ಭಾಗ 1

2047ಕ್ಕೆ ಭಾರತ ವಸಾಹತು ದಾಸ್ಯದಿಂದ ವಿಮೋಚನೆ ಪಡೆದು ನೂರು ವರ್ಷಗಳಾಗುತ್ತವೆ. ಈ ವೇಳೆಗೆ ದೇಶವನ್ನು ʼ ವಿಕಸಿತ ಭಾರತ ʼವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಬಿಜೆಪಿ ಸರ್ಕಾರ ತನ್ನ ಹೊಸ ಆರ್ಥಿಕ, ಔದ್ಯಮಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಆಡಳಿತ ನೀತಿಗಳನ್ನು ರೂಪಿಸುತ್ತಿದೆ. ಸಂಘಪರಿವಾರದ ಬೌದ್ಧಿಕ ಕೂಟ ಚರಿತ್ರೆಯ ಕುರುಹುಗಳನ್ನು ಅಳಿಸಿಹಾಕುತ್ತಿರುವಂತೆಯೇ, ಕೇಂದ್ರ ಸರ್ಕಾರ ಹಲವು ಯೋಜನೆಗಳಿಗೆ ಸಂಯೋಜಿತವಾಗಿರುವ ಚಾರಿತ್ರಿಕ ವ್ಯಕ್ತಿಗಳ ಹೆಸರುಗಳನ್ನೂ ಅಳಿಸಿಹಾಕುವ ಧಾವಂತದಲ್ಲಿದೆ. ಭಾರತ ʼ ವಿಕಸಿತ ʼ ಆಗುವ ವೇಳೆಗೆ , ಸ್ವಾತಂತ್ರ್ಯ ಪೂರ್ವ ಭಾರತದ ಕುರುಹುಗಳನ್ನು ರೂಪಾಂತರಗೊಳಿಸಿ, ಹೊಸ ವಿನ್ಯಾಸದೊಂದಿಗೆ ಯುವ ಪೀಳಿಗೆಯ ಮುಂದಿಡುವ ಈ ಮಹತ್ವಾಕಾಂಕ್ಷೆಗೆ ಇತ್ತೀಚೆಗೆ ಬಲಿಯಾಗಿರುವುದು ರಾಷ್ಟ್ರಪಿತ ಮಹಾತ್ಮ ಗಾಂಧಿ.
ಇಡೀ ವಿಶ್ವದ ಅರ್ಥಶಾಸ್ತ್ರಜ್ಞರು, ಆರ್ಥಿಕ ವಿಶ್ಲೇಷಕರು ಗೌರವಪೂರ್ವಕವಾಗಿ ಆದರಿಸುವ ಮತ್ತು 21ನೆ ಶತಮಾನದ ಅತ್ಯುತ್ತಮ ಉದ್ಯೋಗ ಯೋಜನೆ ಎಂದು ಕೊಂಡಾಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (MNREGA-ನರೇಗಾ), ಈ ಪ್ರೌಢ ಸ್ಥಾನವನ್ನು ಗಳಿಸಿರುವುದು ಗಾಂಧಿ ಹೆಸರಿರುವ ಕಾರಣಕ್ಕಲ್ಲ. ನವ ಉದಾರವಾದಿ ಮಾರುಕಟ್ಟೆ ನೀತಿಗಳ ಪ್ರಹಾರಕ್ಕೆ ತಲ್ಲಣಿಸಿರುವ ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಅಭದ್ರತೆ, ಅನಿಶ್ಚಿತತೆ ಮತ್ತು ಕೌಟುಂಬಿಕ ದುಸ್ಥಿತಿಗಳನ್ನು ಒಂದು ಹಂತದವರೆಗಾದರೂ ಸರಿಪಡಿಸುವ ಈ ಯೋಜನೆಯ ಉದಾತ್ತ ಆಲೋಚನಾ ಕ್ರಮಕ್ಕೆ. ಭಾರತ ವಾಸಿಸುವುದೇ ಗ್ರಾಮಗಳಲ್ಲಿ ಎಂದು ಪ್ರತಿಪಾದಿಸಿ, ಗ್ರಾಮೀಣ ಆರ್ಥಿಕತೆಯ ಸಬಲೀಕರಣವೇ ದೇಶದ ಸಮೃದ್ದಿಯ ಮೂಲ ಎಂಬ ಮಹಾತ್ಮ ಗಾಂಧಿಯ ಕನಸನ್ನು ಸ್ವಲ್ಪ ಮಟ್ಟಿಗಾದರೂ ನನಸು ಮಾಡುವ ಈ ಯೋಜನೆಯನ್ನು ಅವರ ಹೆಸರಿನಲ್ಲೇ ಗುರುತಿಸುವುದು, ಮಹಾತ್ಮನಿಗೆ ಸಲ್ಲುವ ಗೌರವ.
