ಬೆಂಗಳೂರು: ಪತಿಯಿಂದಲೇ ಪತ್ನಿಯ ಭೀಕರ ಹತ್ಯೆ ಘಟನೆ ಅಮೃತಹಳ್ಳಿಯ ಗಂಗಮ್ಮ ಲೇಔಟ್ ನಲ್ಲಿ ನಡೆದಿದೆ. ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. 20 ವರ್ಷದ ಅಂಜಲಿ ಎಂಬಾಕೆಯನ್ನ ಪತಿ ರವಿಚಂದ್ರ ಕೊಲೆ ಮಾಡಿದ್ದಾನೆ.

ಪಾವಗಡ ಮೂಲದ ಅಂಜಲಿ ಸುರಪುರ ಮೂಲದ ರವಿಚಂದ್ರನನ್ನ ಮದುವೆಯಾಗಿದ್ದಳು.. ಆದರೆ ಇಬ್ಬರಿಗೂ ಈಗಾಗಲೇ ಒಂದೊಂದು ಮದುವೆಯಾಗಿತ್ತು. ಇಬ್ಬರು ಮದುವೆ ನಂತರ ಅಮೃತಹಳ್ಳಿ ಯಲ್ಲಿ ವಾಸವಿದ್ದರು. ಟ್ರಾವೆಲ್ಸ್ ಕಚೇರಿಯಲ್ಲಿ ಆರೋಪಿ ಪತಿ ರವಿಚಂದ್ರ ಡ್ರೈವರ್ ಆಗಿದ್ರೆ ಅಂಜಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಪತ್ನಿಯ ಶೀಲ ಶಂಕಿಸಿ ರವಿಚಂದ್ರ ಅಂಜಲಿ ಜೊತೆ ಆಗಾಗ ಜಗಳ ಮಾಡುತ್ತಿದ್ದ.

ಇಂದು ಬೆಳಗಿನ ಜಾವ ಕೂಡ ಇಬ್ಬರಿಗೂ ಜಗಳ ಆಗಿದೆ. ಈ ವೇಳೆ ಚಾಕುವಿನಿಂದ ಅಂಜಲಿ ಕುತ್ತಿಗೆ ಇರಿದು ಬರ್ಬರ ಹಲ್ಲೆ ಮಾಡಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಮೃತಹಳ್ಳಿ ಪೊಲೀಸರಿಗೆ ಅಂಜಲಿಗೆ ಇನ್ನೂ ಜೀವ ಇರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಗಾಯಾಳು ಅಂಜಲಿ ಮೃತಪಟ್ಟಿದ್ದಾಳೆ. ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪತಿ ರವಿಚಂದ್ರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.






