ಶ್ರೀಪಾದ ಭಟ್ಕ ಶಿಕ್ಷಣ ತಜ್ಞರು :
ಕಲ್ಯಾಣ ಯೋಜನೆಗಳ ಕುರಿತು ಪರ ವಿರೋಧ ಚರ್ಚೆಗಳು ಕೇವಲ ಮಧ್ಯಮ ವರ್ಗದ ಕೊಳ್ಳುಬಾಕುತನ ಹಾಗೂ ಸ್ವಾರ್ಥದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದೆ.
ಇಂದಿಗೂ 80 ಕೋಟಿ ಜನಸಂಖ್ಯೆ ಬಿಪಿಎಲ್ ಕಾರ್ಡ್ ಮೇಲೆ ಅವಲಂಬಿತರಾಗಿದ್ದಾರೆ ಎನ್ನುವ ವಾಸ್ತವ ಸಂಗತಿಯ ಹಿನ್ನೆಲೆಯಲ್ಲಿ ಈ ಕಲ್ಯಾಣ ಯೋಜನೆಗಳ ಮಹತ್ವ ಅರಿವಾಗುತ್ತದೆ.
ಬಡ ಕುಟುಂಬಗಳ ಆಸ್ತಿ ನಿರ್ಮಾಣ, ಭೂಮಿ ಹಕ್ಕು, ಗುಣಮಟ್ಟದ ಉದ್ಯೋಗ, ಸಾಮಾಜಿಕ ನ್ಯಾಯದ ಅನುಷ್ಠಾನ ಎಲ್ಲವೂ ಶೇ.40 ಪ್ರಮಾಣದಲ್ಲಿಯಾದರೂ ಸಾಕಾರಗೊಂಡಿದ್ದರೆ ಚುನಾವಣೆ ಘೋಷಣೆ ಮಟ್ಟಕ್ಕೆ ಇಳಿದಿರುವ ಕಲ್ಯಾಣ ಯೋಜನೆಗಳನ್ನು ವಿಮರ್ಶಾತ್ಮಕವಾಗಿ ನೋಡಬಹುದಾಗಿತ್ತು. ಆದರೆ ಅಂತಹ ಪರಿಸ್ಥಿತಿ ಇಲ್ಲ. ಹೀಗಾಗಿ ಸರ್ಕಾರಕ್ಕೆ ವೋಟ್ ಬ್ಯಾಂಕ್ ರಾಜಕಾರಣ ಹೊರತಾಗಿ ಮತ್ಯಾವುದೇ ಆಸಕ್ತಿ ಇಲ್ಲ ಎನ್ನುವುದು ಇಲ್ಲಿ ನಿಜವಾದರೂ ಕಲ್ಯಾಣ ಯೋಜನೆಗಳಿಂದ ತೀವ್ರ ಬಡತನ ಮತ್ತು ಹಸಿವಿನಿಂದ ನರಳುವುದು ಕಡಿಮೆಯಾಗುತ್ತದೆ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳಬೇಕು.


ಇದು ಒಂದು ರೀತಿಯಲ್ಲಿ ಸರ್ಕಾರದ ಮಧ್ಯಸ್ಥಿಕೆಯೂ ಹೌದು. ಆದರೆ ಈ ರೀತಿಯ ಮಧ್ಯಪ್ರವೇಶದಿಂದ ಜನತೆ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲೀಕರಣ ಕುರಿತು ಪ್ರಶ್ನಿಸುವುದನ್ನೇ ಮರೆತಿದ್ದಾರೆ. ಈ ತಾತ್ಕಾಲಿಕ ಪರಿಹಾರವೇ ಶಾಶ್ವತವಾಗಿ ಉಳಿಯುತ್ತದೆ ಎನ್ನುವುದು ಆತಂಕದ ವಿಚಾರ. ಇರಲಿಮುಖ್ಯವಾಗಿ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಒಂದು ಆರ್ಥಿಕ ಸುರಕ್ಷಿತ ವಲಯ ರೂಪಿಸುವುದು ಅಗತ್ಯವಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಸಿದ್ದರಾಮಯ್ಯನವರಂತಹ ಸಮರ್ಥ ಹಣಕಾಸು ತಜ್ಞರೇ ತಮ್ಮ ಐದು ಗ್ಯಾರಂಟಿ ಯೋಜನೆಗಳಿಗೆ ತಗಲುವ 52000 ಕೋಟಿ ವೆಚ್ಚವನ್ನು ಸರಿದೂಗಿಸಲು ಹೆಣಗುತ್ತಿದ್ದಾರೆ, ಇಂದಿಗೂ ಸಾಧ್ಯವಾಗಿಲ್ಲ. ಇದು ಸಮಸ್ಯೆ.
