶಸ್ವಿಯಾದರೂ, ಸಿದ್ದರಾಮಯ್ಯನವರು 2005ರ ನಂತರ ಈ ಅಹಿಂದ ಚಳವಳಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದರು. ಅಹಿಂದ ಸಂಘಟನೆಯನ್ನು ರಾಜ್ಯಾದ್ಯಂತ ಬಲಪಡಿಸಿದರು. ಸಿದ್ದರಾಮಯ್ಯನವರ ರಾಜಕೀಯ ತತ್ವಶಾಸ್ತ್ರವು ಅಹಿಂದ ಸಮುದಾಯಗಳ ಸಬಲೀಕರಣದ ಮೇಲೆ ನಿಂತಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ದಲಿತರಿಗೆ ಬಜೆಟ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡುವ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗಳು ಅಹಿಂದ ಅಜೆಂಡಾದ ಭಾಗವಾಗಿದ್ದವು.
ಅಹಿಂದವು ಕೇವಲ ರಾಜಕೀಯ ಸಮೀಕರಣವಲ್ಲ, ಅದು ಒಂದು ಸಾಮಾಜಿಕ ತಂತ್ರ. ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು (ಶೇ. 14.79), ಪರಿಶಿಷ್ಟ ಜಾತಿಗಳು (ಶೇ. 17.14) ಮತ್ತು ಪರಿಶಿಷ್ಟ ಪಂಗಡಗಳು (ಶೇ. 6.95) ಸೇರಿ ಸುಮಾರು ಶೇ. 39ರಷ್ಟು ಪ್ರಬಲ ಮತಬ್ಯಾಂಕ್ ಅನ್ನು ಹೊಂದಿದ್ದಾರೆ. ಇವರೊಂದಿಗೆ ಇತರೆ ಹಿಂದುಳಿದ ವರ್ಗಗಳು (OBC) ಸೇರಿದಾಗ ಇದು ಶೇ. 70ಕ್ಕೂ ಹೆಚ್ಚು ಆಗುತ್ತದೆ. ಈ ಶಕ್ತಿಯನ್ನು ಒಗ್ಗೂಡಿಸುವುದೇ ಅಹಿಂದದ ಗುರಿ.

ಮಂಡಲ್ ಆಯೋಗ ಮತ್ತು ಇಂದ್ರಾ ಸಹಾನಿ ಕೇಸ್
ಭಾರತದ ಹಿಂದುಳಿದ ವರ್ಗಗಳ ಇತಿಹಾಸದಲ್ಲಿ 1990ರ ದಶಕವು ಅತ್ಯಂತ ಮಹತ್ವದ್ದು. 1979ರಲ್ಲಿ ನೇಮಕಗೊಂಡಿದ್ದ ಬಿ.ಪಿ. ಮಂಡಲ್ ಅವರ ನೇತೃತ್ವದ ಎರಡನೇ ಹಿಂದುಳಿದ ವರ್ಗಗಳ ಆಯೋಗವು 1980ರಲ್ಲಿ ವರದಿ ನೀಡಿತ್ತು. ಮಂಡಲ್ ಆಯೋಗವು ಭಾರತದ ಜನಸಂಖ್ಯೆಯಲ್ಲಿ ಶೇ. 52ರಷ್ಟು ಜನರು ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಗುರುತಿಸಿತು ಮತ್ತು ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಶೇ. 27ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತು. 1990ರಲ್ಲಿ ವಿ.ಪಿ. ಸಿಂಗ್ ಸರ್ಕಾರವು ಮಂಡಲ್ ವರದಿಯನ್ನು ಜಾರಿಗೆ ತಂದಾಗ ದೇಶಾದ್ಯಂತ ದೊಡ್ಡ ಪ್ರತಿಭಟನೆಗಳು ನಡೆದವು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹೂಡಲಾದ ಕೇಸ್ ಹೆಸರು ‘ಇಂದ್ರಾ ಸಹಾನಿ ಮತ್ತು ಇತರರು ವರ್ಸಸ್ ಯೂನಿಯನ್ ಆಫ್ ಇಂಡಿಯಾ’ (1992).

ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು ಈ ಪ್ರಮುಖ ತತ್ವಗಳೆಂದರೆ, ಹಿಂದುಳಿದವರನ್ನು ಗುರುತಿಸಲು ಜಾತಿಯನ್ನು ಒಂದು ಮಾನದಂಡವನ್ನಾಗಿ ಬಳಸಬಹುದು, ಯಾವುದೇ ಕಾರಣಕ್ಕೂ ಒಟ್ಟು ಮೀಸಲಾತಿಯು ಶೇ. 50ರ ಮಿತಿಯನ್ನು ಮೀರಬಾರದು (ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ). ಹಿಂದುಳಿದ ವರ್ಗಗಳಲ್ಲಿನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದವರನ್ನು ಮೀಸಲಾತಿಯಿಂದ ಹೊರಗಿಡಬೇಕು.ಮೀಸಲಾತಿಯು ಕೇವಲ ನೇರ ನೇಮಕಾತಿಯ ಆರಂಭಿಕ ಹಂತಕ್ಕೆ ಮಾತ್ರ ಸೀಮಿತವಾಗಬೇಕು, ಬಡ್ತಿಗಳಿಗೆ ಅಲ್ಲ ಎಂದು ತೀರ್ಪು ನೀಡಲಾಯಿತು. (ನಂತರ ಇದನ್ನು ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಬದಲಿಸಲಾಯಿತು). ಸಂವಿಧಾನವು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಗುರುತಿಸುತ್ತದೆಯೇ ಹೊರತು ಕೇವಲ ಆರ್ಥಿಕ ಹಿಂದುಳಿಯುವಿಕೆಯನ್ನಲ್ಲ.ಈ ತೀರ್ಪು ಭಾರತದ ಮೀಸಲಾತಿ ನೀತಿಯನ್ನು ಒಂದು ಚೌಕಟ್ಟಿಗೆ ತಂದಿತು. ಇದು ಹಿಂದುಳಿದ ವರ್ಗಗಳ ರಾಜಕೀಯ ಏಳಿಗೆಗೆ ರಾಷ್ಟ್ರೀಯ ಮಟ್ಟದಲ್ಲಿ ಬಲ ನೀಡಿತು.

ಕಾಂತರಾಜ್ ಆಯೋಗ ಮತ್ತು ಕರ್ನಾಟಕದ ಜಾತಿ ಗಣತಿ ವಿವಾದ
ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಮುಂದಿನ ಹಂತವು ‘ಜಾತಿ ಗಣತಿ’ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೇಲೆ ನಿಂತಿದೆ. ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಎಚ್. ಕಾಂತರಾಜ್ ಅವರ ನೇತೃತ್ವದ ಆಯೋಗವು 2015ರಲ್ಲಿ ಈ ಸಮೀಕ್ಷೆಯನ್ನು ಕೈಗೊಂಡಿತು. ಸುಮಾರು 1.35 ಕೋಟಿ ಕುಟುಂಬಗಳನ್ನು ಮತ್ತು 5.98 ಕೋಟಿ ಜನಸಂಖ್ಯೆಯನ್ನು ಈ ಸಮೀಕ್ಷೆಯು ಒಳಗೊಂಡಿತ್ತು.ಕಾಂತರಾಜ್ ಆಯೋಗದ ವರದಿಯನ್ನು ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದ ಆಯೋಗವು 2024ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯು ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಸಮೀಕರಣಗಳನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

ವರದಿಯು ಕೆಲವು ಸಮುದಾಯಗಳ ಜನಸಂಖ್ಯೆಯನ್ನು ಅಂದಾಜು ಮಾಡಿದೆ, ಇದು ಸಂಪ್ರದಾಯಬದ್ಧ ನಂಬಿಕೆಗಳಿಗೆ ವ್ಯತಿರಿಕ್ತವಾಗಿದೆ. ಲಿಂಗಾಯತ ಮತ್ತು ಒಕ್ಕಲಿಗರು ಈ ಎರಡು ಪ್ರಬಲ ಸಮುದಾಯಗಳ ಜನಸಂಖ್ಯೆಯು ತಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಇದೆ ಎಂದು ವರದಿ ಹೇಳುತ್ತಿದೆ ಎಂಬ ಆರೋಪವಿದೆ (ಲಿಂಗಾಯತರು ಶೇ. 11.09, ಒಕ್ಕಲಿಗರು ಶೇ. 10.31).ಮುಸ್ಲಿಮರ ಜನಸಂಖ್ಯೆಯು ಶೇ. 12.87ರಷ್ಟಿದೆ ಎಂದು ಅಂದಾಜಿಸಲಾಗಿದೆ.ಕುರುಬ ಸಮುದಾಯದ ಜನಸಂಖ್ಯೆಯು ಶೇ. 7.14ರಷ್ಟಿದೆ ಎಂದು ವರದಿಯಲ್ಲಿದೆ.ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಈಗಿರುವ ಶೇ. 32 ರಿಂದ ಶೇ. 51ಕ್ಕೆ ಏರಿಸಲು ವರದಿಯು ಶಿಫಾರಸು ಮಾಡಿದೆ.ಸುಮಾರು 398 ಹೊಸ ಜಾತಿಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಅನಾಥ ಮಕ್ಕಳಿಗೆ ಶೇ. 1ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ.

