ನಾ ದಿವಾಕರ
ಭಾರತದಲ್ಲಿ ಉದ್ಯೋಗದ ಹಕ್ಕು ಪ್ರಾಥಮಿಕವಾಗಿ ಸಾಂವಿಧಾನಿಕ ಹಕ್ಕಾಗಿ, ಸಂವಿಧಾನ ಅನುಚ್ಛೇದ 41ರ ಅನ್ವಯ ನಿರ್ದೇಶಕ ತತ್ವಗಳ ಅನ್ವಯ ಜಾರಿಯಲ್ಲಿದೆ. ಇದು ಜನತೆಯ ಮೂಲಭೂತ ಹಕ್ಕು ಆಗುವುದಿಲ್ಲ. ಆದರೆ ಜನತೆಯ ಆರ್ಥಿಕ ಭದ್ರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಅನುಚ್ಛೇದ 16ರ ಸಮಾನ ಅವಕಾಶಗಳ ಹಕ್ಕು ಮತ್ತು ಅನುಚ್ಛೇದ 19ರ ಅನ್ವಯ ಯಾವುದೇ ವ್ಯಾಪಾರ/ಉದ್ಯೋಗ ನಡೆಸುವ ಹಕ್ಕುಗಳು ಜಾರಿಯಲ್ಲಿವೆ. ಮತ್ತೊಂದು ಬದಿಯಲ್ಲಿ ದೇಶದ ಅತಿದೊಡ್ಡ ಉದ್ಯೋಗದಾತರಾದ ಇನ್ಫೋಸಿಸ್ ನಾರಾಯಣ ಮೂರ್ತಿ “ ಪ್ರತಿಯೊಬ್ಬರಿಗೂ ನೌಕರಿ ಸೃಷ್ಟಿಸುವುದು ಸರ್ಕಾರದ ಜವಾಬ್ದಾರಿ ಅಲ್ಲ,,,,,,, ” ( ದ ಹಿಂದೂ 7 ಫೆಬ್ರವರಿ 2016). ಎಂದು ಫರ್ಮಾನು ಹೊರಡಿಸುತ್ತಾರೆ. ಕಾರ್ಪೋರೇಟ್ ಸ್ನೇಹಿ ಸರ್ಕಾರ ಇರುವುದರಿಂದ ಈ ಮಾತುಗಳಿಗೂ ಮಾನ್ಯತೆ ಇದ್ದೇ ಇರುತ್ತದೆ.
ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ನೀತಿಯನ್ನು ನಿಷ್ಠೆಯಿಂದ ಅಳವಡಿಸಿರುವ ನರೇಂದ್ರ ಮೋದಿ ಸರ್ಕಾರದ ದೃಷ್ಟಿಯಲ್ಲಿ, ದೇಶದ ಯುವ ಜನತೆ ತಮ್ಮ ಕೌಶಲ ಮತ್ತು ಜ್ಞಾನದ ಮೂಲಕ ಉದ್ಯೋಗ ಸೃಷ್ಟಿಸುವವರಾಗಬೇಕು, ಔದ್ಯಮಿಕ ಉದ್ಯೋಗದಾತರಾಗಬೇಕು. ಇದು ಮೇಲ್ನೋಟಕ್ಕೆ ಉದಾತ್ತವಾಗಿ ಕಾಣುವ ಕಲ್ಪನೆ. ಆದರೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ದೊರೆಯುವುದಿಲ್ಲ. ಉದ್ಯೋಗ ಮತ್ತು ನೌಕರಿ (Employment and Job) ಈ ಎರಡೂ ವಿದ್ಯಮಾನಗಳನ್ನು ಪ್ರತ್ಯೇಕಿಸಿ ನೋಡಲಾಗುವುದಿಲ್ಲ. ಉದ್ಯೋಗಾವಕಾಶಗಳು ಇದ್ದಾಗ ಮಾತ್ರ ನೌಕರಿ ಲಭ್ಯವಾಗಿರುತ್ತದೆ. ಉದ್ಯೋಗ ಎನ್ನುವುದು ಕಾನೂನಾತ್ಮಕ ಆರ್ಥಿಕ ಸಂಬಂಧವನ್ನು ಪ್ರತಿನಿಧಿಸುತ್ತದೆ. ನೌಕರಿ ನಿರ್ದಿಷ್ಟ ರೀತಿಯ ದುಡಿಮೆಯನ್ನು ಬಿಂಬಿಸುತ್ತದೆ.
