ನವದೆಹಲಿ: ಹರಿಯಾಣದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬೃಹತ್ ಪ್ರಮಾಣದ ಮತಗಳ್ಳತನ ಹಗರಣ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕದ ಆಳಂದ, ಮಹಾದೇವಪುರದಂತೆ ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಹರಿಯಾಣದಲ್ಲಿ ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿತ್ತು ಎಂದು ಹೇಳಿದ್ದಾರೆ. ಈ ವೇಳೆ ಬ್ರೆಜಿಲ್ ಮಾಡೆಲ್ ಲರಿಸ್ಸಾ ಅವರ ಫೋಟೋವನ್ನು ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗಿದೆ. ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದೀಗ ರಾಹುಲ್ ಗಾಂಧಿ ಆರೋಪಕ್ಕೆ ಸ್ವತಃ ಬ್ರೆಜಿಲ್ ಮಾಡೆಲ್ ಲರಿಸ್ಸಾ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋರ್ಚುಗೀಸ್ ಭಾಷೆಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲರಿಸ್ಸಾ ಇದು ಹುಚ್ಚುತನ. ನನ್ನ ಹಳೆಯ ಫೋಟೋವನ್ನು ಬಳಸಲಾಗಿದೆ. ಭಾರತದ ಮತದಾರರ ಪಟ್ಟಿಯಲ್ಲಿ ನನ್ನ ಫೋಟೋ ಇದೆ ಎಂದರೆ ಅರ್ಥವೇನು..? ಎಂದು ಪ್ರಶ್ನಿಸಿದ್ದಾರೆ. ಸದ್ಯ ಬ್ರೆಜಿಲ್ ಮಾಡೆಲ್ ಲರಿಸ್ಸಾ ಪ್ರತಿಕ್ರಿಯಿಸಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.







