ಯುಗಾದಿ ವಿಶೇಷ..
ಬೆಂಗಳೂರು : ಯುಗಾದಿ(Yugadi) ಹಬ್ಬವನ್ನು ಯುಗದ ಆದಿ ಎಂತಲೂ ಕರೆಯಲಾಗುತ್ತದೆ. ಇದರರ್ಥವನ್ನು ನಾವು ಗಮನಿಸಿದಾಗ ‘ಹೊಸ ಯುಗದ ಆರಂಭ’ ಎಂಬುವುದಾಗಿದೆ. ಹಿಂದೂ ಪಂಚಾಂಗದ ಪ್ರಕಾರ, ಪ್ರಸ್ತುತ ಈ ಬಾರಿಯ ಯುಗಾದಿ ಹಬ್ಬವನ್ನು ಮಾರ್ಚ್ 19ರಂದು ಗುರುವಾರದಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಈ ಹಿಂದೂ ಹಬ್ಬವು ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪಡೆದಿರುವ ಹಬ್ಬವಾಗಿದೆ. ನವೀಕರಣ, ಸಕಾರಾತ್ಮಕತೆ ಮತ್ತು ನೂತನ ಅವಕಾಶಗಳ ಭರವಸೆಯನ್ನು ಇದು ಸಂಕೇತಿಸುತ್ತದೆ. ಈ ಹಬ್ಬದ ದಿನದಂದು ಜನರು ಬೇವು – ಬೆಲ್ಲವನ್ನು ತಿನ್ನುವುದು, ಪಚಡಿಯನ್ನು ತಿನ್ನುವುದು ಸಂಪ್ರದಾಯಬದ್ದವಾದ ವಾಡಿಕೆಯಾಗಿದೆ.

ವಿಶೇಷವಾಗಿ ಯುಗಾದಿ ಹಬ್ವವೂ ಬೇವು – ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂಬ ಚಿರಪರಿಚಿತವಾಗಿರುವ ನುಡಿಗಟ್ಟನ್ನು ಹೊಂದಿದೆ. 2026ರ ಈ ಹಬ್ಬವೂ ಹಳೆಯ ನೋವನ್ನೆಲ್ಲಾ ಮರೆಸಿ, ಹೊಸ ಆಶಯಗಳ ಭರವಸೆಯನ್ನು ನೀಡುವ ಹಬ್ಬವಾಗಿದೆ
ಯುಗಾದಿಯ ಹೊಸ ವರ್ಷಾಚರಣೆಯಂದು ಬೇವಿನೊಂದಿಗೆ ಬೆಲ್ಲ ಸೇವಿಸುವುದರಿಂದ ಕಾಯಿಲೆಗಳಿಂದ ದೂರವಿರಬಹುದು. ಬೇವು ಮತ್ತು ಬೆಲ್ಲದ ಸೇವನೆಯು ಬದುಕಿನಲ್ಲಿ ಕಹಿ ಮತ್ತು ಸಿಹಿ ಎರಡನ್ನು ಸಮನಾಗಿ ಹಂಚಿಕೊಳ್ಳಬೇಕೆಂಬ ಸಂದೇಶವನ್ನೂ ಸಾರುವುದು ಒಂದೆಡೆಯಾದರೆ ಇನ್ನೊಂದೆಡೆ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಸಹಕಾರಿಯಾಗುತ್ತದೆ.
ಹಬ್ಬದಲ್ಲಿದೆ ವಿಶೇಷ, ಅಡುಗೆಯೂ ಆರೋಗ್ಯಕರ..
