ಹಣಕಾಸು-ಆಡಳಿತ ಭ್ರಷ್ಟಾಚಾರ ವ್ಯವಸ್ಥೆಯ ಗರ್ಭದಲ್ಲೇ ಅಂಕುರಿಸುವ ವಿದ್ಯಮಾನ
ನಾ ದಿವಾಕರ
(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಫೆಬ್ರವರಿ 2026)

ಸ್ವತಂತ್ರ ಭಾರತದ ಆಳ್ವಿಕೆಯಲ್ಲಿ ಪಕ್ಷಾತೀತವಾಗಿ ನೋಡಿದರೂ ಸಹ ಎದ್ದು ಕಾಣುವ ವಾಸ್ತವ ಎಂದರೆ ರಾಜಕೀಯ ಅಂಗಳದಲ್ಲಿ ಹಾಗೂ ಆಡಳಿತದ ಕಟಕಟೆಯಲ್ಲಿ ಹಣಕಾಸು ಭ್ರಷ್ಟಾಚಾರ, ವ್ಯವಸ್ಥೆಯ ಒಂದು ಅಂಶಿಕ ಭಾಗವಾಗಿ, ಸಾರ್ವಜನಿಕರ ಆಕ್ರೋಶದ ನಡುವೆಯೂ, ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಪ್ರಮಾಣಾನುಗುಣವಾಗಿ ನೋಡುವ ಮೂಲಕ “ ಅವರಿಗಿಂತ ಇವರು ಮೇಲು ಅಥವಾ ಹೀನ ” ಎಂಬ ಅಭಿಪ್ರಾಯ ಇಂದಿಗೂ ಕಾಣುವ ಧ್ವನಿಯಾದರೂ ಸಾರ್ವತ್ರಿಕವಾಗಿ ಅನ್ವಯಿಸುವ “ ಎಲ್ಲರ ಬಣ್ಣ ಒಂದೇ ” ಎಂಬ ಖಚಿತ ಆರೋಪಗಳೂ ಸಹ ಸದಾ ಧ್ವನಿಸುತ್ತಿರುತ್ತವೆ. ಹಾಗಾಗಿಯೇ ಕಳೆದ 78 ವರ್ಷಗಳಲ್ಲಿ ದೇಶವ್ಯಾಪಿಯಾಗಿ ಭ್ರಷ್ಟಾಚಾರ ವಿರೋಧಿ ಆಂದೋಲನ ದಾಖಲಾಗಿರುವುದು ಎರಡೇ ಸಲ. 1970ರ ತುರ್ತುಪರಿಸ್ಥಿತಿ ಮತ್ತು 2012ರ ಅಣ್ಣಾ ಹಜಾರೆ ನೇತೃತ್ವದ So called ಎರಡನೆ ಸ್ವಾತಂತ್ರ್ಯ ಸಂಗ್ರಾಮ.
ತಳಸಮಾಜದಲ್ಲಿ ನೆಲದ ಮೇಲೆ ನಿಂತು ಈ ಎರಡೂ ಪ್ರಸಂಗಗಳನ್ನು ಗಮನಿಸಿದಾಗ, ಎರಡು ಸಮಾನ ಎಳೆಗಳನ್ನು ಗುರುತಿಸಬಹುದು. ಮೊದಲನೆಯದು, ಎರಡೂ ಆಂದೋಲನಗಳ ಫಲಾನುಭವಿಗಳು ಆಡಳಿತಾರೂಢ ಪಕ್ಷದ ವಿರೋಧಿಗಳು ಅಥವಾ ಪಕ್ಷಗಳು. ಎರಡನೆಯದು ಈ ಫಲಾನುಭವಿಗಳು ಅಧಿಕಾರಕ್ಕೆ ಬಂದ ಮೇಲೆ, ಭ್ರಷ್ಟಾಚಾರ ನಿರ್ಮೂಲನೆ ಅಥವಾ ನಿಯಂತ್ರಣ ಹಿಂಬದಿಗೆ ಸರಿದು, ಭ್ರಷ್ಟಾತಿಭ್ರಷ್ಟ ರಾಜಕೀಯ ನಾಯಕರಿಗೆ ಜನ್ಮ ನೀಡಿದ್ದು. ಮೊದಲ 25 ವರ್ಷ ಆನಂತರದ 50 ವರ್ಷಗಳ ನಡುವೆ ಭ್ರಷ್ಟಾಚಾರದಲ್ಲಿ ವ್ಯತ್ಯಾಸವೇನಾದರೂ ಕಾಣುವುದಾದರೆ ಅದು ಪ್ರಮಾಣದಲ್ಲಿ ಮಾತ್ರ. ಇದಕ್ಕೆ ಮೂಲ ಕಾರಣ ಭಾರತ 1980ರಿಂದಲೇ ತನ್ನ ಅರೆ ಸಮಾಜವಾದಿ ಆರ್ಥಿಕತೆಯನ್ನು ಕಡೆಗಣಿಸಿ, ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನು ಅಪ್ಪಿಕೊಂಡಿದ್ದು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟರನ್ನು ಶುದ್ಧೀಕರಿಸುವ ವಿಧಾನವನ್ನು ಪಕ್ಷಾಂತರ ರಾಜಕಾರಣದಲ್ಲಿ ಕಂಡುಕೊಂಡಿರುವುದು ಡಿಜಿಟಲ್ ಯುಗದ ವಿಸ್ಮಯ.

