ಬೆಂಗಳೂರು: ಪೋಲಿಯೋ(Polio) ಕಾಯಿಲೆಯ ವಿರುದ್ಧ ಹೋರಾಡಲು ಎಲ್ಲರೂ ತಪ್ಪದೇ 5 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ರೋಟರಿ ಬೆಂಗಳೂರು ಗೋಕುಲ್ ವಿದ್ಯಾ ಕ್ಲಬ್ನ(Bangalore Gokul Vidhya Club) ಸಂಪನ್ಮೂಲ ವ್ಯಕ್ತಿ ನರಸಿಂಹರಾಜು ಕರೆ ನೀಡಿದ್ದಾರೆ.

ನಗರದ ಮತ್ತಿಕೆರೆಯ ಜೆಪಿ ಪಾರ್ಕ್ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಲಸಿಕಾ ಹಾಕುವ ಮೂಲಕ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದಲ್ಲಿ ಪೋಲಿಯೋ ನಿರ್ಮೂಲನೆಯಾಗಿದೆ. ಆದರೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮವಾಗಿ 2 ಹನಿ ಲಸಿಕೆ ಹಾಕಿಸಿ. ಇದರ ಬಗ್ಗೆ ಎಲ್ಲರಲ್ಲಿಯೂ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ಬೆಂಗಳೂರು ರೋಟರಿ ಗೋಕುಲ್ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

ಪಲ್ಸ್ ಪೋಲಿಯೋ ಎಲ್ಲ ಮಕ್ಕಳಿಗೆ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಲಸಿಕೆಯನ್ನು ಪೊರೈಸುತ್ತಿದೆ. ಜಗತ್ತಿನಲ್ಲಿ ಪೋಲಿಯೋ ವಿರುದ್ಧ ಜಾಗೃತಿ ಮೂಡಿದೆ. ಬೆಂಗಳೂರಿನಲ್ಲಿ ರೋಟರಿ ಸಂಸ್ಥೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದು ಸೇರಿದಂತೆ ವಿವಿಧ ಸಮಾಜ ಮುಖಿ ಕಾಯಕಗಳಲ್ಲಿ ಸಂಸ್ಥೆ ಗುರುತಿಸಿಕೊಂಡಿದೆ. ಈ ಪೋಲಿಯೋ ಲಸಿಕಾ ಅಭಿಯಾನಕ್ಕೆ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ಇದೊಂದು ಉತ್ತಮವಾದ ಸೇವೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಲ್ ಹಾಗೂ ಮಿಲಿಂದ ಗೇಟ್ಸ್ ಫೌಂಡೇಶನ್ ಜೊತೆಯಾಗಿ ಅಂತಾರಾಷ್ಟ್ರೀಯ ರೋಟರಿ ಸಹಕಾರದಿಂದ ಜಗತ್ತಿನೆಲ್ಲೆಡೆ 10 ಬಿಲಿಯನ್ ಡಾಲರ್ ಹಣವನ್ನು ಪೋಲಿಯೋ ಲಸಿಕಾ ಅಭಿಯಾನಕ್ಕೆ ವ್ಯಯಿಸಲಾಗುತ್ತಿದೆ. ಬಿಬಿಎಂಪಿ ಬೆಂಬಲದಿಂದ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಈ ಮೊದಲು ವರ್ಷಕ್ಕೆ ಎರಡು ಬಾರಿ ಅಭಿಯಾನ ನಡೆಸುತ್ತಿದ್ದೆವು. ಈಗ ಪೋಲಿಯೋ ಕಾಯಿಲೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಒಂದು ಸಲ ನಡೆಸುತ್ತಿದ್ದೇವೆ. ಪಾಕಿಸ್ತಾನದಲ್ಲಿ ಪೋಲಿಯೋ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾವು ಅಭಿಯಾನ ಪ್ರಾರಂಭಿಸಿದ್ದೇವೆ ಎಂದು ಪೋಲಿಯೋ ಸಮಿತಿಯ ಅಧ್ಯಕ್ಷೆ ರಮ್ಯಾ ಮಧುಸೂದನ್ ತಿಳಿಸಿದರು.

ರೋಟರಿ ಗೋಕುಲ್ ವಿದ್ಯಾ ಸಂಸ್ಥೆಯು ಹಲವು ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿದೆ. ರೋಟರಿ ಒಂದು ಸಮುದ್ರ ಇದ್ದಂತೆ. ಸಾಕಷ್ಟು ಜನರಿಗೆ ಇದು ನಾನಾ ರೀತಿಯಲ್ಲಿ ನೆರವಾಗಿದೆ, ಬೆಂಬಲವಾಗಿ ನಿಂತಿದೆ ಇದರ ಭಾಗವಾಗಿರುವುದು ನನಗೆ ಸಂತೋಷ ತಂದಿದೆ ಎಂದು ರೋಟರಿ ಬೆಂಗಳೂರು ಗೋಕುಲ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ರಮೇಶ್ ಹರ್ಷ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಲಸಿಕಾ ಅಭಿಯಾನ ಭಾಗಿಯಾಗಿ ಸಾಮಾಜಿಕ ಕಳಕಳಿ ಮರೆದರು. ನಾಲ್ಕು ದಿನಗಳ ಕಾಲ ನಡೆಯುವ ಲಸಿಕಾ ಅಭಿಯಾನದಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜೊತೆಯಾಗಿ ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ವಿದ್ಯಾರ್ಥಿಗಳು ಸೇವೆ ಸಲ್ಲಿಸಲಿದ್ದಾರೆ.

ಈ ವೇಳೆ ಕಾರ್ಯದರ್ಶಿ ಫಣೀಂದ್ರ ಚೌಧರಿ, ಕಮ್ಯೂನಿಟಿ ಡೈರೆಕ್ಟರ್ ಮಧುಸೂದನ್, ಖಜಾಂಚಿ ಸತ್ಯನಾರಾಯಣ, ದೇವಸೇನಾ ಸುಂದರ ಮೂರ್ತಿ, ಹರಿಕೃಷ್ಣ, ಆರಾಧನಾ ದಾಸ್, ರಾಜೇಶ್, ರಾಜನ್, ಪ್ರಸಾದ್, ತೇಜಸ್ವಿನಿ, ಮಾನ್ಯಾ ಸಿಂಗ್, ಚಂದನಾ, ಚರಣ್, ಪ್ರದೀಕ್, ದೇವೆಂದ್ರ ಸೇರಿದಂತೆ ನೂರಾರು ಜನ ವಿದ್ಯಾರ್ಥಿಗಳು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು.