ಬೇವು ಬೇರಿನಿಂದ ಹಿಡಿದು ಹಣ್ಣಿನವರೆಗೂ ಔಷಧೀಯ ಗುಣಗಳನ್ನು ಹೊತ್ತು ನಿಂತಿರುವ ಬಹು ಉಪಯೋಗಿ ಮರ. ಅದಕ್ಕಾಗಿ “ಹಳ್ಳಿಯ ಆಸ್ಪತ್ರೆ”ಎಂಬ ಅನ್ವರ್ಥ ನಾಮವು ಬೇವಿಗಿದೆ. ಯುಗಾದಿಯಂದು ಅಡುಗೆಯಲ್ಲಿ ಬೇವು-ಬೆಲ್ಲ ಪ್ರಧಾನ ಪಾತ್ರ ವಹಿಸಿದೆ. ಬೇವಿನ ಹೂಗಳನ್ನು ಒಣಗಿಸಿಟ್ಟುಕೊಂಡು ಸಾಂಬಾರು ಮಾಡುವಾಗ ಬಳಸಬೇಕು. ಅಲ್ಲದೇ ಒಣಗಿದ ಬೇವಿನ ಹೂವುಗಳನ್ನು ನಮಗೆ ಬೇಕೆನಿಸಿದಾಗಲೆಲ್ಲ ಎಣ್ಣೆಯಲ್ಲಿ ಹುರಿದು ಬಿಸಿ ಅನ್ನದೊಂದಿಗೆ ಉಪ್ಪು ಮತ್ತು ತುಪ್ಪ ಬೆರೆಸಿ ತಿನ್ನಬೇಕು. ಇದು ರುಚಿಕರ ಮತ್ತು ಆರೋಗ್ಯಕರವಾಗಿದೆ ಎಂಬ ನಂಬಿಕೆಯೂ ಇಂದಿಗೂ ಜನರಲ್ಲಿದೆ.

ಬೆಂಗಳೂರು, ಮೈಸೂರು ಸೀಮೆಗಳಲ್ಲಿ ಬೇವಿನ ಎಲೆಯನ್ನು ಬೆಲ್ಲದೊಂದಿಗೆ ಬೆರೆಸಿ ತಿನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಹೊಸ ಮಡಕೆಯಲ್ಲಿ ಹುರಿಗಡಲೆ ಪುಡಿ, ಬೆಲ್ಲದ ಪುಡಿ, ಹುಣಸೆಹುಳಿ ಬೆರೆಸಿ ಪಾನೀಯ ತಯಾರಿಸಿ ಅದಕ್ಕೆ ಬೇಸಿಗೆ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಬಾಳೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಪಾನೀಯಕ್ಕೆ ಬೆರೆಸಿ ಕುಡಿಯುತ್ತಾರೆ. ಇದಕ್ಕೆ ಎಳೆಯ ಬೇವಿನೆಲೆ ಇಲ್ಲವೇ ಬೇವಿನ ಹೂಗಳನ್ನು ಬೆರೆಸುತ್ತಾರೆ. ಇದು ಯುಗಾದಿಯ ಹಬ್ಬದ ವೈಶಿಷ್ಟ್ಯವಾಗಿದೆ.
ಸಂಸ್ಕೃತಿ-ಸಂಪ್ರದಾಯಗಳ ಜೀವಂತಿಕೆಯ ಪ್ರತೀಕ..
ಪ್ರಮುಖವಾಗಿ ಇಂದಿನ ಯಾಂತ್ರಿಕ ಬದುಕಿನಲ್ಲಿ ಹಬ್ಬಗಳು ಈ ಮೊದಲನ ಉತ್ಸಾಹಕ್ಕೆ ಕಾರಣವಾಗದಿದ್ದರೂ, ಬದುಕಿನ ಏಕತಾನತೆಯನ್ನು ಮುರಿಯಲು, ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಜೀವಂತವಾಗಿ ಮುಂದಿನ ಪೀಳಿಗೆಗೆ ರವಾನಿಸಲು ಅವುಗಳನ್ನು ಆಚರಣೆಯಾಗಲೇಬೇಕು.

