ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮಹಾರಾಷ್ಟ್ರ ಮೂಲದ 8 ಮಂದಿ ದರೋಡೆಕೋರರ ತಂಡವನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ದರೋಡೆ ನಡೆಸಲು ಈ ಗ್ಯಾಂಗ್ ಹೊಂಚು ಹಾಕಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ

ಫೆಬ್ರವರಿ 25 ರಂದು ಮುಂಜಾನೆ 5:30 ರ ಸುಮಾರಿಗೆ, ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಕೆ. ಮಿಲನ್ ಹೋಟೆಲ್ ಬಳಿ ತಂಡವೊಂದು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪ ಗುಡಿ ಹಾಗೂ ಅವರ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಸುತ್ತುವರೆದು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಬಂಧಿತರೆಲ್ಲರೂ ಮಹಾರಾಷ್ಟ್ರದ ಪುಣೆ ಮತ್ತು ಥಾಣೆ ಮೂಲದವರಾಗಿದ್ದಾರೆ. ಮಹಾರಾಷ್ಟ್ರದ ಕೈಕಡಿ ಸಮುದಾಯಕ್ಕೆ ಸೇರಿದ ಈ ಗ್ಯಾಂಗ್, ಕಳೆದ 3-4 ವರ್ಷಗಳಿಂದ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು, ಪ್ರವಾಸಿ ತಾಣಗಳು ಮತ್ತು ಜಾತ್ರೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿತ್ತು. ಜನಸಂದಣಿ ಇರುವ ಪ್ರದೇಶಗಳಲ್ಲಿ ಪಿಕ್ ಪಾಕೇಟ್, ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಬಳೆ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮತ್ತು ಮುರ್ಡೇಶ್ವರದಲ್ಲಿ ಕಳ್ಳತನ ಮಾಡಿರುವ ಬಗ್ಗೆ ಯಲ್ಲಾಪುರ ಪೊಲೀಸರ ಎದುರು ಹೇಳಿದ್ದಾರೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಾರುತಿ ಎರ್ಟಿಗಾ ಕಾರು, ನಾಲ್ಕು ಕಬ್ಬಿಣದ ರಾಡ್ಗಳು, ಒಂದು ಖಾರದ ಪುಡಿ ಪ್ಯಾಕೆಟ್, ನಾಲ್ಕು ಮಂಕಿ ಕ್ಯಾಪ್ಗಳು ಹಾಗೂ ಏಳು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರಿ ಪೋಲಿಸರು ಇವರಿಂದ ಜಪ್ತಿ ಮಾಡಲಾದ ವಸ್ತುಗಳು (ಅಂದಾಜು ಮೌಲ್ಯ ₹4 ಲಕ್ಷ) ಎನ್ನಲಾಗುತ್ತಿದೆ.






