ಬೆಂಗಳೂರು : 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತಿದೆ, ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ. ಆದರೂ ಈ ಬಗ್ಗೆ ನಮ್ಮಲ್ಲಿ ಎಲ್ಲವೂ ಸರಿಯಿದೆ ಎಂಬಂತೆ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕೆಲಸಕ್ಕೆ ಮುಂದಾಗಿತ್ತು.

ಆದರೆ ಇದೀಗ ಈ ಬಗ್ಗೆ ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸತ್ಯ ಒಪ್ಪಿಕೊಂಡಿದ್ದು, ಉಚಿತ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಕುಸುಮ ಸಂಜೀವಿನಿ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನರ ಹಿತದೃಷ್ಟಿಯಿಂದ ನಾವು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿದ್ದೇವೆ. ಇದರಿಂದ ಸರ್ಕಾರಕ್ಕೆ ಹೊರೆಯಾದರೂ ಕೂಡ ಜನರ ಸಂಕಷ್ಟದ ಸಮಯದಲ್ಲಿ ಅವರು ಮಾನಸಿಕವಾಗಿ ಕುಗ್ಗದಂತೆ, ಕುಟುಂಬಗಳಲ್ಲಿ ಆರ್ಥಿಕ ಅಭದ್ರತೆ ಕಾಡದಂತೆ ನೋಡಿಕೊಳ್ಳುವ ಉದ್ದೇಶಕ್ಕಾಗಿಯೇ ಈ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಡಾ ರಾಜಕುಮಾರ ಅಪರಣ ಕೇಸ್: 24 ವರುಷಗಳ ಕಾನೂನು ಹೋರಾಟ ಅಂತ್ಯ
ಇವು ಕೇವಲ ಹಣಕಾಸು ನೆರವು ಅಲ್ಲ; ಜನರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುವ ಕ್ರಮವಾಗಿದೆ. ಭ್ರಷ್ಟಾಚಾರ ರಹಿತ ನೇಮಕಾತಿಗೆ ಸರ್ಕಾರ ಬದ್ಧವಾಗಿದೆ. ಖಾಲಿ ಹುದ್ದೆಗಳ ಭರ್ತಿ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇನ್ನೂ ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಗ್ಯಾರಂಟಿಗಳಿಗಾಗಿ ಕೊಡಲಾಗುತ್ತಿದೆ, ಅದು ಬರ್ಡನ್ ಎಂದು ಅವರು ಹೇಳಿರಬಹುದು ಅಷ್ಟೆ. ಹಾಗಂತ ನಾವು ಗ್ಯಾರಂಟಿಗಳಿಗೆ ಅನುದಾನ ನಿಲ್ಲಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ 1.20 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಡಲಾಗಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಖುದ್ದು ಸರ್ಕಾರವೇ ಒಪ್ಪಿಕೊಂಡ ಬಳಿಕ ಇದೀಗ ವಿಪಕ್ಷಗಳು ರಾಜ್ಯ ಸರ್ಕಾರ ಖಜಾನೆ ಖಾಲಿಯಾಗಿದೆ ಪ್ರತಿಭಟನೆಗಳು ಹಾಗೂ ಗಲಭೆಗಳಿಂದ ರಾಜ್ಯದಲ್ಲಿ 6ನೇ ಗ್ಯಾರಂಟಿಯಾಗಿ ಅರಾಜಕತೆಯನ್ನು ನೀಡಲಾಗಿದೆ ಎಂದು ಟೀಕಿಸಿವೆ.






