ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಮಾನನಷ್ಟ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ರೋಹಿಣಿ ಸಿಂಧೂರಿ ವಿರುದ್ಧ ಡಿ. ರೂಪಾ ಮೌದ್ಗಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ರೋಹಿಣಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದಲ್ಲಿ (Magistrate Court) ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

ಪ್ರಕರಣದ ಹಿನ್ನೆಲೆ ಏನು..?
ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಬೆಂಗಳೂರಿನ 7ನೇ ಎಸಿಎಂಎಂ (ACMM) ಕೋರ್ಟ್‌ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ದೂರು ರದ್ದುಪಡಿಸುವಂತೆ ಕೋರಿ ರೋಹಿಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ರೋಹಿಣಿ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ರೂಪಾ ದೂರಿನಲ್ಲಿ ಏನಿದೆ?
2023ರ ಫೆಬ್ರವರಿ 19 ರಂದು ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಲಾಗಿತ್ತು. ರೋಹಿಣಿ ಅವರ ಪೋಸ್ಟ್ ಸುಮಾರು 1.8 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಆ ಹೇಳಿಕೆಯ ನಂತರ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ರೂಪಾ ಹೇಳಿದ್ದಾರೆ. ಆರು ತಿಂಗಳು ಸಂಬಳವಿಲ್ಲದೆ ಮನೆಯಲ್ಲಿ ಇರಬೇಕಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಕುಟುಂಬಕ್ಕೂ ಮಾನಸಿಕ ಯಾತನೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಕೆಳಹಂತದ ನ್ಯಾಯಾಲಯ ರೋಹಿಣಿ ಅವರಿಗೆ ನೋಟಿಸ್ ನೀಡಿತ್ತು. ಇದೀಗ ಹೈಕೋರ್ಟ್ ಅರ್ಜಿ ವಜಾಗೊಳಿಸಿರುವುದರಿಂದ ಪ್ರಕರಣದ ವಿಚಾರಣೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆ ಇದೆ.







