
ಡಿ.ಕೆ ಸುರೇಶ್ ಸಹೋದರಿ ಅಂತಾ ಹೇಳಿಕೊಂಡು ಕೇಜಿಗಟ್ಟಲೆ ಚಿನ್ನ ಪಡೆದು ವಂಚನೆ ಮಾಡಿದ್ದ ಐಶ್ವರ್ಯಗೌಡ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಡಿ.ಕೆ ಸುರೇಶ್ ಹಾಗು ಡಿಕೆ ಶಿವಕುಮಾರ್ ಕಾನೂನು ಪ್ರಕಾರ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್‌ಎ ವಿನಯ್ ಕುಲಕರ್ಣಿ ಹೆಸರು ತಳುಕು ಹಾಕಿಕೊಂಡಿತ್ತು.
ಬಂಡೆ ಬ್ರದರ್ಸ್‌ಗೆ ನಾನು ಸಿಸ್ಟರ್ ಅಂತ ಹೇಳಿಕೊಂಡು ಚಿನ್ನದ ಲೂಟಿ ಮಾಡಿದ್ದ ಐಶ್ವರ್ಯಾಗೌಡ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೇ 60 ಲಕ್ಷ ಮೌಲ್ಯದ ಕಾರು ಗಿಫ್ಟ್ ಕೊಟ್ಟಿದ್ದಳು.. ಪೊಲೀಸ್ರು ಐಶ್ವರ್ಯಾಗೌಡ ಮನೆ ಜಾಲಾಡಿದಾಗ 3 ಕಾರ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದರು.. ಆಡಿ, BMW ಹಾಗೂ ಫಾರ್ಚುನರ್ ಕಾರು ಸೀಜ್ ಮಾಡಿ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ವಿನಯ್ ಕುಲಕರ್ಣಿಗೆ 60 ಲಕ್ಷದ ಬೆಂಜ್ ಕಾರ್ ಕೊಟ್ಟಿದ್ದು ಕೂಡ ಗೊತ್ತಾಗಿತ್ತು. ತಡ ಮಾಡದ ಪೊಲೀಸ್ರು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಳಸ್ತಿದ್ದ KA 03 NN 8181 ನಂಬರಿನ C220D ಮರ್ಸಿಡಿಸ್ ಬೆಂಜ್ ಕಾರನ್ನ ಸೀಜ್ ಮಾಡಿದ್ರು.

ವಿನಯ್ ಕುಲಕರ್ಣಿ ಜೊತೆ ಐಶ್ವರ್ಯಾಗೌಡ ಹಾಗೂ ಆಕೆಯ ಗಂಡ ಫೋಟೋಗೆ ಪೋಸ್ ಕೊಟ್ಟಿದ್ದೂ ಕೂಡ ವೈರಲ್ ಆಗಿದ್ದು, ಇಬ್ಬರ ನಡುವೆ ವ್ಯವಹಾರಿಕವಾಗಿ ಸಂಪರ್ಕವಿದೆ ಎನ್ನುವ ಗುಮಾನಿ ಹೆಚ್ಚಾಗಿತ್ತು. ಕಾರನ್ನು ವಶಕ್ಕೆ ಪಡೆದು RR ನಗರ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿ, ವಿಚಾರಣೆ ಶುರು ಮಾಡಬೇಕು ಅನ್ನೋ ಅಷ್ಟರಲ್ಲಿ ತನಿಖಾಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ. ಅದೂ ಕೂಡ ಸ್ಥಳವನ್ನೇ ತೋರಿಸದೆ ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಮೇಲಿನ ಗುಮಾನಿಗೆ ಕಾರಣವಾಗಿದೆ.
ಎಸಿಪಿ ಭರತ್ ರೆಡ್ಡಿ ವರ್ಗಾವಣೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ಭರತ್ ರೆಡ್ಡಿ ವರ್ಗಾವಣೆ ಖಂಡಿಸಿದ್ದಾರೆ. ವಿನಯ್ ಕುಲಕರ್ಣಿಗೆ ಚಿನ್ನದ ವಂಚಕಿ ಐಶ್ವರ್ಯಗೌಡ ಕೊಟ್ಟಿದ್ದ ಕಾರನ್ನ ಭರತ್ ರೆಡ್ಡಿ ಸೀಜ್ ಮಾಡಿದ್ರು. ಇದೇ ಕಾರಣಕ್ಕೆ ವರ್ಗಾವಣೆ ಮಾಡಿರಬೇಕು. ತಮ್ಮ ಜನ ಏನೇ ಮಾಡಿದರು ಅಧಿಕಾರಿಗಳು ಸುಮ್ಮನಿರಬೇಕು. ಭ್ರಷ್ಟಾಚಾರ ಮಾಡಲಿ, ಅತ್ಯಾಚಾರ ಮಾಡಲಿ ಅಧಿಕಾರಿಗಳು ಸುಮ್ಮನಿರಬೇಕು ಅನ್ನೋ ರೀತಿ ಸರ್ಕಾರದ ವರ್ತನೆ ಇದೆ. ಕಾಂಗ್ರೆಸ್ನವರನ್ನ ಸಂರಕ್ಷಿಸುವುದೇ ಪೊಲೀಸರ ಕೆಲಸ ಅಂದುಕೊಂಡಿದ್ದಾರೆ. ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ಅಧಿಕಾರಿಯನ್ನು ಏಕೆ ಎತ್ತಂಗಡಿ ಮಾಡಿದ್ದಾರೆ..? ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಅನ್ನೋದು ಇದರ ಅರ್ಥ ಎಂದು ಆರೋಪಿಸಿದ್ದಾರೆ. ಮೇಲ್ನೋಟಕ್ಕೆ ಇದು ಸತ್ಯ ಅಂತಾನೂ ಅನಿಸುತ್ತಿದೆ.