ಇಲ್ಲದ ಅವಕಾಶಗಳ ನಡುವೆ
ಈ ಆರ್ಥಿಕ ವ್ಯಾಖ್ಯಾನಗಳಿಂದಾಚೆ ನೋಡಿದಾಗ ಭಾರತದ ಯುವ ಜನಾಂಗದ ದೃಷ್ಟಿಯಲ್ಲಿ ಉದ್ಯೋಗಾವಕಾಶಗಳು ಮುಖ್ಯವಾಗುತ್ತವೆ. ಈ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ಚುನಾಯಿತ ಸರ್ಕಾರಗಳೇ ಹೊತ್ತುಕೊಂಡಾಗ, ಸಾಂವಿಧಾನಿಕ ಹಕ್ಕು ಸಹ ಮಾನ್ಯತೆ ಪಡೆಯುತ್ತದೆ. ಪ್ರಸ್ತುತ ಮಾರುಕಟ್ಟೆ ಆರ್ಥಿಕತೆಯಲ್ಲಿ ಈ ಜವಾಬ್ದಾರಿಯನ್ನು ಮಾರುಕಟ್ಟೆಗೆ ವಹಿಸಲಾಗಿದೆ. ಹಾಗಾಗಿ ಭಾರತದ ವಿದ್ಯಾವಂತ ಯುವಜನಾಂಗ ತಮ್ಮ ಜೀವನೋಪಾಯದ ನಿರ್ವಹಣೆಗಾಗಿ ಯಾವುದೇ ರೀತಿಯ ನೌಕರಿಯನ್ನು ಅಪೇಕ್ಷಿಸಿದರೂ, ಅದನ್ನು ಕಾರ್ಪೋರೇಟ್ ಮಾರುಕಟ್ಟೆಯ ಜಗುಲಿಯಲ್ಲೇ ಹುಡುಕಬೇಕಾಗುತ್ತದೆ .ಕೌಶಲ, ಕ್ಷಮತೆ, ಅರ್ಹತೆ ಮತ್ತು ದುಡಿಯುವ ಶಕ್ತಿ ಇದ್ದರೂ ಸಹ ಈ ಸಂತೆಯಲ್ಲಿ ದೊರೆಯುವ ʼಉದ್ಯೋಗ-ನೌಕರಿ ʼ ಎಂಬ ಸರಕುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ವ್ಯತ್ಯಯಗಳ ಅನುಸಾರ ಲಭ್ಯವಾಗುತ್ತವೆ .
ಇದಕ್ಕೆ ಸಾಕ್ಷಿ ಎನ್ನುವಂತೆ, ಇತ್ತೀಚೆಗೆ (ಏಪ್ರಿಲ್ 13ರಂದು) ಭಾರತದ ಪ್ರತಿಷ್ಠಿತ ಔದ್ಯಮಿಕ ಪ್ರದೇಶ ನೊಯ್ಡಾದಲ್ಲಿ ನಡೆದ ಕಾರ್ಮಿಕರ ಹಠಾತ್ ಮುಷ್ಕರ ಮತ್ತು ಹಿಂಸಾತ್ಮಕ ಘಟನೆಗಳು ಮಾರುಕಟ್ಟೆ ಆರ್ಥಿಕತೆಯ ಮತ್ತೊಂದು ಮುಖವಾಡವನ್ನು ಅನಾವರಣಗೊಳಿಸಿದೆ. ಮೂಲತಃ ಹೆಚ್ಚಿನ ವೇತನ ಮತ್ತು ಉತ್ತಮ ದುಡಿಮೆಯ ಸ್ಥಿತಿಗತಿಗಳಿಗಾಗಿ ನಡೆದ ಕಾರ್ಮಿಕರ ಮುಷ್ಕರ ವ್ಯಾಪಕ ಹಿಂಸೆಯ ಹಾದಿ ಹಿಡಿಯಲು ಕಾರಣ ಉತ್ತರಪ್ರದೇಶ ಸರ್ಕಾರದ ಆರ್ಥಿಕ ನೀತಿ ಮತ್ತು ಮಾರುಕಟ್ಟೆಯ ವರ್ತನೆ. ಏಪ್ರಿಲ್ 14ರಂದು ಕ್ಲಿಯೋ ಕಂಟ್ರಿ ಹೆಸರಿನ ಗಗನಚುಂಬಿ ಕಟ್ಟಡಗಳ ಸಮುಚ್ಛಯದಲ್ಲೂ ಮನೆಗೆಲಸ ಮಾಡುವ ನೌಕರರು ಹೆಚ್ಚಿನ ವೇತನ ಆಗ್ರಹಿಸಿ ಮುಷ್ಕರ ಆರಂಭಿಸಿದ್ದರು. ಉತ್ತರಪ್ರದೇಶ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಯೋಗಿ ಆದಿತ್ಯನಾಥ್ ಸರ್ಕಾರ ಕೂಡಲೇ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇಕಡಾ 20ರಷ್ಟು ವೇತನ ಹೆಚ್ಚಳ ಘೋಷಿಸಿತ್ತು.
