ಬೆಂಗಳೂರು: ಕೇರಳ ಹಾಗೂ ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡುವ ಭಾಷಣದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣ ಓದಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Governor Thaawarchand Gehlot) ಅವರು ನಿರಾಕರಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ರಾಜ್ಯ ಸರ್ಕಾರ ತಯಾರಿಸಿ ನೀಡಿದ್ದ ಭಾಷಣವನ್ನು ಸಂಪೂರ್ಣವಾಗಿ ಓದಲು ರಾಜ್ಯಪಾಲರು ಹಿಂದೇಟು ಹಾಕಿದ್ದಾರೆ. ಕೇವಲ ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ಅವರು ವಿಧಾನಸೌಧದಿಂದ ಹೊರನಡೆದಿದ್ದಾರೆ. ಈ ವೇಳೆ ಬಿ.ಕೆ ಹರಿಪ್ರಸಾದ್ ರಾಜ್ಯಪಾಲರನ್ನು ಅಡ್ಡಗಟ್ಟಿದ್ದಾರೆ. ಆದರೆ ರಾಜ್ಯಪಾಲರು ಕಾಂಗ್ರೆಸ್ ನಾಯಕರ ಮನವಿಗೆ ಸ್ಪಂದಿಸದೆ ಸದನದಿಂದ ಹೊರ ನಡೆದಿದ್ದಾರೆ. ರಾಜ್ಯಪಾಲರ ಈ ನಡೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದಕ್ಕೆ ವೇದಿಕೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ರಾಜ್ಯಪಾಲ–ಸರ್ಕಾರ ನಡುವಿನ ಸಂಬಂಧ ಇನ್ನಷ್ಟು ತೀವ್ರವಾಗುವ ಲಕ್ಷಣಗಳು ಕಾಣಿಸುತ್ತಿವೆ. ಜಂಟಿ ಅಧಿವೇಶನದಲ್ಲಿ ನಡೆದ ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.











