500 ಟನ್ ಹಸಿ ಕಸ ಗ್ಯಾಸ್ ಆಗಿ ಪರಿವರ್ತನೆ; ನಗರದ ಕಸದ ಸಮಸ್ಯೆಗೆ ಪರಿಹಾರ. ಬಿಜೆಪಿ ನಾಯಕರು ಯಾರೂ ನನ್ನ ಜೈಲಿಗೆ ಹೋಗು ಎಂದು ಹೇಳಿಲ್ಲ: ಡಿಸಿಎಂ ಸ್ಪಷ್ಟನೆ. ಬಿಜೆಪಿ ಪ್ರಶ್ನಿಸಿದರೆ ಸದನದಲ್ಲಿ ಅಧಿಕಾರಿಯ ಹೆಸರು ಹೇಳುವೆ

“ನಗರದಲ್ಲಿ ಉತ್ಪಾದನೆಯಾಗುವ ಸುಮಾರು 500 ಟನ್ ಹಸಿಕಸದಿಂದ ಗ್ಯಾಸ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಸ್ವಾಮ್ಯದ ಗೇಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದಲ್ಲಿ ಹಸಿಕಸದಿಂದ ಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಗೇಲ್ ಸಂಸ್ಥೆಯೊಟ್ಟಿಗೆ ಮಾಡಿಕೊಂಡಿರುವ ಒಡಂಬಡಿಕೆ ಹಸ್ತಾಂತರ ನಂತರ ಶಿವಕುಮಾರ್ ಅವರು ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದರು.
“ಗೇಲ್ ಸಂಸ್ಥೆಯವರು 123 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ಯಾಸ್ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಇವರಿಗೆ ಸ್ಥಳವನ್ನೂ ನೀಡಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಯೋಗಕ್ಕೆ ಸರ್ಕಾರ ಕೈ ಜೋಡಿಸಿದೆ. ಮುಂದಕ್ಕೂ ಹಲವಾರು ಒಪ್ಪಂದಗಳಿಗೆ ಈ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧವಿದ್ದೇವೆ” ಎಂದರು.

“ಇದರಿಂದ ಬೆಂಗಳೂರು ನಗರದ ಕಸದ ಸಮಸ್ಯೆ ಕಡಿಮೆಯಾಗಲಿದೆ. ಇದರಿಂದ ಆದಷ್ಟು ಬೇಗ ಗ್ಯಾಸ್ ಉತ್ಪಾದನೆ ಪ್ರಾರಂಭವಾಗಲಿ. ಇಲ್ಲಿ ಉತ್ಪಾದನೆ ಮಾಡುವ ಗ್ಯಾಸ್ ಅನ್ನು ಸಾರ್ವಜನಿಕರು, ಹೋಟೆಲ್ ಉದ್ದಿಮೆದಾರರಿಗೆ ವಿತರಣೆಯಾಗಲಿ” ಎಂದರು.
ಜಿಬಿಎ ಕಸ ಸಮಸ್ಯೆ ನಿರ್ವಹಣೆ ಮಾಡುತ್ತಿಲ್ಲ ಎಂದು ಕಿರಣ್ ಮಜುಂದಾರ್ ಮತ್ತೆ ಎಕ್ಸ್ ಮಾಡಿರುವ ಬಗ್ಗೆ ಕೇಳಿದಾಗ, “ಗೇಲ್ ಸಂಸ್ಥೆಯೊಂದಿಗೆ ಯಾವ ಕೆಲಸ ಮಾಡುತ್ತಿದ್ದೇವೆ? ಕಸ ವಿಲೇವಾರಿಗೆ ನಾವು ಎಲ್ಲಾ ಕೆಲಸ ಮಾಡಿದ್ದೇವೆ. ಆದರೆ ನ್ಯಾಯಾಲಯ ನಮಗೆ ಅಡಚಣೆ ತಂದಿತ್ತು. ಇದರ ಹಿಂದೆ ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಅವರುಗಳು ಯಾರೂ ನಮಗೆ ಸಹಕಾರ ನೀಡಲಿಲ್ಲ. ಈಗ 33 ಪ್ಯಾಕೇಜ್ ಗಳಲ್ಲಿ ಕಸ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಲೇವಾರಿ ಘಟಕಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದು ಮುಂದಕ್ಕೆ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ” ಎಂದರು.