ಸಂಸ್ಥೆ, ಸ್ಥಾವರ, ಯೋಜನೆ ಮತ್ತು ನೀತಿಗಳಲ್ಲಿರುವ ಸತ್ವ ಹಾಗೂ ತಾತ್ವಿಕ ಸದುದ್ದೇಶಕ್ಕೂ, ಹೆಸರುಗಳಿಗೂ ಸಂಬಂಧ ಇರಲೇಬೇಕೆಂದಿಲ್ಲ. ಹಾಗೆ ನೋಡಿದರೆ ಮಹಾತ್ಮನಿಗೆ ಗೌರವ ಸಲ್ಲಿಸುವುದೇ ಆದರೆ ನರೇಗಾ ಯೋಜನೆಯನ್ನು ಮತ್ತಷ್ಟು ವಿಸ್ತರಿಸಬೇಕಿತ್ತು. ಅದೇ ರೀತಿಯ ಉದ್ಯೋಗ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕಿತ್ತು. ಕನಿಷ್ಠ ವೇತನದ ಮೊತ್ತ ಹೆಚ್ಚು ಮಾಡಬೇಕಿತ್ತು. ದುಡಿಮೆಗೆ ಸರಿಯಾದ ಕೂಲಿಯನ್ನು ನಿಗದಿಪಡಿಸಬೇಕಿತ್ತು. ವಾರ್ಷಿಕ ಬಜೆಟ್‌ನಲ್ಲಿ ಈ ಯೋಜನೆಗೆ ಸಮರ್ಪಕವಾದ ಅನುದಾನವನ್ನು ಒದಗಿಸಬೇಕಿತ್ತು. ಈ ಪ್ರಾಮಾಣಿಕ ಪ್ರಯತ್ನಗಳಿಲ್ಲದೆ, ನರೇಗಾ ಯೋಜನೆಯನ್ನು ವರ್ಷದಿಂದ ವರ್ಷಕ್ಕೆ ದುರ್ಬಲಗೊಳಿಸುತ್ತಲೇ ಬಂದಿರುವಾಗ, ಅಲ್ಲಿ ಮಹಾತ್ಮನ ಹೆಸರು ಹೇಗೆ ಹೊಂದಿಕೊಳ್ಳಲು ಸಾಧ್ಯ ?

ಆದರೂ ʼ ಹೆಸರಿನಲ್ಲೇನಿದೆ ʼ ಎನ್ನುವುದು ಒಂದು ಸಾಮಾನ್ಯ ತಿಳುವಳಿಕೆಯ ಪ್ರಶ್ನೆ. ಖಂಡಿತವಾಗಿಯೂ ಹೆಸರು ಎನ್ನುವುದು ಗೌರವಪೂರ್ವಕ ಚಿಹ್ನೆಯಷ್ಟೇ. ಬಿಜೆಪಿಯ 11 ವರ್ಷದ ಆಳ್ವಿಕೆಯಲ್ಲಿ ಈ ಪದವನ್ನು ಕೊಂಚ ವಿಸ್ತರಿಸಿ ʼ ಹೆಸರು ಅಳಿಸುವುದರಲ್ಲೇನಿದೆ ? ʼ ಎಂದು ಕೇಳುವಂತಾಗಿದೆ. ಏಕೆಂದರೆ ಗಾಂಧಿ ಮತ್ತು ನೆಹರೂ ಅವರ ಹೆಸರುಗಳನ್ನು ಆಳ್ವಿಕೆಯ ಲಿಖಿತ ಚರಿತ್ರೆಯಿಂದ ಅಳಿಸಿಹಾಕುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಸರ್ಕಾರ ಮಾಡುತ್ತಿದೆ. ಬಿಜೆಪಿಯ ರಾಜಕೀಯ ಇತಿಹಾಸದಲ್ಲಿ ಇಂತಹ ಉದಾತ್ತ ಯೋಜನೆಗಳನ್ನು ಗುರುತಿಸಲು ಅಗತ್ಯವಾದ ಚಾರಿತ್ರಿಕ ನಾಯಕರ ಹೆಸರುಗಳನ್ನು ಗುರುತಿಸುವುದು