ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ನಿನ್ನೆ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಇದು ಧ್ರುವ ಅವರ ಏಳನೇ ಚಿತ್ರವಾಗಿದ್ದು, ನಾಯಕಿಯಾಗಿ ರಚಿತಾ ರಾಮ್ ಸಾಥ್ ಕೊಡುತ್ತಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆ ಆಧರಿಸಿದ್ದು, ಚಿತ್ರಕ್ಕೆ ಕ್ರಿಮಿನಲ್ ಎಂಬ ಟೈಟಲ್ ಇಡಲಾಗಿದೆ.

ಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ರಾಜ್ ಗುರು, ʼಕಥೆ ಹೇಳಿ ಧ್ರುವ ಸರ್ಜಾ ಒಕೆ ಮಾಡಿದರು. ಬಳಿಕ ಸೆಲ್ಫಿ ತೆಗೆದುಕೊಂಡೆ. ಸೆಲ್ಫಿ ನೋಡಿ ಖುಷಿ ಜೊತೆ ಭಯ ಶುರುವಾಯ್ತು. ಇದು ಜವಾಬ್ದಾರಿ ಎಂಬ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ದೊಡ್ಡ ಪ್ರೊಡಕ್ಷನ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ಇದು ನನ್ನ ಎರಡನೇ ಸಿನಿಮಾ.ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿʼ ಎಂದರು.

ನಿರ್ಮಾಪಕ ಮನೀಶ್ ಮಾತನಾಡಿ, ʼಧ್ರುವ ಸಿನಿಮಾ ಪ್ರೊಡ್ಯೂಸ್ ಮಾಡಿ ಎಂದಾಗ ನನಗೆ ಆಶ್ಚರ್ಯ ಆಯ್ತು. ನನ್ನ ಕನಸು ನನಸಾಗಿದೆ. ನಾನು ಕನ್ನಡ ಸಿನಿಮಾ ಮಾಡುತ್ತಿರುವುದು ಖುಷಿ ಆಗಿದೆ. ಇದು ಗ್ರೇಟ್ ಮೂಮೆಂಟ್ʼ ಎಂದರು.

ನಟಿ ರಚಿತಾ ರಾಮ್ ಮಾತನಾಡಿ, ʼಎಂಟು ವರ್ಷಗಳ ನಂತರ ನನ್ನ ಒಳ್ಳೆ ಫ್ರೆಂಡ್ ಧ್ರುವ ಅವರ ಜೊತೆ ಸಿನಿನಾ ಮಾಡುತ್ತಿರುವುದು ಖುಷಿ ಆಗುತ್ತಿದೆ. ಭರ್ಜರಿ ಸಿನಿಮಾದ ಮುಹೂರ್ತ ಇಲ್ಲೇ ಆಗಿತ್ತು. ಕ್ರಿಮಿನಲ್ ಕೂಡ ಇಲ್ಲೇ ಆಗಿದೆ. ಹೊಸ ತಂಡದ ಕೆಲಸ ಮಾಡುತ್ತಿರುವುದು ಖುಷಿ ಇದೆ. ಗೋಲ್ಡ್ ಮೈನ್ ಪ್ರೊಡಕ್ಷನ್ ಜೊತೆ ಕೆಲಸ ಮಾಡುತ್ತಿದ್ದೇನೆ. ಮೊದಲು ನನಗೆ ಧ್ರುವ ಕಾಲ್ ಮಾಡಿದರು. ಕಥೆ, ಪ್ರೊಡಕ್ಷನ್ ಹೌಸ್ ಏನೂ ಕೇಳಲಿಲ್ಲ. ಒಕೆ ಮಾಡುತ್ತೇನೆ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದರು. ತುಂಬಾ ಎಕ್ಸ್ ಪಿರಿಮೇಂಟ್ ಪಾತ್ರನಾ ಧ್ರುವ ಮಾಡುತ್ತಿದ್ದಾರೆ. ಇದು ಅವರ ಏಳನೇ ಸಿನಿಮಾ. ಇದು ಅವರ ಸಿನಿಕರಿಯರ್‌ನ ಬೆಸ್ಟ್ ಚಿತ್ರವಾಗಲಿದೆʼ ಎಂದರು.

ಚಿತ್ರದ ನಾಯಕ ಧ್ರುವ ಸರ್ಜಾ ಮಾತನಾಡಿ, ʼಉತ್ತರ ಕರ್ನಾಟಕ ಹಾವೇರಿಯ ಹಾನಗಲ್‌ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡುತ್ತಿದ್ದೇನೆ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡುತ್ತೇವೆ. ಭರ್ಜರಿಯಲ್ಲಿ ತಾಯಿ ಆದ ನಂತರ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಭರ್ಜರಿ ನಂತರ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳಿದೆ, ಅವರು ಕೂಡಾ ಒಪ್ಪಿಕೊಂಡರು. ತುಂಬಾನೇ ಯುನಿಕ್ ಸಬ್ಜೆಕ್ಟ್.. ಇಡಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿʼ ಎಂದು ಹೇಳಿದರು.

ಈ ಹಿಂದೆ ‘ಕೆರೆಬೇಟೆ’ ಚಿತ್ರ ಕಟ್ಟಿಕೊಟ್ಟಿದ್ದ ರಾಜ್ ಗುರು ಈಗ ‘ಕ್ರಿಮಿನಲ್’ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಂದನ್ ಶೆಟ್ಟಿ ಸಂಗೀತ , ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಚಿತ್ರಕ್ಕಿರಲಿದೆ. ಇನ್ನು ಚಿತ್ರದಲ್ಲಿ ಶಿವನಾಗಿ ಧ್ರುವ ಸರ್ಜಾ ನಟಿಸುತ್ತಿದ್ದರೆ, ಪಾರ್ವತಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ. ಮೊದಲ ದೃಶ್ಯದಲ್ಲಿ ನಾಯಕಿಯ ಜುಟ್ಟು ಹಿಡಿದು ನಾಯಕ ಮಾತನಾಡುವ ಸನ್ನಿವೇಶ ಸೆರೆಹಿಡಿಯಲಾಗಿದೆ.