ಭ್ರಷ್ಟಾಚಾರದ ಮೂಲ ನೆಲೆ
ಈ ಹಿನ್ನೆಲೆಯಲ್ಲಿ ಪ್ರಸ್ತುತ ಚರ್ಚೆಯನ್ನು ಮುಂದುವರೆಸುವುದಾದರೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎನ್ನುವುದಕ್ಕಿಂತಲೂ, ಭ್ರಷ್ಟ ವ್ಯವಸ್ಥೆ ತನ್ನ ಮೂಲ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದು, ಆಲದ ಬಿಳಲುಗಳ ಹಾಗೆ ವಿಭಿನ್ನ ಮಗ್ಗುಲುಗಳಲ್ಲಿ ವ್ಯಾಪಿಸುತ್ತಿದೆ ಎನ್ನಬಹುದು. ತುಲನಾತ್ಮಕವಾಗಿ ನೋಡಬೇಕಾದರೆ ಅಂಕಿ ಸಂಖ್ಯೆಗಳಿಗೆ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಆದರೆ ತಾತ್ವಿಕ ನೆಲೆಯಲ್ಲಿ ನೋಡುವಾಗ, ಭ್ರಷ್ಟಾಚಾರವನ್ನು ಬಂಡವಾಳಶಾಹಿ ಅಭಿವೃದ್ಧಿ ಮಾದರಿ ಮತ್ತು ಅದಕ್ಕೆ ಪೂರಕವಾದ ಆರ್ಥಿಕ ನೀತಿಗಳಲ್ಲೇ ಗುರುತಿಸಬಹುದು. ಎಲ್ಲ ರಾಜ್ಯಗಳೂ ಇದೇ ಆರ್ಥಿಕ ನೀತಿಗಳನ್ನು ಪಾಲಿಸುವುದರಿಂದ, ಭ್ರಷ್ಟಾಚಾರದ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸ ಗುರುತಿಸಬಹುದು.
ಆದಾಗ್ಯೂ 2023ರ ಸಮೀಕ್ಷೆಗಳ ಅನುಸಾರ, ಪೊಲೀಸ್ ಇಲಾಖೆ , ಭೂ ವ್ಯವಹಾರಗಳು ಹಾಗೂ ಸಾರ್ವಜನಿಕ ಸೇವಾ ವಲಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಕಾಣುವುದು ಆರು ರಾಜ್ಯಗಳಲ್ಲಿ. ರಾಜಸ್ಥಾನ 78 %, ಬಿಹಾರ 75 %, ಉತ್ತರ ಪ್ರದೇಶ 74 % , ಜಾರ್ಖಂಡ್ 74 % , ತೆಲಂಗಾಣ 67 % ಮತ್ತು ಕರ್ನಾಟಕ 63 % ಭ್ರಷ್ಟಾಚಾರವನ್ನು ದಾಖಲಿಸಿವೆ. ಕೇರಳದಲ್ಲಿ ಅತ್ಯಂತ ಕನಿಷ್ಠ ಮಟ್ಟದ ಶೇಕಡಾ 2ರಷ್ಟು ಮಾತ್ರ ದಾಖಲಾಗಿದೆ. ಈ ಶ್ರೇಣಿಯಲ್ಲಿ ಒಡಿಷಾ, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳನ್ನು ಗುರುತಿಸಬಹುದು. ಅತಿ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳು ಮತ್ತು ಮೂಲ ಸೌಕರ್ಯ ಬಂಡವಾಳ ಹೂಡಿಕೆ ಇರುವ ರಾಜ್ಯಗಳು ಮೇಲ್ಪಂಕ್ತಿಯಲ್ಲಿರುವುದನ್ನು ಗಮನಿಸಿದಾಗ, ಬಂಡವಾಳ-ಮಾರುಕಟ್ಟೆ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೂ ಭ್ರಷ್ಟಾಚಾರಕ್ಕೂ ನೇರ ಸಂಬಂಧ ಇರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
