ಮೈಸೂರು: ಮೈಸೂರಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ವ್ಯಾಘ್ರನ ಅಟ್ಟಹಾಸಕ್ಕೆ ರೈತರು ಬೆಚ್ಚಿ ಬಿದ್ದಿದ್ದಾರೆ. ಹುಲಿ ದಾಳಿಯಿಂದ ರೈತ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ನಡೆದಿದೆ. ರೈತ ದಂಡನಾಯ್ಕ ಅಲಿಯಾಸ್ ಸ್ವಾಮಿ(58) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ದಂಡನಾಯ್ಕ ಇಂದು ಮುಂಜಾನೆ ಎಂದಿನಂತೆ ಜಮೀನಿಗೆ ತೆರಳುತ್ತಿದ್ದ ವೇಳೆ ಹುಲಿ ಏಕಾಏಕಿ ದಾಳಿ ಮಾಡಿದೆ. ವನ್ಯ ಜೀವಿಯ ಭೀಕರ ದಾಳಿಗೆ ದಂಡನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದ್ದು, ಕಾಡಂಚಿನ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈತರು ಹಾಗೂ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ರೈತರಿಗೆ ಆಸರೆಯಾಗಿದ್ದ ಜಾನುವಾರುಗಳನ್ನು ಹುಲಿ ಕೊಂದು ತಿಂದು ಹಾಕುತ್ತಿರುವುದಷ್ಟೇ ಅಲ್ಲದೇ ವನ್ಯ ಜೀವಿಗಳ ದಾಳಿಯಿಂದ ಹಲವು ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದ್ದು, ಕೂಡಲೇ ಸಕಾರ ವನ್ಯ ಜೀವಿಗಳ ಕಾಟಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.






