ಬೆಂಗಳೂರು : ಸಿಎಂ ಕಪ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ತಂಡಗಳ ಪೈಕಿ ಇನ್‍ಸ್ಪೈರ್ ಚಾಲೆಂಜರ್ಸ್ ಕೂಡ ಇತರ ತಂಡಗಳಿಗಿಂತ ವಿಭಿನ್ನವಾಗಿ ತೊಡಗಿಸಿಕೊಂಡಿದೆ. ಪಂದ್ಯಾವಳಿ ಆರಂಭವಾದಾಗಿನಿಂದಲೂ ತಂಡದ ಆಟಗಾರರಲ್ಲಿ ಉತ್ಸಾಹ ಮಾತ್ರ ಬತ್ತಿಲ್ಲ. ಈ ತಂಡದ ಮಾಲೀಕರು ಹಾಗೂ ಉದ್ಯಮಿ ಜಿ.ಎಸ್. ಲಿಂಗರಾಜು ಕೂಡ ತಂಡಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ.

ಜಿ.ಎಸ್. ಲಿಂಗರಾಜು. ಕರ್ನಾಟಕ ಮಾಧ್ಯಮ ರಂಗದಲ್ಲಿ ಚಿರಪರಿಚಿತ ಹೆಸರು. ಪತ್ರಕರ್ತನಾಗಿ ವೃತ್ತಿ ಬದುಕು ಆರಂಭಿಸಿದ್ದ ಲಿಂಗರಾಜು ಅವರು, ಇಂದು ಯಶಸ್ವಿ ಉದ್ಯಮಿಯಾಗಿ ರೂಪುಗೊಂಡಿರುವುದರ ಹಿಂದೆ ಕಠಿಣ ಪರಿಶ್ರಮವಿದೆ. ಸೋಲು – ಗೆಲುವಿನ ನಡುವೆ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತು, ಏರಿಳಿತಗಳನ್ನು ಅನುಭವಿಸಿರುವ ಲಿಂಗರಾಜು ಅವರು ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ.
ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಜನಿಸಿರುವ ಲಿಂಗರಾಜು ಅವರು, ಪತ್ರಕರ್ತ, ಉದ್ಯಮಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಕುವೆಂಪು ವಿವಿಯಲ್ಲಿ ಪದವಿ ಶಿಕ್ಷಣ ಪಡೆದು, ಮೈಸೂರು ವಿವಿಯಲ್ಲಿ ಮಾನವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿವಿಯಲ್ಲಿ ಮಾಸ್ ಕಮ್ಯೂನಿಕೇಷನ್‍ನನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದನ್ನೂ ಓದಿ : CM CUP ಬ್ಯಾಡ್ಮಿಂಟನ್ ಟೂರ್ನಿ : KGF ಸ್ಮಾಷರ್ಶ್ ತಂಡದ ಸಾರಥಿ ಟೆಕ್ಕಿ ನವೀನ್ ಯಶೋಗಾಥೆ..!
2006ರಿಂದ 2008ರವರೆಗೆ ಪ್ರತಿಷ್ಠಿತ ಟಿವಿ 9 ಚಾನೆಲ್‍ನಲ್ಲಿ ವೃತ್ತಿಬದುಕು ಆರಂಭಿಸಿದ್ದರು. ಬಳಿಕ ಸುವರ್ಣ ನ್ಯೂಸ್ ಹಾಗೂ ಸಮಯ ನ್ಯೂಸ್‍ನಲ್ಲಿ ಕ್ರೈಮ್ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. ಎಲ್ಲರ ಬದುಕಿನಲ್ಲೂ ಒಂದು ಟರ್ನಿಂಗ್ ಪಾಯಿಂಟ್ ಅಂತ ಇರುತ್ತೆ. ಬಹುಶಃ ಆ ಒಂದು ಘಟನೆ ಲಿಂಗರಾಜು ಅವರ ಬದುಕಿಗೆ ಹೊಸ ತಿರುವು ನೀಡಿತ್ತು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.
ತನ್ನದೇ ಸ್ವಂತ ಉದ್ಯಮವನ್ನು ಸ್ಥಾಪಿಸಬೇಕು ಎಂಬ ಕನಸಿನೊಂದಿಗೆ 2012ರಲ್ಲಿ ಮನೊಮ್ಯಿಯ ಕ್ರಿಯೇಷನ್ ಎಂಬ ಮೀಡಿಯಾ ಸಂಸ್ಥೆಯನ್ನು ಶುರು ಮಾಡಿದ್ರು. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟ, ಸೋಲು, ನಿರಾಸೆ ಅನುಭವಿಸಿದ್ರೂ ಲಿಂಗರಾಜು ಎಂದಿಗೂ ಎದೆಗುಂದಲಿಲ್ಲ. ತನ್ನಲ್ಲಿರುವ ಪ್ರತಿಭೆ, ಆತ್ಮವಿಶ್ವಾಸ, ಸ್ನೇಹಮಯ ವ್ಯಕ್ತಿತ್ವದಿಂದ ಮಹತ್ವಕಾಂಕ್ಷೆಯ ಹಾದಿಯತ್ತ ಮುನ್ನುಗಿದ್ದರು.