“ಸರ್ಕಾರದ ಅಧಿಕಾರಿಗಳು, ಜಿಬಿಎ ಆಯುಕ್ತರು, ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ನನ್ನ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಗೇಲ್ ಸಂಸ್ಥೆಯ ಜೊತೆಗಿನ ಒಡಂಬಡಿಕೆಗಳನ್ನ ಹಸ್ತಾಂತರ ಮಾಡಿಕೊಂಡಿದ್ದಾರೆ” ಎಂದು ಹೇಳಿದರು. ಬಿಜೆಪಿ ನಾಯಕರು ಯಾರೂ ನನ್ನ ಜೈಲಿಗೆ ಹೋಗು ಎಂದು ಹೇಳಿಲ್ಲ
ಡಿಸಿಎಂ ಆಗುತ್ತೀರೋ ಅಥವಾ ಜೈಲಿಗೆ ಹೋಗುವಿರೋ ಎನ್ನುವ ಬಿಜೆಪಿಯವರು ಮುಂದಿಟ್ಟಿದ್ದ ಬೇಡಿಕೆ ಬಗ್ಗೆ ಕೇಳಿದಾಗ, “ನಾನು ಬಿಜೆಪಿಯವರು ಬೇಡಿಕೆ ಮುಂದಿಟ್ಟಿದ್ದರು ಎಂದು ಹೇಳಿಲ್ಲ. ನಾನು ಹುದ್ದೆಯ ಸಮೇತ ಅಧಿಕಾರಿಯ ಬಗ್ಗೆ ಉಲ್ಲೇಖ ಮಾಡಿದ್ದೇನೆ. ಬಿಜೆಪಿ ನಾಯಕರು ಯಾರೂ ನನ್ನನ್ನು ಜೈಲಿಗೆ ಹೋಗು ಎಂದು ಹೇಳಿಲ್ಲ” ಎಂದರು.

“ಈಗ ಇದರ ಬಗ್ಗೆ ಚರ್ಚೆ ಬೇಡ. ಈಗಾಗಲೇ ಇದೆಲ್ಲಾ ನಡೆದು ಐದು ವರ್ಷಗಳೇ ಕಳೆದಿವೆ. ವಾಪಸ್ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಎಲ್ಲರಿಗೂ ತಿಳಿದ ವಿಚಾರವನ್ನೇ ನಾನು ಮತ್ತೊಮ್ಮೆ ಹೇಳಿದ್ದೇನೆ. ಇದರಲ್ಲಿ ಕಟ್ಟುಕತೆ ಏನಿಲ್ಲ. ಅಧಿಕಾರಿಯ ಹೆಸರನ್ನು ಎಲ್ಲೆಂದರಲ್ಲಿ ಹೇಳುವುದಿಲ್ಲ. ಬಿಜೆಪಿಯವರು ಸದನದಲ್ಲಿ ಹೇಳಿ ಎಂದು ಪ್ರಶ್ನಿಸಲಿ ಅಲ್ಲಿ ಹೇಳುತ್ತೇನೆ. ಇದೆಲ್ಲಾ ದಾಖಲೆಗೆ ಹೋಗಬೇಕು. ಸದನದಲ್ಲಿ ಇರುವ ಶಾಸಕರಿಂದಲೇ ಯಾರು ಕರೆದಿದ್ದರು, ಯಾರು ಕರೆ ಮಾಡಿದ್ದರು ಎಂದು ಹೇಳಿಸುತ್ತೇನೆ” ಎಂದು ಸವಾಲು ಹಾಕಿದರು.
ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಬ್ಯಾನ್ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಯಿತೇ ಎಂದಾಗ, “ಕಾನೂನು ಸಚಿವರಾದ ಎಚ್.ಕೆ.ಪಾಟೀಲರು ಇದಕ್ಕೆ ಉತ್ತರ ನೀಡುತ್ತಾರೆ” ಎಂದರು.