&format=webp&quality=medium)

ಈಗ ನೇರವಾಗಿ ಎಲ್ ಪಿಜಿ ವಿಷಯಕ್ಕೆ ಬಂದರೆ ಸರ್ಕಾರದ ಮಾಹಿತಿ ಪ್ರಕಾರ ಉಜ್ವಲಾ ಯೋಜನೆ ಅಡಿಯಲ್ಲಿ
ಇದುವರೆಗೂ ಅಂದಾಜು 31 ಕೋಟಿ ಜನಸಂಖ್ಯೆ ಉಚಿತ ಸಂಪರ್ಕ ಪಡೆದುಕೊಂಡಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಹಾಗೆಯೇ 1.5 ಕೋಟಿ ಜನಸಂಖ್ಯೆ ಸಂಪರ್ಕ ಪಡೆದ ನಂತರ ಎರಡನೇ ಬಾರಿ ಸಿಲಿಂಡರ್ ಖರೀದಿಸಿಲ್ಲ. ಅಂದರೆ ಅವರು ಮರಳಿ ಹಳೆಯ ಸಾಂಪ್ರದಾಯಿಕ ಒಲೆ ಪದ್ಧತಿಗೆ ಮರಳಿದ್ದಾರೆ. ಹಾಗೆಯೇ ಮೂರನೇ ಬಾರಿ ಸಿಲಿಂಡರ್ ಖರೀದಿಸದಿರುವವರ ಪ್ರಮಾಣವೂ ಇದೆ. ಇದಕ್ಕೆ ಮುಖ್ಯ ಕಾರಣ ಸಿಲಿಂಡರ್ ನ ದುಬಾರಿ ಬೆಲೆ.
![]()

ಅಂದರೆ ಸರ್ಕಾರ ಉಜ್ವಲ ಯೋಜನೆ ಅಡಿಯಲ್ಲಿ ಮತ ಪ್ರಮಾಣ ಹೆಚ್ಚಿಸಿ ಕೊಂಡಿತು, ಆದರೆ ಅದರ ನಿಜದ ಉದ್ದೇಶ ಸಾಧಿಸಲು ವಿಫಲವಾಗಿದೆ. ಮತ್ತೊಂದೆಡೆ ಈ ಉಚಿತ ಗ್ಯಾಸ್ ಸಂಪರ್ಕದ ವೆಚ್ಚವನ್ನು ಮತ್ತು ಪೂರೈಕೆಯನ್ನು ಸರಿದೂಗಿಸಲು ಅಗತ್ಯವಿರುವ ಬದಲಿ ಕಾರ್ಯಯೋಜನೆಗಳನ್ನು ರೂಪಿಸಲು ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಶೇ.65ರಷ್ಟಿರುವ ಎಲ್ ಪಿಜಿ ಆಮದನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಸ್ಥಳೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಇವರಿಗೆ ಸಾಧ್ಯವಾಗಲಿಲ್ಲ. ಕ್ರೂನಿ ಬಂಡವಾಳಶಾಹಿಗಳ ಪರವಿರುವ ಮೋದಿಯಂತಹ ಪ್ರಧಾನಿಗಳಿಂದ ಇದು ಸಾಧ್ಯವೂ ಇರಲಿಲ್ಲ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಮೂಲಕ ಕೇವಲ ಚುನಾವಣಾ ಪ್ರಚಾರ ಮತ್ತು ಅಂಬಾನಿ, ಅದಾನಿಗಳ ಸಂಪತ್ತಿನ ಹೆಚ್ಚಳದ ಕಡೆಗೆ ಗಮನ ಹರಿಸಿತ್ತೇ ಹೊರತು ಸಾರ್ವಜನಿಕ ಉದ್ಯಮಗಳ ಮೂಲಕ ಅನಿಲ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸುವುದರ ಕುರಿತು, ಅವಶ್ಯಕವಾದ ಹೊಸ ತಂತ್ರಜ್ಞಾನ ಕುರಿತು ನಿರ್ಲಕ್ಷಿಸಿತು.
