ಇತ್ತೀಚೆಗೆ ಬೆಂಗಳೂರು (Bengaluru) ಮೇಲಿಂದ ಮೇಲೆ ತನ್ನ ಟ್ರಾಫಿಕ್ ಕಿರಿಕಿರಿಗೆ ಹೆಚ್ಚು ಸುದ್ದಿಯಾಗುತ್ತಿದೆ. ಆದರೆ ಈ ನಡುವೆ, ನಗರದ ಗತಕಾಲದ ಒಂದು ಫೋಟೋ, ಹಿನ್ನೋಟದ ಈ ಚಿತ್ರಣ,ಬೆಂಗಳೂರಿಗರಿಗೆ ಒಂದು ಅಪರೂಪದ ಪ್ರತಿಬಿಂಬದ, ಅವಿಸ್ಮರಣೀಯ ಕ್ಷಣವನ್ನು ಅನಾವರಣಗೊಳಿಸಿದೆ.
ಇಂಡಿಯಾ ಹಿಸ್ಟರಿ ಪಿಕ್ (India History pic) ಎಂಬ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಹಳೆಯ ಫೋಟೋ ಹಂಚಿಕೊಳ್ಳಲಾಗಿದ್ದು,ಈ ಸೆಪಿಯಾ-ಟೋನ್ ಫೋಟೋ 1980 ರ ದಶಕದ ಎಂಜಿ ರಸ್ತೆ-ಬ್ರಿಗೇಡ್ ರಸ್ತೆಯ (MG road – Brigade road) ಶಾಂತ ಚಿತ್ರಣವನ್ನು ಸೆರೆಹಿಡಿದಿದೆ. ಈ ಫೋಟೋಗೆ “1980 ರ ದಶಕ: ಬೀದಿ ದೃಶ್ಯ, ಬೆಂಗಳೂರು” ಎಂದು ಕೆಳಬರಹ ನೀಡಲಾಗಿದೆ.

ಈ ಫೋಟೋ ನೋಡಿದ ಬೆಂಗಳೂರಿಗರ ಮನಸ್ಸು ಖುಷಿಯಿಂದ ತೇಲಾಡಿದೆ.1980 ರಲ್ಲಿ ಬೆಂಗಳೂರಿನ ಶಾಂತವಾದ ರಸ್ತೆಗಳು, ವಿರಳ ವಾಹನ ಸಂಚಾರ ಮತ್ತು ಸ್ವಚ್ಛ ಪರಿಸರ ಸ್ವರ್ಗದಂತಿದೆ,ಇಂದಿನ ಬೆಂಗಳೂರಿನ ಗದ್ದಲಕ್ಕೆ ಹೋಲಿಸಿದ್ರೆ ಅದ್ಭುತವೆನಿಸುತ್ತದೆ.
ಈ ಫೋಟೋ ಇಂಟರ್ನೆಟ್ ನಲ್ಲಿ ಬೇಗನೆ ವೈರಲ್ ಆಗಿದ್ದು, ಬೆಂಗಳೂರಿಗರು ಸೇರಿದಂತೆ ಸಾಕಷ್ಟು ಭಾರತೀಯರು ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಫೋಟೋ ಆನ್ಲೈನ್ ಚರ್ಚೆ ಹುಟ್ಟುಹಾಕಿದೆ.

ಈ ಪೋಸ್ಟ್ ಗೆ ಕೆಲವರು ಕಮೆಂಟ್ಸ್ ಮಾಡಿದ್ದು”ನನಗೆ ಇನ್ನೂ ಇದೇ ರೀತಿಯ ಸಮಯಗಳು ನೆನಪಿವೆ” ಎಂದು ನೆನಪು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಈ ಚಿತ್ರವನ್ನು ಬಳಸಿಕೊಂಡು ನಗರದ ನಾಗರಿಕತೆಯ ಅವನತಿಯನ್ನು ಎತ್ತಿ ತೋರಿಸುತ್ತದೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
80ರ ದಶಕದ ಬೆಂಗಳೂರು ಇಂದಿಗಿಂತ 100 ಪಟ್ಟು ಸ್ವಚ್ಛವಾಗಿ ಕಾಣುತ್ತದೆ. ಸಾಕ್ಷರತೆ ಹೆಚ್ಚಾಯಿತು, ನಾಗರಿಕ ಪ್ರಜ್ಞೆ ಹೆಚ್ಚಾಯಿತು. ಆದ್ರೆ ನಾವು ಹಿಂದಕ್ಕೆ ಬೆಳೆಯುತ್ತಿದ್ದೇವೆ ಎಂದು ಒಬ್ಬ ಬಳಕೆದಾರರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 2025 ರಲ್ಲೂ ಬೆಂಗಳೂರು ಇಷ್ಟು ಉತ್ತಮವಾಗಿ ಅಥವಾ ಸುಂದರವಾಗಿ ಕಾಣುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.