ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ ಋತುಚಕ್ರ ರಜೆಯ(Menstrual leave) ಆದೇಶಕ್ಕೆ ಹೈಕೋರ್ಟ್(High Court) ತಡೆಯಾಜ್ಞೆ ನೀಡಿದೆ.

ನ.20 ರಂದು ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ತಿಂಗಳಲ್ಲಿ 1 ದಿನದ ಋತುಚಕ್ರ ರಜೆ ನೀಡಬೇಕೆಂದು ಸರ್ಕಾರದ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ರಾಜ್ಯ ಸರ್ಕಾರ ಕಾಯ್ದೆಯಲ್ಲಿಲ್ಲದ ನಿಯಮವನ್ನು ಸರ್ಕಾರಿ ಆದೇಶದ ಮೂಲಕ ಜಾರಿಗೊಳಿಸಿದ್ದು, ಈ ರೀತಿ ಏಕಪಕ್ಷೀಯ ಆದೇಶದಿಂದ ಹೋಟೆಲ್‌ಗಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಲ್ಲಿಸಿದ್ದ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜ್ಯೋತಿ ಮೂಲಿಮನಿ ಏಕಸದಸ್ಯ ಪೀಠ, ರಾಜ್ಯ ಸರ್ಕಾರ ಈ ಆದೇಶ ಹೊರಡಿಸುವ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆದಿತ್ತೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಅಸೋಸಿಯೇಷನ್ ಪರ ವಕೀಲರ ಇಲ್ಲ ಎಂದು ಉತ್ತರ ನೀಡಿದರು. ಹೀಗಾಗಿ ಮುಂದಿನ ವಿಚಾರಣೆವರೆಗೆ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶ ನೀಡಿದೆ.

ಇನ್ನು ತಾವು ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರ ಎಂದು ಕೂಡ ಹೈಕೋರ್ಟ್ ಏಕಸದಸ್ಯ ಪೀಠ ತಿಳಿಸಿದೆ.
ರಾಜ್ಯದಲ್ಲಿ ನಾನಾ ಕಾರ್ಮಿಕ ಕಾಯಿದೆಯಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಲ್ಲಿಕಾರ್ಯ ನಿರ್ವಹಿಸುತ್ತಿರುವ 18ರಿಂದ 52 ವರ್ಷ ವಯೋಮಿತಿಯ ಎಲ್ಲ ಕಾಯಂ, ಗುತ್ತಿಗೆ, ಹೊರ ಗುತ್ತಿಗೆ ಮಹಿಳಾ ನೌಕರರಿಗೆ ಋುತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದರಂತೆ ವಾರ್ಷಿಕ 12 ದಿನಗಳ ವೇತನಸಹಿತ ರಜೆ ಸೌಲಭ್ಯ ಕಲ್ಪಿಸಿ ಕಳೆದ ನ.12ರಂದು ಸರಕಾರ ಆದೇಶ ಹೊರಡಿಸಿತ್ತು.

ರಾಜ್ಯ ಸರಕಾರಿ ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಕಲ್ಪಿಸಿತ್ತು. ಋುತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ನೌಕರರು ಈ ರಜೆ ಪಡೆಯಲು ಅರ್ಹರಿದ್ದರು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋುತುಚಕ್ರ ರಜೆಯನ್ನು ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲಎಂದು ಸ್ಪಷ್ಟಪಡಿಸಲಾಗಿತ್ತು. ಹಾಗೆ ಈ ರಜೆಯನ್ನು ರಜೆ / ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕಾಗಿ ನಮೂದಿಸಬೇಕು. ಋುತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಒಂದು ದಿನದ ವೇತನ ಸಹಿತ ಋತುಚಕ್ರದ ರಜೆ ನೀಡುವ ಮಹತ್ವದ ನಿರ್ಧಾರವನ್ನು ಮಹಿಳಾ ಸಂಘಟನೆಗಳು, ಪ್ರಗತಿಪರರು ಸ್ಬಾಗತಿಸಿದ್ದರು. ಮಹಿಳಾ ನೌಕರರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮಹತ್ವ ನೀಡುವ ಈ ಕ್ರಮವು, ನಿರಂತರವಾಗಿ ದುಡಿಯುವ ಮಹಿಳೆಯರು ಋತುಚಕ್ರದ ಸಮಯದಲ್ಲಿ ಅನುಭವಿಸುವ ಮಾನಸಿಕ ಮತ್ತು ದೈಹಿಕ ಯಾತನೆಯನ್ನು ಅರಿತುಕೊಂಡು ತೆಗೆದುಕೊಳ್ಳಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಆದರೆ ಖಾಸಗಿ ವಲಯದಲ್ಲಿ ಋತುಚಕ್ರ ರಜೆ ಘೋಷಣೆಗೆ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೋಟೆಲ್ ಮಾಲೀಕರ ಸಂಘದ ಪರವಾಗಿ ವಕೀಲರಾದ ಪ್ರಶಾಂತ್ ಬಿ.ಕೆ. ವಾದ ಮಂಡನೆ ಮಂಡಿಸಿದ್ರು. ಇದೀಗ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.