![]()
ಕರ್ನಾಟಕದ ಅಭಿವೃದ್ಧಿ ಮಾದರಿ
ಕರ್ನಾಟಕದಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗುತ್ತಿರುವುದೂ ಇದೇ ಕಾರಣಕ್ಕೆ. ಸರ್ಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಗಳು ಕಾರ್ಪೋರೇಟ್ ಮಾರುಕಟ್ಟೆಯನ್ನು ಪೋಷಿಸುವ ಹಾದಿಯಲ್ಲೇ ನಡೆಯುತ್ತಿವೆ. ಅರಣ್ಯ, ನೀರು, ಖನಿಜ, ಲೋಹ ಮೊದಲಾದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಾಗೂ ಭೂಮಿಯ ಮೇಲೆ ಸರ್ಕಾರಗಳ ಹಿಡಿತ ಸಡಿಲವಾಗಿ, ಕಾರ್ಪೋರೇಟ್ ಔದ್ಯಮಿಕ ಹಿಡಿತ ಹೆಚ್ಚಾಗುತ್ತಿರುವುದನ್ನು ಬಳ್ಳಾರಿಯಿಂದ ದೇವನಹಳ್ಳಿಯ ಚನ್ನರಾಯಪಟ್ಟಣದವರೆಗೂ ಗುರುತಿಸಬಹುದು. ಗಣಿಗಾರಿಕೆ, ಪರಿಸರ ನಾಶಕ ಸ್ಥಾವರಗಳು, ಕೃಷಿ ಭೂಮಿಯನ್ನು ಕಬಳಿಸುವ ರಿಯಲ್ ಎಸ್ಟೇಟ್ ಉದ್ಯಮ ಮತ್ತು ರಸ್ತೆ-ಸೇತುವೆ-ಹೆದ್ದಾರಿಗಳನ್ನೇ ಕೇಂದ್ರೀಕರಿಸುವ ಮೂಲ ಸೌಕರ್ಯಗಳು, ಭ್ರಷ್ಟಾಚಾರಕ್ಕೆ ಇಂಬು ಕೊಡುವ ಕ್ಷೇತ್ರಗಳಾಗಿವೆ.
ರಾಜ್ಯದಲ್ಲಿ ಕಳೆದ 25 ವರ್ಷಗಳ ಆಳ್ವಿಕೆಗಳನ್ನು ಗಮನಿಸಿದಾಗ, ವಿಧಾನಸಭೆ/ಪರಿಷತ್ತಿಗೆ ಆಯ್ಕೆಯಾಗುವ ಜನಪ್ರತಿನಿಧಿಗಳ ಆದಾಯದ ಮೂಲ, ಸಂಪತ್ತಿನ ಪ್ರಮಾಣ ಮತ್ತು ಬಂಡವಾಳದ ವ್ಯಾಪ್ತಿಯನ್ನು ಗಮನಿಸಿದರೆ, ಈ ವಲಯಗಳನ್ನು ಪ್ರತಿನಿಧಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿ ಜನತೆಯನ್ನೂ ಪ್ರತಿನಿಧಿಸುತ್ತಿರುವುದು ಗೋಚರಿಸುತ್ತದೆ. ಗಣಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಸರದಾರರು, ಮೂಲ ಸೌಕರ್ಯ ಗುತ್ತಿಗೆದಾರರು, ಉನ್ನತ ಶೈಕ್ಷಣಿಕ ಸಂಸ್ಥೆಗಳ ಒಡೆಯರು, ಅತ್ಯಾಧುನಿಕ ಆಸ್ಪತ್ರೆಗಳು, ಐಷಾರಾಮಿ ಛತ್ರಗಳು, ಸಾರ್ವಜನಿಕ ವಾಣಿಜ್ಯ ಸಂಕೀರ್ಣಗಳು ಮತ್ತು ಪೆಟ್ರೋಲ್ ಬಂಕ್ಗಳ ಮಾಲೀಕರು ಇಂದು ಶಾಸನ ಸಭೆಯಲ್ಲಿ ರಾರಾಜಿಸುತ್ತಿದ್ದಾರೆ. ಅಪವಾದಗಳು ಕೆಲವೇ ಇದ್ದರೂ, ಪಕ್ಷಾತೀತವಾಗಿ ಇದು ಮೇಲ್ನೋಟಕ್ಕೆ ಕಾಣುವ ಸತ್ಯ.