ಈ ವರದಿಯು ಬಿಡುಗಡೆಯಾಗುವ ಮೊದಲೇ ವಿವಾದಕ್ಕೆ ಒಳಗಾಗಿದೆ. ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ತಮ್ಮ ಜನಸಂಖ್ಯೆಯನ್ನು ಅವೈಜ್ಞಾನಿಕವಾಗಿ ಲೆಕ್ಕ ಹಾಕಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಅಹಿಂದ ನಾಯಕರು ಈ ವರದಿಯ ಜಾರಿಯೇ ನೈಜ ಸಾಮಾಜಿಕ ನ್ಯಾಯ ಎಂದು ವಾದಿಸುತ್ತಿದ್ದಾರೆ. ಕಾಂತರಾಜ್ ಆಯೋಗವು ಮಾಹಿತಿಯನ್ನು ಸಂಗ್ರಹಿಸಲು ವಿದ್ಯುತ್ ಸಂಪರ್ಕಗಳ ದತ್ತಾಂಶವನ್ನು ಬಳಸಿಕೊಂಡಿದ್ದು ಭಾರತದಲ್ಲೇ ಮೊದಲ ಪ್ರಯೋಗವಾಗಿದೆ.ಈ ನಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ವರದಿ ಇನ್ನಷ್ಟೇ ಬರಬೇಕಿದೆ.

ಅಹಿಂದ ರಜತ ಮಹೋತ್ಸವ ಮತ್ತು ಭವಿಷ್ಯದ ಅಹಿಂದ ನಾಯಕತ್ವ
ಅಹಿಂದ ಸಂಘಟನೆಯು ಈಗ 25ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ನಂತರ ಅಹಿಂದ ನಾಯಕತ್ವವನ್ನು ಯಾರು ವಹಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ನಿಟ್ಟಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಇವರು ಎರಡನೇ ಹಂತದ ಡಾ.ಯತೀಂದ್ರ ಸಿದ್ದರಾಮಯ್ಯರಂತವರು ಅಹಿಂದ ನಾಯಕತ್ವ ವನ್ನು ಬೆಳೆಸುವ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ಪ್ರಕಾರ, “ಅಹಿಂದ ಎಂಬುದು ಕೇವಲ ರಾಜಕೀಯ ವೇದಿಕೆಯಾಗಬಾರದು, ಅದು ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ಚಳವಳಿಯಾಗಬೇಕು. ಬುದ್ಧ, ಬಸವ ಮತ್ತು ಪೆರಿಯಾರ್ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಗುರಿ”. ಮುಂದಿನ ದಿನಗಳಲ್ಲಿ ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವುದು ಮತ್ತು ದಲಿತ ಸಿಎಂ ಆಯ್ಕೆಯ ಚರ್ಚೆಗಳು ಅಹಿಂದ ರಾಜಕಾರಣವನ್ನು ಇನ್ನಷ್ಟು ತೀವ್ರಗೊಳಿಸಲಿವೆ.

ದಮನಿತರ ಏಕತೆ: ವಿಮೋಚನೆಯ ಏಕೈಕ ಮಾರ್ಗ
“ಅಹಿಂದ, ಎಲ್ಲಿಯವರೆಗೆ ತುಳಿತಕ್ಕೊಳಗಾದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಅಸ್ಪೃಶ್ಯರು ತಮ್ಮ ಮೂಲ ಒಂದೇ ಎಂಬುದನ್ನು ಅರಿತು ಒಂದಾಗುವುದಿಲ್ಲವೋ, ಅಲ್ಲಿಯವರೆಗೆ ಶೋಷಕ ಮಹಾಜನರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ” ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ. ಈ ಹೇಳಿಕೆಯು ದಮನಿತ ವರ್ಗಗಳ ನಡುವಿನ ಆಂತರಿಕ ಒಡಕುಗಳನ್ನೇ ಶೋಷಕರು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ ಎಂಬ ಸತ್ಯವನ್ನು ಸಾರುತ್ತದೆ.