ನೊಯ್ಡಾ ಕಾರ್ಮಿಕರ ಹಠಾತ್ ಮುಷ್ಕರವನ್ನು ಪ್ರಚೋದಿಸಿದ್ದು, ನೆರೆರಾಜ್ಯ ಹರಿಯಾಣದಲ್ಲಿ ಸರ್ಕಾರ ಕನಿಷ್ಠ ವೇತನವನ್ನು 14,000 ರೂಗಳಿಂದ 19,000 ರೂಗಳಿಗೆ, ಶೇಕಡಾ 35ರಷ್ಟು ಹೆಚ್ಚಿಸಿದ್ದು. ನವ ಉದಾರವಾದಿ ಆರ್ಥಿಕತೆಯ ಬೆನ್ನೆಲುಬು ಎಂದೇ ಪರಿಗಣಿಸಲ್ಪಡುವ ನೊಯ್ಡಾದಲ್ಲಿ ಕಾರ್ಮಿಕರ ಕನಿಷ್ಠ ವೇತನ 11 ರಿಂದ 13,000 ದಷ್ಟಿತ್ತು. ರಾಜ್ಯ ಸರ್ಕಾರ ಕನಿಷ್ಠ ವೇತನವನ್ನು ಎರಡು ವರ್ಷಕ್ಕೊಮ್ಮೆ ಪರಿಷ್ಕರಿಸಲು ಅವಲಂಬಿಸುವುದು ವೇರಿಯಬಲ್ ತುಟ್ಟಿ ಭತ್ಯೆಯ (Variable DA) ಪ್ರಮಾಣವನ್ನು. ಆದರೆ ಸೂತ್ರದ ಅನುಸಾರ ನೊಯ್ಡಾ ಕಾರ್ಮಿಕರಿಗೆ ದೆಹಲಿ ಮತ್ತು ಹರಿಯಾಣ ಕಾರ್ಮಿಕರಿಗಿಂತಲೂ ಕಡಿಮೆ ವೇತನ ದೊರೆಯುತ್ತಿತ್ತು. ಇದರ ಪರಿಣಾಮ ಕಾರ್ಮಿಕರಿಗೆ ಅರಿವಾಗಿದ್ದು, ಅಮೆರಿಕ-ಇಸ್ರೇಲ್ ಇರಾನ್ ವಿರುದ್ಧ ಯುದ್ಧ ಸಾರಿದ ನಂತರ.
ಜಾಗತಿಕ ಯುದ್ಧ ಮತ್ತು ಮಾರುಕಟ್ಟೆ
ಪಶ್ಚಿಮ ಏಷ್ಯಾದ ಬಿಕ್ಕಟ್ಟು ಭಾರತದ ಮಾರುಕಟ್ಟೆಯನ್ನು ಪಲ್ಲಟಗೊಳಿಸಿದ್ದೇ ಅಲ್ಲದೆ, ಸಾಮಾನ್ಯ ಜನರು ಬಳಸುವ ಅಡುಗೆ ಅನಿಲ ಮತ್ತು ನಿತ್ಯಾವಶ್ಯ ಆಹಾರ ಪದಾರ್ಥಗಳ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಿತ್ತು. ಈ ಬಿಕ್ಕಟ್ಟು ಉಲ್ಬಣಿಸುತ್ತಿರುವಾಗಲೇ ನೊಯ್ಡಾದ ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುವ ಒತ್ತಾಯವನ್ನೂ ಮಾಲಿಕರಿಂದ ಎದುರಿಸುತ್ತಿದ್ದರು. ಇಲ್ಲಿನ ಅನೇಕ ಘಟಕಗಳಲ್ಲಿ 12 ಗಂಟೆಯ ದುಡಿಮೆಯ ಅವಧಿ ಸಾಮಾನ್ಯವಾಗಿದ್ದು, ಭಾನುವಾರದ ರಜೆಯನ್ನೂ ಸಹ ನಿರಾಕರಿಸಲಾಗುತ್ತದೆ. ಬೃಹತ್ ಕೈಗಾರಿಕೆಗಳಲ್ಲೂ ಸಹ ಕಾರ್ಮಿಕರು ಉದ್ಯೋಗ ಭದ್ರತೆ ಒದಗಿಸುವಂತಹ ಯಾವುದೇ ಒಪ್ಪಂದ ಇಲ್ಲದೆಯೇ ದುಡಿಯಬೇಕಾಗಿದೆ. ಬಹುತೇಕ ಕಾರ್ಮಿಕರು ಎರಡು ಪಾಳಿಯಲ್ಲಿ ಕೆಲಸ ಮಾಡಿದರೂ, ಅವರಿಗೆ ದೊರೆಯುತ್ತಿದ್ದುದು ಒಂದು ಪಾಳಿಯ ವೇತನ ಮಾತ್ರ, ಉಳಿದಿದ್ದನ್ನು ಗುತ್ತಿಗೆದಾರರು, ಮಧ್ಯವರ್ತಿಗಳು ಕಬಳಿಸುತ್ತಾರೆ ಎಂದು ಆರೋಪಿಸಲಾಗುತ್ತದೆ.