![]()
ಈ ಎಲ್ಲ ಕ್ಷೇತ್ರಗಳೂ ಬಂಡವಾಳ ಹೂಡಿಕೆಯ ಕೇಂದ್ರಗಳು. ಡಿಜಿಟಲ್ ಯುಗದ ಬಂಡವಾಳ ಎಂದರೆ ಕಾರ್ಪೋರೇಟ್/ವಿದೇಶಿ ಔದ್ಯಮಿಕ ಬಂಡವಾಳ ಮಾತ್ರ. ಈ ಪ್ರಾತಿನಿಧಿಕ ವ್ಯವಸ್ಥೆಯನ್ನು ಕರ್ನಾಟಕದ ಜನತೆ ಒಪ್ಪಿಕೊಂಡಿದೆಯೇ ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವುದಾದರೆ ಹೌದು. ಏಕೆ ? ಏಕೆಂದರೆ ಪರ್ಯಾಯ ಏನಿದೆ ? ಚುನಾವಣೆಗಳಲ್ಲಿ ಹರಿದಾಡುವ ಕೋಟ್ಯಂತರ ರೂಗಳ ಹಣ ಶೇಖರಣೆಯಾಗಿರುವುದೇ ಈ ಮೂಲಗಳಲ್ಲಿ, ಸಾಧಾರಣ ಪ್ರಜೆ ಅಥವಾ ಸಣ್ಣ ಉದ್ದಿಮೆದಾರ ಅಥವಾ ತನ್ನ ಸ್ವಂತ ದುಡಿಮೆಯನ್ನೇ ಅವಲಂಬಿಸಿದ ನಾಗರಿಕ, ಈ ಹಣದ ಹೊಳೆಯಲ್ಲಿ ಈಜಲಾಗುವುದೇ ? ಮಂಡಲ ಪಂಚಾಯತ್ನಿಂದ ವಿಧಾನಸಭೆ/ಸಂಸತ್ತಿನವರೆಗೂ, ಒಬ್ಬ ಸಾಧಾರಣ ಪ್ರಜೆ ಆಯ್ಕೆಯ ಕನಸು ಕಾಣಲು ಸಾಧ್ಯವೇ ?
ಮತದಾರರ ಆಯ್ಕೆ –ಆದ್ಯತೆ
ಭಾರತದ ಚುನಾವಣಾ ವ್ಯವಸ್ಥೆ ಕಾರ್ಪೋರೇಟೀಕರಣಕ್ಕೊಳಗಾಗಿ ನಾಲ್ಕು ದಶಕಗಳೇ ಕಳೆದಿವೆ. ಮತದಾರರ ಮುಂದಿರುವುದು Binary ಆಯ್ಕೆ. ಮೂರನೆಯ ವ್ಯಕ್ತಿ ಎಷ್ಟೇ ಪ್ರಮಾಣಿಕವಾಗಿ ಸ್ಪರ್ಧಿಸಿದರೂ, ಆತನ/ಆಕೆಯ ಆರ್ಥಿಕ ಸಾಮರ್ಥ್ಯವೇ ಅಂತಿಮವಾಗಿ ನಿರ್ಣಾಯಕವಾಗುತ್ತದೆ. ಇತ್ತೀಚಿನ ಚುನಾವಣೆಗಳಲ್ಲಿ ಮತಗಳಿಕೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಇತ್ತೀಚಿನ ಬಿಹಾರ ಚುನಾವಣೆಗಳಲ್ಲಿ ನೀತಿ ಸಂಹಿತೆ ಜಾರಿಯಾದ ನಂತರವೂ, ಮತದಾನದ ಮುನ್ನಾದಿನವೂ, ಮಹಿಳಾ ಮತದಾರರ ಖಾತೆಗಳಿಗೆ ತಲಾ ಹತ್ತು ಸಾವಿರ ರೂ ಜಮಾ ಆಗಿರುವುದು, ಈ ವಿಕೃತ ಮಾದರಿಯ ಒಂದು ನಿದರ್ಶನವಷ್ಟೇ. ಅಂದರೆ ಮತಗಳನ್ನು ಖರೀದಿಸುವ ಹಂತದಿಂದ ಭಾರತ ಈಗ ಮತದಾನ ಪ್ರಕ್ರಿಯೆಯನ್ನೇ ಖರೀದಿಸುವ ಉನ್ನತೀಕರಣ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಅಥವಾ ಪ್ರೇರೇಪಿಸುವ ಮತ್ತು ಸಂರಕ್ಷಿಸುವ ಮೂಲ ಕೇಂದ್ರ ಎಂದರೆ ಜಾತಿ ರಾಜಕಾರಣ ಮತ್ತು ಸ್ವಜಾತಿ ಮೋಹದ ಆಯ್ಕೆ ಪ್ರಕ್ರಿಯೆಗಳು. ಇದಕ್ಕೆ ಜಾತಿ ಪದ್ಧತಿಯೇ ಕಾರಣ ಎನ್ನುವುದಕ್ಕಿಂತಲೂ, ಬೇರೂರಿರುವ ಜಾತಿ ಅಸ್ಮಿತೆಗಳು ಮತ್ತು ಪ್ರತಿಯೊಂದು ಜಾತಿಯನ್ನೂ ಕಾಪಾಡುವ ಸಲುವಾಗಿ ಕಾರ್ಪೋರೇಟ್ ಬಂಡವಾಳದ ಸಹಾಯದಿಂದ ಸ್ಥಾಪಿಸಲಾಗಿರುವ ಅಧ್ಯಾತ್ಮ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು. ಈ ವಲಯಗಳಿಂದ ರಾಜಕೀಯ ಪಕ್ಷಗಳಿಗೆ ಬಂಡವಾಳದ ಹರಿವು ಗುಪ್ತಗಾಮಿನಿಯಾಗಿ ಉಳಿದಿಲ್ಲ. ಖುಲ್ಲಂಖುಲ್ಲಾ ನಡೆಯುತ್ತದೆ. ರಾಜಕೀಯ ಪಕ್ಷಗಳು ಈ ಬಗ್ಗೆ ಸೊಲ್ಲೆತ್ತುವುದಿಲ್ಲ ಏಕೆಂದರೆ ಒಬ್ಬರ ಜೇಬಿನಲ್ಲಿ ಮತ್ತೊಬ್ಬರ ಕೈ ಇರುತ್ತದೆ. ನಾನಾ-ನೀನಾ ಸ್ಪರ್ಧೆಯಲ್ಲಿ ʼ ಯಾರು ಹೆಚ್ಚು ʼ ಎನ್ನುವುದು ಅಕ್ರಮ ಸಂಪತ್ತಿನ ತಕ್ಕಡಿಯಲ್ಲಿ ನಿಷ್ಕರ್ಷೆಯಾಗುತ್ತದೆ.
ಇಲ್ಲಿ ಉದಾಸೀನತೆಯನ್ನು ಗುರುತಿಸುವುದೇ ಆದರೆ, ಅದನ್ನು ಪರ್ಯಾಯಗಳ ಬಗ್ಗೆ ಯೋಚಿಸಲೂ ಹಿಂಜರಿಯವ ರಾಜಕೀಯ ಪಕ್ಷ/ನಾಯಕರಲ್ಲಿ ಕಾಣಬಹುದು. ಪರ್ಯಾಯ ರಾಜಕಾರಣದ (Alternative Politics) ಬಗ್ಗೆ ದನಿ ಕೇಳಿಬರುತ್ತಲೇ ಇದೆ. ಆದರೆ ರಾಜಕೀಯ ಪರ್ಯಾಯದ (Political Alternative ) ಆಲೋಚನೆಯನ್ನೂ ಕಾಣಲಾಗುವುದಿಲ್ಲ. ಇವೆರಡರ ನಡುವಿನ ವ್ಯತ್ಯಾಸ ಸೂಕ್ಷ್ಮವಾದದ್ದು ಮತ್ತು ವ್ಯಾಪಕ ಚರ್ಚೆಗೆ ಒಳಗಾಗಬೇಕಿರುವುದು. (ಈ ಚರ್ಚೆಯ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ). ರಾಜಕೀಯ ಎನ್ನುವುದು ಅಧಿಕಾರ ರಾಜಕಾರಣದ ಕಲ್ಪನೆಯನ್ನು ದಾಟಿ ವಿಸ್ತರಿಸದಿರುವಾಗ, ಹೇಗಾದರೂ ಮಾಡಿ ಅಧಿಕಾರ ಕೇಂದ್ರಗಳಲ್ಲಿ ಸ್ಥಾನಭದ್ರ ಮಾಡಿಕೊಳ್ಳುವುದೇ ರಾಜಕಾರಣಿಗಳ ಪರಮ ಧ್ಯೇಯವಾಗಿಬಿಡುತ್ತದೆ. ಈಗ ನಮ್ಮ ನಡುವೆ ಇಲ್ಲದ ಹಿರಿಯ ರಾಜಕಾರಣಿಯೊಬ್ಬರ “ ನಾನು ಪಕ್ಷಾಂತರಿ ಇರಬಹುದು ತತ್ವಾಂತರಿ ಅಲ್ಲ ” ಎಂಬ ಘೋಷಣೆಯನ್ನು ಇಲ್ಲಿ ಸ್ಮರಿಸಬಹುದು.