ಉದಾಹರಣೆಗೆ ಕ್ರಿಷ್ಣಾ-ಗೋದಾವರಿ ಜಲಾನಯನ ಪ್ರದೇಶದಲ್ಲಿ ಉತ್ಪಾದನೆ ಕುಂಠಿತಗೊಳ್ಳತೊಡಗಿದಾಗ ಅದಕ್ಕೆ ಸೂಕ್ತ ಕ್ರಮ ಅಥವಾ ಬದಲಿ ಯೋಜನೆ ಕಂಡುಕೊಳ್ಳಲಿಲ್ಲ.
ಹಳೆಯ ಪ್ಲಾಂಟ್ ಗಳಿಂದ(ಅಸ್ಸಾಂ ರಾಜ್ಯ) ಉತ್ಪಾದನೆ ಪ್ರಮಾಣ ಕಡಿಮೆಯಾಗತೊಡಗಿತು. ಇದಕ್ಕೆ ಅಗತ್ಯವಿರುವ ಕಾರ್ಯಯೋಜನೆ, ಆಧುನೀಕರಣ ರೂಪಿಸಲಿಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಸಾರ್ವಜನಿಕ ವಲಯಗಳಾದ ಓಎನ್ ಜಿಸಿ, ಆಯಿಲ್ ಇಂಡಿಯಾ ಮುಂತಾದ ಮೂಲಗಳಿಂದ ಉತ್ಪಾದನೆಯಲ್ಲಿ ಶೇ.10ರಷ್ಟು ಕಡಿಮೆಯಾಯಿತು. 2012-25ರ ಅವಧಿಯಲ್ಲಿ ಕಚ್ಚಾ ತೈಲದ ಉತ್ಪಾದನೆಯಲ್ಲಿ ಶೇ.26.3 ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಶೇ.24.1ರಷ್ಟು ಕಡಿಮೆಯಾಗಿದೆ.


ಇದು ಬೇಡಿಕೆ-ಪೂರೈಕೆ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮತ್ತೊಂದೆಡೆ ತೈಲ ಮಾರ್ಕೆಟಿಂಗ್ ಕಂಪನಿಗಳಾದ(ಓಎಂಸಿ) ಐಓಸಿಎಲ್, ಬಿಪಿಸಿಎಲ್, ಹೆಚ್ ಪಿಸಿಎಲ್ ಈ ಆಮದು ನೀತಿಯಿಂದ ಲಾಭದಲ್ಲಿವೆಯಂತೆ. ಆದರೆ ಅದಾನಿ ಟೋಟಲ್ ಗ್ಯಾಸ್ ಉದ್ಯಮ ಲಾಭದಲ್ಲಿದೆ. ರಿಲಯನ್ಸ್ ಪೆಟ್ರೋ ಕೆಮಿಕಲ್ ಇಂಡಸ್ಟ್ರಿ ದೇಶದಲ್ಲಿಯೇ ಬೃಹತ್ತಾದ ಉದ್ಯಮ.. ಈಗ ಹೇಳಿ.. ದೇಶ ಉದ್ಧಾರವಾಗುವುದಾರೂ ಹೇಗೆ? ಅಂಬಾನಿ, ಅದಾನಿಗಳ ಬ್ಯುಸಿನೆಸ್ ಆದ್ಯತೆಯಾದಾಗ ಇಂತಹ ಬಿಕ್ಕಟ್ಟು ನಿರೀಕ್ಷಿತ. ಈ ಅಂಶಗಳು ಇಂದಿನ ಎಲ್ ಪಿಜಿ ಬಿಕ್ಕಟ್ಟಿಗೆ ಮುಖ್ಯ ಕಾರಣ. ಪಶ್ಚಿಮ ಏಷ್ಯಾದ ಯುದ್ಧ ಈ ಗಾಯಕ್ಕೆ ಉಪ್ಪು ಸವರಿದೆ. ಈಗ ಯಾವುದೇ ದಾರಿ ಹುಡುಕುವ ವಿವೇಚನೆಯೂ ಇಲ್ಲದ ಕೇಂದ್ರ ಸರ್ಕಾರ blame game, whatabouteryಯಂತಹ ಅಗ್ಗದ ತಂತ್ರದಲ್ಲಿ ತೊಡಗಿದೆ..







