ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ (SSK) ಹಾಗೂ ಡಬ್ಲ್ಯೂ.ಡಬ್ಲ್ಯೂ.ಎಫ್ (WWF) ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಿಷನ್ ಪ್ರಕೃತಿ’ ತರಗತಿಯಿಂದ ಸಂರಕ್ಷಣೆಯತ್ತ’ (Mission Prakriti: From Classrooms to Conservation – Leading The Change) ಕಾರ್ಯಕ್ರಮದಲ್ಲಿ ರಾಜ್ಯದ ಹತ್ತು ಅತ್ಯುತ್ತಮ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಬೆಂಗಳೂರಿನಲ್ಲಿ ವಿಕಾಸ ಸೌಧದಲ್ಲಿ ನಡೆದ ಈ ಸಮಾರಂಭದಲ್ಲಿ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್, ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಸಿಇಒ ಕರಣ್ ಭಲ್ಲಾ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು. ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ ಎಂದರು.
ಮುಂದಿನ ವರ್ಷದಿಂದ 1 ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ (Moral Science) ಪಠ್ಯಪುಸ್ತಕವನ್ನು ಪರಿಚಯಿಸಲಾಗುವುದು. ಇದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದರು.

ಈ ವೇಳೆ ಸರ್ಕಾರಿ ಶಾಲಾ ಶಿಕ್ಷಕರ ಮೆರಿಟ್ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಬಿಸಿಯೂಟ, ರಾಗಿಮಾಲ್ಟ್, ಹಾಲು, ಮೊಟ್ಟೆ/ಬಾಳೆಹಣ್ಣು, ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ಕೆಳಗಿನ ಶಾಲೆಗಳನ್ನು ಗೌರವಿಸಲಾಗಿದೆ.
* ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ.
* ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ.
* ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ.
* ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ.
* ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ.
* ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ.
* ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ.
* ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ.
* ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ.
* ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ.