ತತ್ವರಹಿತ ರಾಜಕಾರಣದ ಛಾಯೆ
ಅರ್ಥಾತ್ ತತ್ವ ಅಥವಾ ಸಿದ್ಧಾಂತ ಎನ್ನುವುದು ವ್ಯಕ್ತಿಗತ/ವೈಯುಕ್ತಿಕ, ಅಧಿಕಾರ ಎನ್ನುವುದು ಸಾರ್ವತ್ರಿಕ ಎನ್ನುವುದನ್ನು ರಾಜಕೀಯ ವಲಯ ಒಪ್ಪಿಕೊಂಡಿದೆ. ಮತದಾರರಲ್ಲೂ ಸಹ ಅಭ್ಯರ್ಥಿಗಳ ತಾತ್ವಿಕ ಬದ್ಧತೆ ಅಥವಾ ಸ್ಥಿರ ನಿಲುವನ್ನು ನೋಡಿ ಮತ ನೀಡುವ ವ್ಯವಧಾನ ಕಳೆದುಹೋಗಿದೆ. ಇಲ್ಲಿ ಜಾತಿ/ಉಪಜಾತಿಯೇ ಪ್ರಧಾನವಾಗುತ್ತದೆ. ಬಿಜೆಪಿಯ ಸಂದರ್ಭದಲ್ಲಿ ಹಿಂದುತ್ವ, ಹಿಂದೂ ಧರ್ಮ ನಿರ್ಣಾಯಕವಾಗುತ್ತದೆ. ಇಲ್ಲಿ ಸೃಷ್ಟಿಯಾಗುವ ರಾಜಕೀಯ ನಿರ್ವಾತವನ್ನು (Political Vacuum) ತುಂಬುವಂತಹ ಒಂದು ರಾಜಕೀಯ ಶಕ್ತಿ ಉದಯಿಸಬೇಕಿದೆ. ಈಗ ಇದನ್ನು ತುಂಬುತ್ತಿರುವವರು ಸ್ಥಾಪಿತ ಹಿತಾಸಕ್ತಿಗಳ ಅಥವಾ ಭ್ರಷ್ಟ ವ್ಯವಸ್ಥೆಯ ಮತ್ತೊಂದು ಅಂಗಳದಿಂದ ಬಂದವರೇ ಆಗಿರುತ್ತಾರೆ. ಇಂತಹ ನಾಯಕರಿಂದ ನಾಯಕತ್ವ ? ಅಪೇಕ್ಷಿಸುವುದಾದರೂ ಹೇಗೆ. ಇದು ನಾಯಕತ್ವದ ಕೊರತೆ ಎನ್ನುವುದಕ್ಕಿಂತಲೂ ಪ್ರಾಮಾಣಿಕತೆ ಮತ್ತು ಸಂವಿಧಾನ ನಿಷ್ಠೆಯ ಕೊರತೆ ಎಂದು ನಿರ್ವಚಿಸಬಹುದು.
