
ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ
ಶತಮಾನಗಳು ಕಳೆದರೂ ಬದುಕುವ ಘನತೆಗಾಗಿ ಹೋರಾಡಬೇಕಾದ ದುಸ್ಥಿತಿ : ನಾಗರಿಕತೆಯೇ ?
ನಾ ದಿವಾಕರ
ವಿಶ್ವ ಮಹಿಳಾ ಸಂಕುಲ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. 116 ವರ್ಷಗಳ ಇತಿಹಾಸದಲ್ಲಿ, ಆಧುನಿಕತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮುನ್ನಡೆಯಲ್ಲಿ, ವೈಜ್ಞಾನಿಕ ಅವಿಷ್ಕಾರಗಳಿಗೆ ಸಾಕ್ಷಿಯಾಗಿ, ನವ ನಾಗರಿಕತೆಯತ್ತ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಈ ಯುಗವನ್ನು ನಾಲ್ಕನೆ ಔದ್ಯೋಗಿಕ ಕ್ರಾಂತಿ ಎಂದೂ ಕರೆಯಲಾಗುತ್ತದೆ. ಕಳೆದ ಒಂದು ಶತಮಾನದಲ್ಲಿ ವಿಶ್ವ ಮಹಿಳಾ ಸಮುದಾಯವೂ ಸಹ ಹಲವು ಆಯಾಮಗಳಲ್ಲಿ ಸಾಧನೆಯ ಶಿಖರವನ್ನು ತಲುಪಿದೆ. ನಿರಂತರ ಹೋರಾಟಗಳ ಮೂಲಕ ಹಕ್ಕುಗಳನ್ನು ಪಡೆದುಕೊಂಡಿದೆ, ಪ್ರಾತಿನಿಧ್ಯ ಗಳಿಸಿದೆ, ಅಸ್ತಿತ್ವವನ್ನು ಕಾಪಾಡಿಕೊಂಡಿದೆ ಮತ್ತು ತನ್ನ ಅಸ್ಮಿತೆಯನ್ನು ಸ್ಥಿರವಾಗಿ ಸ್ಥಾಪಿಸಲು ಹೋರಾಡುತ್ತಲೇ ಬಂದಿದೆ.
ಇದೇ ವೇಳೆ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಿದಾಗ ಮಹಿಳಾ ಸಂಕುಲ ತನ್ನ ಪ್ರಾತಿನಿಧ್ಯವನ್ನು ಪಡೆದುಕೊಳ್ಳುವುದೇ ದುಸ್ತರವಾಗಿರುವ ಸನ್ನಿವೇಶವನ್ನೂ ಎದುರಿಸುತ್ತಿದೆ. ಭಾರತದ ಮಟ್ಟಿಗೆ ಇದು ಕಟು ವಾಸ್ತವ. ಪ್ರಾತಿನಿಧ್ಯ ಅಥವಾ ಅವಕಾಶ (Space) ಎನ್ನುವುದು ಕೊಡಲ್ಪಡುವ ಅಥವಾ ನಿರಾಕರಿಸಲ್ಪಡುವ ಸೌಲಭ್ಯ ಅಥವಾ ಸವಲತ್ತು ಎಂದೇ ಭಾವಿಸುವ ಪಿತೃಪ್ರಧಾನ ವ್ಯವಸ್ಥೆಯನ್ನೇ ಅಂತರೀಕರಣಗೊಳಿಸಿಕೊಂಡಿರುವ (Internalise) ಭಾರತದ ಸಾಮಾಜಿಕ ವ್ಯವಸ್ಥೆ ಎಲ್ಲ ವಲಯಗಳಲ್ಲೂ ಮಹಿಳಾ ಸಮೂಹದ ಆದ್ಯತೆಗಳಿಗೆ ಅಂತಿಮ ಆದ್ಯತೆ ನೀಡುವ ಪರಂಪರೆಯನ್ನು ಬೆಳೆಸಿಕೊಂಡುಬಂದಿದೆ. ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಕಲ್ಪಿಸುವುದನ್ನೂ ʼ ಮೀಸಲಾತಿ ʼ ಎಂದು ವರ್ಗೀಕರಿಸುವುದು ಒಂದು ನಿದರ್ಶನ.