ಈ ಜಟಿಲ ಸಮಸ್ಯೆಗಳು ಉಲ್ಬಣಿಸಲು ಮತ್ತೊಂದು ಕಾರಣ ಎಂದರೆ ಕಾರ್ಮಿಕ ಭವಿಷ್ಯ ನಿಧಿ (EPF) ಮತ್ತು ವಿಮಾ ಸೌಲಭ್ಯಗಳ ಅಲಭ್ಯತೆ ಹಾಗೂ ಕಾರ್ಮಿಕ ಸಂಘಟನೆಗಳ ಪ್ರಾತಿನಿಧಿತ್ವದ ಕೊರತೆ. ನೊಯ್ಡಾ ಕಾರ್ಮಿಕರ ಮೂಲ ಬೇಡಿಕೆ ಕನಿಷ್ಠ ವೇತನವನ್ನು 20 ರಿಂದ 26 ಸಾವಿರ ರೂಗಳಿಗೆ ಹೆಚ್ಚಿಸುವುದು, ಮಧ್ಯವರ್ತಿಗಳು/ಗುತ್ತಿಗೆದಾರರನ್ನು ದೂರ ಇಡುವುದಾಗಿತ್ತು. ತಮ್ಮ ಪಾಳಿಯ ಕೆಲಸವನ್ನೂ ಮೀರಿದ ದುಡಿಮೆಗೆ ಎರಡರಷ್ಟು ವೇತನ ನೀಡುವುದು, ಕಳೆದ ವರ್ಷದ ಬಾಕಿ ಇರುವ ಬೋನಸ್ ನೀಡುವುದು, ವೇತನ ಬಾಕಿಯನ್ನು ಒಡಂಬಡಿಕೆಯ ಅನುಸಾರ ಹಿಂದಿನ ದಿನಾಂಕದಿಂದಲೇ ನೀಡುವುದು ಇನ್ನಿತರ ಬೇಡಿಕೆಗಳಾಗಿದ್ದವು. ನೊಯ್ಡಾ ವಲಯದಲ್ಲಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವಸತಿ ಸಮಸ್ಯೆ ಹೆಚ್ಚಾಗಿರುವುದರಿಂದ, ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸುವುದೂ ಸಹ ಕಾರ್ಮಿಕರ ಬೇಡಿಕೆಗಳಲ್ಲೊಂದಾಗಿತ್ತು. ಮಹಿಳಾ ಕಾರ್ಮಿಕರಿಗೆ ಮೇಲಧಿಕಾರಿಗಳಿಂದ ಕಿರುಕುಳ ತಪ್ಪಿಸುವ ಸಲುವಾಗಿ ಕಾನೂನು ಪ್ರಕಾರ ಆಂತರಿಕ ದೂರು ಸಮಿತಿ ರಚಿಸುವುದೂ ಪ್ರಮುಖ ಬೇಡಿಕೆಗಳಲ್ಲೊಂದಾಗಿತ್ತು.
