
ಸರ್ಕಾರದ ಬೇಜವಾಬ್ದಾರಿಯಿಂದ ಪ್ರತಿದಿನ ಕೋಟ್ಯಂತರ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ವಾರಕ್ಕೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಮಾಸಕ್ಕೊಂದು ವಿವಾದಗಳನ್ನು ಆಡಳಿತಾರೂಢ ಪಕ್ಷ ಮೈಮೇಲೆ ಎಳೆದುಕೊಳ್ಳುತ್ತಿದೆ. ತಿಂಗಳಿಗೆ ಕನಿಷ್ಠ ಒಂದಾದರೂ ಬೆಲೆ ಏರಿಕೆಯಾಗುತ್ತಿದೆ. ಹೀಗೆ ಪಟ್ಟಿ ಮಾಡಲು ಹೋದರೆ ಪ್ರತಿಪಕ್ಷಕ್ಕೆ ಪ್ರತಿದಿನವೂ ಧರಣಿ ಮಾಡಬಹುದಾದಷ್ಟು ವಿಷಯಗಳನ್ನು ಸರ್ಕಾರವೇ ರತ್ನಗಂಬಳಿ ಹಾಸಿ ಕೊಡುತ್ತಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟಿಸಬೇಕಿರುವ ರಾಜ್ಯದ ಅಧಿಕೃತ ಪ್ರತಿಪಕ್ಷ ಬಿಜೆಪಿಯು, ಅದೇ ರತ್ನಗಂಬಳಿ ಹೊದ್ದುಕೊಂಡು ನಿದ್ದೆ ಮಾಡುತ್ತಿದೆ. ಆಗಾಗ ಕಂಬಳಿಯಿಂದ ಹೊರಕ್ಕೆ ನೋಡಿ, ಕಾಂಗ್ರೆಸ್ನಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಚರ್ಚೆ ಮಾಡುತ್ತದೆ.
ಯಾವುದೇ ಸರ್ಕಾರ ಜನರ ಕಷ್ಟಕ್ಕೆ ಕಿವಿಗೊಡದಿದ್ದರೆ ಹಾಗೂ ದುರಾಡಳಿತ ಮಾಡುತ್ತಿದ್ದರೆ ಅದಕ್ಕೆ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷ ಹಾಗೂ ಮಾಧ್ಯಮಗಳು ಕಾರಣವಾಗುತ್ತವೆ. ಕೇಂದ್ರ ಹಾಗೂ ರಾಜ್ಯದ ಮಟ್ಟಿಗೆ ಈ ಪ್ರತಿಪಕ್ಷಗಳು ಅಕ್ಷರಶಃ ನೆಗದುಬಿದ್ದಿವೆ. ಕೇಂದ್ರದಲ್ಲಿ ರಾಹುಲ್ ಗಾಂಧಿ-ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದಲ್ಲಿ ವಿಜಯೇಂದ್ರ-ಅಶೋಕ್ ಜೋಡಿಗೆ ಯಾವುದೇ ವ್ಯತ್ಯಾಸವಿಲ್ಲ. ಒಂದು ಹಂತದಲ್ಲಿ ನೋಡಿದರೆ ರಾಹುಲ್ ಜೋಡಿಯೇ ವಿಜಯೇಂದ್ರ-ಅಶೋಕ್ಗಿಂತ ಎಷ್ಟೋ ವಾಸಿ ಎನಿಸುತ್ತದೆ. ರಾಹುಲ್ ಗಾಂಧಿಯು ನೈಜ ವಿಷಯಗಳನ್ನು ಬಿಟ್ಟು ತನಗೆ ಬೇಕಿರುವ ವಿಚಾರದಲ್ಲಾದರೂ ಹಗಲಿರುಳು ಕಿರುಚಾಡುತ್ತಿರುತ್ತಾರೆ. ಆದರೆ ಕರ್ನಾಟಕದ ಬಿಜೆಪಿ ಮಾತ್ರ ಕೇಂದ್ರದಲ್ಲಿನ ಕಾಂಗ್ರೆಸ್ಗಿಂತಲೂ ಹೀನಾಯವಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಆಡಳಿತ ನಡೆಸಿದ ಏಳೆಂಟು ವರ್ಷಗಳಲ್ಲಿ ಹಲವಾರು ವಿವಾದ ಹಾಗೂ ಹಗರಣಗಳು ನಡೆದಿವೆ. ಅದಕ್ಕೆ ಮುಖ್ಯಮಂತ್ರಿಯಿಂದ ಹಿಡಿದು ಹಲವು ಸಚಿವರ ತಲೆದಂಡವೂ ಆಗಿದೆ. ಆದರೆ ಸಿದ್ದರಾಮಯ್ಯ-ಡಿಕೆಶಿ ಜೋಡೆತ್ತಿನ ಕಳೆದೆರಡು ವರ್ಷದ ಸರ್ಕಾರದ ಅವಧಿಯಲ್ಲಿ ಆಗಿರುವಷ್ಟು ವಿವಾದ, ಹಗರಣ ಹಾಗೂ ದುರಾಡಳಿತವು ಇತ್ತೀಚೆಗೆ ಎಂದೂ ಆಗಿಲ್ಲ. ಅದರ ಜೊತೆಗೆ ಅಭಿವೃದ್ಧಿ ಕಾರ್ಯ ಎನ್ನುವುದು ಬಹುತೇಕ ಶೂನ್ಯ.