ಮಧ್ಯಕಾಲೀನ ಸಾಂಸ್ಕೃತಿಕ ನೆರಳು
ಆಳ್ವಿಕೆಯ ಕೇಂದ್ರಗಳಲ್ಲಿ ಮಹಿಳೆಯರ ಅಸ್ತಿತ್ವ ಮತ್ತು ಅಸ್ಮಿತೆಯನ್ನು, ಅವರ ಸ್ವಾಭಾವಿಕ ಹಕ್ಕು ಎಂದು ಭಾವಿಸದೆ, ಸಾಂವಿಧಾನಿಕ ಹಕ್ಕು ಎಂದು ಪರಿಗಣಿಸುವುದೇ ಭಾರತೀಯ ಸಮಾಜದ ಪುರುಷಾಧಿಪತ್ಯಕ್ಕೆ ಕನ್ನಡಿ ಹಿಡಿದಂತೆ ಕಾಣುತ್ತದೆ. ಈ ವೈಕಲ್ಯದ ಕಾರಣವನ್ನು ಸಾಂಪ್ರದಾಯಿಕ ಭಾರತದ ಕೌಟುಂಬಿಕ ವ್ಯವಸ್ಥೆಯಿಂದಲೇ ಶೋಧಿಸಬಹುದು. ಇಂದಿಗೂ ಮನುಸ್ಮೃತಿಯ ಪ್ರಾಚೀನ ಸಂಹಿತೆಗಳಿಂದಲೇ ಪ್ರಭಾವಿಸಲ್ಪಡುವ ಭಾರತೀಯ ಸಮಾಜದಿಂದ ಹೆಚ್ಚಿನದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲ ತತ್ವ ʼ ಹೊರಗಿಡುವಿಕೆ ʼ (Exclusion) . ಮನುಸ್ಮೃತಿ ಈ ಹೊರಗಿಡುವ ಪ್ರಕ್ರಿಯೆಗೆ ತಾತ್ವಿಕ ಚೌಕಟ್ಟುಗಳನ್ನೂ, ಧಾರ್ಮಿಕ ಕಟ್ಟಳೆಗಳನ್ನೂ ಒದಗಿಸಿದೆ. ಕೌಟುಂಬಿಕ ನೆಲೆಯಲ್ಲಿ ಮುಟ್ಟಾದ ಹೆಣ್ಣು ಮಗಳಿಂದ ಆರಂಭವಾಗುವ ಈ ಪರಂಪರೆ ದೇಶದ ಅತ್ಯುನ್ನತ ಆಡಳಿತ ಕೇಂದ್ರಗಳವರೆಗೂ ವಿಸ್ತರಿಸುತ್ತದೆ.
ಹಾಗಾಗಿಯೇ ಹಲವು ಕ್ಷೇತ್ರಗಳಲ್ಲಿ ಆಧುನಿಕ ಭಾರತ ಮಹಿಳಾ ಪ್ರಾತಿನಿಧ್ಯಕ್ಕೆ ಮನ್ನಣೆ ನೀಡಿದ್ದರೂ, ನಿರ್ಣಾಯಕ ಸ್ಥಾನಗಳಲ್ಲಿ (Critical Positions) ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ (Decision making process) ಈ ಮನ್ನಣೆಯನ್ನು ಕಾಣಲಾಗುವುದಿಲ್ಲ. ಇದು ರಾಜಕೀಯ ಚುನಾವಣೆಗಳಿಂದ, ತಳಮಟ್ಟದ ಸಮಾಜದಲ್ಲಿ ಆಯೋಜಿಸಲ್ಪಡುವ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೂ ಕಾಣಬಹುದಾದ ಒಂದು ಲಕ್ಷಣ. ಈ ಸಾಮಾಜಿಕ-ಸಾಂಸ್ಕೃತಿಕ ವಲಯವನ್ನು ಆಕ್ರಮಿಸಿಕೊಂಡು, ಆಧಿಪತ್ಯವನ್ನು ಸ್ಥಾಪಿಸುವ ಸಮಾಜದಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುವ ದೃಷ್ಟಿಯೊಂದಿದ್ದರೆ ಮತ್ತೊಂದೆಡೆ ಸದಾ ಅಧೀನತೆಯಲ್ಲಿರಿಸುವ ಪುರುಷಾಧಿಪತ್ಯದ ನೆಲೆಗಳು ಸಕ್ರಿಯವಾಗಿರುತ್ತವೆ. ಮೊದಲನೆಯ ದೃಷ್ಟಿಕೋನ ಅಪರಾಧಿಕ ಜಗತ್ತಿಗೆ ಕಾರಣವಾದರೆ, ಎರಡನೆಯದು ಪಿತೃಪ್ರಧಾನ ಸಂಸ್ಕೃತಿಯನ್ನು ಶಾಶ್ವತ ಸಮಾಜಕ್ಕೆ ಅಡಿಪಾಯ ಒದಗಿಸುತ್ತದೆ.