ದಲಿತರು ಎಂದರೆ ಕೇವಲ ಒಂದು ಜಾತಿಯಲ್ಲ, ಶೋಷಣೆಗೆ ಒಳಗಾದ ಪ್ರತಿಯೊಬ್ಬ ವ್ಯಕ್ತಿಯೂ ದಲಿತನೇ. ದಲಿತರು ಇಂದು ತಮ್ಮ ಹಕ್ಕುಗಳಿಗಾಗಿ ಕೈ ಮುಂದೆ ಮಾಡಿದ್ದಾಗ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಅವರ ಕೈಹಿಡಿಯುವುದು ಅತ್ಯಂತ ಅಗತ್ಯವಾಗಿದೆ. ಈ ಸಹೋದರತ್ವವೇ ಸಾಮಾಜಿಕ ನ್ಯಾಯದ ಅಂತಿಮ ಹಂತ.
ಬಸವಣ್ಣನವರು ಹೇಳಿದಂತೆ “ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ.” ಈ ‘ನಮ್ಮವ’ ಎಂಬ ಭಾವನೆ ಅಹಿಂದ ಸಮುದಾಯಗಳ ನಡುವೆ ಮೂಡಿದಾಗ ಮಾತ್ರ ಅವರು ಶೋಷಕ ಮಹಾಜನರ ಅಡಿಯಾಳುಗಳಾಗಿ ಇರುವುದು ತಪ್ಪುತ್ತದೆ. ರಾಜಕೀಯ ಅಧಿಕಾರವು ಕೇವಲ ಒಂದು ಸಾಧನವೇ ಹೊರತು ಅದೇ ಗುರಿಯಲ್ಲ. ಅಂತಿಮ ಗುರಿ ಎಂದರೆ ಎಲ್ಲರಿಗೂ ಘನತೆಯಿಂದ ಬದುಕುವ ಅವಕಾಶ ಸಿಗುವ ಸಮಸಮಾಜದ ನಿರ್ಮಾಣ.2
ಅಹಿಂದ ಚಳುವಳಿಯ ಮುಂದಿನ ದಾರಿ
ಕರ್ನಾಟಕದ ಹಿಂದುಳಿದ ವರ್ಗಗಳ ಹೋರಾಟವು ಮಿಲರ್ ಸಮಿತಿಯಿಂದ ಆರಂಭವಾಗಿ ಕಾಂತರಾಜ್ ಆಯೋಗದವರೆಗೆ ಸುದೀರ್ಘ ಹಾದಿಯನ್ನು ಸವೆಸಿದೆ. ಮೀಸಲಾತಿಯು ಕೇವಲ ಉದ್ಯೋಗ ಪಡೆಯುವ ಮಾರ್ಗವಾಗಿರದೆ, ಅದು ಅಧಿಕಾರದಲ್ಲಿ ಪಾಲು ಪಡೆಯುವ ಹಕ್ಕಾಗಿದೆ. ಸಂವಿಧಾನ ನೀಡಿದ ಈ ಹಕ್ಕನ್ನು ಉಳಿಸಿಕೊಳ್ಳಲು ಮತ್ತು ಬಲಪಡಿಸಲು ದತ್ತಾಂಶ ಆಧಾರಿತ ನೀತಿಗಳು (ಜಾತಿ ಗಣತಿಯಂತಹ) ಅತ್ಯಂತ ಅಗತ್ಯವಾಗಿವೆ.ಈ ಕಾರಣಕ್ಕಾಗಿ ಅಹಿಂದ ಚಳುವಳಿಯು ಈ ಕಾರಣಕ್ಕೆ ಬಲಗೊಳ್ಳಬೇಕಿದೆ. ಅವುಗಳೇಂದರೆ
ರಾಷ್ಟ್ರವ್ಯಾಪಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಹಾಗೂ ನಿಖರವಾದ ದತ್ತಾಂಶ ಸಂಗ್ರಹಣೆಗಾಗಿ ವ್ಯವಸ್ಥಿತ ಮತ್ತು ನಿರಂತರ ಪ್ರಯತ್ನಗಳನ್ನು ಕೈಗೊಳ್ಳಬೇಕು. ಜಾತಿ ಜನಗಣತಿಯಿಂದ ಲಭ್ಯವಾಗುವ ದತ್ತಾಂಶದ ಆಧಾರದ ಮೇಲೆ, ವಿವಿಧ ಸಮುದಾಯಗಳ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸಲು ಪ್ರಸ್ತುತ ಇರುವ ಮೀಸಲಾತಿ ಮಿತಿಯನ್ನು ಶೇ. 75ಕ್ಕೆ ಹೆಚ್ಚಿಸಲು ಅಥವಾ ಸಮಾನ ಪ್ರಾತಿನಿಧ್ಯವನ್ನು ಖಾತರಿಪಡಿಸಲು ಅಗತ್ಯ ಸಾಂವಿಧಾನಿಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ದಮನಿತ ಸಮುದಾಯಗಳ ಶೈಕ್ಷಣಿಕ ಪ್ರಗತಿಗಾಗಿ ಗುಣಮಟ್ಟದ ವಿದ್ಯಾರ್ಥಿನಿಲಯಗಳ ನಿರ್ಮಾಣ, ಆರ್ಥಿಕ ನೆರವು ನೀಡುವ ವಿದ್ಯಾರ್ಥಿವೇತನ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳು ಮತ್ತು ಆಧುನಿಕ ಮಾರುಕಟ್ಟೆಗೆ ಪೂರಕವಾದ ಕೌಶಲ್ಯ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸುವ ಮೂಲಕ ಸಮಗ್ರ ಶೈಕ್ಷಣಿಕ ಸಬಲೀಕರಣ ಸಾಧಿಸಬೇಕು. ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಅಥವಾ ಪ್ರಾತಿನಿಧ್ಯವನ್ನು ಜಾರಿಗೆ ತರುವುದು, ಸರ್ಕಾರಿ ಗುತ್ತಿಗೆಗಳಲ್ಲಿ ದಮನಿತ ವರ್ಗಗಳಿಗೆ ನಿಗದಿತ ಪಾಲು ನೀಡುವುದು ಮತ್ತು ಸುಲಭ ಸಾಲ ಸೌಲಭ್ಯಗಳಂತಹ ಆರ್ಥಿಕ ಬೆಂಬಲದ ಮೂಲಕ ಈ ಸಮುದಾಯಗಳ ಆರ್ಥಿಕ ಅವಕಾಶಗಳನ್ನು ವಿಸ್ತರಿಸಲು ಬದ್ಧವಾದ ನೀತಿಗಳನ್ನು ರೂಪಿಸಬೇಕು.