ಇಷ್ಟಾಗಿಯೂ ರಾಜ್ಯ ಬಿಜೆಪಿಯಿಂದ ಅಂತಹ ಯಾವುದೇ ದೊಡ್ಡ ಪ್ರತಿಭಟನೆಯೇ ಆಗಿಲ್ಲ. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಕೆಟ್ಟ ಮೂಲಭೂತ ಸೌಕರ್ಯಗಳಿಂದ ಜನರು ಬೇಸತ್ತಿದ್ದರೂ ಪ್ರತಿಭಟಿಸುವ ಗೋಜಿಗೆ ಹೋಗುತ್ತಿಲ್ಲ. ಬದಲಿಗೆ ಈ ವಿಜಯೇಂದ್ರ ಹಾಗೂ ಅಶೋಕ್ ದಿನ ಬೆಳಗಾಗಿ ಸರ್ಕಾರ ಬೀಳಲಿದೆ, ಪ್ರಳಯ ಆಗಲಿದೆ, ಸಂಕ್ರಮಣ, ಮುಖ್ಯಮಂತ್ರಿ ಬದಲಾವಣೆ, ಡಿಕೆಶಿ ಸಿಎಂ ಆಗುತ್ತಾರೆ ಎಂದು ಜಪ ಶುರು ಮಾಡುತ್ತಾರೆ. ಕಾಂಗ್ರೆಸ್ ಶಾಸಕರಿಗಿಂತ ಹೆಚ್ಚಾಗಿ ಇವರೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ನಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಆ ಪಕ್ಷದ ಶಾಸಕರು ಹಾಗೂ ವರಿಷ್ಠರು ನಿರ್ಧಾರ ಮಾಡುತ್ತಾರೆ. ಬಿಜೆಪಿಯಲ್ಲಿನ ನಾಯಕರನ್ನೇ ಒಗ್ಗಟ್ಟಾಗಿ ತೆಗೆದುಕೊಂಡ ಹೋಗಲಾಗದ ಈ ರಾಜ್ಯ ನಾಯಕರು, ಇನ್ನೊಂದು ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದು ಹಾಸ್ಯದ ವಿಚಾರವಾಗಿದೆ.

ಅಷ್ಟಕ್ಕೂ ಪ್ರತಿಪಕ್ಷವಾದ ಬಿಜೆಪಿಗೆ ಕಾಂಗ್ರೆಸ್ನ ಈ ಮುಖ್ಯಮಂತ್ರಿ ಖುರ್ಚಿಯಾಟದಿಂದ ಏನಾಗುವುದಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯರನ್ನು ಇಳಿಸಿ ಡಿಕೆಶಿಯನ್ನು ಸಿಎಂ ಮಾಡುವ ಬಗ್ಗೆ ಕಾಂಗ್ರೆಸ್ಸಿಗರಿಗಿಂತ ಈ ಅಶೋಕ್-ವಿಜಯೇಂದ್ರ ಜೋಡಿಗೆ ಆಸಕ್ತಿ ಹೆಚ್ಚಿರುವಂತಿದೆ. ಈ ತರ್ಲೆ ಕೆಲಸಗಳನ್ನು ಬಿಟ್ಟು, ಈ ಕಿತ್ತಾಟದಿಂದ ರಾಜ್ಯದ ಜನರ ಕಥೆ ಏನಾಗಿದೆ ಹಾಗೂ ಹಗರಣ, ಬೆಲೆ ಏರಿಕೆಯಿಂದ ಜನರು ಹೇಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದರ ಹೋರಾಟ ಮಾಡುವ ಬಗ್ಗೆ ಆಲೋಚಿಸಬೇಕಿದೆ.