ನೈತಿಕ ಅಧಃಪತನದ ದಾರಿ
2026ರ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ಎರಡೂ ಮಜಲುಗಳನ್ನು ಎಪ್ಸ್ಟೀನ್ ಫೈಲ್ಸ್ ತೆರೆದಿಟ್ಟಿದೆ. ಲೈಂಗಿಕ ದೌರ್ಜನ್ಯಗಳ ಅಂತಾರಾಷ್ಟ್ರೀಯ ಸ್ವರೂಪವಾಗಿ ಇದನ್ನು ನೋಡಿದಾಗ ಪುರುಷ ಸಮಾಜದ ಎಲ್ಲ ಸ್ತರಗಳೂ ಸಹ ಮಹಿಳಾ ನ್ಯಾಯಾಲಯಗಳ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಈ ಕಡತಗಳಲ್ಲಿರುವ ಮಾಹಿತಿಗಳು ಅಚ್ಚರಿ ಮೂಡಿಸುವುದಿಲ್ಲ. ಬದಲಾಗಿ ನಾವು ಆಧುನಿಕ ನಾಗರಿಕತೆಯ ವಾರಸುದಾರರು ಎಂದು ಬೆನ್ನುತಟ್ಟಿಕೊಳ್ಳುವ ಮುನ್ನ ಯೋಚಿಸುವಂತೆ ಮಾಡುತ್ತದೆ. ಪಿತೃಪ್ರಧಾನ ವ್ಯವಸ್ಥೆ ತನ್ನ ಬಾಹ್ಯನೋಟದ ಪೋಷಾಕುಗಳಲ್ಲಿ ಕಾಣುವುದಕ್ಕಿಂತಲೂ ಕ್ರೂರವಾಗಿದೆ, ನೈತಿಕವಾಗಿ ಅಧೋಗತಿಗಿಳಿದಿದೆ, ಕೊಳಕಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ.
ಭಾರತದಲ್ಲಿ ಈ ಎಪ್ಸ್ಟೀನ್ ಫೈಲ್ಸ್ ಸುತ್ತ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ಗಮನಿಸಿದಾಗ, ಕುತೂಹಲಕಾರಿಯಾಗಿ ಕಾಣುವುದು ರಾಜಕೀಯ ಮೌನ. ಈ ದೌರ್ಜನ್ಯದ ಮಾಹಿತಿಗಳ ಅಂತಾರಾಷ್ಟ್ರೀಯ ಸ್ವರೂಪ ಭಾರತದ ಘನತೆ, ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂಬ ಕನಿಷ್ಠ ಭಾವನೆಯೂ ರಾಜಕೀಯ ವಲಯವನ್ನು ಕಾಡಿದಂತಿಲ್ಲ. ಬಹುಶಃ ಇಂತಹ ಕಡತಗಳು ನಮ್ಮೊಳಗೇ ಹಿಮಾಲಯದಷ್ಟಿವೆ ಎಂಬ ದಾರ್ಷ್ಟ್ಯವೂ ಇರಬಹುದು. ಮಾಧ್ಯಮಗಳಲ್ಲೂ ಸಹ ಈ ಸುದ್ದಿಯನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಕೇಂದ್ರೀಕರಿಸಿ ಚರ್ಚೆ ಮಾಡಲಾಗುತ್ತಿದೆಯೇ ಹೊರತು, ವಿಶಾಲ ಸಮಾಜದ, ಪುರುಷಾಧಿಪತ್ಯದ ನೈತಿಕತೆಯ ನೆಲೆಯಲ್ಲಿ ಅಲ್ಲ. ಇಡೀ ಸಮಾಜ ಪಿತೃಪ್ರಧಾನ ಮೌಲ್ಯಗಳಿಂದ ಆವೃತವಾದಾಗ ಹೀಗಾಗುವುದು ಸಹಜ.