ಕಷ್ಟ. ಗಾಂಧಿ, ಅಂಬೇಡ್ಕರ್ ಮತ್ತು ನೆಹರೂ ಭಾರತದ ನಿರ್ಮಾಣದಲ್ಲಿ ನೀಡಿರುವಂತಹ ಕೊಡುಗೆಗೆ ಸಮನಾದ ಕಾಣಿಕೆ ನೀಡಿರುವ ಅಥವಾ ಗ್ರಾಂಥಿಕ ವಿಶ್ಲೇಷಣೆಯನ್ನು ತಮ್ಮ ಸಾಹಿತ್ಯದ ಮೂಲಕ ದಾಖಲಿಸಿರುವ ನಾಯಕರು ಬಿಜೆಪಿಯ ಪಟ್ಟಿಯಲ್ಲಿ ಕಾಣುವುದು ಕಷ್ಟ. ಹಾಗಾಗಿ ಮಹಾತ್ಮ ಗಾಂಧಿಯ ಸ್ಥಾನವನ್ನು ಅನಿವಾರ್ಯವಾಗಿ ರಾಮ ಆಕ್ರಮಿಸುತ್ತಾನೆ. ಗಾಂಧಿ, ಅಂಬೇಡ್ಕರ್, ನೆಹರೂ ಮೊದಲಾದವರನ್ನು ಪ್ರತಿಮೆ, ಸ್ಥಾವರ, ಸಂಸ್ಥೆ , ರಸ್ತೆಯ ನಾಮಫಲಕಗಳಲ್ಲಿ ಗುರುತಿಸುವುದಕ್ಕಿಂತಲೂ ಆಧುನಿಕ-ನವ ಭಾರತದ ಭೂಪಟದಲ್ಲಿ ಗುರುತಿಸಲಾಗುತ್ತದೆ.

ವಿಕಾಸಶೀಲತೆಯ ವೈರುಧ್ಯಗಳು
2047ರ ಹೊತ್ತಿಗೆ ದೇಶವನ್ನು ʼ ವಿಕಸಿತ ಭಾರತ ʼ ಮಾಡಲಾಗುತ್ತದೆ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ವಿಕಾಸವಾಗುವುದನ್ನು ಯಾರೂ ಬೇಡ ಎನ್ನುವುದಿಲ್ಲ ಆದರೆ ʼ ವಿಕಾಸ ʼ ಎನ್ನುವ ಸಾಪೇಕ್ಷ ಕಲ್ಪನೆಯನ್ನು ಛೇದಿಸಿ ನೋಡಿದಾಗ, ಭಾರತ ತನ್ನ 78 ವರ್ಷಗಳ ಆಳ್ವಿಕೆಯಲ್ಲಿ ವಿಕಸಿತ ಆಗಿಲ್ಲವೇ ಎಂಬ ಜಿಜ್ಞಾಸೆ ಉಂಟಾಗುತ್ತದೆ. ಈಗಾಗಲೇ ವಿಕಾಸವಾಗಿ ತನ್ನ ಸ್ವಾತಂತ್ರ್ಯ ಪೂರ್ವ ಸ್ಥಿತಿಗತಿಗಳನ್ನು ದಾಟಿ, ಒಂದು ಪ್ರಗತಿಶೀಲ ರಾಷ್ಟ್ರವಾಗಿ ರೂಪುಗೊಂಡಿರುವ ಭಾರತವನ್ನು ಪುನಃ ʼ ವಿಕಸಿತ ʼ ಮಾಡುವುದರ ಔಚಿತ್ಯವನ್ನು ತಾತ್ವಿಕ ನೆಲೆಯಲ್ಲಿ ಚರ್ಚಿಸಬೇಕಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ವಿಜ್ಞಾನ ತಂತ್ರಜ್ಞಾನದ ನೆಲೆಯಲ್ಲಿ ಭಾರತ ಇಂದು ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ನಿಂತಿರುವುದೇ ಈ ವಿಕಾಸಶೀಲತೆಗೆ ಸಾಕ್ಷಿಯಾಗಿದೆ.

ಈ ವಿಕಾಸಕ್ಕೆ ಕಾರಣರಾದವರನ್ನು ಶೋಧಿಸುವಾಗ ಸಹಜವಾಗಿ ನಮ್ಮ ಗಮನ ಸಂವಿಧಾನ ರಚಿಸಿದ ಅಂಬೇಡ್ಕರ್, ಆಧುನಿಕ ಭಾರತದ ನಿರ್ಮಾತೃ ನೆಹರೂ, ಶೋಷಿತರ ಬದುಕಿಗೆ ಸಾಂತ್ವನ ನೀಡುವ ಸಾಂಸ್ಥಿಕ ಸಂರಚನೆಗಳನ್ನು ನಿರ್ಮಿಸಿದ ಇಂದಿರಾಗಾಂಧಿ ಹಾಗೂ ತಾತ್ವಿಕ ನೆಲೆಯಲ್ಲಿ ಶಾಂತಿ, ಅಹಿಂಸೆ ಮತ್ತು ಸಮನ್ವಯ ಸಂಸ್ಕೃತಿಯನ್ನು ಕಲ್ಪಿಸಿದ ಮಹಾತ್ಮ ಗಾಂಧಿ, ವಿವೇಕಾನಂದ, ಠಾಗೋರ್ ಎಲ್ಲರೂ ಸಹ ಗೋಚರಿಸುತ್ತಾರೆ. ಈ ಮಹನೀಯರು ಕಟ್ಟಿದ ಸುಭದ್ರ ಬುನಾದಿಯ ಮೇಲೆ ಈಗ ನವ ಉದಾರವಾದಿ ಬಂಡವಾಳಶಾಹಿಯ ಮಾರುಕಟ್ಟೆ ತನ್ನ ಸಾಮ್ರಾಜ್ಯವನ್ನು ಕಟ್ಟಲು ಮುಂದಾಗಿದೆ. ಈ ಸುಭದ್ರ ಅಡಿಪಾಯದ ಮೇಲೆ ನಿಂತಿರುವ ನವ ಭಾರತ ಈಗ ವಿಕಸಿತ ಆಗುವತ್ತ ನಡೆದಿರುವುದು ಸ್ವಾಗತಾರ್ಹ. ಆದರೆ ಈ ವಿಕಾಸದ ಫಲಾನುಭವಿಗಳು ಯಾರು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ?
ವಿಕಾಸ-ಪ್ರಗತಿ ಮತ್ತು ಅಭಿವೃದ್ಧಿ ಈ ಮೂರು ಕಲ್ಪನೆಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬೇಕಿದೆ. 78 ವರ್ಷಗಳ ಆಳ್ವಿಕೆಯಲ್ಲಿ ಭಾರತ ಸಾಂವಿಧಾನಿಕವಾಗಿ ಆಳಲ್ಪಟ್ಟಿದೆ. ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಉಂಟಾಗದಂತೆ, 1975ರ ತುರ್ತುಪರಿಸ್ಥಿತಿಯ ಹೊರತಾಗಿಯೂ, ಪ್ರಜಾಪ್ರಭುತ್ವೀಯ ಆಡಳಿತ ನೀತಿಗಳನ್ನು ಅನುಸರಿಸುತ್ತಾ ಬಂದಿರುವ ಭಾರತ ಕಳೆದ ಒಂದು ದಶಕದಲ್ಲಿ ಭಿನ್ನ ದಾರಿಯಲ್ಲಿ ಸಾಗುತ್ತಿರುವುದನ್ನು ಈ ಸಂದರ್ಭದಲ್ಲಿ ಗಮನಿಸಲೇಬೇಕಿದೆ. ಸಮಾಜವಾದಿ ಆರ್ಥಿಕತೆ, ಬಹುತ್ವ ಸಂಸ್ಕೃತಿ, ಸೆಕ್ಯುಲರ್ ಸಮಾಜ ಹಾಗೂ ಶೋಷಿತರ ಪರ ಕಾನೂನು-ಯೋಜನೆಗಳ ಹೆದ್ದಾರಿಯಲ್ಲಿ ಸಾಗಿಬಂದಿರುವ ಸ್ವತಂತ್ರ ಭಾರತ ಈಗ ʼಆತ್ಮನಿರ್ಭರ ʼ ಎಂಬ ಹಣೆಪಟ್ಟಿಯನ್ನೂ ಪಡೆದುಕೊಂಡಿದೆ. ಆದರೆ ನೆಲದ ವಾಸ್ತವಗಳತ್ತ ಗಮನಿಸಿದಾಗ, ಈ ನಾಲ್ಕೂ ಸಾಂವಿಧಾನಿಕ ಆಶಯಗಳ ಹೊರತಾಗಿಯೂ ಭಾರತದ ವಿಕಾಸ ಅಥವಾ ಅಭಿವೃದ್ಧಿಯ ಫಲಾನುಭವಿಗಳು ಸಿರಿವಂತರು, ಕಾರ್ಪೋರೇಟ್ ಉದ್ಯಮಿಗಳೇ ಆಗಿರುವುದು ಕಾಣುತ್ತದೆ. ಶೋಷಿತ ಸಮುದಾಯಗಳ ಸಾಂವಿಧಾನಿಕ ವಿಮೋಚನೆ ಸಾಮಾಜಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಮರೀಚಿಕೆಯಾಗಿ ಕಾಣುತ್ತಿದೆ.
ಭವಿಷ್ಯದ ಫಲಾನುಭವಿಗಳು ಯಾರು ?