ಒಂದು ಎಲ್ಲರಿಗೂ ತಿಳಿದಿರಲಿ
ರಾಜ್ಯದಲ್ಲಿ ರಾಜಕೀಯ ಸಂಕ್ರಮಣ ಆಗಲಿದೆ ಎಂದು ಬಿಜೆಪಿ ನಾಯಕರು ಬಡಬಡಾಯಿಸುತ್ತಿದ್ದರೆ, ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಅಷ್ಟಕ್ಕೂ ಅಂತಹ ಯಾವುದೇ ರಾಜಕೀಯ ಸಂಕ್ರಮಣ ಸಾಧ್ಯವಿಲ್ಲ. ಮಹಾರಾಷ್ಟ್ರ ಅಥವಾ ಮಧ್ಯಪ್ರದೇಶದ ಮಾದರಿಯಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವೇ ಇಲ್ಲ. ಇಲ್ಲಿ ಕಾಂಗ್ರೆಸ್ಗೆ ಅಗತ್ಯಕ್ಕಿಂತ ಹೆಚ್ಚಿನ ಬಹುಮತವೇ ಇದೆ. ಒಂದೊಮ್ಮೆ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಒಡೆದು ಬಿಜೆಪಿ ಜೊತೆಗೆ ಹೋಗಬೇಕು ಎಂದಾದರೆ, ೯೦ಕ್ಕೂ ಅಧಿಕ ಶಾಸಕರು ಸರ್ಕಾರದಿಂದ ಹೊರಬರಬೇಕು. ಪಕ್ಷಾಂತರ ಕಾಯ್ದೆಯಿಂದ ತಪ್ಪಿಸಿಕೊಂಡು ಬಿಜೆಪಿ ಜೊತೆ ಹೋಗಬೇಕು ಎಂದಾದರೆ ಸುಮಾರು ೫೦-೬೦ ಶಾಸಕರು ರಾಜೀನಾಮೆ ನೀಡಿ, ಮರು ಚುನಾವಣೆಗೆ ಹೋಗಬೇಕು. ಯಾವುದೇ ಹಂತದಲ್ಲೂ ಇವೆರಡೂ ಕೂಡ ಅಸಾಧ್ಯವಾದ ವಿಚಾರ. ಹೀಗಾಗಿ ಯಾರು ಎಷ್ಟೇ ಬಡಿದುಕೊಂಡರೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಬಹುದೇ ಹೊರತು, ಅಧಿಕಾರದಲ್ಲಿನ ಪಕ್ಷ ಬದಲಾಗುವುದಿಲ್ಲ. ಆ ಮುಖ್ಯಮಂತ್ರಿ ಬದಲಾವಣೆ ಕೂಡ ಬಹುತೇಕ ಖಚಿತವಾಗಿದ್ದರೂ, ಸಿದ್ದರಾಮಯ್ಯ ಅವರು ಒಂದಿಷ್ಟು ದಾಳವನ್ನು ಉರುಳಿಸದೇ ಇರಲಾರರು. ಆದರೆ ಈ ರಾಜಕೀಯ ದಾಳದಲ್ಲಿ ಈ ವಿಜಯೇಂದ್ರ-ಅಶೋಕ್ ಜೋಡಿಗೇನು ಕೆಲಸ?
ಕೊನೆಯದಾಗಿ: ಕರ್ನಾಟಕದ ಬಿಜೆಪಿ ಮಟ್ಟಿಗೆ ಒಂದು ಕಾಲದಲ್ಲಿ ಎಲ್ಲರೂ ಒಳ್ಳೆಯ ಪ್ರತಿಪಕ್ಷ ಎಂದು ಕಿಚಾಯಿಸುತ್ತಿದ್ದರು. ರಾಜ್ಯ ಬಿಜೆಪಿಗೆ ಅಧಿಕಾರ ನಡೆಸಲು ಬರುವುದಿಲ್ಲ, ಆದರೆ ಪ್ರತಿಪಕ್ಷವಾಗಿ ಒಳ್ಳೆಯ ಕೆಲಸ ಮಾಡುತ್ತದೆ ಎಂದು ಹೊಗಳುತ್ತಿದ್ದರು. ಆದರೆ ಸದ್ಯದ ಮಟ್ಟಿಗೆ ಕರ್ನಾಟಕದ ಮಟ್ಟಿಗೆ ಬಿಜೆಪಿಯೇ ಬೇಡ, ಇವರು ರಾಜಕೀಯಕ್ಕೆ ನಾಲಾಯಕ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನಸಾಮನ್ಯರ ಸಂಕಷ್ಟದ ವಿರುದ್ಧ ಹೋರಾಡುವ ತಾಕತ್ತನ್ನೂ ಹೊಂದಿರದ ಈ ಕರ್ನಾಟಕ ಬಿಜೆಪಿಯು ಈಗ ಪ್ರತಿಪಕ್ಷವಾಗಿರಲು ಕೂಡ ನಾಲಾಯಾಕ್ ಆಗಿದೆ. ಕರ್ನಾಟಕ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂದು ಪ್ರತಿದಿನ ಜಪ ಮಾಡುವ ಇಂತಹ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರಿರುವ ಪಕ್ಷದ ಅಗತ್ಯವೇ ರಾಜ್ಯಕ್ಕಿಲ್ಲ.