ಮಾರ್ಚ್ 8ರ ಆಚರಣೆಯನ್ನು ಆತ್ಮಾವಲೋಕನ ಮತ್ತು ಸಾಮಾಜಿಕ-ಸಾಂಸ್ಕೃತಿಕ ಅವಲೋಕನದ ನೆಲೆಯಲ್ಲಿ ಸಂಭ್ರಮಿಸುವ ಮುನ್ನವೇ, ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಆರಂಭವಾಗಿರುವ ಯುದ್ಧ ಮತ್ತೊಮ್ಮೆ ಪುರುಷಾಧಿಪತ್ಯದ ಜಾಗತಿಕ ಸ್ವರೂಪವನ್ನು ತೆರೆದಿಟ್ಟಿದೆ. ಈ ಮೈತ್ರಿಕೂಟದ ಕ್ಷಿಪಣಿ ದಾಳಿಗೆ ಮೊದಲು ಬಲಿಯಾದವರು ಇರಾನ್‌ನ ಪ್ರಾಥಮಿಕ ಶಾಲೆಯ 165 ಹೆಣ್ಣು ಮಕ್ಕಳು. ಈ ನತದೃಷ್ಟ ಹೆಣ್ಣುಮಕ್ಕಳಿಗಾಗಿ ಇರಾನ್‌ನ ಲಕ್ಷಾಂತರ ಜನರು ಕಣ್ಣೀರು ಮಿಡಿದಿರುವುದು ಸಹಜ. ಆದರೆ ಈ ಕ್ರೂರ ದಾಳಿಯ ವಿರುದ್ಧ ಅಂತಾರಾಷ್ಟ್ರೀಯ ಖಂಡನೆ ಕಾಣಲಿಲ್ಲ. ವಿಶ್ವಸಮುದಾಯದ ಕ್ಷೀಣ ಧ್ವನಿಯ ಪ್ರತಿಕ್ರಿಯೆ, ಭಾರತದಲ್ಲೂ ಸಹ ವಿಶಾಲ ಸಮಾಜದ ನಿರ್ಲಿಪ್ತ ಮೌನ ಈ ಎಳೆ ಜೀವಗಳನ್ನು, ಯುದ್ಧಕಾಲದಲ್ಲಿ ಬಲಿಯಾಗುವ ಅನಾಥ ಜೀವಗಳಿಗೆ ಸಮೀಕರಿಸಿದಂತಾಗಿದೆ. ಒಂದು ವೇಳೆ ಇಂತಹುದೇ ಭೀಕರ ದಾಳಿ ಧಾರ್ಮಿಕ ಸಮಾವೇಶದ ಮೇಲೆ ನಡೆದಿದ್ದಲ್ಲಿ, ಇಡೀ ವಿಶ್ವದಲ್ಲಿ ಅಲ್ಲೋಲಕಲ್ಲೋಲವಾಗುತ್ತಿತ್ತು. ಕೋಟ್ಯಂತರ ಜನರ ʼ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿತ್ತು ʼ. ಖಂಡನೆಗಳ ಮಹಾಪೂರವೇ ಹರಿದುಬರುತ್ತಿತ್ತು. ಆದರೆ ಇಲ್ಲಿ ಬಲಿಯಾಗಿರುವುದು ಹೆಣ್ಣು ಸಂಕುಲ, ಅಷ್ಟೇ ವ್ಯತ್ಯಾಸ.