ಈಗ ವಿಕಸಿತ ಆಗಲಿರುವ ನವ ಭಾರತದ ಫಲಾನುಭವಿಗಳು ಯಾರಾಗಿರುತ್ತಾರೆ ? ಇಲ್ಲಿ ಪುನಃ ನಮಗೆ ಉಳ್ಳವರಲ್ಲೇ ಉಚ್ಛ ಮಟ್ಟದಲ್ಲಿರುವ ಕಾರ್ಪೋರೇಟ್ ಔದ್ಯಮಿಕ ವಾರಸುದಾರರು, ಬಂಡವಾಳಶಾಹಿಗಳು, ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಗಳು ಮತ್ತು ಶ್ರಮಶಕ್ತಿಯನ್ನು ಗರಿಷ್ಠ ಮಟ್ಟದವರೆಗೂ ಶೋಷಣೆಗೊಳಪಡಿಸಿ ತಮ್ಮ ಆರ್ಥಿಕ ಸಾಮ್ರಾಜ್ಯವನ್ನು ವಿಸ್ತರಿಸಲು ಸಜ್ಜಾಗಿರುವ ಬಂಡವಾಳಿಗರ ಒಂದು ಜಗತ್ತು ಕಾಣುತ್ತದೆ. ಇದಕ್ಕೆ ಪೂರಕವಾಧ ಆರ್ಥಿಕ ನೀತಿಗಳನ್ನು ಕಳೆದ ಹತ್ತು ವರ್ಷಗಳಲ್ಲಿ, ಸಮಾಜವಾದಿ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಈ ಸಂಭಾವ್ಯ ಫಲಾನುಭವಿಗಳಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಲೆಂದೇ ರಸ್ತೆ ಸಾರಿಗೆ, ಸಂಚಾರ, ವಿಮಾನಯಾನ, ಬಂದರು, ವಿಮೆ, ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಹಾಗೂ ಶೇಕಡಾ 60ರಷ್ಟು ಜನರು ಅವಲಂಬಿಸಿರುವ ಕೃಷಿ ವಲಯವನ್ನೂ ಕಾರ್ಪೋರೇಟೀಕರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ.
ಈ ಯಾವುದೇ ನೀತಿಗಳೂ, ಕ್ರಮಗಳೂ ಸಹ ಸಂವಿಧಾನ ಬಾಹಿರ ಎನಿಸಿಕೊಳ್ಳುವುದಿಲ್ಲ. ಏಕೆಂದರೆ ಭಾರತದ ಸಂವಿಧಾನ ಈ ಹಾದಿಯಲ್ಲಿ ಸಾಗಲು ಯಾವುದೇ ರೀತಿಯಲ್ಲಿ ಆಡಳಿತಾತ್ಮಕವಾಗಿ, ಶಾಸನಾತ್ಮಕವಾಗಿ ಅಡ್ಡಿ ಮಾಡುವುದಿಲ್ಲ. ಬಹುಮತ ಪಡೆದಿರುವ ಸರ್ಕಾರಕ್ಕೆ ಇದು ಸರ್ವ ಸ್ವತಂತ್ರ ನೀಡುತ್ತದೆ. ಹಾಗಾಗಿಯೇ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈಲು, ವಿಮಾನ, ಬಂದರು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಗೆದು ಕಟ್ಟಲಾಗುವ ಗಣಿಗಾರಿಕೆಯಂತಹ ಉದ್ಯಮಗಳನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಪರಭಾರೆ ಮಾಡುತ್ತಿದೆ. ವಿಮಾ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ವಿದೇಶಿ ಬಂಡವಾಳ ಹೂಡಿಕೆ, ಅಣುಶಕ್ತಿ ಉತ್ಪಾದನೆಯ ಖಾಸಗೀಕರಣ, ಕೃಷಿ ವಲಯದ ಕಾರ್ಪೋರೇಟೀಕರಣ ಮತ್ತು ನರೇಗಾ ಉದ್ಯೋಗ ಖಾತರಿ ಯೋಜನೆಯ ರೂಪಾಂತರ ಪ್ರಕ್ರಿಯೆಯಲ್ಲಿ ಗುರುತಿಸಬಹುದು.