ಈ ವಿಕೃತಿಗಳ ನಡುವೆ ನಾವು ಗುರುತಿಸಬೇಕಿರುವುದು ಕರ್ನಾಟಕ ಆಡಳಿತಾತ್ಮಕವಾಗಿ, ಮೌಲಿಕವಾಗಿ ತಲುಪಿರುವ ಶಿಥಿಲಾವಸ್ಥೆಯನ್ನು. ವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳು ಶಿಥಿಲವಾದರೆ ಅದನ್ನು ಚಿಕಿತ್ಸಕ ಮಾರ್ಗಗಳ ಮೂಲಕ ಸರಿಪಡಿಸಬಹುದು. ಆದರೆ ಈಗ ನಾವು ಕಾಣುತ್ತಿರುವುದು ಮರಣಾವಸ್ಥೆಯನ್ನು. ನೈತಿಕವಾಗಿ, ಸಾಂವಿಧಾನಿಕವಾಗಿ, ಆಡಳಿತಾತ್ಮಕವಾಗಿ ಪಾತಾಳಕ್ಕೆ ತಲುಪಿರುವುದು ಒಂದೇ ಏಟಿನಲ್ಲಿ ಅಲ್ಲ. ಇದು ಹಂತಹಂತವಾಗಿ ನಡೆದಿರುವ ಪ್ರಕ್ರಿಯೆ. ಇನ್ನೂ ಈ ಪಾತಾಳ ಕುಸಿತ ಮುಂದುವರೆದಿದೆ. ಇದನ್ನು ತಡೆಗಟ್ಟುವುದಾದರೂ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು. ಪಾತಳ ತಲುಪಿರುವವರನ್ನು ಹೊರತೆಗೆಯುವ ಪಾತಾಳ ಸೂಜಿ ನಮ್ಮ ಬಳಿ ಇಲ್ಲ. ಗಾಂಧಿ, ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್, ವಿವೇಕಾನಂದ ಯಾರನ್ನು ಬಳಸಿದರೂ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ಇವರೆಲ್ಲರೂ ನಿಮಿತ್ತ ಮಾತ್ರವಾಗಿ ಪ್ರತಿಮೆಗಳ ಸಂಕೋಲೆಗಳಿಂದ ಬಂಧಿತರಾಗಿದ್ದಾರೆ.

ಇದು ನಿರಾಸೆಯ ಮಾತುಗಳಲ್ಲ. ಸುಡು ವಾಸ್ತವಗಳ ಅನಾವರಣ. ಕನ್ನಡದ ಸಾಹಿತ್ಯ ಲೋಕದ ನಿರ್ಲಿಪ್ತ ಮೌನ, ಸಾಂಸ್ಕೃತಿಕ ವಲಯದ ಸಾಪೇಕ್ಷ ಪ್ರತಿಕ್ರಿಯೆ, ಬೌದ್ಧಿಕ ವಲಯದ ನಿಷ್ಕ್ರಿಯತೆ ಅಥವಾ ವ್ಯವಸ್ಥೆಯೊಡನೆ ಈಜುವ ಹಂಬಲ, ಇವೆಲ್ಲವೂ ನಮ್ಮ ಆತಂಕಗಳನ್ನು ಹೆಚ್ಚು ಮಾಡುತ್ತವೆ. ಹಾಗಾದರೆ ಉಜ್ವಲ ಭವಿಷ್ಯಕ್ಕೆ ಹಾದಿಯೇ ಇಲ್ಲವೇ ? ಖಂಡಿತವಾಗಿಯೂ ಇದೆ. ಅಂಬೇಡ್ಕರ್ ಎಚ್ಚರಿಸಿದ್ದಂತೆ ಪ್ರಜಾಪ್ರಭುತ್ವ ಭಾರತದ ನೆಲದ ಗುಣ ಅಲ್ಲ. ಆಗಲೂ ಇದು ಸತ್ಯ ಈಗಲೂ ಸತ್ಯ. ಸಂವಿಧಾನವೇ ಎಲ್ಲವನ್ನೂ ಸರಿಪಡಿಸುತ್ತದೆ ಎಂಬ ಭ್ರಮೆಯಲ್ಲಿ ಸಮಾಜವನ್ನು ಕರೆದೊಯ್ಯಲಾಗುತ್ತಿದೆ. ಆಳ್ವಿಕೆಯ ನೀತಿಗಳು ಸಂವಿಧಾನದ ಚೌಕಟ್ಟಿನೊಳಗೇ ರೂಪಿಸಲ್ಪಟ್ಟರೂ, ಎಲ್ಲವೂ ಅದರ ನಿರ್ಬಂಧಕ್ಕೆ ಒಳಪಟ್ಟಿರುವುದಿಲ್ಲ. ಆಳುವ ಪಕ್ಷಗಳ ಸೈದ್ಧಾಂತಿಕ ನಿಲುವು, ಅವಶ್ಯಕತೆ, ಅನಿವಾರ್ಯತೆ ಮತ್ತು ಚುನಾವಣಾ ರಾಜಕಾರಣದ ಹಿತಾಸಕ್ತಿಗಳು ನಿರ್ಣಾಯಕವಾಗುತ್ತವೆ.
ಪರ್ಯಾಯ ಏನು ?
