
ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮುದಾಯದ ನಾಯಕರು ಸಭೆ ನಡೆಸಿ ಪಂಚ ಸೂತ್ರ ಮುಂದಿಟ್ಟಿದ್ದಾರೆ. ಪಂಚಮಸಾಲಿ ಸಮುದಾಯಕ್ಕಾಗಿ ಪಂಚ ಪೀಠಗಳನ್ನು ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮೂರು ಪಂಚಮಸಾಲಿ ಪೀಠಗಳು ಅಸ್ತಿತ್ವದಲ್ಲಿವೆ. ಮುಂದಿನ ದಿನಗಳಲ್ಲಿ ಮತ್ತೆರಡು ಪೀಠಗಳು ತಲೆ ಎತ್ತಲಿವೆ, ಒಂದೊಂದು ವಿಭಾಗಕ್ಕೆ ಒಂದೊಂದು ಪೀಠ, ಜೊತೆಗೆ ಒಂದು ಮಹಿಳಾ ಪೀಠ ಅಸ್ತಿತ್ವಕ್ಕೆ ತರೋ ಚಿಂತನೆ ಮಾಡಲಾಗಿದೆ.
ರಾಜ್ಯದಲ್ಲಿ ಐದು ಪೀಠಗಳನ್ನು ಅಸ್ತಿತ್ವಕ್ಕೆ ತರೋ ಲೆಕ್ಕಾಚಾರ ಸಮುದಾಯದಲ್ಲಿದ್ದು, ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಪೀಠದಿಂದ ಇಳಿಸಲು ಒಂದು ಬಣ ನಿರ್ಧಾರ ಮಾಡಿದೆ. ಎಲ್ಲದಕ್ಕೂ ಪರಿಹಾರ ಎನ್ನುವಂತೆ ಐದು ಪೀಠಗಳನ್ನು ಅಸ್ತಿತ್ವಕ್ಕೆ ತರುವ ಲೆಕ್ಕಾಚಾರ ಹಾಕಲಾಗಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ನಡೆಸಿದ್ದು, ಮುರುಗೇಶ ನಿರಾಣಿ, ವಿಜಯಾನಂದ ಕಾಶಪ್ಪನವರ್, ಎಸ್.ಐ ಚಿಕ್ಕನಗೌಡ್ರ, ಮೋಹನ್ ಲಿಂಬಿಕಾಯಿ ಮತ್ತಿತರರ ಸಭೆಯಲ್ಲಿ ಭಾಗಿಯಾಗಿದ್ದರು.

ಜಯಮೃತ್ಯುಂಜ ಸ್ವಾಮೀಜಿಗೆ ಕಡಿವಾಣ ಹಾಕೋ ಬಗ್ಗೆ ಚರ್ಚೆ ಮಾಡಲಾಗಿದೆ. ಜೊತೆಗೆ ಮತ್ತೆರಡು ಪೀಠಗಳನ್ನು ಅಸ್ತಿತ್ವಕ್ಕೆ ತರೋ ಸಮಾಲೋಚನೆ ಮಾಡಲಾಗಿದೆ. ಶೀಘ್ರವೇ ಸಭೆ ಮಾಡಲು ಮುಖಂಡರು ತೀರ್ಮಾನ ಮಾಡಿದ್ದಾರೆ. ಸಭೆ ಬಳಿಕ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಕರ್ನಾಟಕದಲ್ಲಿ 80 ಲಕ್ಷ ವೀರಶೈವ ಪಂಚಮಸಾಲಿ ಜನಸಂಖ್ಯೆ ಇದೆ. ಸಮಾಜಕ್ಕಾಗಿ ಓರ್ವ ಸ್ವಾಮೀಜಿ ಬೇಕು ಅಂತ 2008 ರಲ್ಲಿ ಪೀಠ ಹುಟ್ಟು ಹಾಕಲಾಗಿತ್ತು. ಒಂದೇ ಪೀಠ ಆಗಬೇಕಿತ್ತು, ಮೂರು ಪೀಠಗಳಾದವು. ಇದೀಗ ಐದು ಪೀಠ ಮಾಡಬೇಕು ಅನ್ನೋ ಉದ್ದೇಶ ಕೂಡ ಇದೆ. ಬರುವ ಒಂದು ವಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಸಮಾಜದ ನೂರು ಪ್ರಮುಖರನ್ನು ಕರೆದು ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಯಾವುದೇ ಸ್ವಾಮೀಜಿಗಳು ಇರಲ್ಲ. ಸಭೆಗೆ ಯಾವುದೇ ಪೀಠದ ಸ್ವಾಮೀಜಿಗಳನ್ನು ಕರೆಯಲ್ಲ. ತಪ್ಪುಗಳಾಗೋದು ಸಹಜ, ಅವುಗಳನ್ನು ತಿದ್ದಿಕೊಂಡು ಹೋಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ. ಯತ್ನಾಳ್ ಅವರು ಚೌಕಟ್ಟು ಮೀರಿ ಮಾತನಾಡುತ್ತಿರುವುದು ಸರಿಯಿರಲ್ಲ. ರಾವಣ ಒಳ್ಳೆಯವನಿದ್ದಕ್ಕೆ ಆತ್ಮಲಿಂಗು ಪಡೆದಿದ್ದ, ಆದ್ರೆ ಸೀತಾ ಮಾತೆ ಅಪಹರಣ ಮಾಡಿ ಕೆಟ್ಟವನಾದ. ಆತನ ಎಲ್ಲಾ ಒಳ್ಳೆ ಕೆಲಸಗಳು ಕ್ಷೀಣವಾದವು. ಅದೇ ರೀತಿ ಯತ್ನಾಳ್ ನೂರು ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ಅವರ ಬಾಯಿ ಒಂದೇ ಸಮಸ್ಯೆ ಇರೋದು ಎಂದಿದ್ದಾರೆ.