ಸಮಾಜದಲ್ಲಿ ಬೇರೂರಿರುವ ಎಲ್ಲಾ ಬಗೆಯ ತಾರತಮ್ಯಗಳನ್ನು ನಿರ್ಮೂಲನೆ ಮಾಡಲು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಅಡಿಯಲ್ಲಿ ಸರ್ವಜನಾಂಗದ ಸಾಮಾಜಿಕ ಒಳಗೊಳ್ಳುವಿಕೆಯನ್ನು ಸಾಧಿಸಲು ಆದ್ಯತೆ ನೀಡಬೇಕು. , ಶ್ರೀ ರಾಹುಲ್ ಗಾಂಧಿಯವರ ‘ಜಿತ್ನಿ ಆಬಾದಿ, ಉತ್ನಿ ಹಖ್’ (ಎಷ್ಟು ಜನಸಂಖ್ಯೆಯೋ ಅಷ್ಟು ಹಕ್ಕು) ಎಂಬ ಘೋಷಣೆಯ ಆಶಯದಂತೆ, ಪ್ರಜಾಪ್ರಭುತ್ವದ ಮೂಲತತ್ವವಾದ ‘ಜನಸಂಖ್ಯೆಗೆ ಅನುಗುಣವಾದ ಸಮಾನ ಪ್ರಾತಿನಿಧ್ಯ’ವನ್ನು ಎಲ್ಲಾ ಕ್ಷೇತ್ರಗಳಲ್ಲೂ ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ಖಾತರಿಪಡಿಸಬೇಕು.
ಅಹಿಂದ ಚಳವಳಿಯು ಈ ಸಂದರ್ಭದಲ್ಲಿ ದಮನಿತ ವರ್ಗಗಳು ತಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವುದು ವಿಮೋಚನೆಯ ಏಕೈಕ ಮಾರ್ಗವಾಗಿದೆ.

