ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಿದ್ದು, ಇದೀಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಮೊಬೈಲ್ ಸೇರಿದಂತೆ ಕೆಲವು ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿವೆ ಎನ್ನುವ ವಿಚಾರ ಬಹಿರಂಗಗೊಂಡಿದೆ.

ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿ ಹಾಗೂ ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋ ಬೆಳಕಿಗೆ ಬಂದಿರುವುದು ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದಶರ್ನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಫೋಟೋಗಳು ವೈರಲ್ ಆದ ಬಳಿಕ ಜೈಲುಗಳಲ್ಲಿ ವಿಶೇಷ ಸೌಲಭ್ಯಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಎಲ್ಲಾ ಜೈಲುಗಳಿಗೆ ಸ್ಪಷ್ಟ ಸೂಚನೆ ನೀಡಿತ್ತು. ಆದರೆ ಸುಪ್ರೀಂ ಕಠಿಣ ಆದೇಶದ ಬಳಿಕವೂ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಅಪರಾಧಿಗಳು ಹಾಗೂ ಉಗ್ರರ ಕೈಗೆ ಮೊಬೈಲ್ ಸಿಗುತ್ತಿರುವುದು ದೇಶದ ಭದ್ರತೆ ಹಾಗೂ ಕಾನೂನು ಸೂವ್ಯವಸ್ಥೆಗೆ ಗಂಭೀರ ಸವಾಲಾಗಿದೆ. ಹೀಗಾಗಿ ಜೈಲಿನಲ್ಲಿ ಆಡಳಿತ ಕ್ರಮಗಳು ಸುಧಾರಿಸಬೇಕು. ಜೈಲು ಅಧೀಕ್ಷಕರ ಹುದ್ದೆಗೆ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಕೈದಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸೌಲಭ್ಯ ನೀಡುವ ಜೈಲು ಅಧಿಕಾರಿಗಳು ಹಾಗೂ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹಗಳು ಜೋರಾಗಿ ಕೇಳಿ ಬರುತ್ತಿದೆ.