ಯುದ್ಧಕಾಲದ ಸಂಕಟಗಳ ನಡುವೆ
ಯಾವುದೇ ದೇಶಗಳ ನಡುವೆ ಯುದ್ಧ ಸಂಭವಿಸಿದಾಗ ಅಥವಾ ಸಶಸ್ತ್ರ ಆಂತರಿಕ ಸಂಘರ್ಷಗಳು ನಡೆದಾಗ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವುಗಳನ್ನು ಅನುಭವಿಸುವುದು ಚಾರಿತ್ರಿಕ ಸತ್ಯ. ಕೋಮು ಗಲಭೆ, ಮತೀಯ ದಾಳಿ ಮುಂತಾದ ಆಂತರಿಕ ಕ್ಷೋಭೆಗಳಲ್ಲೂ ಸಹ ಮಹಿಳೆಯರು ಗುರಿಯಾಗುತ್ತಾರೆ. ಈ ಸಂಘರ್ಷಗಳಿಗೆ ಕಾರಣಕರ್ತರೂ ಅಲ್ಲದ, ಭಾಗಿದಾರರೂ ಅಲ್ಲ, ಅಂತಿಮ ಫಲಿತಾಂಶದ ಫಲಾನುಭವಿಗಳೂ ಅಲ್ಲದ ಒಂದು ಜನ ಸಮೂಹ, ಕೇವಲ ಹೆಣ್ಣು ಎಂಬ ಕಾರಣಕ್ಕೆ ಅತಿ ಹೆಚ್ಚಿನ ಸಾವು ನೋವು ಅನುಭವಿಸುವುದು ನಾಗರಿಕ ಜಗತ್ತಿನ ವ್ಯಂಗ್ಯ. ಮಹಿಳೆಯರ ಮೇಲಿನ ಈ ದಾಳಿಗಳನ್ನು ತಡೆಗಟ್ಟುವ ಸಲುವಾಗಿ 2000ನೆಯ ವರ್ಷದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದು, ಇದನ್ನು ನಿರ್ಣಯ 1325 ಎಂದು ಗುರುತಿಸಲಾಗಿದೆ.

ಇದನ್ನು ಜಾರಿಗೊಳಿಸಲು ಬಹುತೇಕ ಸದಸ್ಯ ರಾಷ್ಟ್ರಗಳು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೂ ಅನುಷ್ಟಾನದ ಕೊರತೆಯಿಂದ ಈಗಲೂ ಈ ರಕ್ಷಣೆ ಒದಗಿಸಲಾಗುತ್ತಿಲ್ಲ. ಇರಾನ್‌ನ ಶಾಲೆ ಒಂದು ನಿದರ್ಶನ. ದ್ವೇಷ ಮತ್ತು ಸೇಡು ಸೃಷ್ಟಿಸುವಂತಹ ಆಕ್ರೋಶ ಮತ್ತು ಹತಾಶೆಗಳು ಸಂಘರ್ಷ-ಯುದ್ಧಕಾಲದಲ್ಲಿ ಪುರುಷಾಧಿಪತ್ಯವನ್ನು ಸ್ಥಾಪಿಸುವ ಸಾಧನಗಳಾಗಿಬಿಡುತ್ತವೆ. ಹಾಗಾಗಿಯೇ ಕೋಮುಗಲಭೆಗಳಲ್ಲೂ ಹೆಣ್ಣು ಅತ್ಯಾಚಾರಕ್ಕೊಳಗಾಗುತ್ತಾಳೆ, ನಿರ್ಗತಿಕಳಾಗುತ್ತಾಳೆ, ಅನಾಥಳಾಗುತ್ತಾಳೆ, ದನಿಯಿಲ್ಲದವಳಾಗಿಬಿಡುತ್ತಾಳೆ. ಭಾರತದಲ್ಲೇ ಇಂತಹ ನಿದರ್ಶನಗಳು ಹೇರಳವಾಗಿವೆ. ಸಾಮಾನ್ಯವಾಗಿಯೇ ಅಸಮಾನತೆ ಮತ್ತು ತಾರತಮ್ಯಗಳಿಗೆ ಗುರಿಯಾಗುವ ಮಹಿಳಾ ಸಂಕುಲ, ಯುದ್ಧಗಳ ಸಮಯದಲ್ಲಿ ಅಸ್ಥಿರ ಭವಿಷ್ಯವನ್ನೂ ಎದುರಿಸಬೇಕಾಗುತ್ತದೆ. ಕದನದ ಎರಡೂ ಬದಿಗಳಲ್ಲಿ ಹೆಣಗಳನ್ನು ಎಣಿಸುವ ಆಳ್ವಿಕೆಗಳಿಗೆ ನಿರ್ಗತಿಕರಾಗುವ ಹೆಣ್ಣು ಮಕ್ಕಳು ಗಣನೆಗೇ ಬರುವುದಿಲ್ಲ. ಅದರ ದತ್ತಾಂಶಗಳನ್ನೂ ಸಹ ಕಾಣಲಾಗುವುದಿಲ್ಲ.