ಸ್ವಾವಲಂಬಿ ಭಾರತದ ಅಡಿಪಾಯವಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಕಾರ್ಪೋರೇಟ್ ಜಗತ್ತಿಗೆ ಒಪ್ಪಿಸುವ ಆರ್ಥಿಕ ನೀತಿಗಳು ಈಗಾಗಲೇ ದೇಶದಲ್ಲಿ ಉಂಟುಮಾಡಿರುವ ನಿರುದ್ಯೋಗ, ಬಡತನ ಮತ್ತು ನಿರ್ವಸತಿಯ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುವಂತೆ ಮಾಡುವ “ ವಿಕಸಿತ ಭಾರತ – ಗ್ರಾಮೀಣ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ” (ವಿಬಿ-ಜಿ-ರಾಮ್-ಜಿ) ಯೋಜನೆಯನ್ನು ಶಾಸನಾತ್ಮಕವಾಗಿ ಜಾರಿಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ದೇಶದ ಮುಂದಿಟ್ಟಿದೆ. ಈ ಹೊಸ ಯೋಜನೆಯಲ್ಲಿ ಮಹಾತ್ಮ ಗಾಂಧಿ ಮರೆಯಾಗಿದ್ದು ಪರೋಕ್ಷವಾಗಿ ರಾಮನ ಹೆಸರನ್ನು ಸೇರಿಸಿರುವುದು ಸಾಂಸ್ಕೃತಿಕ ರಾಜಕಾರಣದ ಒಂದು ಭಾಗವಾಗಿ ನೋಡಬಹುದು. ಆದರೆ ಇದನ್ನೂ ಮೀರಿ ಗಮನಿಸಬೇಕಿರುವುದು ಉದ್ಯೋಗ ಖಾತರಿ ಯೋಜನೆಯ ಹೊಸ ರೂಪ ಮತ್ತು ಅದರಿಂದ ಉಂಟಾಗಬಹುದಾದ ಅಪಾಯಗಳನ್ನು. ಒಂದು ಜನೋಪಯೋಗಿ ಸಾಂವಿಧಾನಿಕ ಯೋಜನೆಯನ್ನು ಹಂತಹಂತವಾಗಿ ಹೇಗೆ ಕೊನೆಗೊಳಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನರೇಗಾ ಯೋಜನೆ ನಮ್ಮ ನಡುವೆ ಇತ್ತು. ಈಗ ಈ ಪ್ರಕ್ರಿಯೆಯ ಅಂತಿಮ ಹಂತವಾಗಿ ಜಿ-ರಾಮ್-ಜಿ ಯೋಜನೆ ಜಾರಿಯಾಗಲಿದೆ.
ನವ ಉದಾರವಾದದ ಆಯಾಮದಲ್ಲಿ
ಕಾರ್ಪೋರೇಟ್ ಮಾರುಕಟ್ಟೆ ಮತ್ತು ಡಿಜಿಟಲ್ ಬಂಡವಾಳಶಾಹಿಯ ಔದ್ಯಮಿಕ ವಿಕಾಸವನ್ನೇ ಪ್ರಧಾನ ಗುರಿಯಾಗಿರಿಸಿಕೊಂಡಿರುವ ನವ ಉದಾರವಾದಿ ಆರ್ಥಿಕ ನೀತಿಗಳು , ಭವಿಷ್ಯದ ಭಾರತದಲ್ಲಿ ಸೃಷ್ಟಿಸುವ ಔದ್ಯೋಗಿಕ ಸಂರಚನೆಗಳು ಹಾಗೂ ಡಿಜಿಟಲ್ ಮಾರುಕಟ್ಟೆಗೆ , ಶ್ರಮಿಕರ ಕೌಶಲವೇ ಪ್ರಧಾನ ಮಾನದಂಡವಾಗುತ್ತದೆ. ಅಗಾಧ ಸಂಖ್ಯೆಯಲ್ಲಿರುವ ಭಾರತದ ಯುವ ಸಮಾಜದಿಂದ ಈ ಕೌಶಲ್ಯವನ್ನು ಗುರುತಿಸಿ, ನಗರಗಳ ಕಡೆಗೆ ಸೆಳೆಯುವುದು ಅನಿವಾರ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುತ್ತಿರುವ, ನರೇಗಾ ಯೋಜನೆಗಳ ಮೂಲ ಫಲಾನುಭವಿಗಳಾಗಿರುವ, ಯುವ ಸಮೂಹವನ್ನು ಡಿಜಿಟಲ್ ಮಾರುಕಟ್ಟೆಯ ನಗರ ಕೇಂದ್ರಗಳಿಗೆ ಆಕರ್ಷಿಸುವುದು ಸರ್ಕಾರದ ಆರ್ಥಿಕ ನೀತಿಯಾಗಲಿದೆ. ಈ ದೂರದೃಷ್ಟಿಯಿಂದಲೇ , ಗ್ರಾಮೀಣ ಭಾರತದಲ್ಲಿ ತಮ್ಮ ಕೃಷಿ-ಕೃಷಿಯೇತರ ಚಟುವಟಿಕೆಗಳೊಂದಿಗೆ ಇತರ ದುಡಿಮೆಯನ್ನೂ ನಂಬಿ ಬದುಕುತ್ತಿರುವವರನ್ನು ಮತ್ತೊಮ್ಮೆ ಅಸ್ಥಿರಗೊಳಿಸುವ ಚಿಂತನೆಯನ್ನು ವಿಬಿ-ಜಿ-ರಾಮ್-ಜಿ ಮಸೂದೆಯಲ್ಲಿ ಗುರುತಿಸಬಹುದು.