ಆದರೆ ಉತ್ತರ ಪ್ರದೇಶ ಸರ್ಕಾರದ ವೇತನ ಹೆಚ್ಚಳ ಆದೇಶದ ಹೊರತಾಗಿಯೂ ನೊಯ್ಡಾ ಕಾರ್ಮಿಕರ ಹೋರಾಟ ಶಮನವಾಗದೆ ಹೋದದ್ದು, ಭಾರತದ ಶ್ರಮ ಮಾರುಕಟ್ಟೆಯ ರಾಚನಿಕ ಬಿಕ್ಕಟ್ಟುಗಳನ್ನು ಎತ್ತಿ ತೋರಿಸುತ್ತದೆ. ಏಪ್ರಿಲ್ 13ರ ಗಲಭೆಯಲ್ಲಿ ಉದ್ರಿಕ್ತ ಕಾರ್ಮಿಕರು ಹಲವು ವಾಹನಗಳಿಗೆ ಬೆಂಕಿ ಹಚ್ಚಿ, ಅಂಗಡಿಗಳಿಗೆ ಕಲ್ಲು ತೂರಾಟ ಮಾಡಿ, ಪೊಲೀಸರೊಂದಿಗೂ ಹೊಡೆದಾಡಿ ದಾಂಧಲೆ ಎಬ್ಬಿಸಿದ್ದರು. ಡಿಜಿಟಲ್ ಭಾರತದ ಔದ್ಯಮಿಕ ಮಾದರಿ ಪ್ರದೇಶ ಎಂದೇ ಬಿಂಬಿಸಲಾಗುವ ನೊಯ್ಡಾ, ಕಾರ್ಮಿಕರ ದೃಷ್ಟಿಯಿಂದ ಶೋಷಣೆ, ದಬ್ಬಾಳಿಕೆಯ ಕೂಪವಾಗಿರುವುದು ಈ ಮುಷ್ಕರದಿಂದ ಸ್ಪಷ್ಟವಾಗಿದೆ. ಇಲ್ಲಿನ ಅನೇಕ ಕಾರ್ಖಾನೆಗಳು ಔಪಚಾರಿಕವಾಗಿ ನೋಂದಣಿಯಾಗಿದ್ದರೂ ಸಹ ಅಲ್ಲಿನ ಕಾರ್ಮಿಕರಿಗೆ ಸಾಮಾಜಿಕ ಬದ್ಧತೆಯಾಗಲೀ, ನೌಕರಿಯ ಒಪ್ಪಂದಗಳಾಗಲೀ ಲಭ್ಯವಿಲ್ಲದಿರುವುದು ವ್ಯವಸ್ಥೆಯ ಲೋಪವನ್ನು ಸೂಚಿಸುತ್ತದೆ.
ಶ್ರಮ ಮಾರುಕಟ್ಟೆಯ ಸಿಕ್ಕುಗಳು
ಇದು ಭಾರತದಾದ್ಯಂತ ಕಾಣಬಹುದಾದ ಚಿತ್ರಣ. ದೇಶದ ಕೃಷಿಯೇತರ ವಲಯದ ಉದ್ದಿಮೆಗಳಲ್ಲೂ ಸಹ ಅನೌಪಚಾರಿಕ ಲಕ್ಷಣಗಳು (Informality) ಎದ್ದು ಕಾಣುವಂತಿವೆ. 2025ರ ದತ್ತಾಂಶಗಳ ಅನುಸಾರ ಶೇಕಡಾ 58.2ರಷ್ಟು ಕಾರ್ಮಿಕರು ಲಿಖಿತ ಒಪ್ಪಂದ ಇಲ್ಲದೆ ದುಡಿಯುತ್ತಿದ್ದಾರೆ. ಶೇಕಡಾ 51.7ರಷ್ಟು ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯ ಸವಲತ್ತುಗಳು ಲಭ್ಯವಾಗುತ್ತಿಲ್ಲ. ಶೇಕಡಾ 47.3ರಷ್ಟು ಕಾರ್ಮಿಕರಿಗೆ ವೇತನ ಸಹಿತ ರಜೆ ದೊರೆಯುವುದಿಲ್ಲ. ಅಂದರೆ ಔಪಚಾರಿಕ (Formal) ವಲಯದ ಉದ್ದಿಮೆಗಳಲ್ಲೂ ಸಹ ಕಾರ್ಮಿಕರನ್ನು ಅನೌಪಚಾರಿಕವಾಗಿಯೇ ನೇಮಿಸಲಾಗುತ್ತಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿ ಕಾಣುವುದು ಸಹಜ.