ವಿಶ್ವಸಂಸ್ಥೆಯ 2025ರ ಮಹಿಳೆ, ಶಾಂತಿ ಮತ್ತು ಭದ್ರತಾ ವರದಿಯ ಅನುಸಾರ 1946ರ ನಂತರದಲ್ಲಿ ಅತಿ ಹೆಚ್ಚು ಸಂಘರ್ಷಗಳು ದಾಖಲಾಗಿವೆ. ಈ ಕಲಹಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅತಿ ಹೆಚ್ಚು ಸಾವು ನೋವು ಅನುಭವಿಸಿದ್ದಾರೆ. ಈ ವರದಿಯ ಅನುಸಾರ 67.6 ಕೋಟಿ ಮಹಿಳೆಯರು ಭೀಕರ ಸಂಘರ್ಷಗಳು ನಡೆಯುವ ಪ್ರದೇಶಗಳ 50 ಕಿಲೋಮೀಟರ್ ವ್ಯಾಪ್ತಿಯೊಳಗೆ ವಾಸಿಸುತ್ತಿದ್ದಾರೆ. ಇದು 1990ರ ನಂತರದಲ್ಲಿ ಅತಿ ಹೆಚ್ಚಿನ ಪ್ರಮಾಣ ಎಂದು ದಾಖಲಾಗಿದೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಅನಾಹುತಗಳಿಗೆ ಗುರಿಯಾಗಿದ್ದಾರೆ. ಸಂಘರ್ಷ ಪ್ರೇರಿತ ಲೈಂಗಿಕ ದೌರ್ಜನ್ಯಗಳು ಶೇಕಡಾ 87ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಂತಹ ವಿಷಮ ಸನ್ನಿವೇಶದಲ್ಲೂ ಸಹ ಶಾಂತಿ ಮಾತುಕತೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ನಗಣ್ಯವಾಗಿಯೇ ಇರುವುದು ವಿಪರ್ಯಾಸ. ಮಹಿಳೆಯರ ಭಾಗವಹಿಸುವಿಕೆಯಿಂದ ಶಾಂತಿ ಪ್ರಕ್ರಿಯೆ ಸುಲಭವಾಗುವುದೇ ಅಲ್ಲದೆ ದೀರ್ಥಕಾಲದ ಶಾಂತಿ ಸೌಹಾರ್ದತೆ ಸಾಧ್ಯ ಎಂದು ಹೇಳಲಾದರೂ, 2024ರಲ್ಲಿ ನಡೆದ 10 ಶಾಂತಿಸಂಧಾನಗಳ ಪೈಕಿ ಏಳರಲ್ಲಿ ಮಹಿಳಾ ಪ್ರಾತಿನಿಧ್ಯವೇ ಇರಲಿಲ್ಲ. ಜಾಗತಿಕ ಮಟ್ಟದಲ್ಲಿ ನೋಡಿದಾಗ ಈ ಪ್ರಕ್ರಿಯೆಗಳಲ್ಲಿ ಮಾತುಕತೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಪ್ರಮಾಣ ಶೇಕಡಾ 7ರಷ್ಟಿದ್ದರೆ, ಮಧ್ಯಸ್ಥಿಕೆ ವಹಿಸುವವರ ಪ್ರಮಾಣ ಶೇಕಡಾ 14ರಷ್ಟಿದೆ. ಯಾವುದೇ ಆಂತರಿಕ ಕಲಹ, ನಾಗರಿಕ ಯುದ್ಧ ಅಥವಾ ವಿವಿಧ ದೇಶಗಳ ನಡುವೆ ಯುದ್ಧ ಸಂಭವಿಸಿದರೂ ಅಲ್ಲಿ ಮಹಿಳೆಯರೇ ಗುರಿಯಾಗುತ್ತಿರುವುದು ಮತ್ತು ಮಹಿಳೆಯರ ಘನತೆಯ ಬದುಕಿನ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಕಾಣಬಹುದು.

ನ್ಯಾಯ ಮತ್ತು ಹಕ್ಕುಗಳಿಗಾಗಿ,,,,,
ಈ ಕಾರಣದಿಂದಲೇ 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷವಾಕ್ಯವನ್ನು “ ಹಕ್ಕುಗಳು ನ್ಯಾಯ ಮತ್ತು ಚಟುವಟಿಕೆ ” ಎಂದು ರೂಪಿಸಲಾಗಿದೆ. 21ನೆಯ ಶತಮಾನದಲ್ಲೂ ಮಹಿಳಾ ಸಮುದಾಯ ತನ್ನ ಘನತೆಗಾಗಿ, ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಹಾಗೂ ಪ್ರಾತಿನಿಧ್ಯಕ್ಕಾಗಿ ಹೋರಾಟವನ್ನೇ ಆಶ್ರಯಿಸಬೇಕಿರುವುದು ದುರಂತ ಅಲ್ಲವೇ ? ಪಿತೃಪ್ರಧಾನ ಮೌಲ್ಯಗಳು ಇಲ್ಲಿ ಪ್ರಧಾನ ಶತ್ರುವಾಗಿ ಕಾಣುತ್ತವೆ. ಆಳ್ವಿಕೆಯ ಕೇಂದ್ರಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ, ನಾಗರಿಕ ಸಂಘಟನೆಗಳಲ್ಲಿ ಹಾಗೂ ರಾಜಕೀಯ ಪಕ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯನ್ನು ನೀಗುವ ಸಣ್ಣ ಪ್ರಯತ್ನವನ್ನೂ ಭಾರತದಲ್ಲಿ ಕಾಣಲಾಗುವುದಿಲ್ಲ. ಈ ಕೊರತೆಯೇ ನಾಗರಿಕ ಹೋರಾಟಗಳನ್ನೂ ಕಾಡುತ್ತಿದ್ದು, ಮಹಿಳಾ ದನಿ ಎನ್ನುವುದು ಕೇವಲ ಮಹಿಳಾ ಆಂದೋಲನಗಳಿಗೆ ಸೀಮಿತವಾಗಿ ಕಾಣುತ್ತಿದೆ.
ತತ್ಪರಿಣಾಮವಾಗಿ ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಅಸಮಾನತೆ, ಅಸಮಾನ ಅವಕಾಶಗಳು ಮತ್ತು ತಾರತಮ್ಯಗಳ ವಿರುದ್ಧ ಮಹಿಳೆಯರೇ ಹೋರಾಡಲಿ ಎಂಬ ಮನೋಭಾವ ಸಾರ್ವತ್ರಿಕವಾಗಿ ಕಾಣುತ್ತದೆ. ತಳಮಟ್ಟದ ಸಮಾಜದಲ್ಲಿ ಅಸಮಾನತೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಉದ್ಯೋಗ ಖಾತರಿ ಯೋಜನೆಗೆ ಭಾರತ ಸಾಕ್ಷಿಯಾಗಿತ್ತು. ಈ ಮನ್ರೇಗಾ (MNREGA) ಕಾಯ್ದೆಯನ್ನೇ ರದ್ದುಪಡಿಸಿರುವ ಕೇಂದ್ರ ಸರ್ಕಾರ ಹೊಸ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿ, ದುಡಿಯುವ ಮಹಿಳೆಯರ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ. ಇದು ತಳಸಮಾಜದ ಮಹಿಳಾ ಸಮೂಹದ ಘನತೆಯಿಂದ ಬದುಕುವ ಹಕ್ಕನ್ನೂ ಕಸಿದುಕೊಳ್ಳುತ್ತದೆ.