ಹೀಗಾಗಿ ಈ ಸಂದರ್ಭ ನೆಲಮುಗಿಲ ಪ್ರೀತಿಯಿಂದ ಪಲ್ಲವಿಸಿದ ಪ್ರಕೃತಿಯಲ್ಲಿ ಹೂಹಣ್ಣು ತರುಲತೆಗಳ ಕಂಪಿನಲಿ ತೊನಲಾಡುತ ಪ್ರಕೃತಿ ತನ್ನ ತಾ ಮರೆತಿರುವಾಗ ಸಹಜವಾಗಿಯೇ ಮನಸು ಆನಂದದಲಿ ಮುಳುಗಿರುತ್ತದೆ. ಆಗ ಹಬ್ಬದ ಆಚರಣೆಯು ಆ ಸೊಬಗಿಗೆ ಮೊಗದಷ್ಟು ಸೊಗಸನ್ನು ತುಂಬುತ್ತದೆ ಎಂಬಂತೆ ಈ ಯುಗಾದಿಯು ಒಂದು ಹೊಸ ಸಂವತ್ಸರದ ಆರಂಭದ ಜೊತೆಗೆಯೇ ಹಿಂದೂಗಳ ನೂತನ ವರ್ಷವಾಗಿಯೂ ತನ್ನ ಮಾನ್ಯತೆಯನ್ನೂ ಉಳಿಸಿಕೊಂಡಿದೆ.
ಯುಗಾದಿಯನ್ನು ಒಂದು ಹಬ್ಬವನ್ನಾಗಿ ಆಚರಿಸುವುದರ ಹಿಂದೆ ಹಲವು ಕಥನ – ಕಾರಣಗಳಿವೆ. ಇದು ಬ್ರಹ್ಮದೇವನು ವಿಶ್ವವನ್ನು ಸೃಷ್ಟಿಸಿದ ದಿನವಾಗಿದೆ ಎಂಬುದು ಅವುಗಳಲ್ಲೊಂದು ‘ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸೂರ್ಯೋದಯ ಕಾಲಕ್ಕೆ ಸರಿಯಾಗಿ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ ಹಬ್ಬ ಎಂದೂ ಹೇಳಲಾಗುತ್ತಿದೆ.

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಹನಿ – “ಬ್ರಹ್ಮದೇವನು ಚೈತ್ರಮಾಸದ ಮೊದಲನೇಯ ದಿನದಂದೇ ಜಗತ್ತನು ಸೃಷ್ಟಿಮಾಡಿದನು” ಎಂದು ಇತರ ಶಾಸ್ತ್ರಗ್ರಂಥಗಳೂ ಹೇಳುತ್ತವೆ. ಆದ್ದರಿಂದ ಚೈತ್ರ ಮಾಸದ ಮೊದಲನೇ ದಿನವನ್ನು “ಯುಗವು ಆರಂಭಗೊಂಡ ದಿನ – ಯುಗಾದಿ” ಎಂಬರ್ಥದಲ್ಲಿಯೂ ಆಚರಿಸಲಾಗುತ್ತದೆ.
ಯುಗಾದಿ ಕಾಲದ ಹಬ್ಬ ಹೇಗೋ, ಹಾಗೇ ಪ್ರಕೃತಿಯ ಹಬ್ಬವೂ ಹೌದು. ಚೈತ್ರ ಮಾಸದಲ್ಲಿ ನಮ್ಮ ಭೂಭಾಗ ಹೊಸ ಚಿಗುರಿಗೆ ಮುನ್ನುಡಿ ಬರೆಯುತ್ತದೆ. ಮನುಷ್ಯನ ಮನಸ್ಸು ನಿಸರ್ಗದ ಕನ್ನಡಿಯಂತೆ. ಪ್ರಕೃತಿಯ ಹೊಸ ಚಿಗುರು, ಮನುಷ್ಯರ ಮನಸ್ಸಿನಲ್ಲೂ ಹೊಸ ಆಶಾ ಆಭವನೆಯನ್ನು ತುಂಬಿ ಉಲ್ಲಸಿತರನ್ನಾಗಿಸುತ್ತದೆ. ಶಿವರಾತ್ರಿಯ ವೇಳೆಗೆ ಕರಗುತ್ತ ಹೋಗುವ ಚಳಿ, ಚೈತ್ರದ ಹೊಸ್ತಿಲಲ್ಲಿ ಸಂಪೂರ್ಣ ಇಲ್ಲವಾಗಿ ಸೂರ್ಯನ ಕಿರಣಗಳು ಪ್ರಖರವಾಗುತ್ತ ಸಾಗುವ ಹೊತ್ತು. ಬೇಸಿಗೆಯಾದರೂ, ಬಿಸಿಲೆಂದರೆ ಲವಲವಿಕೆ. ಈ ಲವಲವಿಕೆಯ ಸಂಕೇತವೂ ಹಬ್ಬವಾಗುತ್ತದೆ.