ಆಡಳಿತದಲ್ಲಿ ಭಾರತದ ಮಾದರಿ ರಾಜ್ಯ ಎಂದು ಬೆನ್ನುತಟ್ಟಿಕೊಳ್ಳುವ ಉತ್ತರಪ್ರದೇಶದಲ್ಲಿ, ಇತ್ತೀಚೆಗೆ ಗಲಭೆಗಳು ನಡೆದ ನೊಯ್ಡಾದ ಗೌತಮ ನಗರ ಕಾರ್ಮಿಕರ ಶೋಷಣೆಯ ಕೇಂದ್ರವೂ ಆಗಿರುವುದು ವಾಸ್ತವ. ಸಮೀಕ್ಷೆಗಳ ಪ್ರಕಾರ ರಾಜ್ಯದ ಶೇಕಡಾ 67.8 ರಷ್ಟು ನಿಯಮಿತ ನೌಕರರು (Regular workers) ಲಿಖಿತ ಒಪ್ಪಂದ ಹೊಂದಿಲ್ಲ. ಶೇಕಡಾ 62.4ರಷ್ಟು ಕಾರ್ಮಿಕರಿಗೆ ವೇತನ ಸಹಿತ ರಜೆ ಸೌಲಭ್ಯವಿಲ್ಲ. ಶೇಕಡಾ 59.2ರಷ್ಟು ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇರುವುದಿಲ್ಲ. ಈ ಪರಿಸ್ಥಿತಿಗೆ ಮೂಲ ಕಾರಣ ಉದ್ದಿಮೆಗಳು ಗುತ್ತಿಗೆ ನೌಕರಿಯನ್ನೇ ಹೆಚ್ಚಾಗಿ ಅವಲಂಬಿಸುವುದು. ಒಟ್ಟು ಕೈಗಾರಿಕಾ ಉದ್ಯೋಗದಲ್ಲಿ ಗುತ್ತಿಗೆ ಕಾರ್ಮಿಕರ ಪ್ರಮಾಣ 2014ರಲ್ಲಿ ಶೇಕಡಾ 35ರಷ್ಟಿದ್ದುದು 2024ರ ವೇಳೆಗೆ ಶೇಕಡಾ 42ರಷ್ಟಾಗಿರುವುದು ಇದಕ್ಕೆ ಸಾಕ್ಷಿ.
ನೊಯ್ಡಾ ಕಾರ್ಮಿಕರು ಎದುರಿಸುತ್ತಿರುವ ವಿರೋಧಾಭಾಸವನ್ನು ಈ ವಿದ್ಯಮಾನ ಸ್ಪಷ್ಟವಾಗಿ ಬಿಂಬಿಸುತ್ತದೆ. ದೆಹಲಿ, ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಮೂಲ ವೇತನದ ಮೊತ್ತವೇ ಬಹಳ ಕಡಿಮೆ ಇದೆ. ಹಾಗೆಯೆ ವೇತನ ತಾರತಮ್ಯಗಳೂ ಸಹ ತೀವ್ರವಾಗಿವೆ. ಉದಾಹರಣೆಗೆ ದೆಹಲಿಯಲ್ಲಿ ಅಕುಶಲ ಕಾರ್ಮಿಕರ (Unskilled labour) ಮಾಸಿಕ ವೇತನ 2016ರಲ್ಲಿ 9,568 ರೂ ಇದ್ದುದು 2025ರಲ್ಲಿ 18,456ಕ್ಕೆ ಏರಿತ್ತು. ಅಂದರೆ ಶೇಕಡಾ 92.9ರಷ್ಟು ಹೆಚ್ಚಾಗಿತ್ತು. ಹರಿಯಾಣದಲ್ಲಿ ಇದೇ ಅವಧಿಯಲ್ಲಿ ಶೇಕಡಾ 39ರಷ್ಟು ಮಾತ್ರ ಹೆಚ್ಚಳವಾಗಿತ್ತು. ಇತ್ತೀಚಿನ ಫರಿದಾಬಾದ್, ಮನೇಸರ್, ಗುರುಗ್ರಾಮ್ ಗಲಭೆಗಳ ಪರಿಣಾಮವಾಗಿ ಶೇಕಡಾ 35ರಷ್ಟು ಹೆಚ್ಚಳವನ್ನು ಸರ್ಕಾರ ಘೋಷಿಸಿದೆ. ಉತ್ತರ ಪ್ರದೇಶದಲ್ಲಿ ಅಕುಶಲ ಕಾರ್ಮಿಕರ ಮಾಸಿಕ ಕನಿಷ್ಠ ವೇತನ 2016ರಲ್ಲಿ 7,107 ರೂ ಇದ್ದುದು 2026ರಲ್ಲಿ 11,313 ರೂಗಳಿಗೆ ಹೆಚ್ಚಳವಾಗಿದೆ. ನೊಯ್ಡಾದ ಗಲಭೆಗಳು ಉಲ್ಬಣಿಸಿದ ಕಾರಣ ಶೇಕಡಾ 21ರಷ್ಟು ಮಧ್ಯಂತರ ಹೆಚ್ಚಳವನ್ನು ಸರ್ಕಾರ ಘೋಷಿಸಿದೆ.