ಈ ಮೂಲಭೂತ ಸಮಸ್ಯೆ ಮತ್ತು ಸವಾಲುಗಳ ಜೊತೆಯಲ್ಲೇ ಭಾರತದ ಮಹಿಳಾ ಸಂಕುಲ ನಿರಂತರ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ತಾರತಮ್ಯಗಳನ್ನೂ ಎದುರಿಸಿ ನಿಲ್ಲಬೇಕಿದೆ. ಕರ್ನಾಟಕದಲ್ಲೇ 2025ರಲ್ಲಿ 4,096 ಪೋಕ್ಸೊ ಪ್ರಕರಣಗಳು ( ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ-ಬಾಲಕಿಯರೇ ಹೆಚ್ಚಾಗಿರುವುದು ಅಚ್ಚರಿಯೇನಲ್ಲ), 517 ಅತ್ಯಾಚಾರ ಪ್ರಕರಣಗಳು, 5,324 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು ನಾಚಿಕೆಗೇಡಿನ ಸಂಗತಿ. ಈ ದುಸ್ಥಿತಿ ಮತ್ತು ದುರವಸ್ಥೆಗೆ ಪಿತೃಪ್ರಧಾನ ಮೌಲ್ಯಗಳ ಸಾಮಾಜಿಕ ಅಂತರೀಕರಣ (Social Internalisation ) ಒಂದು ಕಾರಣವಾದರೆ, ಅತ್ಯಾಚಾರಿಗಳನ್ನು, ದೌರ್ಜನ್ಯ ಎಸಗುವವರನ್ನು ರಕ್ಷಿಸುವ, ಸಮ್ಮಾನಿಸುವ, ಸನ್ಮಾನಿಸುವ ಮತ್ತು ವೈಭವೀಕರಿಸುವ ಮನಸ್ಥಿತಿಯೂ ಮತ್ತೊಂದು ಕಾರಣವಾಗಿದೆ. ಇದು ನಮ್ಮ ನಾಗರಿಕತೆಯನ್ನೇ ಅಣಕಿಸುವಂತಿದೆ ಅಲ್ಲವೇ ?
ಈ ಜಟಿಲ ಸಿಕ್ಕುಗಳ ನಡುವೆಯೇ ಮಹಿಳೆ ತನ್ನ ಹಕ್ಕುಗಳಿಗೆ ತಾನೇ ಹೋರಾಡಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಳೆ. ಎಡಪಂಥೀಯ-ಪುರೋಗಾಮಿ ಚಳುವಳಿಗಳ ಹೊರತಾಗಿ ಮತ್ತಾವುದೇ ಪ್ರತಿರೋಧದ ದನಿ ಇಲ್ಲಿ ಕೇಳಿಬರುವುದಿಲ್ಲ. ಹಕ್ಕುಗಳು, ನ್ಯಾಯ ಮತ್ತು ಹೋರಾಟದ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿರುವ ಮಹಿಳಾ ದಿನದಂದು, ಭಾರತದ ವಿಶಾಲ ಪುರುಷ ಸಮಾಜ ಆತ್ಮಾವಲೋಕನಕ್ಕೆ ಮುಂದಾಗಬೇಕಿದೆ. ಭ್ರೂಣಾವಸ್ಥೆಯಿಂದ ವೃದ್ಧಾವಸ್ಥೆಯವರೆಗೆ ಅಭದ್ರತೆ, ಅನಿಶ್ಚಿತತೆ ಮತ್ತು ಆಕ್ರಮಣವನ್ನು ಎದುರಿಸುತ್ತಿರುವ ಹೆಣ್ಣು ಜೀವಕ್ಕೆ ತನ್ನದೇ ಆದ ಘನತೆ, ಗೌರವ, ಅಸ್ತಿತ್ವ ಮತ್ತು ಅಸ್ಮಿತೆ ಇದೆ ಎಂಬ ಸಾಮಾನ್ಯ ಪರಿಜ್ಞಾನ ಇಡೀ ಸಮಾಜದಲ್ಲಿ ಮೂಡಬೇಕಿದೆ.
ಆಗ ನಾವು ಆಚರಿಸುವ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ.
-೦-೦-೦-೦-






