ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕೆಎಸ್‌ಸಿಎ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸುರಕ್ಷತೆ ಕುರಿತಾಗಿ ಸುದೀರ್ಘ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಕ್ರಿಕೆಟ್ ಪ್ರೇಮಿಗಳ ಸುರಕ್ಷತೆಗೆ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣದ ಸುತ್ತ ರೂಪಿಸಿರುವ ಭದ್ರತಾ ವ್ಯವಸ್ಥೆ, ನಗರದ ಸಂಚಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣದ ಒಳಗೆ ಕುಡಿಯುವ ನೀರು ಸೇರಿದಂತೆ ಇತರೆ ಅತ್ಯಾವಶ್ಯಕ ಸಂಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದಾರೆ.

ಮೆಟ್ರೋ ರೈಲಿನ ಮೇಲೆ ಬೀಳುವ ಪ್ರಯಾಣಿಕರ ಸಾಂದ್ರತೆ, ಮೆಟ್ರೋ ಸಂಚರಿಸುವ ವೇಳಾಪಟ್ಟಿ, ಮೆಟ್ರೋ ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ, ಸುರಕ್ಷತೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಣ್ಣ ಅಹಿತಕರ ಘಟನೆಗೂ ಅವಕಾಶ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಲವು ಸೂಚನೆ ತಿಳಿಸಿದ್ದಾರೆ.
ಇದನ್ನೂ ಓದಿ : ಈ ಆಟಗಾರನಿಂದ ಆರ್‌ಸಿಬಿಗೆ ಬಂತು ಮತ್ತಷ್ಟು ಬಲ : ಇನ್ನು ಹೈದ್ರಾಬಾದ್ ವಿರುದ್ಧ ಅಬ್ಬರ ಪಕ್ಕಾ..!
ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಶಾಲಿನಿ ರಜನೀಶ್ ಖಡಕ್ ಸೂಚನೆ ನೀಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಸ್ಥೆಗಳು ಹೈ ಅಲರ್ಟ್ ಆಗಿರಬೇಕು. ಆಯಾ ಕ್ಷಣದ ಮಾಹಿತಿಗಳನ್ನು ಮೇಲಿನ ಅಧಿಕಾರಿಗಳಿಗೆ ನಿಯಮಿತವಾಗಿ ವಿನಿಮಯ ಮಾಡಿಕೊಳ್ಳಬೇಕು ಎಂಬ ನಿಯಮಗಳ ಪಾಲನೆಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿ (KSCA) ಸಂಸ್ಥೆಯ ಆಡಳಿತ ಮಂಡಳಿ, ಪದಾಧಿಕಾರಿಗಳು, RCB (Royal Challengers Benglore) ಪದಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, ಜಿಬಿಎ ಅಯುಕ್ತರು, ಮೆಟ್ರೋ ವ್ಯವಸ್ಥಾಪಕರು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.