ನವ ಉದಾರವಾದ ನಗರೀಕರಣವನ್ನು ಉತ್ತೇಜಿಸಿದರೂ, ನಗರ ಜೀವನದಲ್ಲಿ ಡಿಜಿಟಲ್ ಬಂಡವಾಳದ ಬುನಾದಿಯನ್ನು ಭದ್ರಪಡಿಸಲು ಅಗತ್ಯವಾದ ಶ್ರಮಶಕ್ತಿಯನ್ನು ಅಗ್ಗದ ದರದಲ್ಲಿ ಸಂಯೋಜಿಸುವ ತಂತ್ರವನ್ನೂ ಅಳವಡಿಸಿಕೊಳ್ಳುತ್ತದೆ. ಈ ಕೌಶಲ ಯುಕ್ತ ಶ್ರಮಶಕ್ತಿಯನ್ನು ಗ್ರಾಮಗಳಿಂದ ನಗರಗಳಿಗೆ ವಲಸೆ ಬರುವ ದುಡಿಮೆಗಾರರಲ್ಲಿ, ವಿಶೇ಼ಷವಾಗಿ ಯುವ ಸಮೂಹದಲ್ಲಿ ಪಡೆಯುವುದು ಸುಲಭವಾಗುತ್ತದೆ. ಆದರೆ ಹೀಗೆ ವಲಸೆ ಬರುವ ಶ್ರಮಿಕರಿಗೆ ನಗರಾಭಿವೃದ್ಧಿಯಲ್ಲಿ ಫಲಾನುಭವಿಗಳಾಗುವ ಭಾಗ್ಯ ಲಭಿಸುವುದಿಲ್ಲ. ಬದಲಾಗಿ ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ಹಾಗೂ ಡಿಜಿಟಲ್ ಮಾರುಕಟ್ಟೆ ಪ್ಲಾಟ್‌ಫಾರ್ಮ್‌ಗಳು ಒದಗಿಸುವ ಸೇವೆ ಮತ್ತು ಸರಕುಗಳ ವಿತರಣೆಯಲ್ಲಿ, ಡಿಜಿಟಲ್ ತಂತ್ರಜ್ಞಾನದಲ್ಲಿ ಅಗ್ಗದ ಕೂಲಿಗೆ ದುಡಿಯುವವರಾಗುತ್ತಾರೆ. ಶಾಶ್ವತ ಉದ್ಯೋಗ ಮತ್ತು ಸ್ವಂತ ದುಡಿಮೆಯ ವಾತಾವರಣದಿಂದ, ಪರಾವಲಂಬನೆಯ ವಾತಾವರಣಕ್ಕೆ ಒಂದು ತಲೆಮಾರು ವರ್ಗಾವಣೆಯಾಗುತ್ತದೆ.

