ಫಿನ್‌ಲ್ಯಾಂಡ್‌ನ(Finland) ಸಂಶೋಧಕರು ಡಾಟಾ ಸೆಂಟರ್‌ಗಳಿಂದ ಹೊರಬರುವ ಶಾಖವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಜೊತೆಗೆ ಈಗ ಕೇಬಲ್ ವೈರ್ ಇಲ್ಲದೆ ವಿದ್ಯುತ್ ಹರಿಸುವ ಪ್ರಯೋಗಗಳನ್ನೂ ಯಶಸ್ವಿಯಾಗಿ ನಡೆಸಿದ್ದಾರೆ. ಈ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಮುಂದಿನ ದಿನಗಳಲ್ಲಿ ಇಂಟರ್ನೆಟ್ ಬಳಸುವಂತೆ ವಿದ್ಯುತ್ ಬಳಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ವೈರ್ ಇಲ್ಲದೆ ವಿದ್ಯುತ್ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ. ಈ ಬಗ್ಗೆ ವಿಜ್ಞಾನಿಗಳು ವೈಫೈನಂತೆ ವಿದ್ಯುತ್ ಹರಿಸುವ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್ಲದೇ ವೈಫೈ ಮೂಲಕ ಡಾಟಾ ಸಾಗಿಸುವಂತೆ, ವಿದ್ಯುದ್ಕಾಂತೀಯ ಕ್ಷೇತ್ರ (Electromagnetic Field) ಮತ್ತು ರಿಸೋನೆಂಟ್ ಕಪ್ಲಿಂಗ್ ತಂತ್ರಜ್ಞಾನ ಬಳಸಿ ಗಾಳಿಯ ಮೂಲಕ ವಿದ್ಯುತ್ ಹರಿಸಬಹುದು ಎಂಬುದನ್ನು ಫಿನ್ನಿಶ್ ಸಂಶೋಧಕರು ಸಾಬೀತುಪಡಿಸಿದ್ದಾರೆ.

ಈ ವಿಧಾನದಲ್ಲಿ ಟ್ರಾನ್ಸ್‌ಮಿಟರ್ ಮತ್ತು ರಿಸೀವರ್ ನಡುವೆ ಯಾವುದೇ ಕೇಬಲ್ ಸಂಪರ್ಕ ಇರುವುದಿಲ್ಲ. ರೇಡಿಯೋ ಫ್ರೀಕ್ವೆನ್ಸಿ ಹೊಂದಾಣಿಕೆ ಮೂಲಕ ವಿದ್ಯುತ್ ಸಾಗಿಸಲಾಗುತ್ತದೆ. ಸದ್ಯ ಈ ವಿದ್ಯುತ್ ವರ್ಗಾವಣೆ ಸ್ವಲ್ಪ ದೂರಕ್ಕೆ ಮಾತ್ರ ಸಾಧ್ಯವಾಗಿದೆ.

ಅಮೆರಿಕದ ರಕ್ಷಣಾ ಸಂಶೋಧನಾ ಸಂಸ್ಥೆಯಾದ DARPA ಕೂಡ ವೈರ್‌ಲೆಸ್ ವಿದ್ಯುತ್ ತಂತ್ರಜ್ಞಾನದಲ್ಲಿ ಯಶಸ್ಸು ಕಂಡಿದೆ. ಲೇಸರ್ ತಂತ್ರಜ್ಞಾನ ಬಳಸಿ 8.6 ಕಿಲೋಮೀಟರ್ ದೂರಕ್ಕೆ 800 ವ್ಯಾಟ್ ವಿದ್ಯುತ್ ಅನ್ನು ರವಾನಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಈ ಹಿಂದೆ DARPA ಸಂಸ್ಥೆ 1.7 ಕಿಮೀ ದೂರಕ್ಕೆ 25 ಸೆಕೆಂಡುಗಳ ಕಾಲ 230 ವ್ಯಾಟ್ ವಿದ್ಯುತ್ ಹರಿಸಿತ್ತು. ವೈರ್‌ಲೆಸ್ ವಿದ್ಯುತ್ ತತ್ವವು ಹೊಸದಲ್ಲ. ಇದಕ್ಕೆ ಶತಮಾನಕ್ಕೂ ಹೆಚ್ಚು ಇತಿಹಾಸವಿದೆ. ಆದರೆ ಇತ್ತೀಚೆಗೆ ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆಸಕ್ತಿ ಹೆಚ್ಚಾಗಿದೆ. ಬಾಹ್ಯಾಕಾಶದಲ್ಲಿರುವ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ ಭೂಮಿಗೆ ಕಳುಹಿಸುವ ತಂತ್ರಜ್ಞಾನಕ್ಕೂ ಈಗಾಗಲೇ ಪ್ರಯೋಗಗಳು ನಡೆಯುತ್ತಿವೆ.