ಸಾರ್ವತ್ರಿಕ ಸಮಸ್ಯೆ ಮತ್ತು ಸವಾಲು
ನೊಯ್ಡಾದಲ್ಲಿ ನಡೆದ ಈ ಕಾರ್ಮಿಕರ ಮುಷ್ಕರ ಮತ್ತು ಗಲಭೆಗಳನ್ನು ಭಾರತದ ಇತರ ರಾಜ್ಯಗಳಿಂದ ಪ್ರತ್ಯೇಕಿಸಿ ನೋಡಲಾಗುವುದಿಲ್ಲ. ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಹೊಸ ಕಾರ್ಮಿಕ ಸಂಹಿತೆಗಳ ಪರಿಣಾಮ, ಸಮಾಜವಾದಿ ಮುಖ್ಯಮಂತ್ರಿ ಇರುವ ಕರ್ನಾಟಕದಲ್ಲೂ ದುಡಿಮೆಯ ಅವಧಿಯನ್ನು 12 ಗಂಟೆಗಳಿಗೆ ನಿಗದಿಪಡಿಸಲಾಗಿದೆ. ನೂತನ ಕಾರ್ಮಿಕ ಸಂಹಿತೆಗಳು ದುಡಿಮೆಗಾರರ ಸಂಘಟನೆಯ ಹಕ್ಕುಗಳನ್ನೇ ಮೊಟಕುಗೊಳಿಸಿದ್ದು, ಕಾರ್ಮಿಕ ಸಂಘಗಳನ್ನು ಕಟ್ಟುವ ಸಾಂವಿಧಾನಿಕ ಹಕ್ಕನ್ನೇ ಬಹುಮಟ್ಟಿಗೆ ಕಸಿದುಕೊಂಡಿದೆ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸಂಘಟಿತ ಕಾರ್ಮಿಕರ , ಅಂದರೆ ಕಾರ್ಮಿಕ ಸಂಘಟನೆಗಳು ಪ್ರತಿನಿಧಿಸುವ ಕಾರ್ಮಿಕರ ಪ್ರಮಾಣ ಶೇಕಡಾ 6.3ರಷ್ಟಿದೆ. ಖಾಸಗಿ ವಲಯದಲ್ಲಿ ಶೇಕಡಾ 1.8 ಮತ್ತು ಸಾರ್ವಜನಿಕ ವಲಯದಲ್ಲಿ ಶೇಕಡಾ 11.8ರಷ್ಟು ಕಾರ್ಮಿಕರನ್ನು ಕಾರ್ಮಿಕ ಸಂಘಗಳು ಪ್ರತಿನಿಧಿಸುತ್ತಿವೆ.
ಭಾರತದ ದುಡಿಯುವ ವರ್ಗಗಳ ನಾಳೆಗಳನ್ನು ನೊಯ್ಡಾದ ಶ್ರಮ ಮಾರುಕಟ್ಟೆಯ ನಡುವೆ ನಿಂತು ನೋಡುವುದು ಒಳಿತು. ಏಕೆಂದರೆ ನೊಯ್ಡಾ ಭವಿಷ್ಯ ಭಾರತದ ಕಾರ್ಮಿಕ ನೀತಿಗಳಿಗೆ ಪ್ರಯೋಗಾಲಯವಾಗಲಿದೆ. ವಿಮೆಯನ್ನೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಮುಕ್ತವಾಗಿರುವುದರಿಂದ, ಉದ್ಯೋಗ ಮಾರುಕಟ್ಟೆ ಅಂತಾರಾಷ್ಟ್ರೀಯ ಬಂಡವಾಳಕ್ಕೆ ಅಧೀನವಾಗಿಯೇ ಕಾರ್ಯ ನಿರ್ವಹಿಸುತ್ತದೆ. ಇದರ ದುಷ್ಪರಿಣಾಮಗಳನ್ನು ನೊಯ್ಡಾದಲ್ಲಿ ನೇರವಾಗಿ ಕಾಣಬಹುದು. ಬಹುತೇಕ ಎಲ್ಲ ರಾಜ್ಯಗಳಲ್ಲೂ ಗುರುಗ್ರಾಮ್ ಮಾದರಿಯ ಔದ್ಯಮಿಕ ಪ್ರದೇಶಗಳು ಸೃಷ್ಟಿಯಾಗುವುದು ಮುಂದಿನ ದಿನಗಳಲ್ಲಿ ಕಾಣಬಹುದಾದ ವಿದ್ಯಮಾನ. ಈ ಹೊಸ ಜಗತ್ತಿನಲ್ಲಿ ದುಡಿಯುವ ವರ್ಗಗಳು ತಮ್ಮ ಬದುಕು ಕಟ್ಟಿಕೊಳ್ಳಲು ಯಾರನ್ನು ಅವಲಂಬಿಸಬೇಕು ?