ಈ ಬಾರಿಯ ಯುಗಾದಿಯು ನಿಮ್ಮೆಲ್ಲರ ಬಾಳಲಿ ಹೊಸ ಚೈತನ್ಯದೊಂದಿಗೆ ನವನವೀನ ನಿರೀಕ್ಷೆಗಳನ್ನು ಹೊತ್ತು ತಂದು ಅವುಗಳು ಈಡೇರುವಂತಾಗಲಿ..
ಮತ್ತೆ ಬಂದಿದೆ ಸಂಭ್ರಮದ ಯುಗಾದಿ
ಇಂದಲ್ಲವೇ ಹೊಸ ಯುಗದ ಹಾದಿ
ಹೊಸ ಉತ್ಸಾಹಕ್ಕೆ, ಹೊಸ ಶಕ್ತಿಗೆ ನಾಂದಿ
ಭಕ್ತಿಯ ಅಲೆಯಲ್ಲಿ ಮುಳಗೇಳುವರು ಮಂದಿ
ಹಳೆಯ ಕಹಿಯ ನೋವನೆಲ್ಲ ಮರೆತು
ಜೀವನದ ಕಹಿ ಸತ್ಯಗಳನ್ನು ಅರಿತು
ಎಲ್ಲಾ ಮನೆ -ಮನಗಳೊಂದಿಗೆ ಬೆರೆತು
ಚಿಂತಿಸಲಿ ಸದಾ ಪರರ ಏಳಿಗೆ ಕುರಿತು

ಮನೆ ಬಾಗಿಲಿಗೆ ಸುಂದರ ಹಸಿರುತೋರಣ
ಅಡುಗೆ ಮನೆಯಲ್ಲಿ ಗಮ ಗಮ ಒಬ್ಬಟ್ಟು ಹೂರಣ
ತಿನ್ನಲು ಶುಚಿ ರುಚಿಯಾದ ಮಾವಿನ ಚಿತ್ರಾನ್ನ
ಎಲ್ಲಕ್ಕೂ ಮೊದಲಾಗಿ ತಲೆಗೆ ಎಣ್ಣೆಯ ಮಜ್ಜನ
ಮರೆಯದೆ ಮಾಡಬೇಕು ದೇವರ ದ್ಯಾನ
ಬತ್ತಿದ ಕೆರೆ, ಕಟ್ಟೆ, ಬಾವಿ ತುಂಬಿ ಹರಿಯಲಿ
ಬೆವರು ಸುರಿವ ರೈತನ ಬೆಳೆಗೆ ಒಳ್ಳೆ ಬೆಲೆ ಸಿಗಲಿ
ಗಡಿ ಕಾಯುವ ಯೋದ ಚಿರಾಯುವಾಗಲಿ
ಕನ್ನಡದ ಪ್ರೀತಿ ಎಲ್ಲೆಡೆ, ಎಲ್ಲರಲ್ಲೂ ಹರಡಲಿ
ಆ ದೇವರ ಕೃಪೆ ಸದಾ ಎಲ್ಲರ ಮೇಲಿರಲಿ…..