ದಲಿತರು ಸಮಾಜದ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವಾಗ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಅವರಿಗೆ ಬೆಂಬಲವಾಗಿ ನಿಲ್ಲುವುದು ಕೇವಲ ಮಾನವೀಯತೆಯಲ್ಲ, ಅದು ಅವರ ಸ್ವಂತ ಅಸ್ತಿತ್ವದ ರಕ್ಷಣೆಗಾಗಿ ಬೇಕಾದ ಅನಿವಾರ್ಯತೆಯಾಗಿದೆ. ಬಸವಣ್ಣನವರ ಕಾಯಕ ತತ್ವ, ಅಂಬೇಡ್ಕರ್ ಅವರ ಸಾಂವಿಧಾನಿಕ ಹಕ್ಕು ಮತ್ತು ಅಹಿಂದದ ಒಗ್ಗಟ್ಟು ಸೇರಿದಾಗ ಮಾತ್ರ ಕರ್ನಾಟಕವು ನಿಜವಾದ ‘ಕಲ್ಯಾಣ ಕರ್ನಾಟಕ’ವಾಗಲು ಸಾಧ್ಯ. ಶೋಷಕ ವ್ಯವಸ್ಥೆಯ ವಿರುದ್ಧದ ಈ ಹೋರಾಟವು ಸತತ ಜಾಗೃತಿಯನ್ನು ಬಯಸುತ್ತದೆ, ಏಕೆಂದರೆ ಜಾಗೃತಿಯೇ ಸ್ವಾತಂತ್ರ್ಯದ ಬೆಲೆ. ಅಹಿಂದ ಒಂದು ಮತಬ್ಯಾಂಕ್ ಅಲ್ಲ, ಇದು ಭಾರತದ ಆತ್ಮಸಾಕ್ಷಿಯ ಧ್ವನಿ. ಭಾರತದ ಭವಿಷ್ಯವನ್ನು ಅಹಿಂದದ ಬಹಿಷ್ಕಾರದ ಮೇಲೆ ಕಟ್ಟಲಾಗದು. ಅವಕಾಶ, ಘನತೆ ಮತ್ತು ಅಧಿಕಾರದೊಂದಿಗೆ ಎಲ್ಲರೂ ಒಟ್ಟಿಗೆ ಮೇಲೇರಬೇಕು.
“ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು” ಮತ್ತು “ಸರ್ವೋದಯ” ತತ್ವದಲ್ಲಿ, ಯಾರೂ ಹಿಂದೆ ಉಳಿಯದ, ಎಲ್ಲರೂ ಒಟ್ಟಿಗೆ ಏಳುವ ಭಾರತವನ್ನು ಕಟ್ಟುವ ಅಹಿಂದರು ಬರಬೇಕು.

ಲೇಖಕರು : ಡಾ.ರಾಜೇಂದ್ರಪ್ರಸಾದ್.

ಪಿ ಎಂಎಸ್‌ಡಬ್ಲ್ಯೂ, ಪಿಹೆಚ್‌ಡಿ
ಅಭಿವೃದ್ಧಿ ಚಿಂತಕರು
(ಪ್ರಸ್ತುತ ಗ್ರಾಸ್‌ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್‌ನಲ್ಲಿ ಸಮುದಾಯ ಸಮಲೋಚನಾ ತಂಡದ
ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.)

Tags: AhindaAmbedkarbackward classesBasavannaCaste CensusConstitutionDalit RightsDemocracydevaraj ursequalityKantharaj commissionKarnatakaKarnataka PoliticsMandal Commissionminoritiespolitical analysisReservationsiddaramaiahsocial JusticeSocial Movement
Previous Post

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

Next Post

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Related Posts

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ
ಅಂಕಣ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

by ಪ್ರತಿಧ್ವನಿ
April 30, 2026
0

ನಾ ದಿವಾಕರ ಭಾರತದಲ್ಲಿ ಉದ್ಯೋಗದ ಹಕ್ಕು ಪ್ರಾಥಮಿಕವಾಗಿ ಸಾಂವಿಧಾನಿಕ ಹಕ್ಕಾಗಿ, ಸಂವಿಧಾನ ಅನುಚ್ಛೇದ 41ರ ಅನ್ವಯ ನಿರ್ದೇಶಕ ತತ್ವಗಳ ಅನ್ವಯ ಜಾರಿಯಲ್ಲಿದೆ. ಇದು ಜನತೆಯ ಮೂಲಭೂತ ಹಕ್ಕು...

Read moreDetails
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
Next Post
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada