ಬೆಂಗಳೂರು: ನಗರದ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ, ಪ್ರವಾಸಿಗರಿಗಾಗಿ ವಿಶೇಷವಾಗಿ ರೂಪುಗೊಂಡಿರುವ ಲಂಡನ್ ಮಾದರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸೇವೆ ಬೆಂಗಳೂರಿನಲ್ಲಿ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಈ ಸೇವೆಯನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು ಮೂರು ಡಬಲ್ ಡೆಕ್ಕರ್ ಬಸ್‌ಗಳಿಗೆ ಚಾಲನೆ ನೀಡಲಾಯಿತು. ಈ ಬಸ್ ಸೇವೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಪ್ರವಾಸಿಗರಿಗಾಗಿ ವಿಶೇಷವಾಗಿ ಪರಿಚಯಿಸಿದೆ.

ಈ ಬಸ್ ಸೇವೆ ಸಾಮಾನ್ಯ ಸಾರಿಗೆಗಾಗಿ ಅಲ್ಲ, ಬದಲಾಗಿ ಬೆಂಗಳೂರು ನಗರಕ್ಕೆ ಆಗಮಿಸುವ ದೇಶಿ ಹಾಗೂ ವಿದೇಶಿ ಪ್ರವಾಸಿಗರಿಗೆ ನಗರದ ಪ್ರಮುಖ ಪ್ರವಾಸಿ ತಾಣಗಳನ್ನು ಸುಲಭವಾಗಿ ವೀಕ್ಷಿಸಲು ರೂಪಿಸಲಾಗಿದೆ ಎಂಬುದು ವಿಶೇಷವಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಡಬಲ್ ಡೆಕ್ಕರ್ ಬಸ್‌ಗಳು ಭಾರೀ ಜನಪ್ರಿಯತೆ ಪಡೆದಿದ್ದವು. ಅದೇ ಯಶಸ್ಸನ್ನು ಬೆಂಗಳೂರು ನಗರದಲ್ಲೂ ಪುನರಾವರ್ತಿಸಲು ಈ ಸೇವೆಯನ್ನು ಆರಂಭಿಸಲಾಗಿದೆ.
ಇದನ್ನೂ ಓದಿ: BBK12: ಬಿಗ್ ಬಾಸ್ ಮನೆಯೊಳಗೆ ಪೈಪೋಟಿ, ಹೊರಗೆ ಒಂದೇ ಕೈ: ಇದು ಗಿಲ್ಲಿ–ಅಶ್ವಿನಿ ಪಿಆರ್ ಕಥೆ
ಬೆಂಗಳೂರು ನಗರದ ಸಾಂಸ್ಕೃತಿಕ ತಾಣಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಒಂದೇ ಪ್ರಯಾಣದಲ್ಲಿ ವೀಕ್ಷಿಸುವ ಅನುಭವವನ್ನು ಈ ಬಸ್ ಪ್ರವಾಸ ನೀಡಲಿದೆ.

ಬಸ್ ಸೇವೆ ಉದ್ಘಾಟನೆಗೂ ಮುನ್ನ ಸಚಿವ ಹೆಚ್.ಕೆ. ಪಾಟೀಲ್ ಅವರು ಡಬಲ್ ಡೆಕ್ಕರ್ ಬಸ್ ಒಳಾಂಗಣ ಹಾಗೂ ಮೇಲ್ಮಹಡಿಯ ವ್ಯವಸ್ಥೆಯನ್ನು ಸ್ವತಃ ಪರಿಶೀಲಿಸಿದರು. ಪ್ರವಾಸಿಗರಂತೆ ಮೇಲ್ಭಾಗದಲ್ಲಿ ನಿಂತು ನಗರದ ಹೊರನೋಟವನ್ನು ಕಣ್ಣಾರೆ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆಗೆ ಉತ್ತಮ ಜನಮನ್ನಣೆ ದೊರೆತಿತ್ತು. ಅದೇ ರೀತಿಯಲ್ಲಿ ಈಗ ಬೆಂಗಳೂರಿನಲ್ಲಿ ಮೂರು ಬಸ್‌ಗಳ ಸೇವೆಯನ್ನು ಆರಂಭಿಸಿದ್ದೇವೆ. ಮುಂದೆ ಪ್ರವಾಸಿಗರ ಹಬ್ ಆಗಿರುವ ಇತರೆ ನಗರಗಳಲ್ಲಿ ಬೇಡಿಕೆ ಇದ್ದರೆ ಅಲ್ಲಿಯೂ ಈ ಸೇವೆಯನ್ನು ವಿಸ್ತರಿಸುವ ಚಿಂತನೆ ಇದೆ ಎಂದು ಹೇಳಿದರು.