ಈ ಮಾರುಕಟ್ಟೆ ತಂತ್ರದ ಒಂದು ಭಾಗವಾಗಿ ಸ್ವತಂತ್ರ ಭಾರತದ ಅತ್ಯುತಮ ಜನೋಪಯೋಗಿ ಯೋಜನೆ, ನರೇಗಾ ಈಗ ಇತಿಹಾಸದ ಪುಟಗಳನ್ನು ಸೇರಲಿದೆ. ಇಲ್ಲಿ ಮಹಾತ್ಮ ಗಾಂಧಿಯ ಹೆಸರನ್ನು ಅಳಿಸುವುದು ನಿಮಿತ್ತ ಮಾತ್ರ, ವಾಸ್ತವಿಕವಾಗಿ ಅಳಿಸಿಹೋಗುವುದು ಮಿಲೆನಿಯಂ ಸಮಾಜದ, ಯುವ ಸಮೂಹದ ಹಾಗೂ ದುಡಿಮೆಯನ್ನೇ ನಂಬಿ ಬದುಕುವ ಶ್ರಮಜೀವಿಗಳ ಭರವಸೆ , ಕನಸು ಹಾಗೂ ಆಕಾಂಕ್ಷೆಗಳು. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಕಾರ್ಪೋರೇಟೀಕರಣ, ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆ ಮತ್ತು ಸೇವೆಗಳ ಖಾಸಗೀಕರಣ, ಉನ್ನತ ಶಿಕ್ಷಣದ ವಾಣಿಜ್ಯೀಕರಣ ಮತ್ತು ಉನ್ನತ ಶಿಕ್ಷಣದಲ್ಲಿ ವಿದೇಶಿ ಸಂಸ್ಥೆಗಳ ಪ್ರವೇಶ, ಈ ಮಾರುಕಟ್ಟೆ ನೀತಿಗಳು ಭಾರತದ ಯುವ ಸಮಾಜವನ್ನು ಅಸ್ಥಿರಗೊಳಿಸುತ್ತವೆ. ಉದ್ಯೋಗ ಮರೀಚಿಕೆಯಾಗದಿದ್ದರೂ ಭವಿಷ್ಯದ ಬದುಕಿಗೆ ಸುಭದ್ರ ಅಡಿಪಾಯವನ್ನಂತೂ ಒದಗಿಸುವುದಿಲ್ಲ. ಇದು ನವ ಉದಾರವಾದದ ಕಲ್ಪನೆಯಲ್ಲಿ ಪ್ರಗತಿ-ವಿಕಾಸ-ಅಭಿವೃದ್ಧಿಯನ್ನು ನೋಡುವ ವಿಧಾನ. ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡಂತೆ ಭಾರತದ ಬಹುತೇಕ ಬೂರ್ಷ್ವಾ ರಾಜಕೀಯ ಪಕ್ಷಗಳು ಈ ಮಾದರಿಯನ್ನು ತಾತ್ವಿಕವಾಗಿ ವಿರೋಧಿಸುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಈ ವಿಧಾನಕ್ಕೆ ರಹದಾರಿಗಳನ್ನು ನಿರ್ಮಿಸುತ್ತಲೇ 2047ರ ವೇಳೆಗೆ ದೇಶವನ್ನು ʼ ವಿಕಸಿತ ಭಾರತ ʼ ವನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಈಗ ಚಾಲನೆ ದೊರೆಯುತ್ತಿದೆ. ಶೇಕಡಾ 1ರಷ್ಟು ಸಿರಿವಂತರು, ದೇಶದ ಶೇಕಡಾ 40ರಷ್ಟು ಸಂಪತ್ತಿನ ಮೇಲೆ ಒಡೆತನ ಸಾಧಿಸಿರುವ ವರ್ತಮಾನದ ಸನ್ನಿವೇಶವನ್ನು ಗಮನಿಸಿದಾಗ, ಈ ಅನುಪಾತ ಇನ್ನೂ ಹಿಗ್ಗುವ ಸಾಧ್ಯತೆಗಳು ನಿಚ್ಛಳವಾಗಿ ಕಾಣುತ್ತವೆ. ಒಂದೆಡೆ ದುಡಿಮೆಗಾರರ Proletarianisation ಪ್ರಕ್ರಿಯೆ (ಆಂದರೆ ಸಾಮಾನ್ಯ ಜನತೆ ಸ್ವ ಉದ್ಯೋಗ ಕಳೆದುಕೊಂಡು, ಉದ್ಯೋಗದಾತರಾಗುವ ಅವಕಾಶಗಳಿಲ್ಲದೆ, ಆಸ್ತಿ ಅಂತಸ್ತನ್ನು ಕಳೆದುಕೊಂಡು, ಕೂಲಿಯನ್ನು ನಂಬಿ ಬದುಕುವುದನ್ನು ಅನಿವಾರ್ಯವಾಗಿಸುವ ) ತೀವ್ರತೆ ಪಡೆಯುತ್ತಿರುವಂತೆಯೇ ಮತ್ತೊಂದು ಬದಿಯಲ್ಲಿ ಭಾರತ ಆರ್ಥಿಕವಾಗಿ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಮುಂಚೂಣಿಯಲ್ಲಿರಲಿದೆ. ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅಂತರ ಹೆಚ್ಚಾಗುವ ಒಂದು ಸಮಾಜದಲ್ಲಿ ಭಾರತದ ಶೋಷಿತ ಜನತೆ ತಮ್ಮ ಬದುಕು ಅಥವಾ ಕನಸುಗಳನ್ನು ಕಟ್ಟಿಕೊಳ್ಳಬೇಕಿದೆ.
ಮುಂದುವರೆಯುತ್ತದೆ ,,,
(ಮುಂದಿನ ಭಾಗದಲ್ಲಿ ನರೇಗಾದಿಂದ ಜಿ-ರಾಮ್-ಜಿ ವರೆಗೆ ಪರಿವರ್ತನೆಯ ದಿಕ್ಕು-ದೆಸೆ)



