ಅಹಮದಾಬಾದ್ : ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ದೇಶದಲ್ಲಿ ಇಂಧನ ಕೊರತೆಯ ಸುದ್ದಿಗಳಿಂದ ಜನರು ಬಂಕ್ಗಳಿಗೆ ಮುಗಿಬೀಳುತ್ತಿದ್ದಾರೆ. ಯುದ್ಧದ ಕಾರಣಕ್ಕೆ ಪೆಟ್ರೋಲ್, ಡಿಸೇಲ್ಗಳು ಸಿಗುವುದು ಕಷ್ಟವಾಗುತ್ತದೆ. ಬಂಕ್ಗಳಲ್ಲಿ ಅವುಗಳು ಸ್ಟಾಕ್ ಇಲ್ಲ ಎಂಬ ವದಂತಿಯಿಂದ ರಾತೋರಾತ್ರಿ ಜನರು ಶಾಕ್ಗೆ ಒಳಗಾಗಿದ್ದಾರೆ.

ಹೀಗಾಗಿ ಗುಜರಾತ್ನ ಹಲವಾರು ನಗರಗಳಲ್ಲಿ ಇಂಧನ ಕೊರತೆಯ ಭೀತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿಗೆ ಜನರು ಮುಂದಾಗಿದ್ದಾರೆ. ಇಂಧನ “ಸ್ಟಾಕ್ ಇಲ್ಲ” ಎಂಬ ಬೋರ್ಡ್ಗಳನ್ನು ಅನೇಕ ಬಂಕ್ಗಳ ಮುಂದೆ ಅಳವಡಿಸಲಾಗಿತ್ತು.
ಈ ಕಾರಣಕ್ಕಾಗಿಯೇ ಪ್ರಮುಖವಾಗಿ ಅಹಮದಾಬಾದ್, ವಡೋದರಾ, ಸೂರತ್, ರಾಜ್ಕೋಟ್ ಮತ್ತು ದೇವಭೂಮಿ ದ್ವಾರಕಾದ ಪೆಟ್ರೋಲ್ ಪಂಪ್ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ಜಾಗತಿಕ ಪೂರೈಕೆಯ ವ್ಯತ್ಯಯದಿಂದ ಕೆಲವು ಬಂಕ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು, ಆದರೂ ಸಹ ಜನರು ಬಂಕ್ಗಳ ಮುಂದೆ ಸಾಲಿನಲ್ಲಿ ನಿಂತು ಇಂಧನ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ : ಹಿಂದೂ ಧರ್ಮದ ಬಗ್ಗೆ ಅನಂತಕುಮಾರ ಹೆಗಡೆ ಹೇಳಿಕೆ: ಜಾತ್ಯತೀತತೆ ಕುರಿತಾಗಿ ಕಿಡಿ
ಅಹಮದಾಬಾದ್ನಲ್ಲಿ ಸುಮಾರು 10 ಪೆಟ್ರೋಲ್ ಪಂಪ್ಗಳು ಪೂರೈಕೆ ವಿಳಂಬವನ್ನು ಎದುರಿಸಿದರೆ, ವಡೋದರಾದಲ್ಲಿ, ಖಾಸಗಿ ಪಂಪ್ಗಳತ್ತ ಲಭ್ಯತೆ ಕಡಿಮೆಯಾಗುವುದರಿಂದ ವಾಹನ ಸವಾರರು ಸರ್ಕಾರಿ ಬಂಕ್ಗಳತ್ತ ಮುಖಮಾಡಿದ್ದಾರೆ. ಇದರಿಂದಾಗಿ ಬಂಕ್ಗಳ ಮುಂದೆ ಕಿಲೋ ಮೀಟರ್ಗಟ್ಟಲೇ ಜನಸಂದಣಿ ನಿರ್ಮಾಣವಾಗಿತ್ತು.
ಸೂರತ್ನಲ್ಲಿ ಪೂರೈಕೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ವಿತರಣೆಗಳು ದಿನಕ್ಕೆ ಮೂರು ಟ್ಯಾಂಕರ್ಗಳಿಂದ ಒಂದು ಅಥವಾ ಎರಡಕ್ಕೆ ಇಳಿದಿವೆ. ಕೈಗಾರಿಕಾ ಬಳಕೆದಾರರಿಂದ ಹೆಚ್ಚಿನ ಖರೀದಿಯು ಚಿಲ್ಲರೆ ಲಭ್ಯತೆಗೆ ಹೊಡೆತ ನೀಡಿದೆ. ರಾಜ್ಕೋಟ್ನಲ್ಲಿಯೂ ಇದೇ ರೀತಿಯ ದೃಶ್ಯಗಳು ಸಾಮಾನ್ಯವಾಗಿವೆ, ಆದರೂ ನಮ್ಮಲ್ಲಿ ಇಂಧನ ಸ್ಟಾಕ್ ಇದೆ, ಸಮಸ್ಯೆಯಿಲ್ಲ ಎಂದು ಡೀಲರ್ಗಳು ಹೇಳಿದ್ದಾರೆ.
ಇನ್ನೂ ದೇವಭೂಮಿ ದ್ವಾರಕಾದಲ್ಲಿ, ವಾರಾಂತ್ಯದಲ್ಲಿ ಭಾರೀ ಪ್ರವಾಸಿಗರ ಆಗಮನದ ಹಿನ್ನೆಲೆಯಲ್ಲಿ ಪ್ರಮುಖ ಬಂಕ್ಗಳಲ್ಲಿ ಇಂಧನ ಅಭಾವ ತೀವ್ರ ಕಂಡು ಬಂದಿದೆ.
ಇಂಧನ ಖಾಲಿಯಾಗಿಲ್ಲ, ಸಾಗಣೆ ವಿಳಂಬದಿಂದ ಸಮಸ್ಯೆ..
ಇನ್ನೂ ಈ ಬಿಕ್ಕಟ್ಟು ಕೇವಲ ಸಾಗಣೆಯ ವಿಳಂಬದಿಂದ ಆಗಿದೆ, ಆದರೆ ಇಂಧನ ಖಾಲಿಯಾಗಿಲ್ಲ. ಬ್ಯಾಂಕ್ ರಜಾದಿನಗಳಿಂದಾಗಿ ಹಣ ಪಾವತಿ ವಿಳಂಬವೇ ಈ ಅಡಚಣೆಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಧನ ಸರಬರಾಜುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಅಡಚಣೆಯಾಗದಂತೆ ಎಂದು ಕೇಂದ್ರವು ಭರವಸೆ ನೀಡಿದೆ. ಅಲ್ಲದೆ ಈ ಪರಿಸ್ಥಿತಿ ತಾತ್ಕಾಲಿಕವಾಗಿದ್ದು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಯಾವುದೇ ರೀತಿಯ ಇಂಧನ ಕೊರತೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಸಹ ಜನರಲ್ಲಿನ ಆತಂಕ ದೂರವಾಗಿಲ್ಲ.






