ಅಫಜಲಪುರ: ಪಟ್ಟಣದಲ್ಲಿ ಫೆಬ್ರುವರಿ 23 ರಂದು ತಳವಾರ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮುಖಾಂತರ ತಹಶೀಲ್ದಾರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ ರಾಜ್ಯ ಸಮಿತಿ ತಾಲೂಕು ಅಧ್ಯಕ್ಷ ಸಂತೋಷ ತಳವಾರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೇಂದ್ರ ಸರ್ಕಾರ ತಳವಾರ ಪರಿವಾರದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದು 3 ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನೈಜ ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರ ನೀಡದೆ ಅನ್ಯಾಯವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 10 ತಿಂಗಳುಗಳಿಂದ ಕಲಬುರಗಿ ಜಿಲ್ಲೆಯ ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರ ನೀಡುತ್ತಿಲ್ಲ. ಅಫಜಲಪುರ ತಾಲೂಕಿನಲ್ಲಿ ತಹಶೀಲ್ದಾರ ಕಚೇರಿಯಿಂದ ಎಸ್.ಟಿ ಪ್ರಮಾಣ ಪತ್ರ ನೀಡುತ್ತಿಲ್ಲ. ಯಾವುದೇ ಕಾರಣವಿಲ್ಲದೇ ತಳವಾರರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರಕಾರದ ಧೋರಣೆ ಖಂಡಿಸಿ ಫೆ.23 ರಂದು ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡುವ ಮುಖಂತರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Karnataka Railway: ಬೆಂಗಳೂರು ಸೇರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ: ಸಚಿವ ವಿ.ಸೋಮಣ್ಣ ಮಾಹಿತಿ
ನಮ್ಮ ಸಮುದಾಯಕ್ಕೆ ಹಲವು ದಿನಗಳಿಂದಲೂ ಅನ್ಯಾಯ ಮಾಡುತ್ತ ಬಂದಿರುವ ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ದ ನಾವು ಧರಣಿ ಸತ್ಯಾಗ್ರಹ ಮಾಡಲಿದ್ದೆವೆ. ನಮ್ಮ ಬದುಕಿಗಾಗಿ ನಮ್ಮ ಹೋರಾಟ ಅನಿವಾರ್ಯವಿದೆ. ಎಸ್.ಟಿ ಪ್ರಮಾಣ ಪತ್ರ ನೀಡಲು ಅಫಜಲಪುರ ತಾಲೂಕು ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಯಾರಾದರೂ ತಳವಾರ ಅಲ್ಲದವರು ಎಸ್.ಟಿ ಪ್ರಮಾಣ ಪತ್ರ ತಗೆದುಕೊಳ್ಳುತ್ತಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಆದರೆ ನೈಜ ತಳವಾರರಿಗೆ ಯಾಕೆ ಆನ್ಯಾಯ ಮಾಡುತ್ತಿದ್ದಿರಿ?. ಬರುವ ಫೆ.23 ರಂದು ನಡೆಯಲಿರುವ ಹೋರಾಟದಲ್ಲಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ ನಮ್ಮ ಹಕ್ಕು ಪಡೆದುಕೊಳ್ಳುತ್ತೆವೆ. ಆದ್ದರಿಂದ ಸಮಸ್ತ ಅಫಜಲಪುರ ತಳವಾರ ಸಮಾಜದ ಬಂಧುಗಳು ಹೋರಾಟದಲ್ಲಿ ಭಾಗಿಯಾಗಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.
ಈ ವೇಳೆ ಸಮುದಾಯದ ಮುಖಂಡರಾದ ಸಂತೋಷ ಘೂಳನೂರ, ರವೀಂದ್ರ ಜಮಾದಾರ, ಶರಣು ದಿವಾಣಜಿ, ಮಹಾಂತಗೌಡ ಗೌಡ, ಪುಂಡಲೀಕ ಆನೂರ, ಶರಣು ನಾಯ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