ಮಾರುಕಟ್ಟೆಯನ್ನೇ ಎನ್ನುವುದು ಸರ್ವವಿಧಿತ. ಈ ಸಂತೆಯಲ್ಲಿ ಬೆತ್ತಲಾಗಿ ನಿಲ್ಲುವ ಕೋಟ್ಯಂತರ ಕಾರ್ಮಿಕರನ್ನು ಪ್ರತಿನಿಧಿಸಿ, ಅವರ ಹಕ್ಕುಗಳಿಗಾಗಿ ಹೋರಾಡಿ, ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಲಭ್ಯವಾಗುವ ಸೀಮಿತ ಸಾಂವಿಧಾನಿಕ ಅವಕಾಶಗಳನ್ನು (Constitutional Space) ಬಳಸಿಕೊಂಡು, ಮಿಲೆನಿಯಂ ಜಗತ್ತಿನ ಉದ್ಯೋಗಾಕಾಂಕ್ಷಿಗಳಿಗೆ, ಭವಿಷ್ಯದ ಪ್ರಜೆಗಳಿಗೆ ಯಾವ ರೀತಿಯ ಭದ್ರತೆಯನ್ನು ಕಲ್ಪಿಸಲು ಸಾಧ್ಯ ? ಸರ್ಕಾರಗಳು ಈ ಜವಾಬ್ದಾರಿಯನ್ನು ಹೊರುವುದಿಲ್ಲ. ರಾಜಕೀಯ ಪಕ್ಷಗಳು ತೋರಿಕೆಯ ಐಕಮತ್ಯ (Solidarity) ತೋರಿಸುತ್ತವೆ. ಶಿಥಿಲವಾಗುತ್ತಿರುವ ಕಾರ್ಮಿಕ ಸಂಘಟನೆಗಳು ಸೀಮಿತ ವ್ಯಾಪ್ತಿಯಲ್ಲಿ ಕ್ರಿಯಾಶೀಲವಾಗಿರುತ್ತವೆ. ಈ ನಡುವೆ ದುಡಿಯುವ ವರ್ಗಗಳ ಸಂಘಟನೆಯ ಹಕ್ಕುಗಳನ್ನೇ ಕಸಿದುಕೊಳ್ಳಲಾಗುತ್ತಿದೆ.
ಈ ವಿಷಮ ಸನ್ನಿವೇಶದಲ್ಲಿ ಭಾರತದ ಸ್ಥಾಪಿತ ಕಾರ್ಮಿಕ ಸಂಘಟನೆಗಳ, ಅವುಗಳನ್ನು ಪ್ರತಿನಿಧಿಸುವ ಎಡಪಂಥೀಯ ರಾಜಕೀಯ ಪಕ್ಷಗಳ, ಶಾಶ್ವತ ನಾಯಕತ್ವದ ಫಲಾನುಭವಿಗಳಾಗಿರುವ ಕಾರ್ಮಿಕ ನಾಯಕರುಗಳ ಜವಾಬ್ದಾರಿಗಳೇನು ? ದುಡಿಯುವ ವರ್ಗಗಳ ಮುಂದಿರುವ ಸವಾಲುಗಳನ್ನು ಎದುರಿಸಲು ಈ ಮುದಿ ನಾಯಕತ್ವ (Old Leadership) ಶಕ್ತವಾಗಿದೆಯೇ ಅಥವಾ ಯುವ ನಾಯಕತ್ವವನ್ನು ಪ್ರೋತ್ಸಾಹಿಸಲು ಅಣಿಯಾಗುತ್ತದೆಯೇ ? ಯುವ ತಲೆಮಾರು ಈ ನಾಯಕತ್ವವನ್ನು ವಹಿಸಿಕೊಳ್ಳಲು ಬೇಕಾದ ಸೈದ್ದಾಂತಿಕ-ತಾತ್ವಿಕ ಬತ್ತಳಿಕೆಗಳನ್ನು ಹೊಂದಿರುವುದೇ ? ಇಲ್ಲವಾದರೆ ಈ ಕೊರತೆಗೆ ಕಾರಣ ಯಾರು ? ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕಿರುವುದು ಮೇ 1ರ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ.
( ಕಾರ್ಮಿಕ ದಿನಾಚರಣೆಯ ಸಾರ್ಥಕತೆ ಮತ್ತು ನಾಯಕತ್ವದ ಜವಾಬ್ದಾರಿ – ಮುಂದಿನ ಭಾಗದಲ್ಲಿ).
(ನೊಯ್ಡಾ ಘಟನೆಗಳು-ಕಾರ್ಮಿಕರ ಸಮೀಕ್ಷೆ ದತ್ತಾಂಶಗಳನ್ನು: What led to Noida Workersʼ protests- Anuj Kumaŗ , Why noidaʼs factory unrest is about more than just wages – Devyanshi Bihani ದ ಹಿಂದೂ – ಈ ಲೇಖನಗಳಿಂದ ಪಡೆದುಕೊಳ್ಳಲಾಗಿದೆ. )






