ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮುಜುರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವಂತೆ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ದೇಶಕ್ಕಾಗಿ, ಸೈನಿಕರಿಗೆ ಆರೋಗ್ಯ ಶಕ್ತಿ ನೀಡುವುದಕ್ಕಾಗಿ ದೇವರಲ್ಲಿ ವಿಶೇಷ ಪೂಜೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಗುರುವಾರ ಬೆಳಗ್ಗೆ 8:30 ರಿಂದ 9 ಗಂಟೆ ಅವಧಿಯಲ್ಲಿ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ 10.30 ರಿಂದ 11 ಗಂಟೆವರೆಗೆ ವಿಶೇಷ ಪೂಜೆ ಮಾಡಲಾಗುತ್ತದೆ ಎನ್ನಲಾಗಿದೆ. ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಯೋಧರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ರಾಷ್ಟ್ರದ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ರಾಜ್ಯದಲ್ಲಿರುವ 17 ಅಣೆಕಟ್ಟುಗಳಿಗೆ ಬಿಗಿ ಭದ್ರತೆ ನೀಡುವಂತೆ ಆದೇಶ ಮಾಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಹೆಚ್ಚಿನ ಭದ್ರತೆ ಒದಗಿಸಲು ಆದೇಶ ಮಾಡಿದ್ದು, ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟುಗಳಿಗೆ ಭದ್ರತೆ ಕೊಡಬೇಕು ಎಂದು ಸೂಚನೆ ಕೊಡಲಾಗಿದೆ. ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡು ಡ್ಯಾಂಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೆ ಹೊಣೆಗಾರರು ಎಂದು ಎಚ್ಚರಿಕೆ ನೀಡಲಾಗಿದೆ.

ಆಪರೇಷನ್ ಸಿಂಧೂರ್ ವಿಚಾರವಾಗಿ ಸ್ಪೀಕರ್ ಯು.ಟಿ ಖಾದರ್ ಮಾತನಾಡಿದ್ದು, ಭಯೋತ್ಪಾದನೆ ನಮ್ಮ ದೇಶಕ್ಕೂ ಮಾರಕ, ಈ ಭಯೋತ್ಪಾದನೆ ಬುಡ ಸಮೇತ ಕಿತ್ತು ಹಾಕಬೇಕು. ಯಾರು ಭಯೋತ್ಪಾದನೆಗೆ ಬೆಂಬಲ ಕೊಡ್ತಾರೆ ಅವರಿಗೆ ತಕ್ಕ ಪಾಠ ಕಲಿಸಬೇಕು. ಸೈನಿಕರು ಉತ್ತಮ ಕೆಲಸ ಮಾಡಿದ್ದು, ನಾವೆಲ್ಲರೂ ಒಗ್ಗಟ್ಟನ್ನ ಪ್ರದರ್ಶಿಸಬೇಕು. ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಡ್ತಿದ್ದೇವೆ. ನಮ್ಮ ದೇಶ ಅದ್ಭುತ ಜಯ ಗಳಿಸಬೇಕು. ಪರೋಕ್ಷ ಬೆಂಬಲ ಕೊಡುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕು. ಬೇರೆಯವರಿಗೆ ಎಚ್ಚರಿಕೆ ಗಂಟೆಯಾಗಬೇಕು. ಕೇಂದ್ರ ಸರ್ಕಾರಕ್ಕೆ ಎಲ್ಲಾ ಪ್ರತಿ ಪಕ್ಷಗಳು ಬೆಂಬಲ ನೀಡಬೇಕು. ಸೈನಿಕರು ವಿಜಯ ಗಳಿಸಲು ಪ್ರಾರ್ಥನೆ ಮಾಡಬೇಕು. ದೇಶದ ಹಿತರಕ್ಷಣೆಗೆ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದಿದ್ದಾರೆ.

ಆಪರೇಷನ್ ಸಿಂಧೂರ ಬಗ್ಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಪಹಲ್ಗಾಮ್ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ಮೇಲೆ ದಾಳಿ ಆದ್ರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸರ್ವ ಸನ್ನದ್ಧವಾಗಿದೆ. ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ನಮ್ಮ ಸರ್ಕಾರ ಬದ್ಧವಾಗಿದೆ. ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡ ಎಲ್ಲಾ ಸೇನಾ ಸಿಬ್ಬಂದಿಗೆ ಅಭಿನಂದನೆಗಳು ಅಂತ ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ.

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದಾಳಿ ಬಗ್ಗೆ ಮಾತನಾಡಿದ್ದು, ನಾವು ಕಾರ್ಯಕಾರಿಣಿ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ನಮ್ಮ ಸೇನೆಗೆ ಸಂಪೂರ್ಣ ಬೆಂಬಲ ನೀಡ್ತೇವೆ. ಅವರಿಗೆ ಅಭಿನಂದನೆಗಳು. ಕಾಂಗ್ರೆಸ್ ಪಾರ್ಟಿ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದಿದ್ದಾರೆ.












