ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ 1,600ಕ್ಕೂ ಅಧಿಕ ಹುದ್ದೆಗಳನ್ನು ತುಂಬುವ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.

ಇನ್ನೂ 15 ಹೊಸ ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಲು ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಪೊಲೀಸ್ ಗೃಹ ಯೋಜನೆಯಡಿ 40 ಸಾವಿರ ಮನೆ ನಿರ್ಮಿಸಲಾಗಿದ್ದು, ಅದೇ ಮಾದರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ವಸತಿ ಗೃಹ ಕಲ್ಪಿಸುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಅನುದಾನ ಒದಗಿಸಲಾಗುವುದು ಎಂದು ಜಿ.ಪರಮೇಶ್ವರ ತಿಳಿಸಿದರು.

ಖಾಲಿ ಹುದ್ದೆ ಭರ್ತಿ ಸಂಬಂಧ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 15ನೇ ಹಣಕಾಸಿನ ಯೋಜನೆಯಡಿ ₹329 ಕೋಟಿ ಒದಗಿಸಲಾಗಿತ್ತು. 21 ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ₹98 ಕೋಟಿ ಖರ್ಚು ಮಾಡಲಾಗಿದೆ. ಆಧುನಿಕ ಉಪಕರಣಗಳ ಖರೀದಿ, ತರಬೇತಿ ಕೇಂದ್ರದ ಉನ್ನತಿಕರಣಕ್ಕೆ ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಉತ್ತಮ ಕೆಲಸದ ಮೂಲಕ ರಾಷ್ಟ್ರ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತ್ತವೆ. ತುರ್ತು ಸಂದರ್ಭದಲ್ಲಿ ಪ್ರಾಣ ಒತ್ತೆ ಇಟ್ಟು, ಸಾರ್ವಜನಿಕರ ಆಸ್ತಿ ಮತ್ತು ನಾಗರಿಕರ ಪ್ರಾಣ ರಕ್ಷಣೆ ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರ ರಕ್ಷಣೆ ಮಾಡಿರುವುದನ್ನು ಮರೆಯುವಂತಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ.