ಈ ವಿಷಮ ವಾತಾವರಣದಲ್ಲಿ ಪರ್ಯಾಯ ಇರುವುದೇ ಆದರೆ ಅದು ಮತದಾರರ ಜಾಗೃತಿಯಲ್ಲಿದೆ. ಯುವ ಸಮೂಹದಲ್ಲಿ ರಾಜಕೀಯ ಪ್ರಜ್ಞೆಯನ್ನು ನಿಜಾರ್ಥದಲ್ಲಿ ಮೂಡಿಸಬೇಕಿದೆ. ಅಸ್ಮಿತೆಯಾಧಾರಿತ ರಾಜಕಾರಣದಿಂದಾಚೆಗೆ ಒಂದು ಪರ್ಯಾಯ ಇದೆ ಎನ್ನುವುದನ್ನು ಯುವ ಸಮೂಹಕ್ಕೆ ಮನದಟ್ಟು ಮಾಡಬೇಕಿದೆ. ಕೊಳೆಯುತ್ತಿರುವ ವ್ಯವಸ್ಥೆಯನ್ನು ಸರಿಪಡಿಸುವ ಚಿಕಿತ್ಸಕ ಮನಸ್ಸಿನ ಯುವಜನರನ್ನು ರೂಪಿಸಬೇಕಿದೆ. ರಾಜಕೀಯ ಎನ್ನುವುದು ದೇಶದ ಮತ್ತು ಸಮಸ್ತ ಜನರ ಭವಿಷ್ಯವನ್ನು ನಿರ್ಧರಿಸುವ ಒಂದು ಉದಾತ್ತ ವಿದ್ಯಮಾನ ಎನ್ನುವುದನ್ನು ಯುವ ಸಮೂಹಕ್ಕೆ, ವಿಶಾಲ ಸಮಾಜಕ್ಕೆ ಮನದಟ್ಟು ಮಾಡಬೇಕಿದೆ. ಇದು ತಳಮಟ್ಟದಿಂದ ಆಗಬೇಕಿರುವ ಕೆಲಸ. ಮಹಿಳಾ ಪ್ರಾತಿನಿಧ್ಯ, ಲಿಂಗತ್ವ ಸೂಕ್ಷ್ಮತೆ, ಸಮನ್ವಯ ಸಂಸ್ಕೃತಿ, ಸಮಾನತೆಯ ಆಶಯಗಳನ್ನು ನಮ್ಮ ಪ್ರಣಾಳಿಕೆಯನ್ನಾಗಿಸಿಕೊಂಡು, ಒಳನಡೆಯಬೇಕಿದೆ.

ಇದು ಪ್ರವಾಹದ ವಿರುದ್ಧ ಈಜುವಂತೆಯೇ ಕಂಡರೂ, ತ್ಸುನಾಮಿಯನ್ನೂ ಹಿಮ್ಮೆಟ್ಟಿಸುವ ಶಕ್ತಿ ನಮ್ಮೊಳಗಿದೆ ಎಂಬ ವಿಶ್ವಾಸದೊಂದಿಗೆ ಮುನ್ನಡೆಯಬೇಕಿದೆ. ಭ್ರಷ್ಟಾಚಾರ ನಾವು ದಾಟಬೇಕಾದ ಮೊದಲ ಪರ್ವತ. ತದನಂತರ ಜಾತಿವಾದ, ಮತೀಯವಾದ, ಕೋಮುವಾದ, ಮತಾಂಧತೆ, ಪಿತೃಪ್ರಧಾನತೆ, ಅಸ್ಪೃಶ್ಯತೆ ಮುಂತಾದವು. ಏಕೆಂದರೆ ಡಿಜಿಟಲ್ ಬಂಡವಾಳಶಾಹಿಯ ಕಾರ್ಪೋರೇಟ್ ಮಾರುಕಟ್ಟೆಯಲ್ಲಿ ಈ ಎಲ್ಲ ವಿದ್ಯಮಾನಗಳೂ ಸರಕುಗಳಾಗಿ, ಖರೀದಿಸಲ್ಪಡುತ್ತವೆ. ಬಂಡವಾಳ ಈ ಎಲ್ಲ ಮೌಲ್ಯಗಳನ್ನೂ ಖರೀದಿ ಶವಾಗಾರಕ್ಕೆ ಸಾಗಿಸುವ ವಿಧಾನವನ್ನು ಅರಿತಿದೆ. ಈ ಬೃಹತ್ ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಯುವ ಶಕ್ತಿಯನ್ನು ಕಟ್ಟಬೇಕಿದೆ.
ಗೋಪಾಲ ಕೃಷ್ಣ ಅಡಿಗ ಅವರ “ ಕಟ್ಟುವೆವು ನಾವು ಹೊಸ ನಾಡೊಂದನು ,,,,, ” ಮತ್ತೊಮ್ಮೆ ಧ್ವನಿಸಬೇಕಿದೆ.
-೦-೦-೦-೦-





