ಬೆಂಗಳೂರು; ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವತಿ ನಂಬಿ ವ್ಯಕ್ತಿಯೊಬ್ಬ 1.29 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
42 ವರ್ಷದ ಜಗದೀಶ್ ಸಿ ಎಂಬುವರಿಗೆ “ಕ್ವಾಕ್ ಕ್ವಾಕ್” ಎಂಬ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಪರಿಚಿತ ಮೇಘನಾ ರೆಡ್ಡಿ ಎಂಬಾಕೆ ಸಂಪರ್ಕಕ್ಕೆ ಬಂದಿದ್ದರು. ನಂತರ ಆ ಯುವತಿ ಜಗದೀಶ್ ವಿಶ್ವಾಸವನ್ನು ಗಳಿಸಿ ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ನೀಡುವ ಭರವಸೆ ನೀಡಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಬಳಿಕ ತನ್ನ ತಂದೆಯ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪಿಸಲು ಬಯಸುತ್ತಿದ್ದೇನೆಂದು ಹೇಳಿ ಜಗದೀಶ್ ಅವರನ್ನು ನಂಬಿಸಿದ್ದಳು. ಇದೇ ನೆಪದಲ್ಲಿ ಜಗದೀಶ್ ಬಳಿ ಹಣವನ್ನೂ ಕೇಳಿದ್ದಳು. ನವೆಂಬರ್ 5 ಮತ್ತು 6ರಂದು ಜಗದೀಶ್ ಅವರು RTGS ಮತ್ತು NEFT ಮುಖಾಂತರ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,29,33,253 ರೂಗಳನ್ನು ವರ್ಗಾಯಿಸಿದ್ದರು.
ಖಾತೆಗೆ ಹಣ ಬಂದ ನಂತರ ಮೇಘನಾ, ಜಗದೀಶ್ರನ್ನು ಸಂಪರ್ಕಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಳು. ತಾವು ನೀಡಿದ ಹಣ ವಾಪಸ್ ಬರದಾಗ ವಂಚನೆ ನಡೆದಿರುವುದು ತಿಳಿದ ಜಗದೀಶ್ ತಕ್ಷಣ ಉತ್ತರ ವಿಭಾಗದ
ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಜಗದೀಶ್ ದೂರಿನ ಅನ್ವಯ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.