ಆಗ ಎದುರಿಸಿದ್ದ ಸವಾಲುಗಳು ಅಷ್ಟಿಷ್ಟಲ್ಲ. ತನ್ನ ಬುದ್ಧಿವಂತಿಕೆ ಮತ್ತು ಜಾಣ್ಮೆಯಿಂದಲೇ ಎಲ್ಲವನ್ನೂ ಸರಿದೂಗಿಸಿಕೊಂಡು ಕನಸಿನ ಬೆನ್ನೇರಿ ಹೊರಟರು. ಅಲ್ಲದೆ ಇನ್‍ಸ್ಪೈರ್ ಮೀಡಿಯಾ ಎಂಬ ಮತ್ತೊಂದು ಸಂಸ್ಥೆಯನ್ನು ಆರಂಭಿಸಿ ತನ್ನ ಉದ್ಯಮವನ್ನು ವಿಸ್ತರಿಸಿದ್ರು. ಕಾರ್ಪೋರೇಟ್ ಮತ್ತು ಸರ್ಕಾರಿ ಇಲಾಖೆಗಳ ಜಾಹೀರಾತು, ಬ್ರ್ಯಾಂಡಿಂಗ್, ಈವೇಂಟ್ ಮ್ಯಾನೇಜ್‍ಮೆಂಟ್, ಸಾಕ್ಷ್ಯ ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಛಾಪು ಮೂಡಿಸಿದ್ದರು. ಜೊತೆಗೆ ಹೊಟೇಲ್ ಉದ್ಯಮದತ್ತ ಆಕರ್ಷಣೆಗೊಂಡ ಲಿಂಗರಾಜು ಅವರು ಈಗ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಮಸಾಲ ರೆಸ್ಟೋರೆಂಟ್ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅಂದ ಹಾಗೇ ಲಿಂಗರಾಜು ಅವರು ಇಂದಿಗೂ ತನ್ನ ಕಷ್ಟದ ದಿನಗಳನ್ನು ಮರೆತಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದ್ರೂ ಎಲ್ಲರ ಜೊತೆ ನಗುಮುಖದೊಂದಿಗೆ ಮಾತನಾಡುತ್ತಾರೆ. ನಿಸ್ವಾರ್ಥಿಯಾಗಿ ಎಲ್ಲರ ಜೊತೆಗೂ ಬೆರೆಯುತ್ತಾರೆ. ಹೀಗಾಗಿಯೇ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ. ತಾನೂ ಬೆಳೆಯಬೇಕು. ಇತರರು ಬೆಳೆಯಬೇಕು ಎಂಬ ಮನೋಭಾವನೆಯನ್ನು ಲಿಂಗರಾಜು ಮೈಗೂಡಿಸಿಕೊಂಡಿದ್ದಾರೆ.

ಇನ್ನು ಉದ್ಯಮದ ಜೊತೆಗೆ ಲಿಂಗರಾಜು ಅವರು ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಜನ ಕಲ್ಯಾಣ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮೂಲಕ ಚಿತ್ರದುರ್ಗದಲ್ಲಿ ಪುರಾತನ ಬಾವಿಗಳಿಗೆ ಪುನಶ್ಚೇತನ ನೀಡಿದ್ದಲ್ಲದೆ, ಹಲವಾರು ಗ್ರಾಮೀಣ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೆಯೇ ವಿ ಫೇರ್ ಕಾಸ್ ಎಂಬ ಮತ್ತೊಂದು ಎನ್‍ಜಿಒ ಸಂಸ್ಥೆಯ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜನಸೇವಕನಾಗಿ ಜನನಾಯಕನಾಗರಬೇಕು ಎಂಬುದು ಲಿಂಗರಾಜು ಅವರ ಮುಂದಿರುವ ಗುರಿ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈಗಾಗಲೇ ಅಖಿಲ ಭಾರತ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಈಗ ಕಾರ್ಯದರ್ಶಿಯಾಗಿದ್ದಾರೆ.
ಅಲ್ಲದೆ, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದು, ಬಸವ ಜಯಂತಿ, ಜ್ಯೋತಿ ರಥಯಾತ್ರೆ, ಶರಣ ಗಣ ಮೇಳ ಸೇರಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ 2026ರ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಇನ್‍ಸ್ಪೈಯರ್ ಚಾಲೆಂಜರ್ಸ್ ತಂಡದ ಸಾರಥ್ಯ ವಹಿಸಿರುವ ಲಿಂಗರಾಜು ಅವರ ಉದ್ಯಮಕ್ಕೆ ಯಶಸ್ವಿಯಾಗಲಿ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುವುದೇ ಎಲ್ಲರ ಹಾರೈಕೆಯಾಗಿದೆ.






